ED Raids Mysore Muda: ಮೈಸೂರು ಮುಡಾ ನಿವೇಶನ ಹಗರಣ; ಇಡಿ ತನಿಖೆ ಚುರುಕು, ಮುಡಾ ಕಚೇರಿ ಮೇಲೆ ದಾಳಿ, ಸಿಎಂ ಪತ್ನಿ ದಾಖಲೆಗೂ ಹುಡುಕಾಟ
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಬದಲಿ ನಿವೇಶನದ ಹಗರಣದ ದೂರಿನ ಹಿನ್ನೆಲೆಯಲ್ಲಿ ಇಡಿ ತಂಡ ದಾಳಿ ನಡೆಸಿ ಮಾಹಿತಿ ಕಲೆ ಹಾಕುತ್ತಿದೆ.
ಮೈಸೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ 50:50 ಅನುಪಾತದಡಿ ಬದಲಿ ನಿವೇಶನ ಹಂಚಿಕೆಯಲ್ಲಿ ಬಹುಕೋಟಿ ಹಗರಣ ನಡೆದಿರುವ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ಜಾರಿ ನಿರ್ದೇಶನಾಲಯದಿಂದ ತನಿಖೆ ಚುರುಕುಗೊಂಡಿದೆ. ಶುಕ್ರವಾರ ಮಧ್ಯಾಹ್ನ ಮೈಸೂರಿನ ಮುಡಾ ಕಚೇರಿ ಮೇಲೆ ದಿಢೀರ್ ಇಡಿ ತಂಡ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಸುಮಾರು 8 ಅಧಿಕಾರಿಗಳ ತಂಡ ಮುಡಾ ಕಚೇರಿಗೆ ದಿಢೀರ್ ಭೇಟಿ ನೀಡಿ ಮುಡಾ ಆಯುಕ್ತ ರಘುನಂದನ್ ಅವರಿಂದ ಮಾಹಿತಿ ಸಂಗ್ರಹಿಸುತ್ತಿದೆ. ಸಾವಿರಾರು ಕೋಟಿ ಹಣಕಾಸಿನ ಅವ್ಯವಹಾರ ನಡೆದಿರುವ ಬಗ್ಗೆಇಡಿಗೆ ಆರ್ ಟಿ ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ. ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಹಂಚಿಕೆ ಮಾಡಲಾಗಿದ್ದು ಹದಿನಾಲ್ಕು ನಿವೇಶನಗಳು ಸೇರಿವೆ. ಈ ನಿವೇಶನಗಳನ್ನು ವಿವಾದದ ನಂತರ ಸಿಎಂ ಪತ್ನಿ ಪಾರ್ವತಿ ಅವರು ವಾಪಾಸ್ ನೀಡಿದ್ದಾರೆ.
ಪಾರ್ವತಿ ಸಿದ್ದರಾಮಯ್ಯ ದಾಖಲೆ ಕೇಳಿದ ಇಡಿ
ಮುಡಾ ಕಚೇರಿ ಮೇಲೆ ಇಡಿ ದಾಳಿ ವೇಳೆ ಮೊದಲು ನಮಗೆ ಪಾರ್ವತಿ ಸಿದ್ದರಾಮಯ್ಯ ಅವರ ಮೂಲ ದಾಖಲಾತಿ ಕೊಡಿ. ನಕಲು ಪ್ರತಿ ಮಾತ್ರವಲ್ಲ, ಮೂಲ ಪ್ರತಿಯೇ ಬೇಕು ಎಂದು ಮುಡಾ ಅಧಿಕಾರಿಗಳನ್ನು ಇಡಿ ಅಧಿಕಾರಿಗಳ ತಂಡ ಕೇಳಿದೆ.
ನಮಗೆ ಮೂಲ ದಾಖಲೆಗಳೇ ಬೇಕು. ಪಾರ್ವತಿ ಸಿದ್ದರಾಮಯ್ಯ ಕೇಸ್ ಸಂಬಂಧ 2004 ರಿಂದ 2023ರವರೆಗಿನ ಮೂಲ ದಾಖಲೆಗಳನ್ನು ತಕ್ಷಣ ಕೊಡಿ ಎಂದಿರುವ ಇಡಿ ಅಧಿಕಾರಿಗಳು. ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್ ಅವರನ್ನು ದಾಖಲೆ ತರಲು ಹೊರಗೆ ಕಳುಹಿಸಿದ್ದಾರೆ.
50:50 ವಿಚಾರ ಏನು? ಇಲ್ಲಿಯವರೆಗೆ ಎಷ್ಟು ಸೈಟುಗಳು ಹಂಚಿಕೆಯಾಗಿವೆ? ನಮಗೆ ಅಂಕಿ ಅಂಶವನ್ನು ಕೊಡಿ ಎಂದು ಮುಡಾದ ಆಯುಕ್ತ ರಘುನಂದನ್ ಅವರನ್ನು ಕೇಳಿರುವ ಇಡಿ ತಂಡ ಕೇಳಿದೆ. ಇಡಿ ಅಧಿಕಾರಿಗಳ ತಂಡಕ್ಕೆ ಮುಡಾದ ಆಯುಕ್ತ ರಘುನಂದನ್ ವಿವರಣೆ ನೀಡಿದ್ದಾರೆ. ಮುಡಾ ಹಗರಣದ ಆಳಕ್ಕೆ ಇಳಿದು ಅಧಿಕಾರಿಗಳು ತನಿಖೆ ನಡೆಸುತ್ತಿರುವುದರಿಂದ ಮುಡಾ ಅಧಿಕಾರಿಗಳು ಮಾಹಿತಿ ನೀಡಲು ಹೆಣಗಾಡುತ್ತಿದ್ದಾರೆ.
