Mysore crime: ಮೈಸೂರಲ್ಲಿ ಮರ್ಯಾದೆ ಹತ್ಯೆ ಪ್ರಕರಣ, ಸಹೋದರಿ ಕೊಲೆ, ಉಳಿಸಲು ಹೋದ ತಾಯಿಯೂ ಸಾವು
honor killing ಅನ್ಯ ಧರ್ಮೀಯ ಯುವಕನನ್ನು ಪ್ರೀತಿಸುತ್ತಿದ್ದ ಸಹೋದರಿಯನ್ನೇ ಕೆರೆಗೆ ತಳ್ಳಿ ಕೊಲೆ ಮಾಡಿದ್ದು,ಮಗಳನ್ನು ರಕ್ಷಿಸಲು ಹೋದ ತಾಯಿಯೂ ಕೆರೆಯಲ್ಲಿ ಮುಳುಗಿ ಮೃತಪಟ್ಟಿರು ಹೃದಯ ವಿದ್ರಾವಕ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರು: ಮೈಸೂರು ಜಿಲ್ಲೆಯಲ್ಲಿ ನಡೆದಿರುವ ಮರ್ಯಾದೆಗೇಡು ಹತ್ಯೆ ಪ್ರಕರಣ ಇದು. ನಡೆದಿರುವುದು ಹುಣಸೂರು ತಾಲ್ಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ. ಅನ್ಯ ಧರ್ಮದ ಯುವಕನನ್ನು ಪ್ರೀತಿಸುತ್ತಿದ್ದ ಸಹೋದರಿಯನ್ನು ತಾಯಿಯ ಎದುರೇ ಕೊಲೆ ಮಾಡಿರುವ ಘಟನೆ. ಈ ವೇಳೆ ತಾಯಿಯೂ ಜೀವ ಕಳೆದುಕೊಂಡ ಹೃದಯ ವಿದ್ರಾವಕ ಸನ್ನಿವೇಶ. ಕೊಲೆ ಮಾಡಿದ ನಂತರ ಮನೆಗೆ ಬಂದು ತಂದೆಗೆ ಘಟನೆಯನ್ನು ಯುವಕ ವಿವರಿಸಿದ್ದಾನೆ. ಕೆರೆಗೆ ತಳ್ಳಿ ಸಹೋದರಿಯನ್ನು ಕೊಂದು ತಾಯಿಯ ಸಾವಿಗೂ ಕಾರಣವಾಗಿದ್ದ ಯುವಕನನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದು ತನಿಖೆಯನ್ನು ಕೈಗೊಂಡಿದ್ದಾರೆ.
ಬಂಧನಕ್ಕೆ ಒಳಗಾದವನ ಹೆಸರು ಹುಣಸೂರು ತಾಲ್ಲೂಕು ಹಿರಿಕ್ಯಾತನಹಳ್ಳಿ ಗ್ರಾಮದ ಸತೀಶ್ ಎಂಬುವವರು ಪುತ್ರ ನಿತೀಶ್(22). ಈತನ ತಂಗಿ ಧನುಶ್ರೀ(19) ಕೊಲೆಯಾದ ಯುವತಿ. ತಾಯಿ ಅನಿತಾಸತೀಶ್ (43) ಕೂಡ ಮೃತಪಟ್ಟಿದ್ದಾರೆ. ಈ ಸಂಬಂಧ ಸತೀಶ್ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪ್ರೇಮ ದುರಂತ
ಸತೀಶ್ ಹಾಗೂ ಅನಿತಾ ದಂಪತಿಯ ಇಬ್ಬರು ಮಕ್ಕಳು ನಿತೀಶ್ ಹಾಗೂ ಧನುಶ್ರಿ. ನಿತೀಶ್ ಊರಿನಲ್ಲಿಯೇ ಜಮೀನಿನ ಕೆಲಸ ಮಾಡಿಕೊಂಡಿದ್ದರೆ ಧನುಶ್ರೀ ಹುಣಸೂರು ತಾಲ್ಲೂಕಿನ ಹನಗೋಡಿನ ಅಜ್ಜಿ ಮನೆಯಲ್ಲಿ ಇದ್ದುಕೊಂಡು ಪಿಯುಸಿ ಮುಗಿಸಿ ಪ್ರಥಮ ವರ್ಷದ ಬಿಕಾಂ ಸೇರಿದ್ದಳು. ಧನುಶ್ರೀ ಹನಗೋಡಿನ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಅನ್ಯಧರ್ಮೀಯ ಯುವಕನನ್ನು ಪ್ರೀತಿಸುತ್ತಿರುವ ವಿಷಯ ನಿತೀಶ್‌ಗೂ ತಿಳಿದಿತ್ತು. ಧನುಶ್ರೀ ಯುವಕನೊಂದಿಗೆ ರೀಲ್ಸ್ ಕೂಡ ಮಾಡಿ ಶೇರ್ ಮಾಡಿದ್ದನ್ನು ಸಹೋದರ ಗಮನಿಸಿದ್ದ. ಮನೆಯವರೂ ಆಕೆಗೆ ಬುದ್ದಿವಾದ ಹೇಳಿದ್ದರು. ಆದರೂ ಆಕೆಯ ಪ್ರೀತಿ ಮುಂದುವರೆದಿತ್ತು. ಇದೇ ವಿಚಾರದಲ್ಲಿ ಕೆಲ ದಿನಗಳ ದಿನದ ಹಿಂದೆ ಯುವಕ, ಆತನ ಸ್ನೇಹಿತರು ಹಾಗೂ ನಿತೀಶ್ ಗೆಳೆಯರ ನಡುವೆ ಗಲಾಟೆಯೇ ನಡೆದಿತ್ತು. ಆನಂತರ ಸಹೋದರಿ ಜತೆಗೆ ನಿತೀಶ್ ಮಾತು ಬಿಟ್ಟಿದ್ದ. ತಂದೆ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿ ಮಗಳಿಗೆ ಬುದ್ದಿವಾದ ಹೇಳಿದ್ದರು.
ಯುವಕನೊಂದಿಗೆ ಜಗಳ
ಇದರ ನಡುವ ಧನುಶ್ರೀ ಹನಗೋಡಿನಿಂದ ಹಿರಿಕ್ಯಾತನಹಳ್ಳಿಗೆ ಬಂದು ಇದ್ದರೂ ಯುವಕನೊಂದಿಗೆ ಫೋನ್ ಸಂಪರ್ಕ ತಪ್ಪಿರಲಿಲ್ಲ. ಕಳೆದ ವಾರ ಹನಗೋಡು ಸಮೀಪದ ದೊಡ್ಡಹೆಜ್ಜೂರು ಜಾತ್ರೆಯಲ್ಲಿಯೂ ಸಹೋದರಿ ಯುವಕನೊಂದಿಗೆ ಇರುವುದು ತಿಳಿದು ಈ ವಿಚಾರವಾಗಿ ಎರಡು ದಿನದ ಹಿಂದೆ ಮನೆಯಲ್ಲಿ ಗಲಾಟೆಯೂ ಆಗಿತ್ತು. ಇದರಿಂದ ಕುಪಿತಗೊಂಡ ನಿತೀಶ್ ಸಹೋದರಿಯ ಕೊಲೆಗೆ ಯೋಜನೆ ಹಾಕಿದ್ದ.
ಕೊಲೆಗೆ ಯೋಜನೆ
ಮಂಗಳವಾರ ರಾತ್ರಿ ಸಂಬಂಧಿಕರ ಮನೆಗೆ ಹೋಗಿ ಬರೋಣ ಬಾ ಎಂದು ಸಹೋದರಿಯನ್ನು ನಿತೀಶ್ ಕರೆದಿದ್ದಾನೆ. ಆದರೆ ಆಕೆ ಒಪ್ಪಿಲ್ಲ. ಬರಲೇಬೇಕು ಎಂದು ಸಹೋದರ ಹೇಳಿದಾಗ ತಾಯಿ ಅನಿತಾ ಕೂಡ ನಾನೂ ಬರುವುದಾಗಿ ಹೇಳಿದ್ದಾರೆ. ಮೂವರೂ ಬೈಕ್‌ನಲ್ಲಿ ಹೊರಟಿದ್ದು, ಗ್ರಾಮದ ಕೆರೆಯ ಬಳಿ ತೆರಳಿದ್ದಾರೆ. ಕೆರೆ ಏರಿಯ ಮೇಲೆ ಬೈಕ್ ನಿಲ್ಲಿಸಿ ಪ್ರಶ್ನಿಸುವ ಮುನ್ನವೇ ಧನುಶ್ರಿಯನ್ನು ನಿತೀಶ್ ಕೆರೆಗೆ ತಳ್ಳಿದ್ದಾನೆ. ಇದನ್ನು ಕಂಡ ತಾಯಿ ಬಿಡಿಸಿಕೊಳ್ಳಲು ಯತ್ನಿಸಿದರೂ ಆಗಿಲ್ಲ. ಸೀರೆಯ ಸೆರಗು ನೀಡಿ ಮಗಳನ್ನು ಕೆರೆಯಿಂದ ಉಳಿಸಿಕೊಳ್ಳಲು ಯತ್ನಿಸಿದಾಗ ಆಕೆಯೂ ಕೆರೆಯಲ್ಲಿ ಮುಳುಗಿದ್ದಾರೆ.
