Mysore News: ಮೈಸೂರು ವಿವಿ ಕುಲಪತಿ ವಜಾ: ಯುಆರ್‌ ಅನಂತಮೂರ್ತಿ ಪುತ್ರಗೆ ಅವಕಾಶ ನಿರೀಕ್ಷೆ
ಕನ್ನಡ ಸುದ್ದಿ  /  ಕರ್ನಾಟಕ  /  Mysore News: ಮೈಸೂರು ವಿವಿ ಕುಲಪತಿ ವಜಾ: ಯುಆರ್‌ ಅನಂತಮೂರ್ತಿ ಪುತ್ರಗೆ ಅವಕಾಶ ನಿರೀಕ್ಷೆ

Mysore News: ಮೈಸೂರು ವಿವಿ ಕುಲಪತಿ ವಜಾ: ಯುಆರ್‌ ಅನಂತಮೂರ್ತಿ ಪುತ್ರಗೆ ಅವಕಾಶ ನಿರೀಕ್ಷೆ

Mysore University Issue ಶತಮಾನ ಪೂರೈಸಿರುವ, ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯದ ಹಾಲಿ ಕುಲಪತಿಯನ್ನು ಹೈಕೋರ್ಟ್‌ ವಜಾ ಮಾಡಿದೆ. ಹೊಸ ಕುಲಪತಿ ನೇಮಕಕ್ಕೆ ಶೋಧನಾ ಸಮಿತಿ ರಚಿಸುವಂತೆಯು ಸೂಚಿಸಿದೆ. ಈ ಹುದ್ದೆ ಸಿಗದೇ ಕಾನೂನು ಹೋರಾಟ ಮಾಡಿದ ಶರತ್‌ ಅನಂತಮೂರ್ತಿ ಅವರಿಗೆ ಈ ಹುದ್ದೆ ಸಿಗಲಿದೆಯೇ ಎನ್ನುವ ಚರ್ಚೆ ಶುರುವಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಲೋಕನಾಥ್‌ ಅವರನ್ನು ಹೈಕೋರ್ಟ್‌ ವಜಾಗೊಳಿಸಿದ್ದು, ಕಾನೂನು ಹೋರಾಟ ನಡೆಸಿದ ಸಾಹಿತಿ ಯುಆರ್‌ ಅನಂತಮೂರ್ತಿ ಪುತ್ರ ಶರತ್‌ ಅವರಿಗೆ ಅವಕಾಶ ಸಿಗುವ ನಿರೀಕ್ಷೆಗಳಿವೆ.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಲೋಕನಾಥ್‌ ಅವರನ್ನು ಹೈಕೋರ್ಟ್‌ ವಜಾಗೊಳಿಸಿದ್ದು, ಕಾನೂನು ಹೋರಾಟ ನಡೆಸಿದ ಸಾಹಿತಿ ಯುಆರ್‌ ಅನಂತಮೂರ್ತಿ ಪುತ್ರ ಶರತ್‌ ಅವರಿಗೆ ಅವಕಾಶ ಸಿಗುವ ನಿರೀಕ್ಷೆಗಳಿವೆ.

ಮೈಸೂರು: ಶೋಧನಾ ಸಮಿತಿಯಲ್ಲಿ ಹೆಸರು ಇಲ್ಲದೇ ಇದ್ದರೂ ಶಿಫಾರಸ್ಸು ಮಾಡಿದ್ದವರನ್ನು ಸೇರಿಸಿ ಅವಕಾಶ ಮಾಡಿಕೊಟ್ಟಿದ್ದ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ನೇಮಕವನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಆ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೇಮಕ ಮಾಡುವಾಗ ಕಾನೂನು ಹಾಗೂ ಶ್ರೇಷ್ಠತೆ ಕಾಪಾಡಬೇಕು ಎಂದು ಹೈಕೋರ್ಟ್‌ ಚಾಟಿ ಬೀಸಿದೆ.

ಶತಮಾನದ ಹಿನ್ನೆಲೆಯ ಮೈಸೂರು ವಿಶ್ವವಿದ್ಯಾನಿಲಯ ಕುಲಪತಿಯನ್ನು ಹೈಕೋರ್ಟ್‌ ವಜಾಗೊಳಿಸಿದ್ದು, ಈ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿ ಕಾನೂನು ಹೋರಾಟ ನಡೆಸಿದ್ದ ಹಿರಿಯ ಸಾಹಿತಿ ಡಾ.ಯು.ಆರ್‌. ಅನಂತಮೂರ್ತಿ ಅವರ ಪುತ್ರ ಶರತ್‌ ಅನಂತಮೂರ್ತಿಗೆ ಅವಕಾಶ ಸಿಗಲಿದೆಯೇ ಎನ್ನುವ ಚರ್ಚೆಗಳು ನಡೆದಿವೆ.