ಭಾರೀ ಭದ್ರತೆ
ಇಡಿ ತಂಡ ಶುಕ್ರವಾರ ಮೈಸೂರಿಗೆ ಆಗಮಿಸುವ ಮಾಹಿತಿ ಇದ್ದುದರಿಂದ ಮುಡಾ ಅಧಿಕಾರಿಗಳು ಭಾರೀ ಭದ್ರತೆಯನ್ನು ಹಾಕಿದ್ದರು. ಇಡಿ ತಂಡಕ್ಕೆ ಸಿ ಆರ್ ಪಿ ಎಫ್ ಯೋಧರಿಂದ ರಕ್ಷಣೆ ನೀಡಲಾಗಿದೆ. ಸಿ ಆರ್ ಪಿ ಎಫ್ ಯೋಧರ ಭದ್ರತೆಯೊಂದಿಗೆ ಮುಡಾ ಕಚೇರಿಯಲ್ಲಿ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳ ತಂಡದಿಂದಾಗಿ ಅಧಿಕಾರಿಗಳು ಆ ಕಡೆಯೇ ಗಮನ ನೀಡುವಂತಾಗಿದೆ.
ಇಂದು ಮತ್ತು ನಾಳೆ ಸೇರಿದಂತೆ ಒಟ್ಟು ಎರಡು ದಿನಗಳ ಕಾಲ ನಡೆಯುವ ಇಡಿ ತನಿಖೆ ನಡೆಯುವ ಸೂಚನೆ ಇರುವುದರಿಂದ ಸಾರ್ವಜನಿಕ ಸೇವೆಗೆ ವ್ಯತ್ಯಯವಾಗಿದೆ.ಮುಡಾದ ಮಾಹಿತಿ ಕೇಂದ್ರವೂ ಬಂದ್ ಆಗಿದ್ದು ಕಾರ್ಯ ನಿಮಿತ್ತ ದೂರದ ಊರುಗಳಿಂದ ಮುಡಾಗೆ ಆಗಮಿಸಿರುವ ಸಾರ್ವಜನಿಕರ ಪರದಾಡುತ್ತಿದ್ದಾರೆ.ಯಾವುದೇ ಮಾಹಿತಿ ಲಭ್ಯವಾಗದೇ ಪರಿತಪಿಸುತ್ತಿರುವ ಸಾರ್ವಜನಿಕರು ಆಕ್ರೋಶ ಹೊರ ಹಾಕಿ ಹಿಂದಿರುಗುತ್ತಿದ್ದಾರೆ.
ಇಡಿ ದಾಳಿ ಕುರಿತು ಮುಡಾದ ಕಾರ್ಯದರ್ಶಿ ಪ್ರಸನ್ನಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇಡಿ ಅಧಿಕಾರಿಗಳ ತಂಡ ಮುಡಾಗೆ ಭೇಟಿ ನೀಡಿದೆ. ಅವರು ಕೇಳುವ ಎಲ್ಲಾ ಮಾಹಿತಿಗಳನ್ನು ನೀಡುತ್ತೇವೆ. ಇಂದು ಮತ್ತು ನಾಳೆ ಇಡಿ ಅಧಿಕಾರಿಗಳ ತಂಡ ಕಡತಗಳ ಪರಿಶೀಲನೆ ನಡೆಸಲಿದೆ. ಇಡಿ ಅಧಿಕಾರಿಗಳು ನಿರ್ದೇಶನ ನೀಡಿದರೆ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.
ತಾಲ್ಲೂಕು ಕಚೇರಿಗೂ ಭೇಟಿ
ಇದೇ ವೇಳೆ ಇಡಿಯ ತಂಡ ಮೈಸೂರು ತಾಲೂಕು ಕಚೇರಿಯಲ್ಲೂ ದಾಖಲೆಗಳ ಶೋಧಕ್ಕೆ ಮುಂದಾಯಿತು. ಸಿ ಆರ್ ಪಿ ಭದ್ರತೆಯೊಂದಿಗೆ ಇಬ್ಬರು ಅಧಿಕಾರಿಗಳ ಪರಿಶೀಲನೆ ನಡೆಸಲಾಗುತ್ತಿದೆ.
ಪಾರ್ವತಿ ಸಿದ್ದರಾಮಯ್ಯರಿಗೆ ಸೇರಿದ ಜಮೀನುಗಳು ಮೈಸೂರು ತಾಲ್ಲೂಕಲ್ಲಿ ಬರುವುದರಿಂದ ಅಲ್ಲಿ ದಾಖಲೆ ಕಲೆ ಹಾಕಲಾಗುತ್ತಿದೆ.
ವಿಭಾಗ