Mysore Aiish Issue: ಸಿಬಿಐ ದಾಳಿ, ಮೈಸೂರು ಆಯಿಷ್ ನಿರ್ದೇಶಕಿ ಡಾ.ಪುಷ್ಪಾವತಿ ವರ್ಗಕ್ಕೆ ಒತ್ತಡ, ನಡ್ಡಾಗೆ ಪತ್ರ ಬರೆದ ಇಸಿ ಸದಸ್ಯರು
CBI Raid on Mysore Aiish ಮೈಸೂರಿನ ಆಯಿಷ್( AIISH ) ನಿರ್ದೇಶಕರಾದ ಡಾ.ಪುಷ್ಪಾವತಿ ವಿರುದ್ದ ಸ್ವಜನಪಕ್ಷಪಾತ, ಅನುಮಾನಸ್ಪದ ಚಟುವಟಿಕೆಗಳ ಆರೋಪ ಹೊರಿಸಿರುವ ಕಾರ್ಯನಿರ್ವಾಹಕ ಮಂಡಳಿ ಸದಸ್ಯರು ಕ್ರಮಕ್ಕೆ ಆಗ್ರಹಿಸಿ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ( JP Nadda) ಅವರಿಗೆ ಪತ್ರ ಬರೆದಿದ್ದಾರೆ.

ಮೈಸೂರು: ದೇಶದ ಪ್ರತಿಷ್ಠಿತ ಹಾಗೂ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ( All India Institute of Speech and Hearing) ನಿರ್ದೇಶಕರಾದ ಡಾ.ಎಂ.ಪುಷ್ಪಾವತಿ( Dr Pushavati) ಅವರ ವಿರುದ್ದ ಅನುಮಾನಾಸ್ಪದ ಕಾರ್ಯನಿರ್ವಹಣೆ, ಸ್ವಜನ ಪಕ್ಷಪಾತದ ಆರೋಪಗಳು ಕೇಳಿ ಬಂದಿದ್ದು, ಸಂಸ್ಥೆ ಮೇಲೆ ಸಿಬಿಐ ದಾಳಿ ನಡೆದಿರುವುದರಿಂದ ಕೂಡಲೇ ಪುಷ್ಪಾವತಿ ಅವರನ್ನು ವರ್ಗ ಮಾಡುವಂತ ಒತ್ತಾಯ ಮಾಡಲಾಗಿದೆ. ಈ ಸಂಬಂಧ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಕಾರ್ಯನಿರ್ವಾಹಕ ಮಂಡಳಿ ಮೂವರು ಸದಸ್ಯರು ಖುದ್ದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಜಗತ್ ಪ್ರಕಾಶ್ ನಡ್ಡಾ( JP Nadda) ಅವರಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದ್ದಾರೆ.
2024ರ ಮಾರ್ಚ್ 25 ಮತ್ತು 26ರಂದು ಆಯಿಷ್ ಸಂಸ್ಥೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳು, ತಾಂತ್ರಿಕ ಚಟುವಟಿಕೆಗಳಲ್ಲಿ ವ್ಯತ್ಯಾಸಗಳು ಆಗಿರುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಿಬಿಐಯಿಂದ ದಾಳಿ ನಡೆದಿದೆ. ಆದರೆ ಸಂಸ್ಥೆ ನಿರ್ದೇಶಕರು ಸಿಬಿಐನ ಸಾಮಾನ್ಯ ಭೇಟಿ ಹಾಗೂ ಪರಿಶೀಲನೆ ಎಂಬಂತೆ ಉತ್ತರ ನೀಡಿದ್ದಾರೆ. ಸಿಐಬಿ ಸುಖಾ ಸುಮ್ಮನೇ ದಾಳಿ ಮಾಡುವುದಿಲ್ಲ.