ಕನ್ನಡ ಸುದ್ದಿ  /  Karnataka  /  Mysore News Karnataka State Open University Ksou Naac A Plus Grade National Assessment And Accreditation Council Jra

Education News: ಮಾನ್ಯತೆಯನ್ನೇ ಕಳೆದುಕೊಂಡಿದ್ದ ಕೆಎಸ್‌ಒಯುಗೆ ನ್ಯಾಕ್ ಎ ಪ್ಲಸ್ ಗ್ರೇಡ್; ವಿದ್ಯಾರ್ಥಿಗಳು ನಿರಾಳ

ಕಳೆದ ತಿಂಗಳು ನ್ಯಾಕ್ ಸಮಿತಿ ವಿವಿಗೆ ಭೇಟಿ ನೀಡಿತ್ತು. ವಿಶ್ವವಿದ್ಯಾನಿಲಯದಲ್ಲಿ ಶೈಕ್ಷಣಿಕ ಚಟುವಟಿಕೆಗಳು, ಪ್ರವೇಶಾತಿ ಪ್ರಕ್ರಿಯೆ, ನಿಯಮ ಪಾಲನೆ, ಮೂಲಸೌಕರ್ಯಯಗಳ ಲಭ್ಯತೆ, ಅಧ್ಯಾಪಕರ ಕಾರ್ಯಕ್ಷಮತೆಯನ್ನು ಪರಾಮರ್ಶೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಕ್ ಸಮಿತಿ ಮಾನ್ಯತೆ ದೊರೆತಿದ್ದು, ಹಿಂದೆ ಇದ್ದ ಗೊಂದಲಗಳು ಬಗೆಹರಿದಿವೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(KSOU)ದಲ್ಲಿ ಶಿಕ್ಷಣ ಪಡೆಯುತ್ತಿರುವವರಿಗೊಂದು ಶುಭ ಸುದ್ದಿ. ಬಹುವರ್ಷಗಳ ಬೇಡಿಕೆಯಾದ ನ್ಯಾಕ್ ಮಾನ್ಯತೆ(National Assessment and Accreditation Council-NAAC)ಯು ವಿಶ್ವವಿದ್ಯಾನಿಲಯಕ್ಕೆ ದೊರೆತಿದೆ.

ಮುಂದಿನ ಐದು ವರ್ಷಗಳ ಅವಧಿಗೆ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ(UGC) ನೀಡಿರುವ ಮಾನ್ಯತೆ ಇದಾಗಿದ್ದು, ಅದೂ 3.31 ಸಿಜಿಪಿಎನೊಂದಿಗೆ ಎ ಪ್ಲಸ್(A+) ದರ್ಜೆ ದೊರೆತಿರುವುದು ವಿಶ್ವವಿದ್ಯಾನಿಲಯ ಹಾಗೂ ವಿದ್ಯಾರ್ಥಿಗಳ ವಲಯದಲ್ಲಿ ಸಂತಸ ತಂದಿದೆ. ಈ ಮೂಲಕ ಆನ್‌ಲೈನ್ ಕೋರ್ಸ್ ಆರಂಭಿಸುವುದು ಸೇರಿದಂತೆ ಶೈಕ್ಷಣಿಕ ಚಟುವಟಿಕೆ ನಡೆಸಲು ಇದ್ದ ಅಡಚಣೆಗಳು ದೂರವಾಗಿವೆ.

