Lok Sabha Elections2024: ಮೈಸೂರು ರಾಜವಂಶಸ್ಥ ಯದುವೀರ್‌ ಸೆಳೆಯಲು ನಿಲ್ಲದ ಬಿಜೆಪಿ ಕಸರತ್ತು, ಒಪ್ಪಿದರೆ ಅಭ್ಯರ್ಥಿ
ಕನ್ನಡ ಸುದ್ದಿ  /  ಕರ್ನಾಟಕ  /  Lok Sabha Elections2024: ಮೈಸೂರು ರಾಜವಂಶಸ್ಥ ಯದುವೀರ್‌ ಸೆಳೆಯಲು ನಿಲ್ಲದ ಬಿಜೆಪಿ ಕಸರತ್ತು, ಒಪ್ಪಿದರೆ ಅಭ್ಯರ್ಥಿ

Lok Sabha Elections2024: ಮೈಸೂರು ರಾಜವಂಶಸ್ಥ ಯದುವೀರ್‌ ಸೆಳೆಯಲು ನಿಲ್ಲದ ಬಿಜೆಪಿ ಕಸರತ್ತು, ಒಪ್ಪಿದರೆ ಅಭ್ಯರ್ಥಿ

Karnataka politics ಕರ್ನಾಟಕದ ಇತಿಹಾಸದಲ್ಲಿ ಮೈಸೂರು ಸಂಸ್ಥಾನದ ನೆನಪು ಅಚ್ಚಳಿಯದೇ ಉಳಿದಿದೆ. ಏಕೆಂದರೆ ಅವರ ಜನಮುಖಿ ಆಡಳಿತ. ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್‌ ಕೂಡ ನಾಲ್ಕು ಬಾರಿ ಸಂಸದರಾಗಿದ್ದವರು. ಈಗ ಅವರ ದತ್ತು ಪುತ್ರ ಯದುವೀರ್‌ ಅವರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡುತ್ತಲೇ ಇದೆ.

ಮೈಸೂರು ಅರಮನೆಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ. ಯದುವೀರ್‌ ಅವರನ್ನು ಬಿಜೆಪಿಗೆ ಕರೆ ತರಲು ಪ್ರಯತ್ನ ನಡೆಸಿದೆ.
ಮೈಸೂರು ಅರಮನೆಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ. ಯದುವೀರ್‌ ಅವರನ್ನು ಬಿಜೆಪಿಗೆ ಕರೆ ತರಲು ಪ್ರಯತ್ನ ನಡೆಸಿದೆ.

ಮೈಸೂರು: ಲೋಕಸಭೆ ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗಿರುವಾಗ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಕುರಿತು ಕಸರತ್ತುಗಳು ನಡೆದಿವೆ. ಅದರಲ್ಲೂ ಹಾಲಿ ಸಂಸದ ಪ್ರತಾಪಸಿಂಹ ಎರಡು ಬಾರಿ ಗೆದ್ದು ಮೂರನೇ ಬಾರಿ ಕಣಕ್ಕಿಳಿಯಲು ಸಿದ್ದತೆ ಮಾಡಿಕೊಂಡಿದ್ದಾರೆ. ಆದರೆ ಪಕ್ಷದ ದೆಹಲಿ ನಾಯಕರಿಗೆ ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣ ದತ್ತ ಚಾಮರಾಜ ಒಡೆಯರ್‌ ಅವರನ್ನು ಕರೆತರುವ ಆಸೆ ಇನ್ನೂ ಇದೆ. ಈಗಾಗಲೇ ಹಲವು ಬಾರಿ ಪ್ರಯತ್ನ ಮಾಡಿದರೂ ಯದುವೀರ್‌ ರಾಜಕೀಯಕ್ಕೆ ಬರಲು ಸುತಾರಾಂ ಒಪ್ಪಿಲ್ಲ. ಬಿಜೆಪಿ ನಾಯಕರು ಮಾತ್ರ ಚುನಾವಣೆಗೆ ಇನ್ನೂ ಸಮಯ ಇರುವುದರಿಂದ ಅವರನ್ನು ಸೆಳೆಯಲು ಪ್ರಯತ್ನ ಮುಂದುವರೆಸಿದ್ದಾರೆ.

