ಕನ್ನಡ ಸುದ್ದಿ  /  ಕರ್ನಾಟಕ  /  ಮಕ್ಕಳನ್ನು ಕದ್ದು ಮಾರಾಟ ಶಂಕೆ; ಮೈಸೂರಿನಲ್ಲಿ ಬಿಹಾರ ಮೂಲದ ಅಲೆಮಾರಿ ದಂಪತಿಯ ಮಗು ಅಪಹರಣ ಪ್ರಕರಣದಲ್ಲಿ ಪತ್ರಕರ್ತ ಸೇರಿ ಐವರ ಬಂಧನ

ಮಕ್ಕಳನ್ನು ಕದ್ದು ಮಾರಾಟ ಶಂಕೆ; ಮೈಸೂರಿನಲ್ಲಿ ಬಿಹಾರ ಮೂಲದ ಅಲೆಮಾರಿ ದಂಪತಿಯ ಮಗು ಅಪಹರಣ ಪ್ರಕರಣದಲ್ಲಿ ಪತ್ರಕರ್ತ ಸೇರಿ ಐವರ ಬಂಧನ

ಮೈಸೂರಿನಲ್ಲಿ ಮಗು ಅಪಹರಣ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಹಿಂದೆ ಮಕ್ಕಳನ್ನು ಕದ್ದು ಮಾರಾಟ ಮಾಡುವ ಜಾಲದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. (ವರದಿ: ರಂಗಸ್ವಾಮಿ ಪಿ)

ಬಿಹಾರ ಮೂಲದ ಅಲೆಮಾರಿ ದಂಪತಿ ಮಗು ಅಪಹರಣ ಪ್ರಕರಣದಲ್ಲಿ ಮೈಸೂರು ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಬಿಹಾರ ಮೂಲದ ಅಲೆಮಾರಿ ದಂಪತಿ ಮಗು ಅಪಹರಣ ಪ್ರಕರಣದಲ್ಲಿ ಮೈಸೂರು ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysore Crime News) ಹೆಣ್ಣು ಭ್ರೂಣಹತ್ಯೆಯಂತಹ ಹೇಯ ಕೃತ್ಯದ ಘಟ‌ನೆ ಮಾಸುವ ಮುನ್ನವೇ ಮಕ್ಕಳನ್ನು ಕದ್ದು ಮಾರಾಟ ಮಾಡುವ ಜಾಲ ಬೆಳಕಿಗೆ ಬಂದಿದ್ದು, ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಅಲೆಮಾರಿ ದಂಪತಿಯ 40 ದಿನದ ಗಂಡು ಮಗುವಿನ ಅಪಹರಣ ಪ್ರಕರಣ ಇದಕ್ಕೆ ಪುಷ್ಠಿ ನೀಡಿದೆ. ಆದರೆ ಮಗುವನ್ನು ಅಪಹರಿಸಿದ್ದವರನ್ನು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರಿನ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಗುವಿನ ಅಪಹರಣ ಪ್ರಕರಣ ಘಟನೆ ನಡೆದಿದೆ. ಈ ಸಂಬಂಧ ಹೂಟಗಳ್ಳಿಯ ನಿವಾಸಿ, ಪತ್ರಕರ್ತ ಮಂಜುನಾಥ್, ಪಾಂಡವಪುರ ತಾಲೂಕಿನ ಕುಮಾರ್, ನಾಗವಾಲ ಗ್ರಾಮದ ಇಂದ್ರಕುಮಾರ್, ಈತನ ಪತ್ನಿ ಸುಪ್ರಿಯಾ, ಸಹೋದರಿ ವಿಜಯಲಕ್ಷ್ಮಿ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಏನಿದು ಮಗು ಅಪಹರಣ ಪ್ರಕರಣ?

ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಸಯ್ಯದ್, ಆತನ ಪತ್ನಿ ಸಲ್ಲು ಹಾಗೂ ಕಿರಣ್ ಎಂಬುವರ ಬಂಧನಕ್ಕೆ ಜಾಲ ಬೀಸಿರುವ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಅಂದಹಾಗೆ ಬಿಹಾರದ ಗಜಾರಿಯಾ ಜಿಲ್ಲೆಯ ಅಲೆಮಾರಿ ಜನಾಂಗದ ಜೀತೆ ಮಂಡಲ್ ಮತ್ತು ರಾಮಡಲ್ಲಿ ದೇವಿ ದಂಪತಿಯ ಮಗುವಿನ ಅಪಹರಣ ಪ್ರಕರಣದ ಹಿಂದೆ ಮಕ್ಕಳ ಮಾರಾಟ ಜಾಲ ಇರುವುದು ಬೆಳಕಿಗೆ ಬಂದಿದೆ. ಬಿಹಾರದಿಂದ ಬೆಂಗಳೂರಿನ ಥಣಿಸಂದ್ರಕ್ಕೆ ಬಂದು ಜೇನು ಮಾರಾಟ ಮಾಡುವ ಉದ್ಯೋಗ ಮಾಡುತಿದ್ದ ಬಿಹಾರ ಮೂಲದ ಈ ದಂಪತಿ, ಕಳೆದ 10 ದಿನಗಳ ಹಿಂದೆ ಹಸುಗೂಸಿನೊಂದಿಗೆ ಮೈಸೂರಿನ ಹಿನಕಲ್ ಬಳಿಯ ರಿಂಗ್ ರಸ್ತೆ ಬದಿಯಲ್ಲಿ ಟೆಂಟ್ ನಲ್ಲಿ ವಾಸ ಮಾಡುತ್ತಿದ್ದರು.

ಹಳ್ಳಿಗಳಿಗೆ ತೆರಳಿ ಜೇನು ಇಳಿಸಿ ಮಾರಾಟ ಮಾಡುತ್ತಿದ್ದ ದಂಪತಿಯನ್ನು ಆರೋಪಿ ಮಂಜುನಾಥ್ ಕಳೆದ ಕೆಲ ದಿನಗಳ ಹಿಂದೆ ಭೇಟಿ ಮಾಡಿ ಮಗುವನ್ನು ಕೊಟ್ಟರೆ ಚೆನ್ನಾಗಿ ಸಾಕುವುದಾಗಿ ಕೇಳಿದ್ದ. ಆದರೆ ಮಗುವನ್ನು ಕೊಡಲು ಬಿಹಾರ ಮೂಲದ ದಂಪತಿ ಸ್ಪಷ್ಟವಾಗಿ ನಿರಾಕರಿಸಿದ್ದರು. ಇದಾದ ಬಳಿಕ ಏಪ್ರಿಲ್ 17ರ ಮುಂಜಾನೆ ಮಗುವಿನೊಂದಿಗೆ ದಂಪತಿ ನಿದ್ರೆ ಮಾಡುತ್ತಿದ್ದ ವೇಳೆ 40 ದಿನದ ಮಗುವನ್ನು ಸಯ್ಯದ್, ಸಲ್ಲು ಹಾಗೂ ಇತರರು ಅಪಹರಣ ಮಾಡಿದ್ದರು. ಆ ವೇಳೆ ನಿದ್ರೆಯಿಂದ ಎಚ್ಚರಗೊಂಡ ದಂಪತಿ ನೋಡಿದಾಗ ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಹೋಗಿದ್ದನ್ನು ಗಮನಿಸಿದ್ದರು. ಕೂಡಲೇ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮಕ್ಕಳನ್ನು ಮಾರಾಟ ಮಾಡುವ ಜಾಲದೊಂದಿಗೆ ಸಂಪರ್ಕ ಮಾಹಿತಿ ಬಹಿರಂಗ

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ವಿಶೇಷ ತಂಡ ರಚನೆ ಮಾಡಿ ಆರೋಪಿಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಂಡಿದ್ದರು. ಪರಿಣಾಮ ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಹುಣಸೂರಿನ ಮೋದೂರು ಗ್ರಾಮದಲ್ಲಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಬಂಧಿತ ಆರೋಪಿಗಳು ಮಕ್ಕಳನ್ನು ಮಾರಾಟ ಮಾಡುವ ಜಾಲದೊಂದಿಗೆ ಸಂಪರ್ಕ ಹೊಂದಿರುವ ಆತಂಕಕಾರಿ ಬೆಳಕಿಗೆ ಬಂದಿದೆ. ಮಗುವಿವ ಅಪಹರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ತನಿಖೆಯನ್ನು ತೀವ್ರಗೊಳಿಸುವ ಮೂಲಕ ಮಕ್ಕಳನ್ನು ಕದ್ದು ಮಾರಾಟ ಮಾಡುವ ಜಾಲ ಭೇದಿಸಲು ಮುಂದಾಗಿದೆ. (ವರದಿ: ರಂಗಸ್ವಾಮಿ ಪಿ)

IPL_Entry_Point