ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ದ ಸಿಬಿಐ ತನಿಖೆಗೆ ವಹಿಸುವ ತೀರ್ಪು ಬಾಕಿ, ವಿಚಾರಣೆ ಮುಗಿಸಿದ ಹೈಕೋರ್ಟ್‌
ಕನ್ನಡ ಸುದ್ದಿ  /  ಕರ್ನಾಟಕ  /  ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ದ ಸಿಬಿಐ ತನಿಖೆಗೆ ವಹಿಸುವ ತೀರ್ಪು ಬಾಕಿ, ವಿಚಾರಣೆ ಮುಗಿಸಿದ ಹೈಕೋರ್ಟ್‌

ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ದ ಸಿಬಿಐ ತನಿಖೆಗೆ ವಹಿಸುವ ತೀರ್ಪು ಬಾಕಿ, ವಿಚಾರಣೆ ಮುಗಿಸಿದ ಹೈಕೋರ್ಟ್‌

Mysore Muda Scam: ಮೈಸೂರು ಮುಡಾ ಬದಲಿ ನಿವೇಶನದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಪೂರ್ಣಗೊಳಿಸಿ ಆದೇಶ ಬಾಕಿ ಇರಿಸಿದೆ.

ಮೈಸೂರು ಮುಡಾ ಹಗರಣದ ಪ್ರಕರಣ ಸಿಬಿಐಗೆ ವಹಿಸುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಪೂರ್ಣಗೊಳಿಸಿದೆ.
ಮೈಸೂರು ಮುಡಾ ಹಗರಣದ ಪ್ರಕರಣ ಸಿಬಿಐಗೆ ವಹಿಸುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಪೂರ್ಣಗೊಳಿಸಿದೆ.

Mysore Muda Scam: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಮೈಸೂರಿನ ನಗರಾಭಿವೃದ್ದಿ ಪ್ರಾಧಿಕಾರದಿಂದ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿದ್ದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಪೂರ್ಣಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಮಾತ್ರ ಬಾಕಿಯಿದೆ. ಅಲ್ಲದೇ ಇದೇ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆಗೆ ಆದೇಶ ನೀಡಿದ್ದ ಹೈಕೋರ್ಟ್‌ ಈ ಸಂಬಂಧ ನಡೆಸಿರುವ ತನಿಖೆಯ ಅಂತಿಮ ವರದಿಯನ್ನು ಸಲ್ಲಿಸಲು ಗಡುವು ವಿಸ್ತರಿಸಿದೆ. ಪ್ರಕರಣದ ಆದೇಶ ನೀಡುವವರೆಗೂ ಲೋಕಾಯುಕ್ತ ಪೊಲೀಸರು ನಡೆಸಿರುವ ತನಿಖಾ ವರದಿಯನ್ನು ಸಲ್ಲಿಸಲು ಕಾಲಾವಾಕಾಶ ನೀಡಲಾಗಿದೆ. ಸದ್ಯದಲ್ಲಿಯೇ ಅಂತಿಮ ತೀರ್ಪು ಹೊರ ಬೀಳುವ ನಿರೀಕ್ಷೆಯಿದೆ.

ಕಳೆದ ವರ್ಷದ ಜುಲೈನಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಹಾಗೂ ಸಂಬಂಧಿಕರಿಗೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಬದಲಿ ಹದಿನಾಲ್ಕು ನಿವೇಶನಗಳನ್ನು ಹಂಚಿಕೆಯಾಗಿರುವುದು ಬಯಲಾಗಿತ್ತು. ಸಿದ್ದರಾಮಯ್ಯ ಅವರೇ ಪ್ರಭಾವಿ ಆಗಿರುವುದರಿಂದ ಅವರ ಕುಟುಂಬಕ್ಕೆ ಪ್ರಮುಖ ಬಡಾವಣೆಗಳಲ್ಲಿ ನಿವೇಶನ ನೀಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಆಗ ಸಿದ್ದರಾಮಯ್ಯ ಅವರು ಇದು ನನ್ನ ಪತ್ನಿಗೆ ಅವರ ಕುಟುಂಬದಿಂದ ಬಂದಿರುವ ಆಸ್ತಿ. ಮುಡಾ ಭೂಸ್ವಾಧೀನಪಡಿಸಿಕೊಂಡ ನಂತರ ಬದಲಿಯಾಗಿ ಜಮೀನು ನೀಡಲಾಗಿದೆ ಎಂದು ವಾದಿಸಿದ್ದರು. ಹಗರಣ ಭಾರೀ ಸದ್ದು ಮಾಡಿತ್ತು. ಆನಂತರ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಲಾಗಿತ್ತು. ಇಡಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ ಸಿದ್ದರಾಮಯ್ಯ ಅವರ ಪತ್ನಿ ನಿವೇಶನ ವಾಪಸ್‌ ನೀಡಿದ್ದರು.

