ನಂಜನಗೂಡಿನಲ್ಲಿ ಹರಕೆ ಕರು ಮೇಲೆ ಮಾರಕಾಸ್ತ್ರದಿಂದ ದಾಳಿ; ಬಾಲ ಕತ್ತರಿಸಿ ಹಾಕಿದ ದುಷ್ಕರ್ಮಿಗಳು, ಬೆಂಗಳೂರು ನಂತರ ಮತ್ತೆ ಅಮಾನವೀಯ ಘಟನೆ
ಕನ್ನಡ ಸುದ್ದಿ  /  ಕರ್ನಾಟಕ  /  ನಂಜನಗೂಡಿನಲ್ಲಿ ಹರಕೆ ಕರು ಮೇಲೆ ಮಾರಕಾಸ್ತ್ರದಿಂದ ದಾಳಿ; ಬಾಲ ಕತ್ತರಿಸಿ ಹಾಕಿದ ದುಷ್ಕರ್ಮಿಗಳು, ಬೆಂಗಳೂರು ನಂತರ ಮತ್ತೆ ಅಮಾನವೀಯ ಘಟನೆ

ನಂಜನಗೂಡಿನಲ್ಲಿ ಹರಕೆ ಕರು ಮೇಲೆ ಮಾರಕಾಸ್ತ್ರದಿಂದ ದಾಳಿ; ಬಾಲ ಕತ್ತರಿಸಿ ಹಾಕಿದ ದುಷ್ಕರ್ಮಿಗಳು, ಬೆಂಗಳೂರು ನಂತರ ಮತ್ತೆ ಅಮಾನವೀಯ ಘಟನೆ

ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ದೇವಸ್ಥಾನಕ್ಕೆ ಬಿಟ್ಟಿದ್ದ ಕರುವಿನ ಬಾಲವನ್ನು ಕತ್ತರಿಸಿ ಹಾಕಿರುವ ಅಮಾನವೀಯ ಘಟನೆ ವರದಿಯಾಗಿದೆ.

ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಆವರಣದಲ್ಲಿ ಹರಕೆಯ ಕರುವಿನ ಬಾಲ ಕತ್ತರಿಸಲಾಗಿದೆ.
ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಆವರಣದಲ್ಲಿ ಹರಕೆಯ ಕರುವಿನ ಬಾಲ ಕತ್ತರಿಸಲಾಗಿದೆ.

ಮೈಸೂರು: ಬೆಂಗಳೂರಿನ ವಿನಾಯಕನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದು ವ್ಯಕ್ತಿಯೊಬ್ಬನನ್ನು ಬಂಧಿಸಿದ ಪ್ರಕರಣ ಮಾಸುವ ಮುನ್ನವೇ ಮೈಸೂರು ಜಿಲ್ಲೆಯ ದಕ್ಷಿಣ ಕಾಶಿ ಕ್ಷೇತ್ರ ನಂಜನಗೂಡಿನಲ್ಲಿ ಹರಕೆ ಕರುವಿನ ಬಾಲವನ್ನು ಕತ್ತರಿಸಿರುವ ಅಮಾನವೀಯ ಘಟನೆ ನಡೆದಿದೆ. ದೇವಸ್ಥಾನದ ಸಮೀಪದಲ್ಲೇ ಇದ್ದ ಕರುವಿನ ಬಾಲವನ್ನು ಮಾರಕಾಯುಧಗಳನ್ನು ಬಳಸಿ ಕತ್ತರಿಸಲಾಗಿದೆ. ಬಾಲ ಕತ್ತರಿಸಿ ಬಿದ್ದು ರಕ್ತ ಹರಿಯುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಕೂಡಲೇ ದೇವಸ್ಥಾನ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದು ಕರುವಿನ ಬಾಲಕ್ಕೆ ಬಟ್ಟೆಯನ್ನು ಕಟ್ಟಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ನಂಜನಗೂಡು ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ. ಈ ಕೃತ್ಯ ಎಸಗಿದವರು ಯಾರು ಎನ್ನುವ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ದೇವಸ್ಥಾನ ಆವರಣದ ಸಿಸಿಟಿವಿ ಫೂಟೇಜ್‌ಗಳನ್ನು ಗಮನಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ.

ಗುರುವಾರದಂದು ಕಿಡಿಗೇಡಿಗಳು ನಂಜುಂಡೇಶ್ವರನ ಹರಕೆ ಕರುವಿನ ಮೇಲೆ ಹಲ್ಲೆ ಮಾಡಿದ್ದು, ಲಾಂಗ್ ನಿಂದ ಹಲ್ಲೆ ಮಾಡಿ ಬಾಲ ತುಂಡರಿಸಿರುವುದು ಕಂಡು ಬಂದಿದೆ. ಗಾಯಗೊಂಡಿರುವ ಕರುವಿಗೆ ನಂಜನಗೂಡು ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಲ ವಿಸರ್ಜನೆ ಜಾಗದಲ್ಲಿ ಉಂಟಾಗಿದ್ದ ಗಾಯಕ್ಕೆ ಪಶು ವೈದ್ಯರು ಹೊಲಿಗೆ ಹಾಕಿದರು.