ಲೋಕಸಭೆ ಚುನಾವಣೆಯನ್ನು ಭಿನ್ನ ಕ್ಷೇತ್ರದ ಹಾಗೂ ಹೊಸ ಮುಖಗಳನ್ನು ಕರ್ನಾಟಕದಿಂದ ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ಪ್ರಯತ್ನಿಸುತ್ತಲೇ ಇದ್ಧಾರೆ. ಇದರಲ್ಲಿ ಮೈಸೂರು ಕ್ಷೇತ್ರ ಕೂಡ ಒಂದು. ಇಲ್ಲಿಂದ ಹತ್ತು ವರ್ಷದ ಹಿಂದೆ ಪತ್ರಕರ್ತ ಪ್ರತಾಪಸಿಂಹ ಅವರಿಗೆ ಟಿಕೆಟ್‌ ನೀಡಲಾಗಿತ್ತು. ಸತತ ಎರಡು ಬಾರಿ ಅವರು ಗೆದ್ದಿದ್ದಾರೆ. ಹತ್ತು ವರ್ಷದ ಹಿಂದೆ ಮಾಡಿದ ಪ್ರಯೋಗವನ್ನೇ ಈಗ ಮಾಡಿದರೆ ಹೇಗೆ ಎನ್ನುವುದು ವರಿಷ್ಠರ ಲೆಕ್ಕಾಚಾರ. ಇದಕ್ಕಾಗಿ ಅವರು ಮೈಸೂರು ರಾಜವಂಶಸ್ಥ ಯದುವೀರ್‌ ಅವರನ್ನು ಸೆಳೆಯುವ ಯೋಜನೆ ಹಾಕಿಕೊಂಡಿದ್ದಾರೆ. ಯದುವೀರ್‌ ಅವರು ಈ ಹಿಂದೆ ನಾಲ್ಕು ಬಾರಿ ಮೈಸೂರು ಸಂಸದರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ದತ್ತು ಪುತ್ರ. ಅವರ ಅಕ್ಕನ ಮೊಮ್ಮಗ. ಒಡೆಯರ್‌ ಅವರು 2013ರಲ್ಲಿ ತೀರಿಕೊಂಡ ನಂತರ 2015ರಲ್ಲಿ ಯದುವೀರ್‌ ಅವರು ರಾಜವಂಶಸ್ಥಕ್ಕೆ ಸೇರ್ಪಡೆಗೊಂಡಿದ್ಧಾರೆ. ಈಗಲೂ ಹಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕ ಸಾರ್ವಜನಿಕ ಒಡನಾಟದಲ್ಲಿ ಇದ್ದಾರೆ.

ಮೋದಿ ಪ್ರಯತ್ನ

ಒಂದೂವರೆ ವರ್ಷದ ಹಿಂದೆ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಖುದ್ದು ಅರಮನೆಗೆ ಭೇಟಿ ನೀಡಿ ಪ್ರಮೋದಾದೇವಿ ಒಡೆಯರ್‌ ಹಾಗೂ ಯದುವೀರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಯದುವೀರ್‌ ಬಿಜೆಪಿ ಸೇರಬೇಕು. ಸಕ್ರಿಯ ರಾಜಕಾರಣಕ್ಕೆ ಬರಬೇಕು ಎನ್ನುವುದು ಅವರ ಬಯಕೆ. ಆನಂತರ ಪಕ್ಷದ ಹಿರಿಯ ನಾಯಕರೂ ಪ್ರಯತ್ನ ನಡೆಸುತ್ತಲೇ ಇದ್ದಾರೆ.