ವಿವಾದವೇನು

ಮೈಸೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಪ್ರೊ.ಎನ್.ಕೆ.ಲೋಕನಾಥ್ ಅವರನ್ನು ನೇಮಕ ಮಾಡಿದ್ದರಿಂದ ಮಾರ್ಚ್ 21ರಂದು ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಕುಲಪತಿ ನೇಮಕಾತಿಗೆ ಪ್ರೊ.ಎಂ.ಎಸ್‌.ಶಿವಕುಮಾರ್‌ ನೇತೃತ್ವದಲ್ಲಿ ರಚಿಸಿದ್ದ ಶೋಧನಾ ಸಮಿತಿ ಶಿಫಾರಸ್ಸು ಮಾಡಿದ್ದ ಪ್ರೊ. ಡಿ.ಎಸ್.ಗುರು,ಪ್ರೊ.ವೆಂಕಟೇಶ್‌ಕುಮಾರ್‌ ಅವರೊಂದಿಗೆ ತಮ್ಮ ಹೆಸರನ್ನು ಶಿಫಾರಸ್ಸು ಮಾಡಿದ್ದರೂ ರಾಜ್ಯಸರ್ಕಾರ ಒಬ್ಬರನ್ನು ಕೈಬಿಟ್ಟು ತಿರಸ್ಕಾರಗೊಂಡಿದ್ದ ಪ್ರೊ.ಎನ್.ಕೆ.ಲೋಕನಾಥ್ ಅವರನ್ನು ನೇಮಕ ಮಾಡಿದ್ದನ್ನು ಪ್ರೊ.ಶರತ್ ಅನಂತಮೂರ್ತಿ ಪ್ರಶ್ನಿಸಿ ಪ್ರೊ.ಶರತ್ ಅನಂತಮೂರ್ತಿ ನ್ಯಾಯಾಲಯದ ಮೊರೆ ಹೋಗಿದ್ದರು.

ಶೋಧನಾ ಸಮಿತಿಯು ಆಯ್ಕೆ ಮಾಡುವಾಗಲೇ ಲೋಕನಾಥ್ ಅವರ ಅರ್ಜಿ ತಿರಸ್ಕಾರವಾಗಿದ್ದರೂ ನಿಯಮಬಾಹಿರ ಮತ್ತು ಶೋಧನಾ ಸಮಿತಿ ಶಿಫಾರಸ್ಸನ್ನು ಬದಿಗಿರಿಸಿ ನೇಮಕ ಮಾಡಿದ್ದನ್ನು ವಜಾಗೊಳಿಸುವಂತೆ ಪ್ರೊ.ಶರತ್ ಅನಂತಮೂರ್ತಿ ಪರ ವಕೀಲರು ವಾದಿಸಿದ್ದರಿಂದ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಈ ವೇಳೆ ಪ್ರೊ.ಎನ್.ಕೆ.ಲೋಕನಾಥ್ ಅವರು ತಮ್ಮ ನೇಮಕಾತಿಯ ಕ್ರಮವನ್ನು ಸಮರ್ಥಿಸಿಕೊಂಡು ಪ್ರತಿವಾದ ಮಾಡಿದ್ದರು. ಆದರೆ, ಈಗಿನ ಸರ್ಕಾರ ಮಾತ್ರ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆಗಿದ್ದ ನೇಮಕಾತಿಯ ನಿಯಮಬಾಹಿರ ಕ್ರಮವನ್ನು ಸಮರ್ಥಿಸಿಕೊಳ್ಳದೆ ಹೈಕೋರ್ಟ್ ಕೇಳಿದ್ದ ಎಲ್ಲಾ ಮಾಹಿತಿಗಳನ್ನು ಒದಗಿಸಿತ್ತು. ಹೀಗಾಗಿ, ಕಳೆದ ಮೂರು ತಿಂಗಳಿಂದ ಸುದೀರ್ಘವಾಗಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್‌ ಪ್ರೊ.ಎನ್.ಕೆ.ಲೋಕನಾಥ್ ನೇಮಕವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.

ಶೋಧನಾ ಸಮಿತಿಯು ಶಿಫಾರಸ್ಸು ಮಾಡಿದ್ದ ಮೂವರ ಹೆಸರನ್ನು ಮತ್ತೆ ಪರಿಗಣಿಸುವಂತೆ ಹೇಳಿದ್ದರೆ ಸರಿಯಾಗಿತ್ತು.ಆದರೆ, ಹೊಸದಾಗಿ ಸಮಿತಿ ರಚಿಸುವಂತೆ ಹೇಳಿದ್ದರಿಂದ ವೈಯಕ್ತಿಕವಾಗಿ ಬೇಸರವಾದರೂ ಯುಜಿಸಿ ನಿಯಮಾವಳಿ ಉಲ್ಲಂಘಿಸಿ ನೇಮಕ ಮಾಡಿದ್ದನ್ನು ವಜಾಗೊಳಿಸಿದ್ದಕ್ಕೆ ಸಂತಸ ತಂದಿದೆ ಎನ್ನುವುದು ಶರತ್‌ ಅನಂತಮೂರ್ತಿ ಅವರ ಅಭಿಪ್ರಾಯ.