ಬಾಲವನ್ನು ಕತ್ತರಿಸಿದ್ದರಿಂದ ದೇವಸ್ಥಾನ ಸಮೀಪದಲ್ಲಿಯೇ ರಕ್ತ ಸೋರಿಕೆಯಾಗಿ ಕರು ಅಸ್ವಸ್ಥವಾಗಿತ್ತು. ಅಲ್ಲದೇ ದೇವಸ್ಥಾನಕ್ಕೆ ಬಂದವರು ನೀಡಿದ ಹಣ್ಣುಗಳನ್ನು ಕರು ತಿಂದು ಅಲ್ಲಿಯೇ ಇರುತ್ತಿತ್ತು. ಈ ರೀತಿ ಆಗಿದ್ದನ್ನು ಗಮನಿಸಿದರು ಬೇಸರ ಹೊರ ಹಾಕಿದರು. ಆನಂತರ ಅದರ ರಕ್ಷಣೆಗೆ ಕ್ರಮ ವಹಿಸಲಾಯಿತು. ದೇವಸ್ಥಾನದ ಸಮೀಪದಲ್ಲಿಯೇ ಕರುವನ್ನು ಕಟ್ಟಿ ಈಗ ಆಹಾರ ನೀಡಲಾಗಿದೆ. ಕರು ಚೇತರಿಸಿಕೊಂಡಿದೆ.

ಘಟನೆ ಖಂಡಿಸಿ ನಂಜನಗೂಡಿನ ಯುವ ಬ್ರಿಗೆಡ್ ಸದಸ್ಯರು ಪ್ರತಿಭಟನೆಗೆ ಮುಂದಾಗಿದ್ದರು. ದೇವಸ್ಥಾನದ ಆವರಣದಲ್ಲಿ ತಾತ್ಕಾಲಿಕ ಗೋ ಶಾಲೆ ತೆರೆಯಲು ದೇವಸ್ಥಾನದ ಆಡಳಿತದ ಮಂಡಳಿ ಒಪ್ಪಿಗೆ ನೀಡಿದ ನಂತರ ಬಳಿಕ ಪ್ರತಿಭಟನೆಯನ್ನು ಯುವ ಬ್ರಿಗೇಡ್ ಸಂಘಟನೆ ಸದಸ್ಯರು ಕೈಬಿಟ್ಟರು.

ನಂಜನಗೂಡಿನಲ್ಲಿ ಹರಕೆಯ ಕರು ಮೇಲೆ‌ ಮಾರಕಾಸ್ತ್ರದಿಂದ ಹಲ್ಲೆ ಪ್ರಕರಣದ ನಂತರ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೂಡಲೇ ನಂಜನಗೂಡು ಪಟ್ಟಣ ಪೊಲೀಸರು ದೇವಸ್ಥಾನದ ಬಳಿ ಆಗಮಿಸಿ ಮಾಹಿತಿ ಕಲೆ ಹಾಕಿದರು. ಅಕ್ಕಪಕ್ಕದವರಿಂದಲೂ ವಿವರಣೆ ಪಡೆದುಕೊಂಡರು. ದೇವಸ್ಥಾನ ಗೋಶಾಲೆ ಇಲ್ಲದೇ ಹಸುಗಳು ಹೊರಗೆ ಇರುತ್ತವೆ. ಇದಕ್ಕೂ ನಾವು ಆಹಾರ ನೀಡಿದ್ದೇವೆ. ಈ ರೀತಿ ಮಾಡಿದ್ದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಈಗ ಗೊತ್ತಾಗಿದೆ ಎಂದು ಮಹಿಳೆಯರು ಹೇಳಿದರು.

ಪ್ರಕರಣ ಸಂಬಂಧ ಎರಡು ತಂಡ ರಚನೆ ಮಾಡಲಾಗಿದ್ದು. ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹೇಳಿಕೆ ನೀಡಿದ್ದಾರೆ.

ಯಾರೆಲ್ಲಾ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ, ಏಕೆ ಕರುವಿನ ಮೇಲೆ ಹಲ್ಲೆ ಮಾಡಿದರು ಎಂಬ ತನಿಖೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯವಾಳಿಗಳನ್ನು ಪರಿಶೀಲನೆ ಮಾಡುತ್ತೇವೆ. ಶೀಘ್ರದಲ್ಲೇ ತಪ್ಪಿತಸ್ಥರನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮೂರು ದಿನದ ಹಿಂದೆಯಷ್ಟೇ ಹಸುಗಳ ಕೆಚ್ಚಲನ್ನು ಕತ್ತರಿಸಿ ಅಮಾನೀಯವಾಗಿ ನಡೆದುಕೊಳ್ಳಲಾಗಿತ್ತು. ಈ ಸಂಬಂಧ ಬಿಹಾರ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಈ ಕೃತ್ಯಕ್ಕೆ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈಗ ಮತ್ತೆ ಕರುವಿನ ಮೇಲೆ ಮಾಡಿರುವ ಪ್ರಕರಣ ನಂಜನಗೂಡಿನಲ್ಲಿ ನಡೆದಿದೆ.

Whats_app_banner