Cauvery Water: ಕೆಆರ್‌ಎಸ್‌, ಕಬಿನಿ ಜಲಾಶಯದಿಂದ ತಗ್ಗಿದ ಹೊರ ಹರಿವು, ಈಗ ಎಷ್ಟು ನೀರು ಬಿಡಲಾಗುತ್ತಿದೆ?
ಕನ್ನಡ ಸುದ್ದಿ  /  ಕರ್ನಾಟಕ  /  Cauvery Water: ಕೆಆರ್‌ಎಸ್‌, ಕಬಿನಿ ಜಲಾಶಯದಿಂದ ತಗ್ಗಿದ ಹೊರ ಹರಿವು, ಈಗ ಎಷ್ಟು ನೀರು ಬಿಡಲಾಗುತ್ತಿದೆ?

Cauvery Water: ಕೆಆರ್‌ಎಸ್‌, ಕಬಿನಿ ಜಲಾಶಯದಿಂದ ತಗ್ಗಿದ ಹೊರ ಹರಿವು, ಈಗ ಎಷ್ಟು ನೀರು ಬಿಡಲಾಗುತ್ತಿದೆ?

KRS Dam ಬೆಂಗಳೂರಿನ ಕುಡಿಯುವ ನೀರಿನ ನೆಪದಲ್ಲಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯದ ಹೊರ ಹರಿವಿನ ಪ್ರಮಾಣವನ್ನು ತಗ್ಗಿಸಲಾಗಿದೆ.

ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಪ್ರಮಾಣ ತಗ್ಗಿದೆ.
ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಪ್ರಮಾಣ ತಗ್ಗಿದೆ. (Star of mysuru)

ಮೈಸೂರು: ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಕೊರತೆ ಇರುವಾಗ ಏಕಾಏಕಿ ಎರಡು ದಿನ ಸುಮಾರು 7 ಸಾವಿರ ಕ್ಯೂಸೆಕ್‌ ನೀರು ಹರಿಸಿದ ನಂತರ ಹೊರ ಹರಿವಿನ ಪ್ರಮಾಣವನ್ನು ಸೋಮವಾರ ಬೆಳಿಗ್ಗೆಯಿಂದಲೇ ಕಡಿಮೆ ಮಾಡಲಾಗಿದೆ. ಬೆಂಗಳೂರಿಗೆ ನೀರು ಹರಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಇಲಾಖೆ ಎಂಜಿನಿಯರ್‌ಗಳು ಸ್ಪಷ್ಟನೆ ನೀಡಿದರೂ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಬಿಜೆಪಿ, ರೈತಪರ ಸಂಘಟನೆಗಳು ಮಂಡ್ಯ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ್ದವು. ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲಿಯೇ ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯದ ನೀರಿನ ಹೊರ ಹರಿವಿನ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ.

ಬೆಂಗಳೂರಿಗೆ ನೀರು ಸರಬರಾಜು ಮಾಡುವ ಮಳವಳ್ಳಿ ತಾಲ್ಲೂಕಿನ ಶಿವ ಆಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಕುಸಿದಿತ್ತು. ಇದರಿಂದ ನೀರು ಹರಿಸಿ ಬೆಂಗಳೂರಿಗೆ ಸರಬರಾಜು ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರ ನೀಡಿದ್ದರು. ಎರಡು ದಿನ ನೀರು ಹರಿಸಿದ ನಂತರ ಈಗ ಕಡಿಮೆ ಮಾಡಲಾಗಿದ್ದು. ಕೆಆರ್‌ಎಸ್‌ ಹಾಗೂ ಕಬಿನಿ ಸೇರಿ ಸುಮಾರು 3 ಸಾವಿರ ಕ್ಯೂಸೆಕ್‌ ನೀರು ಈಗಲೂ ಜಲಾಶಯದಿಂದ ಹೊರ ಹೋಗುತ್ತಿದೆ.

ಕೆಆರ್‌ಎಸ್‌ ಜಲಾಶಯದಲ್ಲಿ ನೀರು ಎಷ್ಟಿದೆ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ಸದ್ಯ88.35 ಅಡಿ ನೀರಿದೆ. ಎರಡು ದಿನ ನೀರು ಹರಿಸಿದ ಪರಿಣಾಮವಾಗಿ ಎರಡು ಅಡಿಯಷ್ಟು ನೀರು ಕುಸಿದಿದೆ. ಪ್ರತಿ ದಿನ ಬೆಂಗಳೂರು ನೀರಿಗೆಂದು 700 ಕ್ಯೂಸೆಕ್‌ ನೀರನ್ನು ಹರಿ ಬಿಡಲಾಗುತ್ತಿತ್ತು. ಶನಿವಾರ ಹಾಗೂ ಭಾನುವಾರ ಇದನ್ನು ಏಕಾಏಕಿ 4579 ಕ್ಯೂಸೆಕ್‌ಗೆ ಏರಿಕೆ ಮಾಡಲಾಯಿತು. ಇದರಿಂದಾಗಿ ಜಲಾಶಯ ಮಟ್ಟದಲ್ಲಿ ಕುಸಿದಿದೆ. ಕಳೆದ ವರ್ಷ ಇದೇ ದಿನ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 103.96 ಅಡಿ ಇತ್ತು.

