ಮೈಸೂರು ಮುಡಾ ಬದಲಿ ನಿವೇಶನ ವಿವಾದ; ಆರು ತಿಂಗಳ ಬಳಿಕ ಸಿಎಂ ಸಿದ್ದರಾಮಯ್ಯ ಜತೆ ಕಾಣಿಸಿಕೊಂಡ ಆಪ್ತ ಮರೀಗೌಡ
ಮೈಸೂರಿನಲ್ಲಿ ಸಿದ್ದರಾಮಯ್ಯ ಅವರ ಆಪ್ತ ಕೆ.ಮರೀಗೌಡ ಅವರಿಗೆ ಬಿಟ್ಟರೂ ಬಿಡದೀ ಮಾಯೆ ಎನ್ನುವ ಹಾಗೆ ಮತ್ತೆ ಸಿಎಂ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.ಇದರ ವಿವರ ಇಲ್ಲಿದೆ.

ಮೈಸೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಬದಲಿ ನಿವೇಶನ ಪಡೆದು ಆನಂತರ ಅದನ್ನು ವಾಪಸ್ ನೀಡಿದ್ದು ಈಗ ಇತಿಹಾಸ. ಈ ಪ್ರಕರಣದಿಂದ ಸಿದ್ದರಾಮಯ್ಯ ಅವರ ಅನುಗಾಲದ ಆಪ್ತ,ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಕೆ.ಮರೀಗೌಡ ಅವರು ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು. ಆರು ತಿಂಗಳಲ್ಲಿಯೇ ಮುಡಾ ಅಧ್ಯಕ್ಷ ಸ್ಥಾನದಿಂದಲೇ ಕೆಳಗೆ ಇಳಿದ ಮರೀಗೌಡ ಅವರು ತಮ್ಮ ರಾಜಕೀಯ ಗುರು ಸಿದ್ದರಾಮಯ್ಯ ಅವರಿಂದಲೇ ದೂರವಾಗುವ ಸನ್ನಿವೇಶ ನಿರ್ಮಾಣವಾಗಿತ್ತು. ಈಗ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವ ಮರೀಗೌಡ ಸೋಮವಾರ ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ಕಾರ್ಯಕ್ರಮಕ್ಕೆ ಬಂದಾಗ ಅಲ್ಲಿಯೂ ಜತೆಯಲ್ಲಿಯೇ ಇದ್ದರು. ಆ ಮೂಲಕ ಮತ್ತೆ ರಾಜಕೀಯದಲ್ಲಿ ಸಕ್ರಿಯವಾಗುವ ಸೂಚನೆಯನ್ನು ಮರೀಗೌಡ ನೀಡಿದ್ದಾರೆ.
ಯಾರೀ ಮರೀಗೌಡ
ಮೈಸೂರು ತಾಲ್ಲೂಕಿನ ಮೆಲ್ಲಹಳ್ಳಿ ಬೀರಿಹುಂಡಿ ಗ್ರಾಮದವರಾದ ಕೆ.ಮರೀಗೌಡ ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಸಿದ್ದರಾಮಯ್ಯ ಅವರ ಆಪ್ತ. ಅವರು ಸಚಿವ, ಡಿಸಿಎಂ ಆದಾಗಿನಿಂದಲೂ ಅವರೊಂದಿಗೆ ಇದ್ದುಕೊಂಡು ಬಂದವರು. ಗ್ರಾಮಪಂಚಾಯಿತಿ ಸದಸ್ಯ, ಅಧ್ಯಕ್ಷ, ತಾಪಂ ಸದಸ್ಯ ಹಾಗೂ ಅಧ್ಯಕ್ಷ,ನಂತರ ಜಿಲ್ಲಾಪಂಚಾಯಿತಿ ಸದಸ್ಯರಾಗಿ ಉಪಾಧ್ಯಕ್ಷ ಹಾಗೂ ಅಧ್ಯಕ್ಷರಾಗಿದ್ದವರು. ಸಿಎಂ ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಉಸ್ತುವಾರಿಯನ್ನು ಮರೀಗೌಡರೇ ನೋಡಿಕೊಂಡು ಬರುತ್ತಿದ್ದರು.
ಕ್ಷೇತ್ರದ ಅಭಿವೃದ್ದಿ, ಅನುದಾನ, ವರ್ಗಾವಣೆ ಸಹಿತ ಯಾವುದೇ ಕಾರ್ಯಕ್ರಮವಿದ್ದರೂ ಮರೀಗೌಡರೇ ಅಂತಿಮ ಎನ್ನುವಷ್ಟರ ಮಟ್ಟಿಗೆ ಸಿದ್ದರಾಮಯ್ಯ ಅವರೊಂದಿಗೆ ಆಪ್ತತೆ ಇತ್ತು.ಕ್ಷೇತ್ರದ ಏನೇ ವಿಚಾರದೂ ಇದ್ದರೂ ಮರೀಗೌಡನಿಗೆ ಮಾತನಾಡಿ ಎಂದು ಸಿದ್ದರಾಮಯ್ಯ ಅವರೇ ಹೇಳಿಕಳುಹಿಸುವ ಮಟ್ಟಿಗೂ ಬೆಳೆದಿತ್ತು.