ದೂರ ಶಿಕ್ಷಣ ನೀಡಲೆಂದೇ ಮೈಸೂರು ವಿಶ್ವವಿದ್ಯಾನಿಲಯ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಾಗಿ ಆರಂಭಗೊಂಡು 1997ರಲ್ಲಿ ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾನಿಲಯವಾಗಿ ಮಾನ್ಯತೆ ಪಡೆದ ಈ ವಿಶ್ವವಿದ್ಯಾನಿಲಯವು, ಹತ್ತಾರು ಕೋರ್ಸ್‌ಗಳನ್ನು ದೂರ ಶಿಕ್ಷಣದ ಮೂಲಕ ಪಡೆಯಲು ದಾರಿ ಮಾಡಿಕೊಟ್ಟಿತ್ತು. ಆದರೆ ತಾಂತ್ರಿಕ ಕೋರ್ಸ್‌ಗಳ ಆರಂಭ ಹಾಗೂ ಕರ್ನಾಟಕ ಹೊರತುಪಡಿಸಿ ಹೊರ ರಾಜ್ಯ, ದೇಶಗಳಲ್ಲಿ ಯಾವುದೇ ಕೇಂದ್ರ ಆರಂಭಿಸುವಂತಿಲ್ಲ ಎನ್ನುವ ನಿಯಮವನ್ನು ಮೀರಿದ್ದ ಕಾರಣದಿಂದ 2012-13ರಲ್ಲಿ ಮಾನ್ಯತೆ ರದ್ದುಪಡಿಸಲಾಯಿತು. ಇದರಿಂದ ನಾಲ್ಕು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಸಂಕಷ್ಟಕ್ಕೆ ಒಳಗಾದರು. ಆಗಿನಿಂದಲೂ ಮಾನ್ಯತೆ ನವೀಕರಣಕ್ಕೆ ಪ್ರಯತ್ನಗಳು ನಡೆದರೂ ಪ್ರವೇಶವೂ ಇಲ್ಲದೇ ವಿಶ್ವವಿದ್ಯಾನಿಲಯ ಮುಂದುವರೆದಿತ್ತು.

2017-18ರಲ್ಲಿ ಕುಲಪತಿಯಾಗಿದ್ದ ಪ್ರೊ.ಶಿವಲಿಂಗಯ್ಯ ಅವರು ಯುಜಿಸಿಗೆ ನಿರಂತರ ಪತ್ರ ಬರೆಯುವ ಜತೆಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಪತ್ರ ಬರೆದಿದ್ದರಿಂದ ಮಾನ್ಯತೆ ನೀಡಲಾಗಿತ್ತು. ಆಗ ಯುಜಿಸಿ ನೇಮಿಸಿದ್ದ ಸಮಿತಿಯು ವಿವಿಗೆ ಭೇಟಿ ನೀಡಿ ಒಂದು ವರ್ಷದ ಮಟ್ಟಿಗೆ ಮಾನ್ಯತೆ ನೀಡಿತ್ತು. ಆನಂತರ ಕಡ್ಡಾಯವಾಗಿ ನ್ಯಾಕ್ ಮಾನ್ಯತೆ ಪಡೆಯುವಂತೆ ವಿಶ್ವವಿದ್ಯಾನಿಲಯಕ್ಕೆ ಯುಜಿಸಿ ಪ್ರಯತ್ನಿಸಿದರೂ ಗಂಭೀರ ಪ್ರಯತ್ನಗಳು ಆಗಿರಲಿಲ್ಲ. ಈ ಮಾರ್ಚ್‌ಗೆ ಅವಧಿ ಮುಗಿದಿದ್ದು, ಕಡ್ಡಾಯವಾಗಿ ನ್ಯಾಕ್ ಮಾನ್ಯತೆ ಪರೀಕ್ಷೆ ಎದುರಿಸುವಂತೆ ಯುಜಿಸಿ ಸೂಚಿಸಿತ್ತು. ಆರು ತಿಂಗಳ ಹಿಂದೆ ಕುಲಪತಿಯಾಗಿ ನೇಮಕಗೊಂಡ ಪ್ರೊ.ಶರಣಪ್ಪ ಹಲಸೆ ಅವರು ಪತ್ರ ಬರೆದು ದಾಖಲೆ ಸಲ್ಲಿಸಿದ ಪರಿಣಾಮವಾಗಿ ಕಳೆದ ತಿಂಗಳು ನ್ಯಾಕ್ ಸಮಿತಿ ಭೇಟಿ ನೀಡಿತ್ತು. ವಿಶ್ವವಿದ್ಯಾನಿಲಯದಲ್ಲಿ ಶೈಕ್ಷಣಿಕ ಚಟುವಟಿಕೆಗಳು, ಪ್ರವೇಶಾತಿ ಪ್ರಕ್ರಿಯೆ, ನಿಯಮ ಪಾಲನೆ, ಮೂಲಸೌಕರ್ಯಯಗಳ ಲಭ್ಯತೆ, ಅಧ್ಯಾಪಕರ ಕಾರ್ಯಕ್ಷಮತೆಯನ್ನು ಪರಾಮರ್ಶೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಕ್ ಸಮಿತಿ ಮಾನ್ಯತೆ ದೊರೆತಿದ್ದು, ಹಿಂದೆ ಇದ್ದ ಗೊಂದಲಗಳು ಬಗೆಹರಿದಿವೆ.

