Mysore News: 12 ವರ್ಷ ಪತ್ನಿಗೆ ಗೃಹಬಂಧನ, ಬಂಧಮುಕ್ತಗೊಳಿಸಿದ ಗ್ರಾಮಸ್ಥರು, ಇಷ್ಟಾದರೂ ಪತಿ ಕ್ಷಮಿಸಿದ ಮಹಿಳೆ !
ಪತಿಯೇ ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಸತತ 12 ವರ್ಷ ಗೃಹಬಂಧನದಲ್ಲಿರಿಸಿದ ಘಟನೆ ಮೈಸೂರು ಜಿಲ್ಲೆಯಲ್ಲಿ ವರದಿಯಾಗಿದ್ದು, ಆಕೆ ಪತಿಯನ್ನು ಕ್ಷಮಿಸಿ ತವರು ಮನೆಗೆ ತೆರಳಿದ್ದಾಳೆ.
ಮೈಸೂರು: ಸತತ 12 ವರ್ಷಗಳ ಕಾಲ ಪತ್ನಿಯನ್ನು ಗೃಹಬಂಧನದಲ್ಲಿರಿಸಿದ್ದ ಅಮಾನಮೀಯ ಘಟನೆಯಿದು. ಇದು ನಡೆದಿರುವುದು ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನ ಎಚ್.ಮಟಕೆರೆ ಗ್ರಾಮದಲ್ಲಿ.ಮನೆಯಲ್ಲಿಯೇ ಕೂಡಿ ಹಾಕಿದ್ದ ಮಹಿಳೆಯನ್ನು ಈಗ ಬಂಧಮುಕ್ತಗೊಳಿಸಲಾಗಿದೆ. ಆಕೆ ಪತಿಯೊಂದಿಗೆ ಇರುವುದಿಲ್ಲ ಎನ್ನುವ ಕಾರಣ ನೀಡಿದ್ದರಿಂದ ತವರುಮನೆಗೆ ಆಕೆಯನ್ನು ಕಳುಹಿಸಲಾಗಿದೆ. ಇಷ್ಟು ಕಷ್ಟ ಕೊಟ್ಟರೂ ಪತಿ ವಿರುದ್ದ ದೂರು ನೀಡದ ಮಹಿಳೆ ಆತನನ್ನು ಕ್ಷಮಿಸಿದ್ದು ಸರಿಯಾಗಿ ಬಾಳಲಿ ಎನ್ನುವ ಬುದ್ದಿವಾದ ಹೇಳಿ ಮಾನವೀಯತೆ ಮೆರೆದಿದ್ದಾಳೆ.
ಆಗಿದ್ದಾದರೂ ಏನು
ಮೈಸೂರಿನಿಂದ 45 ಕಿ.ಮಿ. ದೂರದಲ್ಲಿರುವ ಎಚ್.ಮಟಕೆರೆ ಗ್ರಾಮದಲ್ಲಿ ಖಾಸಗಿ ನೌಕರನಾಗಿರುವ ಸಣ್ಣಾಳಯ್ಯ ಎಂಬಾತ ಪತ್ನಿ ಸುಮಾ ಅವರನ್ನು ಕೂಡಿ ಹಾಕಿ ಹಿಂಸೆ ಕೊಡುತ್ತಿದ್ದ. ಪತ್ನಿ ಅಕ್ಕಪಕ್ಕದವರೊಂದಿಗೆ ಮಾತನಾಡಬಾರದು. ನೆರೆಹೊರೆಯವರೊಂದಿಗೆ ಸಂಬಂಧ ಇಟ್ಟುಕೊಳ್ಳಬಹುದು ಎಂದು ಶೀಲ ಶಂಕಿಸಿ ಕೂಡಿ ಕಿರುಕುಳ ಕೂಡ ನೀಡುತ್ತಿದ್ದ. ಮಕ್ಕಳನ್ನು ಶಾಲೆಗೆ ಕಳುಹಿಸಿ ತಾವು ಹಿಂದೆ ಹಾಗೂ ಮುಂದೆ ಮನೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗುತ್ತಿದ್ದ. ಪತ್ನಿ ಮನೆಯಲ್ಲಿಯೇ ಇರಬೇಕಿತ್ತು. ಹೊರಕ್ಕೆ ಬರುವ ಪ್ರಯತ್ನ ಮಾಡಿದರೆ ಹಿಂಸೆ ನೀಡುತ್ತಿದ್ದ.
