Muda Scam: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಸಚಿವ ಭೈರತಿ ಸುರೇಶ್‌ಗೆ ಇಡಿ ನೊಟೀಸ್, ವಿಚಾರಣೆಗೆ ಹಾಜರಾಗಲು ಸೂಚನೆ
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಅವರಿಗೆ ಇಡಿ ನೋಟಿಸ್ ನೀಡಿದೆ.

ಬೆಂಗಳೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿರುವ ನಿವೇಶನ ಹಂಚಿಕೆ ಹಗರಣದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಬಹುದು ಎನ್ನುವ ಚರ್ಚೆಗಳು ನಡೆದಿರುವ ನಡುವೆಯೇ ಸಿದ್ದರಾಮಯ್ಯರ ಪತ್ನಿ ಬಿ.ಎಂ.ಪಾರ್ವತಿ ಹಾಗೂ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಅವರಿಗೆ ನೊಟೀಸ್ ಅನ್ನು ನಿರ್ದೇಶನಾಲಯ ಜಾರಿ ಮಾಡಿದೆ. ಅವರು ಇಂದು ಹಾಗೂ ಮಂಗಳವಾರ ವಿಚಾರಣೆಗೆ ಹಾಜರಾಗಬೇಕು ಎನ್ನುವ ಸೂಚನೆಯನ್ನು ನೋಟಿಸ್ ಮೂಲಕ ತಿಳಿಸಲಾಗಿದೆ.ಇಡಿ ನೋಟಿಸ್ ನೀಡುತ್ತಿದ್ದಂತೆ ಸಮನ್ಸ್ ಪ್ರಶ್ನಿಸಿ ಪಾರ್ವತಿ ಸಿದ್ದರಾಮಯ್ಯ ಮತ್ತು ಭೈರತಿ ಸುರೇಶ್ ಹೈಕೋರ್ಟ್‌ನ ಏಕಸದಸ್ಯ ಪೀಠಕ್ಕೆ ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳ ವಿಚಾರಣೆಯನ್ನು ಇಂದೇ ನಡೆಸುವಂತೆಯೂ ಇಬ್ಬರ ಪರ ವಕೀಲರು ಮನವಿಯನ್ನು ಮಾಡಿದ್ದಾರೆ.
ನೋಟಿಸ್ ಸಂಬಂಧ ತುರ್ತು ವಿಚಾರಣೆ ಕೈಗೆತ್ತಿಕೊಳ್ಳುವಂತೆ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ್ ಪೀಠಕ್ಕೆ ಮನವಿ ಮಾಡಿದ್ದು, ದಿನದ ಕೊನೆಯಲ್ಲಿ ಈ ಕುರಿತು ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅನುಮತಿ ನೀಡಿದ್ದಾರೆ.
ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನವಾಗಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಹದಿನಾಲ್ಕು ನಿವೇಶನ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರಲಾಗಿತ್ತು. ಮೈಸೂರನ ಸ್ನೇಹಮಯಿ ಕೃಷ್ಣ ಹಾಗೂ ಇತರರು ಕಾನೂನು ಹೋರಾಟ ಆರಂಭಿಸಿದ್ದರು. ಸಿಎಂ ವಿರುದ್ದ ತನಿಖೆಗೆ ಅನುಮತಿ ಓರಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಆನಂತರ ತನಿಖೆಗೆ ಅನುಮತಿ ನೀಡಲಾಗಿತ್ತು.
ಈಗಾಗಲೇ ಈ ಸಂಬಂಧ ಲೋಕಾಯುಕ್ತ ಪೊಲೀಸರೂ ಕೂಡ ವಿಚಾರಣೆ ನಡೆಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು ಬಾಕಿಯಿದೆ. ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ ಹಾಗೂ ಅವರ ಪತ್ನಿ, ಮುಡಾದ ಹಿಂದಿನ ಅಧ್ಯಕ್ಷರು, ಆಯುಕ್ತರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.
ಇದರ ನಡುವೆ ನಿವೇಶನ ಹಂಚಿಕೆಯಲ್ಲಿ ಹಣದ ಮೂಲ ಹಿಡಿದು ಜಾರಿ ನಿರ್ದೇಶನಾಲಯ ಕೂಡ ತನಿಖೆ ಆರಂಭಿಸಿತ್ತು. ಇಡಿ ಅಧಿಕಾರಿಗಳು ಮುಡಾ ಕಚೇರಿ ಮೇಲೆ ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಆನಂತರ ಈ ಪ್ರಕರಣದಲ್ಲಿ ನೋಟಿಸ್ ನೀಡಬಹುದು ಎನ್ನುವ ಸೂಚನೆಯಿತ್ತು. ಇಡಿ ಮಧ್ಯಪ್ರವೇಶಿಸುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ನಿವೇಶನ ವಾಪಾಸ್ ನೀಡುತ್ತಿರುವಾಗಿ ಘೋಷಿಸಿದ್ದರು. ಈಗ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ.
