Mysuru News: ಮುಖ್ಯಮಂತ್ರಿ ಸಿದ್ದರಾಮಯ್ಯ ತವರಲ್ಲೂ ನೀರಿನ ಬವಣೆ, 26 ಗ್ರಾಮಗಳಿಗೆ ಟ್ಯಾಂಕರ್ ನೀರು, 113 ಕಡೆ ಮುನ್ನೆಚ್ಚರಿಕೆ
ಮೈಸೂರು ಜಿಲ್ಲೆಯ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಟ್ಯಾಂಕರ್ ಮೂಲಕ ನೀರು ಹರಿಸಲಾಗುತ್ತಿದೆ.

ಮೈಸೂರು: ಕಾವೇರಿ ಹಾಗೂ ಕಬಿನಿ ಜಲಾಶಯಗಳ ಸಮೀಪದಲ್ಲೇ ಇದ್ದರೂ ಮೈಸೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಪ್ಪಿಲ್ಲ.ಸದ್ಯ ಮೈಸೂರು ಜಿಲ್ಲೆಯಲ್ಲಿ 26 ಸಮಸ್ಯಾತ್ಮಕ ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್ ಗಳ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತಿದೆ, ಮುಂಬರುವ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಗಳಿದ್ದು, ಒಂದುವೇಳೆ ಮಳೆಯಾಗದಿದ್ದರೆ ಸುಮಾರು 113 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲಿವೆ. ಇದಕ್ಕೆ ಮುಂಜಾಗ್ರತ ಕ್ರಮವಾಗಿ ಅಗತ್ಯವಿರುವಷ್ಟು ಖಾಸಗಿ ಬೋರ್ ವೆಲ್ ಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಇದರಿಂದ ಬರವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನ ಬೇಸಿಗೆ ಸ್ಥಿತಿಗತಿ. ಬರದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ವಿಪತ್ತು ಪ್ರಾಧಿಕಾರ ಸಭೆ ನಡೆಸಿ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಎಲ್ಲಾ ತಹಶೀಲ್ದಾರ್ ಗಳು , ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರತಿದಿನ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮ ವಹಿಸಬೇಕು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅನುದಾನದ ಕೊರತೆ ಇಲ್ಲ ಸಮರ್ಪಕ ಹಾಗೂ ಸಮನ್ವಯವಾಗಿ ಕಾರ್ಯನಿರ್ವಹಿಸಬೇಕು. ಖಾಸಗಿ ಬೋರ್ ವೆಲ್ ಗಳಲ್ಲಿ ನೀರು ವೆಚ್ಚದ ಬಿಲ್ಲುಗಳನ್ನು ವಿಪತ್ತು ನಿರ್ವಹಣೆಯಡಿ ಪಾವತಿಸಲಾಗುವುದು. ಹಾಗಾಗಿ ಅವಶ್ಯಕತೆ ಇರುವಷ್ಟು ಹೆಚ್ಚು ಖಾಸಗಿ ಬೊರ್ವೇಲ್ ಗಳನ್ನು ಪಡೆದು ಜನರಿಗೆ ಕುಡಿಯುವ ನೀರಿನ ಪೂರೈಕೆ ಮಾಡಬೇಕು ಎನ್ನುವುದು ಡಿಸಿ ಸೂಚನೆ.