ಮೂರನೇ ಮದುವೆ
ಈಗಾಗಲೇ ಆತ ಎರಡು ಮದುವೆಯಾಗಿದ್ದು. ಇದೇ ಮನೋಭಾವದಿಂದ ಇಬ್ಬರು ಆತನನ್ನು ಬಿಟ್ಟು ಹೋಗಿದ್ದರು. ಆನಂತರ ಮೂರನೇ ಮದುವೆಯಾಗಿದ್ದು ಎಚ್.ಡಿ.ಕೋಟೆ ತಾಲ್ಲೂಕಿನ ಹೈರಿಗೆ ಗ್ರಾಮದ ಸುಮಾ ಜತೆ ಆಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆರಂಭದಲ್ಲಿಯೇ ಚೆನ್ನಾಗಿಯೇ ಇದ್ದ ಸಣ್ಣಾಳಯ್ಯ ಪತ್ನಿ ಮೇಲೆ ಸುಮ್ಮನೇ ಅನುಮಾನ ಪಡುತ್ತಿದ್ದ. ಈ ವಿಚಾರದಲ್ಲಿ ಪತಿ ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಲೇ ಇತ್ತು. ಕೊನೆಗೆ ಆತ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗುವುದು. ಸಂಜೆ ವಾಪಾಸಾದಾಗ ಬಾಗಿಲು ತೆರೆಯುವುದನ್ನು ಮಾಡುತ್ತಿದ್ದ. ಶಾಲೆಗೆ ಹೋಗಿ ಬಂದ ಮಕ್ಕಳು ತಂದೆ ಬರುವವರೆಗೂ ಮನೆ ಬಾಗಿಲಿನಲ್ಲೇ ಕಾಯಬೇಕು. ಇಲ್ಲವೇ ಅಕ್ಕಪಕ್ಕದ ಮನೆಯಲ್ಲಿ ಇರಬೇಕಿತ್ತು.
ವರ್ತನೆ ಬದಲಿಸದ ಪತಿ
ಈ ಕುರಿತು ನೆರೆಹೊರೆಯವರು ಹಾಗೂ ಗ್ರಾಮಸ್ಥರು ಎರಡು ಮೂರು ಬಾರಿ ಪಂಚಾಯಿತಿ ನಡೆಸಿದ್ದರೂ ಸಣ್ಣಾಳಯ್ಯ ತನ್ನ ವರ್ತನೆ ಬದಲಿಸಿಕೊಂಡಿರಲಿಲ್ಲ. ಜನರೂ ಸುಮ್ಮನಾಗಿದ್ದರು. ಸುಮಾ ಮಾತ್ರ ಹಿಂಸೆ ಅನುಭವಿಸುತ್ತಲೇ ಇದ್ದರು. ಬೀಗಿ ಹಾಕಿದ ವೇಳೆ ಮಲ, ಮೂತ್ರವನ್ನೂ ಮನೆಯೊಳಗೆ ಮಾಡುವ ಸ್ಥಿತಿಯೂ ನಿರ್ಮಾಣವಾಗಿ ಹಿಂಸೆ ಅತಿಯಾಗಿತ್ತು.
ಕೊನೆಗೂ ದೂರು ನೀಡಿದ ಪತ್ನಿ
ಈ ಹಿನ್ನೆಲೆಯಲ್ಲಿ ಸುಮಾ ಮಟಕೆರೆ ಗ್ರಾಮದ ವಕೀಲರಾದ ಸಿದ್ದಪ್ಪಾಜಿ ಎಂಬುವವರಿಗೆ ಮಾಹಿತಿ ನೀಡಿ ಕ್ರಮಕ್ಕೆ ಮನವಿ ಮಾಡಿದ್ದರು. ಸಿದ್ದಪ್ಪಾಜಿ ಅವರು ಎಚ್‌ಡಿಕೋಟೆ ಪೊಲೀಸ್ ಠಾಣೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಸಾಂತ್ವನ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ಇದನ್ನಾಧರಿಸಿ ಗ್ರಾಮಕ್ಕೆ ತೆರಳಿದ ಪೊಲೀಸರು ಹಾಗೂ ಸಾಂತ್ವನ ಕೇಂದವರು ಆಕೆಯನ್ನು ಬಂಧಮುಕ್ತಗೊಳಿಸಿದ್ದರು. ಆನಂತರ ಪೊಲೀಸರು ಸಣ್ಣಾಳಯ್ಯ ವಿರುದ್ದ ದೂರು ದಾಖಲಿಸಿಕೊಂಡಿದ್ದರು.