ಡಿಸಿ ಶಿಖಾ ಪ್ರಕರಣ
ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದ ಪ್ರಭಾವ ಬಳಸಿಕೊಂಡು ಮರೀಗೌಡ ಮೊದಲ ಅವಧಿಯಲ್ಲಿ ಸಿಎಂ ಆಗಿದ್ದಾಗ ಮೈಸೂರಿನ ಕೈಗಾರಿಕಾ ನಿವೇಶನ ವಿಚಾರವಾಗಿ ಆಗಿನ ಮೈಸೂರು ಡಿಸಿ ಸಿ.ಶಿಖಾ ಅವರ ಮೇಲೆ ಒತ್ತಡ ಹೇರಿದ್ದರು. ತಹಸಿಲ್ದಾರ್ ಅವರಿಂದ ವರದಿ ಪಡೆದಿದ್ದ ದಕ್ಷ ಐಎಎಸ್ ಅಧಿಕಾರಿ ಶಿಖಾ ಅವರು ಇದಕ್ಕೆ ಅವಕಾಶ ಇಲ್ಲ ಎಂದು ತಿಳಿಸಿದ್ದರು.
ಹೀಗಿದ್ದರೂ ಮರೀಗೌಡರ ಒತ್ತಡ ತಗ್ಗಿರಲಿಲ್ಲ.ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿಯೇ ಮರೀಗೌಡ ಅವರು ಶಿಖಾ ಮೇಲೆ ರೇಗಿದ್ದೂ ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದನ್ನು ಸಹಿಸದ ಶಿಖಾ ಅವರು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದರು. ಕೊನೆಗೆ ಮರೀಗೌಡರನ್ನು ಬಂಧಿಸಲಾಗಿತ್ತು. ಒಂದು ತಿಂಗಳ ಜೈಲು ವಾಸದ ನಂತರ ಮರೀಗೌಡ ಹೊರಗೆ ಬಂದಿದ್ದರು. ಆಗ ಸಿದ್ದರಾಮಯ್ಯ ಅವರಿಗೆ ಇರುಸು ಮುರುಸು ಆಗಿತ್ತು.
ಈ ಬಾರಿ ಮುಡಾ ಗಾದಿ
ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಿಎಂ ಆದ ವರ್ಷದಲ್ಲೇ ಮರೀಗೌಡಗೆ ನೀಡಿದ್ದು ಭಾರೀ ಮಹತ್ವ ಇರುವ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಗಾದಿಯನ್ನು. ಆರು ತಿಂಗಳ ಕಾಲ ಸುಸೂತ್ರವಾಗಿ ನಡೆದಿದ್ದ ಮರೀಗೌಡರ ಆಡಳಿತ ಕೊಂಚ ದಿಕ್ಕು ತಪ್ಪಿತು. ಆಗ ಆಯುಕ್ತರಾಗಿದ್ದ ದಿನೇಶ್‌ಕುಮಾರ್ ಅವರ ತಮ್ಮ ಕಡೆಯ ಬದಲಿ ನಿವೇಶನಗಳ ಕಡತಕ್ಕೆ ಅನುಮತಿ ನೀಡಲಿಲ್ಲ ಎನ್ನುವ ಕಾರಣದಿಂದ ಸಿಎಂ ಪತ್ನಿಯ ಬದಲಿ ನಿವೇಶನ ಉಲ್ಲೇಖಿಸಿ ಸರ್ಕಾರಕ್ಕೆ ಪತ್ರ ಬರೆದರು.ಕೊನೆಗೆ ಇದು ವಿವಾದ ಸ್ವರೂಪ ಪಡೆದು ಸಿದ್ದರಾಮಯ್ಯ ಅವರ ಕುರ್ಚಿಗೆ ಕಂಟಕ ತರುವ ಸನ್ನಿವೇಶ ನಿರ್ಮಾಣವಾಯಿತು. ಕೊನೆಗೆ ಸಿಎಂ ಪತ್ನಿ ನಿವೇಶನ ವಾಪಸ್ ಕೊಡುವ ಹಂತಕ್ಕೂ ಹೋಯಿತು.
ಆ ಪ್ರಕರಣ ಈಗಲೂ ನ್ಯಾಯಾಲಯದಲ್ಲಿದೆ. ಸಿದ್ದರಾಮಯ್ಯ ಅವರ ಕೆಂಗಣ್ಣಿಗೆ ಗುರಿಯಾದ ಮರೀಗೌಡ ಅಧಿಕಾರ ಕಳೆದುಕೊಳ್ಳಬೇಕಾಯಿತು. ಆನಂತರ ಸಿಎಂ ಅವರಿಂದ ಕೆಲವು ತಿಂಗಳು ದೂರವೇ ಉಳಿಯುವಂತಾಯಿತು.
ಮತ್ತೆ ಮರೀಗೌಡ ದರ್ಶನ
ಕೆಲವು ದಿನಗಳಿಂದ ಸಾರ್ವಜನಿಕವಾಗಿ ಮರೀಗೌಡ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಸಿಎಂ ಅವರ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿದ್ದರು. ಎರಡು ಬಾರಿ ಸಿಎಂ ಆದ ಅವಧಿಯಲ್ಲಿ ಮರೀಗೌಡರಿಂದ ಕಿರಿಕಿರಿಯನ್ನು ಸಿದ್ದರಾಮಯ್ಯ ಅನುಭವಿಸಿದ್ದಾರೆ. ತಮ್ಮ ನಾಯಕನ ನಿಷ್ಠೆಯನ್ನು ತೊರೆದು ಮರೀಗೌಡ ಕೂಡ ದೂರ ಹೋಗುತ್ತಿಲ್ಲ.ಈಗಲೂ ಅದೇ ನಂಟು ಮುಂದುವರಿಯುವ ಲಕ್ಷಣಗಳಿವೆ.