ವಿಶ್ವವಿದ್ಯಾನಿಲಯವು ಸದ್ಯ 31 ಕೋರ್ಸ್‌ಗಳನ್ನು ನಡೆಸುತ್ತಿದ್ದು ಸಾಂಪ್ರದಾಯಿಕ ಕೋರ್ಸ್‌ಗಳನ್ನು ಮುಂದುವರೆಸಲು ಅವಕಾಶವಿದೆ. ಅದನ್ನು ಬಿಟ್ಟು ತಾಂತ್ರಿಕ ಕೋರ್ಸ್ ಹಾಗೂ ಹೊರ ರಾಜ್ಯದಲ್ಲಿ ಕೇಂದ್ರ ತೆರೆಯಲು ಅವಕಾಶವಿಲ್ಲ. ಆನ್‌ಲೈನ್ ಮೂಲಕ ಜಗತ್ತಿನ ಯಾವುದೇ ಭಾಗದಲ್ಲಾದರೂ ಶಿಕ್ಷಣ ನೀಡಲು ಅವಕಾಶವಿದೆ ಎನ್ನುವುದು ವಿಶ್ವವಿದ್ಯಾನಿಲಯದ ವಿವರಣೆ.

ಮಾನ್ಯತೆ ದೊರೆತಿದ್ದು ಅತೀವ ಸಂತಸ ತಂದಿದೆ

ಈ ಬಗ್ಗೆ ಪ್ರತಿಕ್ರಿತೆ ನೀಡಿದ ಕರಾಮುವಿಯ ಹಿಂದಿನ ಕುಲಪತಿ ಪ್ರೊ.ಕೆಎಸ್ ರಂಗಪ್ಪ, ಆಗಲೇ ಕೆಲವು ನಿಯಮಗಳನ್ನು ಆಧರಿಸಿಯೇ ಕೋರ್ಸ್ ಹಾಗೂ ಕೇಂದ್ರ ತೆರೆಯಲಾಗಿತ್ತು. ಕೆಲವರು ಗೊಂದಲ ಸೃಷ್ಟಿಸಿದರು. ಆನಂತರ ಬಂದವರೂ ಯುಜಿಸಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಅದೂ ಆಗಲಿಲ್ಲ. ಈಗ ನ್ಯಾಕ್ ಮಾನ್ಯತೆ ಲಭಿಸಿರುವುದರ ಹಿಂದೆ ನನ್ನ ಅವಧಿಯಲ್ಲೇ ಆಗಿದ್ದ ಮೂಲಸೌಕರ್ಯ, ಅಧ್ಯಾಪಕರ ನೇಮಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿದ್ದು ಸೇರಿವೆ. ಮಾನ್ಯತೆ ದೊರೆತಿದ್ದು ಅತೀವ ಸಂತಸ ತಂದಿದೆ ಎನ್ನುತ್ತಾರೆ

2013-14ರ ಕಥೆ ಏನು?

ವಿಶ್ವವಿದ್ಯಾನಿಲಯಕ್ಕೆ ನ್ಯಾಕ್ ಮಾನ್ಯತೆ ದೊರೆತಿದೆ. ಆದರೆ 2013-14ನೇ ಸಾಲಿನಲ್ಲಿ ಪ್ರವೇಶ ಪಡೆದಿರುವ ಸುಮಾರು 97 ಸಾವಿರ ಅಭ್ಯರ್ಥಿಗಳ ಗೊಂದಲ ಇನ್ನೂ ಬಗೆಹರಿದಿಲ್ಲ. ಈ ಹಿಂದೆ ವಿಶ್ವವಿದ್ಯಾನಿಲಯ ಹೈಕೋರ್ಟ್ ಮೆಟ್ಟಿಲೇರಿದರೂ ಯುಜಿಸಿ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ವಿಶ್ವವಿದ್ಯಾನಿಲಯವೇ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಕಾನೂನು ಹೋರಾಟ ನಡೆಸಿದರೆ ಬಾಕಿ ಇರುವ ಆ ವರ್ಷದ ಗೊಂದಲವೂ ಬಗೆಹರಿಯಲಿದೆ.

IPL_Entry_Point