ಎಚ್‌ಡಿ ಕೋಟೆ ಸಾಂತ್ವನ ಕೇಂದ್ರದಲ್ಲಿ ಮಕ್ಕಳೊಂದಿಗೆ ಇದ್ದ ಸುಮಾ ಅವರನ್ನು ಕರೆಯಿಸಿ ಪೊಲೀಸರು ಸಣ್ಣಾಳಯ್ಯ ಸಮ್ಮುಖದಲ್ಲಿ ವಿಚಾರಣೆ ನಡೆಸಿದ್ದರು. ಆಗ ಸುಮಾ ತಾವು ಅನುಭವಿಸಿದ ನರಕಯಾತನೆ ಬಿಡಿಸಿಟ್ಟಿದ್ದರು.
ಕ್ಷಮೆ ಕೊಟ್ಟು ತವರುಮನೆಗೆ ಮಹಿಳೆ
ಆತನೊಂದಿಗೆ ನಾನು ಹೋಗುವುದಿಲ್ಲ. ಅನುಮಾನದಿಂದ ದೂರವಾಗಿ ಸರಿಯಾಗಿ ಬದುಕುವುದಾದರೆ ಮುಂದೆ ನೋಡುತ್ತೇನೆ ಎಂದು ಹೇಳಿದ್ದರು. ಅಲ್ಲದೇ ಪತಿ ವಿರುದ್ದ ದೂರು ನೀಡದೇ ಕ್ಷಮೆ ಕೂಡ ನೀಡಿದ್ದರು. ಅಲ್ಲಿಂದ ಆಕೆ ತವರು ಮನೆಗೆ ತೆರಳಿದರು. ಪೊಲೀಸರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಸಾಂತ್ವನ ಕೇಂದ್ರದವರಿಗೆ ಮುಚ್ಚಳಿಕೆ ಬರೆದುಕೊಟ್ಟು ಮನೆಗೆ ತೆರಳಿದ್ದಾನೆ.
ಇದೊಂದು ಆಮಾನವೀಯ ಕೃತ್ಯ. ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ತೆರಳಿ ಸುಮಾ ಅವರನ್ನು ಗೃಹಬಂಧನದಿಂದ ಮುಕ್ತಗೊಳಿಸಿ ಅವರ ಆಶಯದಂತೆಯೇ ತವರುಮನೆಗೆ ಕಳುಹಿಸಲಾಗಿದೆ. ಆಕೆಯ ಗಂಡ ಸಣ್ಣಾಳಯ್ಯಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಯಿಸಿಕೊಂಡಿದ್ದೇನೆ. ಕೆಲ ದಿನಗಳವರೆಗೆ ಇದನ್ನು ಗಮನಿಸಿ ಇಬ್ಬರನ್ನು ಒಂದುಗೂಡಿಸುವ ಪ್ರಯತ್ನವನ್ನು ಇಬ್ಬರ ಹೇಳಿಕೆ ಆಧರಿಸಿ ಮಾಡಲಾಗುತ್ತದೆ ಎನ್ನುವುದು ಎಚ್‌ಡಿಕೋಟೆ ಸಿಡಿಪಿಒ ಆಶಾ, ಸಾಂತ್ವನ ಕೇಂದ್ರದ ಜಶೀಲಾ ಹಾಗೂ ಪೊಲೀಸ್ ಅಧಿಕಾರಿ ಸುಭಾನ್ ಅವರ ಅಭಿಪ್ರಾಯ.