ಬರಗಾಲದಲ್ಲಿ ಕೆರೆಗಳು ಪ್ರಮುಖ ಪಾತ್ರವಹಿಸಲಿದ್ದು, ಜಿಲ್ಲೆಯಾದ್ಯಂತ ಇರುವ ಕೆರೆಗಳ ಮಾಹಿತಿ ಹಾಗೂ ಹೂಳೆತ್ತುವ ಕೆಲಸ ಆಗಬೇಕು. ಅಲ್ಲದೆ ಒತ್ತುವರಿ ಆಗಿರುವ ಕೆರೆಗಳ ಪಟ್ಟಿಮಾಡಿ ಒತ್ತುವರಿಯೇ ಅಥವಾ ಇಲ್ಲವೇ ಎಂಬುದರ ಮಾಹಿತಿ ಪಡೆದು, ಒತ್ತುವರಿ ಆಗದೆ ಇರುವ ಕೆರೆಗಳಿಗೆ ಫೆನ್ಸ್ ಹಾಕಲಾಗಿದ್ದಿಯಾ ಹಾಗೂ ಇತರೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಕೆರೆಯಲ್ಲಿ ಹೂಳೆತ್ತುವ ಮೂಲಕ ಸಿಗುವ ಮಣ್ಣು ಮೂಲಸೌಕರ್ಯ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ. ಹಾಗಾಗಿ ದೊಡ್ಡ ಮಟ್ಟದಲ್ಲಿ ಹೂಳೆತ್ತುವ ಕೆರೆಗಳಿಂದ ಮಣ್ಣನ್ನು ಉಪಯೋಗಿಸಿಕೊಳ್ಳಬಹುದು ಇದನ್ನು ರೈತರು ಸಹ ಬಳಸಿಕೊಳ್ಳಬಹುದು ಎನ್ನುತ್ತಾರೆ ಡಿಸಿ ಡಾ.ರಾಜೇಂದ್ರ.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ. ಎಂ ಗಾಯಿತ್ರಿ ಅವರು ಮಾತನಾಡಿ ನೀರಿನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಆರೋಗ್ಯ ಸಮಸ್ಯೆ ಕಂಡು ಬರುವುದರಿಂದ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಿದ ನಂತರ ಜನರಿಗೆ ನೀರಿನ ಪೂರೈಕೆ ಮಾಡಬೇಕು. ಅಲ್ಲದೆ ಯಾವ ಮಟ್ಟದಲ್ಲಿ ಎಷ್ಟು ಪ್ರಮಾಣದಲ್ಲಿ ಸಾರ್ವಜನಿಕರಿಗೆ ನೀರಿನ ಪೂರೈಕೆ ಆಗುತ್ತಿದೆ ಎಂಬುದನ್ನು ನೋಡಿಕೊಂಡು, ಯಾವುದೇ ಕಾರಣಕ್ಕೂ ಪೂರೈಕೆ ಸಮಸ್ಯೆ ಆಗದಂತೆ ಎಚ್ಚರವಹಿಸಬೇಕು ಎಂದರು.
ಡಿಸಿ ಸೂಚನೆ ಏನೇನು?
- ತಾಲ್ಲೂಕುವಾರು ಸ್ಥಳೀಯ ರೈತ ಮುಖಂಡರ ಸಭೆ ಕರೆದು ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ತೊಂದರೆ, ಗೋ ಶಾಲೆಗಳ ಅಗತ್ಯತೆಗಳ ಬಗ್ಗೆ ಅವರಿಂದ ದೂರು ಪಡೆದು ಅದನ್ನು ಬಗೆಹರಿಸಲು ಮುಂದಾಗಬೇಕು.
- ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಜನರಿಗೆ ಕುಡಿಯುವ ನೀರಿನ ಬಗ್ಗೆ ಪ್ರಸ್ತುತ ಎದುರಿಸುತ್ತಿರುವ ಬರಗಾಲದ ಬಗ್ಗೆ ಜನರಿಗೆ ಅರಿವು ಮೂಡಿಸಿ ಹೆಚ್ಚಾಗಿ ನೀರನ್ನು ಪೋಲು ಮಾಡದೆ, ಅಗತ್ಯಕ್ಕೆ ತಕ್ಕಂತೆ ಸೀಮಿತವಾಗಿ ಬಳಸುವಂತೆ ಜಾಗೃತಿಮೂಡಿಸಬೇಕು
- ಅತಿ ಹೆಚ್ಚು ಜನ ಸೇರುವ ಸ್ಥಳಗಳಾದಂತಹ ಮಾರುಕಟ್ಟೆ, ಹೋಟೆಲ್ ಗಳು ಹಾಗೂ ಇತ್ಯಾದಿ ಜನ ಸೇರುವ ಸ್ಥಳಗಳಲ್ಲಿ ಕುಡಿಯುವ ನೀರಿನ ಅರವಟಿಕೆಗಳನ್ನು ಸ್ಥಾಪಿಸುವುದರ ಮೂಲಕ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತವಾಗಿಸಬೇಕು.
ಇದನ್ನೂ ಓದಿರಿ: Kaagaz 2 OTT release: ಅನುಪಮ್ ಖೇರ್, ಸತೀಶ್ ಕೌಶಿಕ್ ನಟನೆಯ ಕಾಗಜ್ 2 ಒಟಿಟಿಗೆ; ಎಲ್ಲಿ ನೋಡಬಹುದು ಈ ಸಿನಿಮಾ
- ಪ್ರಸ್ತುತ ಕಾಲರಾ ಪ್ರಕರಣವು ಕಂಡು ಬರುತ್ತಿದ್ದು, ಪೂರೈಕೆ ಆಗುವ ನೀರು ಶುದ್ಧವಾಗಿದೆಯೇ ಎಂದು ಅದರ ಗುಣಮಟ್ಟವನ್ನು ಪರೀಕ್ಷಿಸಿದ ನಂತರ ಸಾರ್ವಜನಿಕರಿಗೆ ನೀರನ್ನು ಒದಗಿಸಬೇಕು
- ಜಿಲ್ಲೆಯಾದ್ಯಂತ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಅವರು 1077 ಕಂಟ್ರೋಲ್ ರೂಮ್ ಗೆ ಕರೆ ಮಾಡಿ ದೂರನ್ನು ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.
- ಇತ್ತೀಚಿನ ದಿನಗಳಲ್ಲಿ ಅನುಮತಿ ಇಲ್ಲದೆ ಖಾಸಗಿ ಬೋರ್‌ವೆಲ್ ಕೊರೆಸುತ್ತಿರುವುದು ಕಂಡುಬರುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಅಂತಹವರ ವಿರುದ್ಧ ಕಾನೂನು ರೀತಿಯಾಗಿ ಕಠಿಣ ಕ್ರಮ ಕೈಗೊಳ್ಳಬೇಕು.
- ವಿಫಲ ಬೋರ್‌ವೆಲ್ ಗಳು ಮತ್ತು ಕನೆಕ್ಷನ್ ಕೊಡದೆ ಬಿಟ್ಟ ಬೋರ್ವೆಲ್ ಗಳನ್ನು ತಕ್ಷಣವೇ ಮುಚ್ಚಬೇಕು ಇಲ್ಲವಾದರೆ ಮುಂದೆ ಆಪಾಯ ಎದುರಾಗುತ್ತವೆ. ಹಾಗಾಗಿ ಇದನ್ನು ವೈಯಕ್ತಿಕವಾಗಿ ಪರಿಗಣಿಸಿ ಆದಷ್ಟು ಬೇಗ ಸಮಸ್ಯೆಗಳನ್ನು ಪರಿಹರಿಸಬೇಕು.
- ಸ್ಮಶಾನಗಳು, ಕೆರೆಗಳು, ಇತ್ಯಾದಿ ಸರ್ಕಾರಿ ಜಾಗದ ಮೇಲೆ ಗಮನ ಹರಿಸಿ, ಲ್ಯಾಂಡ್ ಬೀಟ್ ಸಿಸ್ಟಮ್ ಅನ್ನು ಸರಿಯಾದ ರೀತಿಯಲ್ಲಿ ಅಳವಡಿಸಿಕೊಂಡು ಅದರಲ್ಲಿ ಇರುವ ಸರ್ಕಾರಿ ಜಾಗವನ್ನು ಇತ್ಯಾದಿ ಅಗತ್ಯ ಕೆಲಸಗಳಿಗೆ, ಮನೆ ಇಲ್ಲದ ಬಡವರಿಗೆ ನೇರವಾಗುವಂತೆ ನೋಡಿಕೊಳ್ಳಬೇಕು.

ವಿಭಾಗ