ನಮ್ಮಲ್ಲಿ ಒಳಜಗಳ ಇಲ್ಲ, ನಮ್ಮ ಸರ್ಕಾರ ಉರುಳಿಸಿಕೊಳ್ಳಲು ಯಾರಿಂದಲೂ ಆಗೋಲ್ಲ: ಸಿಎಂ ಸಿದ್ದರಾಮಯ್ಯ
ಕನ್ನಡ ಸುದ್ದಿ  /  ಕರ್ನಾಟಕ  /  ನಮ್ಮಲ್ಲಿ ಒಳಜಗಳ ಇಲ್ಲ, ನಮ್ಮ ಸರ್ಕಾರ ಉರುಳಿಸಿಕೊಳ್ಳಲು ಯಾರಿಂದಲೂ ಆಗೋಲ್ಲ: ಸಿಎಂ ಸಿದ್ದರಾಮಯ್ಯ

ನಮ್ಮಲ್ಲಿ ಒಳಜಗಳ ಇಲ್ಲ, ನಮ್ಮ ಸರ್ಕಾರ ಉರುಳಿಸಿಕೊಳ್ಳಲು ಯಾರಿಂದಲೂ ಆಗೋಲ್ಲ: ಸಿಎಂ ಸಿದ್ದರಾಮಯ್ಯ

Karnataka Politics ಕರ್ನಾಟಕ ಸರ್ಕಾರ ಉರುಳಿಸುವ ಹೇಳಿಕೆ ನೀಡುವ ಬದಲು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ( Eknath Shinde) ಮೊದಲು ತಮ್ಮ ಸರ್ಕಾರ ಉಳಿಸಿಕೊಳ್ಳಲಿ ಎಂದು ಸಿದ್ದರಾಮಯ್ಯ ( Siddaramaiah) ಹೇಳಿದ್ಧಾರೆ.

ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ,
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ,

ಮೈಸೂರು: ನಮ್ಮಲ್ಲಿ ಯಾವುದೇ ಒಳಜಗಳ ಇಲ್ಲ. ಒಗ್ಗಟ್ಟಿನಿಂದಲೇ ಇದ್ದೇವೆ. ಹಾಗಿದ್ದಿದ್ದರೆ ಈಗಷ್ಟೇ ಕರ್ನಾಟಕದಲ್ಲಿ ಮುಗಿದಿರುವ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಸರ್ಕಾರವನ್ನು ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ. ಮಹಾರಾಷ್ಟ್ರ ಸಿಎಂ ಶಿಂಧೆ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಬದಲು ಅವರ ಸರ್ಕಾರವನ್ನು ಮೊದಲು ಉಳಿಸಿಕೊಳ್ಳಲಿ ಬಿಜೆಪಿ ನಾಯಕರೇ, ನಮ್ಮ ಸರ್ಕಾರದ ಚಿಂತೆ ಮಾಡುವುದು ಬಿಡಿ ಅದು ಸುಭದ್ರವಾಗಿ ಐದು ವರ್ಷ ಪೂರ್ಣಗೊಳಿಸಲಿದೆ. ನಿಮ್ಮ ಪಕ್ಷದ ಬಗ್ಗೆ ಯೋಚನೆ ಮಾಡಿ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತ ಅತೃಪ್ತ ನಾಯಕರೆಲ್ಲ ತಮಗೆ ಆಗಿರುವ ಅನ್ಯಾಯದ ವಿರುದ್ಧ ಸೇಡಿಗಾಗಿ ತಹತಹಿಸುತ್ತಿದ್ದಾರೆ. ಚುನಾವಣಾ ಫಲಿತಾಂಶ ಹೊರಬಿದ್ದ ಕೂಡಲೇ ಈ ಸೇಡಿನ ಜ್ವಾಲೆ ಧಗಧಗಿಸಿದರೆ ಆಶ್ಚರ್ಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಜಗಳವಾಗಿ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ರಾಜಕೀಯವಾಗಿ ಹೇಳಿಕೆ ನೀಡುತ್ತಿದ್ದಾರೆ. ಚುನಾವಣಾ ಫಲಿತಾಂಶದ ನಂತರ ರಾಜ್ಯದ ಕಾಂಗ್ರೆಸ್ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಮೊದಲು ತಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು. ಈ ಪಕ್ಷದ್ರೋಹಿ ಶಿಂಧೆ ಅವರ ಪಕ್ಷ ಈ ಚುನಾವಣೆಯಲ್ಲಿ ಧೂಳೀಪಟವಾಗಲಿರುವುದು ಮಾತ್ರವಲ್ಲ ಮಹಾರಾಷ್ಟ್ರದ ರಾಜಕೀಯದಲ್ಲಿ ಅವರು ಮೂಲೆ ಸೇರುವುದು ಖಚಿತ. ಈ ಹತಾಶೆಯಿಂದ ಏನೋ ಬಡಬಡಿಸಿದ್ದಾರೆ. ಅವರ ಮಾತನ್ನು ಗಂಭೀರವಾಗಿ ಸ್ವೀಕರಿಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯ ಬಿಜೆಪಿಯ ಮುಕ್ಕಾಲು ಪಾಲು ನಾಯಕರು ಬಿಜೆಪಿಯ ಈಗಿನ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ತಲೆದಂಡಕ್ಕಾಗಿ ವ್ಯೂಹ ರಚನೆಯಲ್ಲಿ ತೊಡಗಿದ್ದಾರೆ. ಚುನಾವಣೆಯಲ್ಲಿನ ಹಿನ್ನಡೆಯನ್ನು ತಂದೆ-ಮಕ್ಕಳ ತಲೆಗೆ ಕಟ್ಟಿ ಅವರನ್ನು ಮೂಲೆಗೆ ತಳ್ಳುವ ಕಸರತ್ತಿನ ತಯಾರಿ ಭರದಿಂದ ನಡೆಯುತ್ತಿದೆ. ಇದಕ್ಕೆ ಆರ್.ಎಸ್.ಎಸ್ ನ ಒಂದು ಬಣದ ಆಶೀರ್ವಾದ ಕೂಡಾ ಇದೆ ಎಂದು ಹೇಳಲಾಗುತ್ತಿದೆ.ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿದ್ದ ನಾಯಕರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ. ಈ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಮಕ್ಕಳು ಪಕ್ಷವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸದಿದ್ದರೆ ತಾವೆಲ್ಲ ಶಾಶ್ವತವಾಗಿ ಮೂಲೆ ಸೇರುವುದು ಖಚಿತ ಎನ್ನುವ ಆತಂಕದಲ್ಲಿದ್ದಾರೆ. ಇದರಿಂದಾಗಿ ಲೋಕಸಭಾ ಚುನಾವಣೆಯ ನಂತರ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಪೋಟ ಆಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ಧಾರೆ.