ಕರ್ನಾಟಕ ಬಿಜೆಪಿಗೆ ಅಧ್ಯಕ್ಷರಾಗಿ ನೇಮಕಗೊಂಡಿರುವ ವಿಜಯೇಂದ್ರ ಕೂಡ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಕೂಡ ನಡೆಸಿದ್ದಾರೆ. ಅದಕ್ಕೂ ಯದುವೀರ್‌ ಒಪ್ಪಿಲ್ಲ.

ಇದರೊಟ್ಟಿಗೆ ಯದುವೀರ್‌ ಅವರ ಪತ್ನಿ ತ್ರಿಷಿಕಾಕುಮಾರಿ ಅವರೂ ರಾಜಸ್ಥಾನದ ರಾಜವಂಶಸ್ಥರು. ಅಲ್ಲಿ ಅವರ ಕುಟುಂಬದವರು ಬಿಜೆಪಿಯೊಂದಿಗೆ ನಂಟು ಹೊಂದಿದ್ದಾರೆ. ಇದನ್ನೂ ಬಳಸಿ ರಾಜಸ್ಥಾನದ ಮೂಲಕವಾದರೂ ಯದುವೀರ್‌ ಅವರನ್ನು ಸೆಳೆಯುವ ಪ್ರಯತ್ನಗಳೂ ನಡೆದಿವೆ. ಈವರೆಗೂ ಯದುವೀರ್‌ ಮಾತ್ರ ರಾಜಕೀಯಕ್ಕೆ ಬರುವ ಆಸಕ್ತಿ ತೋರಿಸುತ್ತಿಲ್ಲ. ಪ್ರಮೋದಾ ದೇವಿ ಒಡೆಯರ್‌ ಅವರನ್ನು ಸೆಳೆದು ಪಕ್ಷದ ಅಭ್ಯರ್ಥಿಯನ್ನಾಗಿಸುವ ಪ್ರಯತ್ನ ಜೆಡಿಎಸ್‌ನಿಂದ ನಡೆದಿತ್ತು. ಆಗಲೂ ಅವರು ಒಪ್ಪಿರಲಿಲ್ಲ.

ಯದುವೀರ್‌ ಮೇಲೇಕೆ ಒಲವು

ಮೈಸೂರು ಹಾಗೂ ಅಕ್ಕಪಕ್ಕದ ಪ್ರದೇಶದಲ್ಲಿ ಈಗಲೂ ರಾಜವಂಶದ ಮೇಲೆ ಅಪಾರ ಗೌರವವಿದೆ. ಹಿಂದೆ ಶ್ರೀಕಂಠದತ್ತರು ಚುನಾವಣೆಗೆ ಸ್ಪರ್ಧಿಸಿದಾಗ ಗೆದ್ದಾಗಲೂ ಇದೇ ಗೌರವ ಅವರ ಮೇಲೆ ಇದ್ದುದನ್ನು ಗಮನಿಸಬಹುದು. ಯದುವೀರ್‌ ಬಿಜೆಪಿ ಸೇರಿದಂತೆ ಪಕ್ಷಕ್ಕೂ ಒಳತಾಗಬಹುದು. ಮೈಸೂರು ನಗರ ಬಿಟ್ಟು ಗ್ರಾಮಾಂತರ ಭಾಗದಲ್ಲೂ ಪಕ್ಷ ವಿಸ್ತರಿಸಬಹುದು ಎನ್ನುವುದು ಲೆಕ್ಕಾಚಾರ.

ನಾಲ್ಕು ಬಾರಿ ಗೆಲುವು

ಮೈಸೂರಿನಿಂದ ಯದುವೀರ್‌ ಅವರ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರೂ ಜನಪ್ರತಿನಿಧಿಯಾಗಿದ್ದವರು. ಮೈಸೂರು ಲೋಕಸಭಾ ಕ್ಷೇತ್ರವನ್ನೇ ನಾಲ್ಕು ಬಾರಿ ಪ್ರತಿನಿಧಿಸಿದ್ದವರು.