ಯಾರಿಗೆ ಅವಕಾಶ

ಆರು ತಿಂಗಳ ಹಿಂದೆ ತರಾತುರಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ನೇಮಿಸಿದ್ದ ಪ್ರೊ.ಎನ್‌.ಕೆ.ಲೋಕನಾಥ್‌ ಅವರನ್ನು ಮೂರು ತಿಂಗಳಿನಿಂದ ಕಾನೂನು ಹೋರಾಟದ ನಂತರ ಹೈಕೋರ್ಟ್‌ ವಜಾಗೊಳಿಸಿದೆ. ಈ ಮೂಲಕ ನೇಮಕ ಪ್ರಶ್ನಿಸಿ ಕಾನೂನು ಹೋರಾಟ ನಡೆಸಿದ್ದ ಪ್ರೊ.ಶರತ್‌ ಅನಂತಮೂರ್ತಿ ಅವರನ್ನು ಕುಲಪತಿಯಾಗಿ ನೇಮಕವಾಗಬಹುದಾ ಎಂಬ ಪ್ರಶ್ನೆಗಳು ಎದುರಾಗಿದೆ.

ಹೈಕೋರ್ಟ್‌ ನೀಡಿರುವ ಸೂಚನೆ ಪ್ರಕಾರ, ಕುಲಪತಿ ಆಯ್ಕೆಗೆ ಹೊಸ ಶೋಧನಾ ಸಮಿತಿ ರಚಿಸಬೇಕು. ಇದರಿಂದ ಉನ್ನತ ಶಿಕ್ಷಣ ಇಲಾಖೆ ಹೊಸ ಸಮಿತಿ ರಚಿಸಿ ಪ್ರಕ್ರಿಯೆ ಆರಂಭಿಸಬಹುದು. ಈ ನಡುವೆ ಲೋಕನಾಥ್‌ ಅವರು ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ.

ಹೊಸ ಶೋಧನಾ ಸಮಿತಿ

ಕುಲಪತಿ ನೇಮಕ ವಜಾಗೊಳಿಸಿರುವ ನ್ಯಾಯಾಲಯವು ಹೊಸದಾಗಿ ಶೋಧನಾ ಸಮಿತಿ ರಚನೆ ಮಾಡುವ ಜತೆಗೆ ಅರ್ಹರಿಂದ ಅರ್ಜಿ ಆಹ್ವಾನಿಸಲು ಜಾಹೀರಾತು ನೀಡುವಂತೆ ಹೇಳಿದೆ. ಹೀಗಾಗಿ, ಹಿಂದಿನ ಶೋಧನಾ ಸಮಿತಿಯು ಶಿಫಾರಸ್ಸು ಮಾಡಿದ್ದ ಮೂವರ ಹೆಸರನ್ನು ಮತ್ತೆ ಪರಿಗಣಿಸಲು ಅವಕಾಶ ಇಲ್ಲದಂತಾಗಿ ಮತ್ತೆ ಅರ್ಜಿ ಹಾಕಬೇಕಿದೆ. ಇದಲ್ಲದೆ, ರಾಜ್ಯಸರ್ಕಾರ ಕೂಡ ನುರಿತ ಶಿಕ್ಷಣ ತಜ್ಞರನ್ನೊಳಗೊಂಡ ಶೋಧನಾ ಸಮಿತಿ ರಚಿಸಿ, ಹತ್ತು ವರ್ಷ ಮೇಲ್ಪಟ್ಟು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದವರಿಂದ ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನಿಸುವಂತೆ ಹೇಳಿದೆ. ಈ ಕುರಿತು ಉನ್ನತ ಶಿಕ್ಷಣ ಇನ್ನಷ್ಟೇ ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನಿಸುವ ಪ್ರಕ್ರಿಯೆ ಆರಂಭಿಸಬೇಕಾಗಿದೆ.

ಗುರು ನಂತರ ಶಿಷ್ಯ ವಜಾ

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿವಾಗಿ ನೇಮಕಗೊಂಡವರ ಹುದ್ದೆ ರದ್ದಾಗುತ್ತಿರುವುದು ಎರಡನೇ ಪ್ರಕರಣವಾಗಿದೆ. ಪ್ರೊ.ದೇ.ಜವರೇಗೌಡರ ಪುತ್ರ ಪ್ರೊ.ಜೆ.ಶಶಿಧರ ಪ್ರಸಾದ್ ಅವರ ನೇಮಕಾತಿಯನ್ನು ಎರಡೂವರೆ ದಶಕದ ಹಿಂದೆ ಆಗಿನ ಸರ್ಕಾರ ರದ್ದುಪಡಿಸಿತ್ತು. ಪ್ರೊ.ಜೆ.ಶಶಿಧರ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ್ದ ಎನ್.ಕೆ.ಲೋಕನಾಥ್ ಅವರ ನೇಮಕಾತಿಯು ಈಗ ರದ್ದಾಗಿದೆ. ಆಗ ಗುರು ಶಶಿಧರ ಪ್ರಸಾದ್‌ ಮತ್ತೆ ಕುಲಪತಿಯಾಗಿ ನೇಮಕಗೊಂಡಿದ್ದರು. ಈಗ ಅವರ ಶಿಷ್ಯ ಕಾನೂನು ಹೋರಾಟ ನಡೆಸುತ್ತಿದ್ದಾರೆ.

Whats_app_banner