ಜವಾಬ್ದಾರಿಯುತ ವ್ಯಕ್ತಿಗಳು ಸಂಸ್ಥೆಯಲ್ಲಿ ನಡೆದಿರುವ ಅವ್ಯವಹಾರ, ದುರುಪಯೋಗಕ್ಕೆ ಸಂಬಂಧಿಸಿ ನೀಡುವ ನಿಗದಿತ ದೂರು ಆಧರಿಸಿ ದಾಳಿ ಮಾಡಲಾಗುತ್ತದೆ. ಆಯಿಷ್ ನಿರ್ದೇಶಕಿ ಹಾಗೂ ಕೆಲವು ಅವರ ಪರವಾಗಿರುವ ವಿಭಾಗಗಳ ಮುಖ್ಯಸ್ಥರು ಸಿಬಿಐ ದಾಳಿ ವಿಚಾರವಾಗಿ ವಿಶೇಷ ಲೆಕ್ಕ ಪರಿಶೋಧನೆ ಎನ್ನುವ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಡಾ.ಪುಷ್ಪಾವತಿ ಅವರು ಆಯಿಷ್‌ನಲ್ಲಿ ನಡೆಯುತ್ತಿರುವ ಅಭಿವೃದ್ದಿ ಚಟುವಟಿಕೆ, ಯೋಜನೆಗಳು, ಕಾರ್ಯಕ್ರಮಗಳ ಕುರಿತು ಕಾರ್ಯನಿರ್ವಾಹಕ ಸದಸ್ಯರಾದ ನಮಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ನಿರ್ದೇಶಕರ ಯಾವುದೇ ಚಟುವಟಿಕೆಗಳು ಪಾರದರ್ಶಕವಾಗಿಲ್ಲ. ಅವರ ಹಲವಾರು ಚಟುವಟಿಕೆಗಳು ಅನುಮಾನದಿಂದ ಕೂಡಿವೆ. ಬಹಳಷ್ಟು ವಿಚಾರದಲ್ಲಿ ಅವರು ಸ್ವಜನಪಕ್ಷಪಾತ, ತಾರತಮ್ಯವನ್ನು ಸಿಬ್ಬಂದಿ ನೇಮಕ, ಖರೀದಿ ಹಾಗೂ ಹಣಕಾಸು ವಿಚಾರದಲ್ಲಿ ಪಾಲಿಸಿಲ್ಲ. ಈ ಕಾರಣದಿಂದಲೇ ಸಿಬಿಐ ದಾಳಿ ನಡೆದಿದ್ದರೂ ಆಶ್ಚರ್ಯ ಪಡಬೇಕಾಗಿಲ್ಲ. ಆಯಿಷ್‌ನ ಎಲೆಕ್ಟ್ರಾನಿಕ್ಸ್ ವಿಭಾಗದ ನಡೆದಿರುವ ಕೋಟಿಗಟ್ಟಲೇ ಕಾಮಗಾರಿಗಳು ಖರೀದಿ ವಿಭಾಗದಿಂದ ನಡೆದಿದ್ದರೂ ಇದಕ್ಕೆ ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದಿರುವ ಬಗ್ಗೆಯೂ ನಮಗೆ ಅನುಮಾನಗಳಿವೆ. ಹಲವಾರ್ ಸಾಫ್ಟ್ ವೇರ್‌ಗಳ ಖರೀದಿ, ಎಲೆಕ್ಟ್ರಾನಿಕ್ಸ್ ಉಪಕರಗಳು ಹಾಗೂ ಪೀಠೋಪಕರಣಗಳ ಖರೀದಿಯಲ್ಲೂ ಸಾಕಷ್ಟು ಅನುಮಾನಗಳಿವೆ. ನಿರ್ದೇಶಕಿ ಡಾ.ಪುಷ್ಪಾವತಿ ಅವರ ಏಕಪಕ್ಷೀಯ ಅನುಮತಿಯಿಂದಲೇ ಇವೆಲ್ಲವೂ ಆಗಿರುವ ಕುರಿತು ತನಿಖೆಯಾಗಬೇಕಿದೆ ಎಂದು ಹೇಳಿದ್ದಾರೆ.
ಆಯಿಷ್‌ನ ಚಟುವಟಿಕೆಗಳು, ಸಿಬಿಐ ದಾಳಿ, ಕೋಟ್ಯಂತರ ರೂ. ಖರ್ಚಿನ ವಿಚಾರವಾಗಿ ಇರುವ ಅನುಮಾನಗಳ ಹಿನ್ನೆಲೆಯಲ್ಲಿ ಕೂಡಲೇ ಡಾ.ಪುಷ್ಪಾವತಿ ಅವರನ್ನು ಆಯಿಷ್ ನಿರ್ದೇಶಕರ ಹುದ್ದೆಯಿಂದ ವರ್ಗ ಮಾಡಬೇಕು. ಸಿಬಿಐ ತನಿಖೆ ಮುಗಿಯುವರೆಗೂ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಬೇಕು. ಇಲ್ಲಿಗೆ ಪ್ರಾಮಾಣಿಕ ಹಾಗೂ ದಕ್ಷ ನಿರ್ದೇಶಕರನ್ನು ಕೂಡಲೇ ನೇಮಿಸಬೇಕು ಎಂದು ಆಯಿಷ್ ಕಾರ್ಯನಿರ್ವಾಹಕ ಮಂಡಳಿ ಸದಸ್ಯರಾದ ಟಿ.ಗಿರೀಶ್ ಪ್ರಸಾದ್, ಡಾ.ಜಿ.ಆರ್.ಚಂದ್ರಶೇಖರ್, ಡಾ.ಎ.ಆರ್.ಬಾಬು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