ಮೈಸೂರಿನ ಕೊನೆಯ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್‌ ಅವರ ಏಕೈಕ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ನಾಲ್ಕು ಬಾರಿ ಮೈಸೂರಿನ ಸಂಸದರಾಗಿದ್ದರು,. ಅವರು ಮೈಸೂರಿನ ಮಹಾರಾಜ ಕಾಲೇಜು, ಮಾನಸಗಂಗೋತ್ರಿಯಲ್ಲಿಯೇ ಶಿಕ್ಷಣ ಪೂರೈಸಿದವರು. ಆನಂತರ ಮೈಸೂರು ಅರಮನೆಯಲ್ಲಿಯೇ ಉಳಿದುಕೊಂಡು ಕಾಂಗ್ರೆಸ್‌ ನಲ್ಲಿ ಗುರುತಿಸಿಕೊಂಡವರು. ಅವರನ್ನು ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ನೀಡಿತ್ತು. ನಾಲ್ಕು ಬಾರಿ ಗೆದ್ದು ಎರಡು ಬಾರಿ ಅವರು ಸೋತಿದ್ದರು. ಅದು 1984 ,1989, 1996, 1999ರಲ್ಲಿ ಗೆದ್ದಿದ್ದರು. 1991 ಹಾಗೂ 2004ರಲ್ಲಿ ಸೋಲು ಅನುಭವಿಸಿದ್ದರು.

ಬಿಜೆಪಿಗೂ ಬಂದಿದ್ದರು

ಕರ್ನಾಟಕದಲ್ಲಿ ರಥಯಾತ್ರೆಗಳ ನಂತರ ಬಿಜೆಪಿ ಅಲೆ ಜೋರಾದಾಗ 1991ರಲ್ಲಿ ಹಲವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು. ಅದರಲ್ಲಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್‌ ಕೂಡ ಒಬ್ಬರು. ಅವರನ್ನು ಮೈಸೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು. ಎರಡು ಬಾರಿ ಸಂಸದರಾಗಿದ್ದ ಅವರು ಇಲ್ಲಿ ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಬಿಜೆಪಿಯದಾಗಿತ್ತು. ಆಗ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್‌ ಪುತ್ರಿ ಚಂದ್ರಪ್ರಭಾ ಅರಸ್‌ ಅವರಿಗೆ ಕಾಂಗ್ರೆಸ್‌ ನೀಡಿತ್ತು. ಸಂಬಂಧಿಗಳೇ ಆಗಿದ್ದ ಶ್ರೀಕಂಠದತ್ತ ಒಡೆಯರ್‌ ಹಾಗೂ ಚಂದ್ರಪ್ರಭಾ ಅವರ ನಡುವೆ ಸ್ಪರ್ಧೆ ಏರ್ಪಟ್ಟು ಒಡೆಯರ್‌ ಸೋತಿದ್ದರು. ಬಿಜೆಪಿ ಇಲ್ಲಿ ಸೋತಿತ್ತು. ಆನಂತರ ಒಡೆಯರ್‌ ಮತ್ತೆ ಕಾಂಗ್ರೆಸ್‌ಗೆ ಮರಳಿ ಎರಡು ಬಾರಿ ಸಂಸದರಾಗಿದ್ದು ಈಗ ಇತಿಹಾಸ.

ಮೂರು ದಶಕದ ಹಿಂದಿನಂತೆಯೇ ಈಗಲೂ ಯದುವೀರ್‌ ಅವರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಈ ಬಾರಿ ಏನಾಗಲಿದೆ ಎನ್ನುವ ಕುತೂಹಲ ಮಾತ್ರ ಮೈಸೂರು ಮತದಾರರಲ್ಲಿದೆ.

Whats_app_banner