ಆದರೆ ಈ ಪ್ರಕರಣದಲ್ಲಿ ಕೋಟ್ಯಂತರ ರೂ. ಹಗರಣ ನಡೆದಿದೆ. ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿದ್ದರೂ ಅವರ ಮೇಲೆ ವಿಶ್ವಾಸವಿಲ್ಲ. ಇಡೀ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಹೋರಾಟಗಾರ ಸ್ನೇಹಮಯಿ ಕೃಷ್ಣ ಒತ್ತಾಯಿಸಿದ್ದರು. ಸರ್ಕಾರ ಸಿಬಿಐ ತನಿಖೆಗೆ ಒಪ್ಪಿರಲಿಲ್ಲ. ಇದನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟ್‌ ಮೆಟ್ಟಿಲೇರಿ ಈ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಆದೇಶಿಸಬೇಕು ಎಂದು ಕೋರಿದ್ದರು.

ಈ ಪ್ರಕರಣದ ಕುರಿತು ಹೈಕೋರ್ಟ್‌ನ ಪೀಠವು ವಿಚಾರಣೆಯನ್ನು ನಡೆಸಿ ಹೇಳಿಕೆ ದಾಖಲಿಸಿಕೊಂಡಿತ್ತು. ಸ್ನೇಹಮಯಿ ಕೃಷ್ಣ ಪರ ವಕೀಲರು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿದ್ದರು. ಇದರ ನಡುವೆಯೇ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ಸೋಮವಾರ ಎರಡೂ ಕಡೆಯವರ ಹೇಳಿಕೆ ದಾಖಲಿಸಲಾಯಿತು. ದೂರುದಾರರ ಪರ ವಕೀಲರು ಹಾಗೂ ಸಿಎಂ ಸಿದ್ದರಾಮಯ್ಯ ಪರ ವಕೀಲರ ವಾದ-ಪ್ರತಿವಾದವನ್ನು ಹೈಕೋರ್ಟ್ ಏಕಸದಸ್ಯಪೀಠ ಆಲಿಸಿತು. ಪ್ರಕರಣವನ್ನು ಸಿಬಿಐಗೆ ವಹಿಸಬೇಕೋ ಬೇಡವೋ ಎನ್ನುವ ಕುರಿತು ಅಂತಿಮ ತೀರ್ಪುನ್ನು ನ್ಯಾಯಮೂರ್ತಿಗಳು ಕಾಯ್ದಿರಿಸಿದರು. ಸದ್ಯವೇ ಪ್ರಕರಣದ ಅಂತಿಮ ತೀರ್ಪು ಹೊರ ಬೀಳಬಹುದು ಎನ್ನಲಾಗುತ್ತಿದೆ.
ಈ ನಡುವೆ ಇದೇ ಪ್ರಕರಣದ ವಿಚಾರಣೆಯನ್ನು ನಡೆಸಲು ಹೈಕೋರ್ಟ್‌ ಲೋಕಾಯುಕ್ತಕ್ಕೆ ಸೂಚಿಸಿತ್ತು. ಸುಮಾರು ಮೂರು ತಿಂಗಳಿನಿಂದಲೂ ವಿಚಾರಣೆ ನಡೆದು ಈಗಾಗಲೇ ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್‌ ಅವರ ತಂಡ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಮುಡಾ ಮಾಜಿ ಆಯುಕ್ತರ ಸಹಿತ ಹಲವರು ಹೇಳಿಕೆ ದಾಖಲಿಸಿದ್ದಾರೆ. ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ಕೂಡ ಹೇಳಿಕೆ ದಾಖಲಿಸಿದ್ದಾರೆ. ಲೋಕಾಯುಕ್ತ ಪೊಲೀಸರು ಹೈಕೋರ್ಟ್‌ಗೆ ವರದಿ ಸಲ್ಲಿಸುವುದು ಬಾಕಿಯಿದೆ. ಇದೇ ವೇಳೆ ಮುಡಾ ಹಗರಣದ ತನಿಖೆ ಬಗ್ಗೆ ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಕೆ ಗಡುವನ್ನು ವಿಸ್ತರಣೆ ಮಾಡಲಾಗಿದ್ದು ಆದೇಶ ನೀಡುವವರೆಗೂ ಅವಕಾಶ ನೀಡಲಾಗಿದೆ.

Whats_app_banner