ಉತ್ತಮ ವಾತಾವರಣ

ಪರಿಷತ್ ಚುನಾವಣೆಯ ವಾತಾವರಣ ಉತ್ತಮವಾಗಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿ ಅಭ್ಯರ್ಥಿಗಳನ್ನು ಆರು ತಿಂಗಳು ಮುಂಚಿತವಾಗಿಯೇ ಆಯ್ಕೆ ಮಾಡಲಾಗಿತ್ತು. ಅಭ್ಯರ್ಥಿಗಳಿಗೆ ಸಮಯ ಸಿಕ್ಕು, ಮತದಾರರನ್ನು ಭೇಟಿಯಾಗಲು ಅವಕಾಶ ದೊರೆಯಿತು. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರು ರಾಜಕೀಯವಾಗಿ ಪ್ರಬುದ್ಧರಾಗಿರುವವರು ಯಾವುದು ಸರಿ, ತಪ್ಪು ಎನ್ನುವ ಬಗ್ಗೆ ಅರಿವು ಹೊಂದಿದವರು. ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ತುಲನೆ ಮಾಡುವ ಶಕ್ತಿ ಅವರಿಗಿದೆ ಎಂದು ಹೇಳಿದ್ದಾರೆ.

ಮೈತ್ರಿ ಪರಿಣಾಮ ಚುನಾವಣೆಯ ಮೇಲೆ ಆಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

ಹಿಟ್ ಅಂಡ್ ರನ್ ಕೇಸ್

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ .ಅವರು ಭ್ರಷ್ಟಾಚಾರದ ಬಗ್ಗೆ ತಮ್ಮ ಬಳಿ ಪೆನ್ ಡ್ರೈವ್ ಇದ್ದು, ತನಿಖೆ ಮಾಡಿಸುವ ತಾಕತ್ತು ಸರ್ಕಾರಕ್ಕಿದೆ ಎಂದರೆ ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ ಕುಮಾರಸ್ವಾಮಿಯವರದ್ದು ಸದಾ ಹಿಟ್ ಅಂಡ್ ರನ್ ಕೇಸ್ ಎಂದು ಹೇಳಿದರು.