ತಂದೆಗೆ ತಿಳಿಸಿದ ಮಗ
ಅಲ್ಲಿಂದ ಮನೆಗೆ ಬಂದ ನಿತೀಶ್ ಅಲ್ಲಿ ನಡೆದ ಘಟನೆಯನ್ನು ತಂದೆ ಸತೀಶ್‌ಗೆ ತಿಳಿಸಿದ್ದಾನೆ. ಕೆರೆಗೆ ಧನುಶ್ರೀಯನ್ನು ತಳ್ಳಿದ್ದು. ಉಳಿಸಿಕೊಳ್ಳಲು ಹೋದ ತಾಯಿ ಕೂಡ ಜಾರಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದ. ಕೂಡಲೇ ಕೆರೆ ಬಳಿಗೆ ಸತೀಶ್ ಹೋಗಿದ್ದು, ಕತ್ತಲಾಗಿದ್ದರಿಂದ ಏನೂ ಗೊತ್ತಾಗಿಲ್ಲ.
ಪೊಲೀಸರ ತನಿಖೆ
ಹುಣಸೂರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಬುಧವಾರ ಅಗ್ನಿಶಾಮಕ ದಳದ ಸಹಕಾರದಿಂದ ಶವಗಳನ್ನು ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆರೋಪಿ ನಿತೀಶ್‌ನನ್ನು ಬಂಧಿಸಲಾಗಿದೆ.
ಮನೆಯಲ್ಲಿ ಸಹೋದರಿ ಪ್ರೀತಿಯ ವಿಚಾರವಾಗಿ ನಿತೀಶ್ ಜಗಳವಾಡುತ್ತಿದ್ದ. ನಾವೂ ಆಕೆಗೆ ಬುದ್ದಿವಾದ ಹೇಳಿದ್ದೆವು. ಆದರೆ ಈ ರೀತಿ ಆಗುತ್ತದೆ ಅಂದುಕೊಂಡಿರಿಲ್ಲ. ಮಗ ಆಕೆಯನ್ನು ಕೆರೆಗೆ ತಳ್ಳಿ ಬಂದು ನನಗೆ ತಿಳಿಸಿದಾಗಲೇ ಗೊತ್ತಾಗಿದ್ದು, ಪೊಲೀಸರಿಗೂ ವಿವರವನ್ನು ನೀಡಿದ್ದೇನೆ. ಮಗಳು, ಪತ್ನಿ ಇಬ್ಬರೂ ಜೀವ ಕಳೆದುಕೊಳ್ಳುವಂತಾಗಿದೆ ಎಂದು ಬೇಸರದಿಂದಲೇ ಸತೀಶ್ ಹೇಳಿದರು.
ಎಸ್ಪಿ ಹೇಳೋದೇನು
ನಾನು ನನ್ನ ಸಹೋದರಿಯೊಂದಿಗೆ ಜಗಳವಾಡಿ ಕೆರೆಗೆ ತಳ್ಳಿ ಕೊಲೆ ಮಾಡಿದ್ದು ನಿಜ. ತಾಯಿಯನ್ನು ಕೊಲೆ ಮಾಡಿಲ್ಲ. ಮಗಳನ್ನು ರಕ್ಷಿಸಲು ಹೋಗಿ ಮೃತಪಟ್ಟಿದ್ದಾರೆ. ಅವರು ಕೆರೆಗೆ ಬಿದ್ದಾಗ ಉಳಿಸಲು ನಾನೂ ಹೋದರೆ ಆದರೆ ತಾಯಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ನಿತೀಶ್ ಘಟನೆಯ ವಿವರ ನೀಡಿದ್ದಾನೆ. ಇದು ಮೇಲ್ನೋಟಕ್ಕೆ ಮರ್ಯಾದೆಗೇಡು ಹತ್ಯೆ ರೀತಿಯೇ ಇದೆ. ಈ ಕುರಿತು ಇನ್ನಷ್ಟು ತನಿಖೆ ನಡೆದಿದೆ ಎಂದು ಮೈಸೂರು ಎಸ್ಪಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.