ಜಲಾಶಯದಲ್ಲಿ 14.979 ಟಿಎಂಸಿ ನೀರು ಲಭ್ಯವಿದೆ. ಇದರಲ್ಲಿ 6.6 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯ ಇರುವಂತದ್ದು. ಸದ್ಯ ಜಲಾಶಯಕ್ಕೆ 169 ಕ್ಯೂಸೆಕ್‌ ನೀರು ಒಳಬರುತ್ತಿದೆ. ಹೊರ ಹರಿವಿನ ಪ್ರಮಾಣವನ್ನು 1468 ಕ್ಯೂಸೆಕ್‌ ಗೆ ತಗ್ಗಿಸಲಾಗಿದೆ.

ಕಾವೇರಿ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸಿಲ್ಲ. ಬದಲಿಗೆ ಮಳವಳ್ಳಿ ತಾಲ್ಲೂಕಿನ ಶಿವ ಆಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಅಲ್ಲಿಗೆ ಹರಿಸಿ ಅಲ್ಲಿಂದ ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತಿದೆ. ಈಗ ಶಿವ ಆಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದರಿಂದ ಜಲಾಶಯದ ಹೊರ ಹರಿವಿನ ಪ್ರಮಾಣ ತಗ್ಗಿಸಲಾಗಿದೆ. ಈಗ ಹರಿಸಿರುವ ನೀರಿನಿಂದ ಬೆಂಗಳೂರಿನ ನೀರಿನ ಸಮಸ್ಯೆ ತಗ್ಗಲಿದೆ ಎಂದು ಕೃಷ್ಣರಾಜಸಾಗರ ಅಧೀಕ್ಷಕೆ ಎಂಜಿನಿಯರ್‌ ರಘುರಾಮ್‌ ತಿಳಿಸಿದ್ದಾರೆ.

ಕಬಿನಿಯಲ್ಲೂ ಇಳಿಕೆ

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಿಂದಲೂ 2000 ಕ್ಯೂಸೆಕ್‌ ನೀರನ್ನು ಕಪಿಲಾ ನದಿ ಮೂಲಕ ಹರಿ ಬಿಡಲಾಗುತ್ತಿತ್ತು. ಇದನ್ನೂ ಈಗ ತಗ್ಗಿಸಲಾಗಿದೆ. ಸದ್ಯ 1292 ಕ್ಯೂಸೆಕ್‌ ನೀರು ಈಗಲೂ ಹೊರ ಹೋಗುತ್ತಿದೆ. ಕಬಿನಿ ಜಲಾಶಯದ ನೀರಿನ ಮಟ್ಟ 2268.01ಕ್ಕೆ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದ ನೀರಿನ ಮಟ್ಟದಲ್ಲಿ ಕೊಂಚ ಹೆಚ್ಚು ಇರುವುದು ಸಮಾಧಾನದ ಸಂಗತಿ.

ಜಲಾಶಯದಲ್ಲಿಈಗ 10.73 ಟಿಎಂಸಿ ನೀರಿದೆ. ಇದರಲ್ಲಿ 0.92 ಟಿಎಂಸಿ ಮಾತ್ರ ಬಳಕೆಗೆ ಯೋಗ್ಯ ಇದೆ. ಕಬಿನಿ ಜಲಾಶಯದಿಂದ ಬೆಂಗಳೂರು ಮಾತ್ರವಲ್ಲದೇ ಮೈಸೂರು, ಚಾಮರಾಜನಗರ ಜಿಲ್ಲೆಯ ಹಲವು ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ.

ಕಬಿನಿ ಜಲಾಶಯದಿಂದಲೂ ನದಿ ಮೂಲಕ ನೀರು ಹರಿಸಲಾಗಿದೆ. ಕುಡಿಯುವ ನೀರಿನ ಉದ್ದೇಶಕ್ಕಾಗಿಯೇ ನೀರನ್ನು ಬಿಡಲಾಗಿದ್ದು, ಬೆಂಗಳೂರು, ಮೈಸೂರು ಭಾಗಕ್ಕೆ ಬಳಕೆ ಮಾಡಲಾಗುತ್ತದೆ ಎನ್ನುವುದು ಅಧಿಕಾರಿಗಳ ವಿವರಣೆ.

Whats_app_banner