ಕನ್ನಡ ಸುದ್ದಿ  /  Karnataka  /  Mysore News Lok Sabha Elections 2024 Bjp Wont Get Expected Seats In Karnataka Says Dr Sl Bhyrappa Kub

SL Bhyrappa: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಬರೋಲ್ಲ, ಸಾಹಿತಿ ಭೈರಪ್ಪ ವಿಶ್ಲೇಷಣೆ

ಕರ್ನಾಟಕದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷೆಯಷ್ಟು ಸ್ಥಾನಗಳು ಬರುವುದು ಕಷ್ಟ ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್‌.ಭೈರಪ್ಪ ಹೇಳಿದ್ದಾರೆ. ಅವರು ಹೇಳಿದ್ದೇನು..

ಕರ್ನಾಟಕದಲ್ಲಿ ಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ ಸಾಹಿತಿ ಡಾ.ಭೈರಪ್ಪ
ಕರ್ನಾಟಕದಲ್ಲಿ ಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ ಸಾಹಿತಿ ಡಾ.ಭೈರಪ್ಪ

ಮೈಸೂರು: ಈ ಬಾರಿ ಕರ್ನಾಟಕಕ್ಕೆ ನಿರೀಕ್ಷೆಯಷ್ಟು ಸ್ಥಾನಗಳು ಬರುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿಗೆ ಅಧಿಕಾರದ ಅವಕಾಶ ಕೊಟ್ಟರೂ ನಿರೀಕ್ಷೆಯಷ್ಟು ಕೆಲಸ ಮಾಡಲಿಲ್ಲ. ಅಧಿಕಾರಿಗಳ ಮೇಲೆ ನಿಯಂತ್ರಣವೇ ಇರಲಿಲ್ಲ. ಇದರಿಂದಾಗಿ ಕರ್ನಾಟಕದ ಬಿಜೆಪಿ ಸಾಧನೆ ಅಷ್ಟಾಗಿ ಇಲ್ಲ ಎನ್ನುವ ಭಾವನೆ ಜನರಲ್ಲಿಯೇ ಇದೆ. ಮತ ವಿಭಜನೆಯೂ ಹೆಚ್ಚಿನ ಪ್ರಮಾಣದಲ್ಲಿ ಆಗಬಹುದು. ಈ ಕಾರಣದಿಂದ ಈ ಬಾರಿ ಲೋಕಸಭ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳು ಬಿಜೆಪಿಗೆ ಬರಬಹುದು ಎನ್ನುವ ಲೆಕ್ಕಾಚಾರಗಳಿವೆ. ಕರ್ನಾಟಕದಲ್ಲ ಪರಿಸ್ಥಿತಿ ಹೀಗಿದ್ದರೂ ಭಾರತಕ್ಕೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರೇ ಬರಲಿದ್ದಾರೆ ಎನ್ನುವ ವಿಶ್ವಾಸವಿದೆ.

ಇದು ಕರ್ನಾಟಕದ ಹಿರಿಯ ಕಾದಂಬರಿಕಾರ, ಸರಸ್ವತಿ ಸಮ್ಮಾನ್‌ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಅವರ ನಿಖರ ನುಡಿ. ಮೈಸೂರಿನಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಗಲು ಆಗಮಿಸಿದ್ದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಸದಸ್ಯ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಭೈರಪ್ಪ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಫಲಿತಾಂಶ ಹಿಂದಿನ ಬಾರಿಗಿಂತ ಭಿನ್ನವಾಗಿರಲಿದೆ. ಬಿಜೆಪಿಗೆ ಹಿಂದಿನ ಬಾರಿ ಬಂದಿದ್ದಂತಹ ಅರ್ಧದಷ್ಟು ಹಾಗೂ ಅದಕ್ಕಿಂತ ಕೊಂಚ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಳ್ಳಬಹುದು ಎನ್ನುವ ವಿಚಾರವನ್ನು ತಿಳಿದುಕೊಂಡಿರುವೆ. ಬಿಜೆಪಿಯು ತೀರಾ ಸೋತೇ ಹೋಗುತ್ತದೆ ಎಂದು ನಾನು ಹೇಳುವುದಿಲ್ಲ. ಬದಲಿಗೆ ಅವರ ನಿರೀಕ್ಷೆಯಷ್ಟು ಸ್ಥಾನಗಳು ಬರುವುದುಲ್ಲ ಎನ್ನುವುದು ಭೈರಪ್ಪರ ಅಭಿಪ್ರಾಯ.

ಕರ್ನಾಟಕದಲ್ಲಿ ಹಿಂದಿನ ಬಾರಿ ಬಿಜೆಪಿ ಸರ್ಕಾರವೇ ಇತ್ತು. ಆದರೆ ಆಡಳಿತ ಮಾತ್ರ ಪರಿಣಾಮಕಾರಿಯಾಗಲೇ ಇಲ್ಲ. ಅಧಿಕಾರಿಗಳ ಮೇಲೆ ನಿಯಂತ್ರಣವನ್ನೇ ಕಾಣಲಿಲ್ಲ. ಮೃದು ಆಡಳಿತದಿಂದ ಕೆಲಸ ಆಗುವುದಿಲ್ಲ. ಅದೇ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯ ನಾಥ್‌ ಆಡಳಿತ ಎಷ್ಟು ಬಿಗಿಯಾಗಿದೆ. ಅದೇ ಮಾದರಿಯಲ್ಲಿ ನಮ್ಮಲ್ಲೂ ಆಡಳಿತ ನಡೆದಿದ್ದರೆ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದಿತ್ತು. ಈ ಅವಕಾಶವನ್ನು ಬಿಜೆಪಿಯವರು ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ಕರ್ನಾಟಕದಲ್ಲಿದೆ. ಅಧಿಕಾರಿಗಳ ಮೇಲೆ ಹಿಡಿತವೇನೋ ಕಾಣುತ್ತಿದೆ. ಆದರೆ ಉಚಿತ ಯೋಜನೆಗಳು ಮತವನ್ನು ತಂದುಕೊಡಬಹುದೇ ವಿನಹ: ಅರ್ಥ ವ್ಯವಸ್ಥೆಯ ಮೇಲೆ ಖಂಡಿತವಾಗಿಯೂ ಪರಿಣಾಮಗಳನ್ನು ಬೀರಿದೆ. ಮಹಿಳರಿಗೆ ಉಚಿತ ಬಸ್‌ ಪ್ರಯಾಣ , ಉಚಿತ ವಿದ್ಯುತ್‌ ನೀಡುವಂತಹ ಯೋಜನೆಗಳು ಜಾರಿಯಾಗಿದೆ. ಇದರಿಂದ ಸರ್ಕಾರದಲ್ಲಿ ಹಣವೇ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಭೈರಪ್ಪ ಅಭಿಪ್ರಾಯ ಪಟ್ಟರು.

ಕರ್ನಾಟಕದಲ್ಲಿ ಆರ್ಥಿಕ ಸ್ಥಿತಿಯಲ್ಲಿ ವ್ಯತ್ಯಾಸ ಆಗಿರುವ ಹಿಂದೆ ಉಚಿತ ಯೋಜನೆಗಳ ಕಾರಣವೂ ಇರಬಹುದು. ಕೇಂದ್ರದಿಂದ ಬಂದ ಅನುದಾನವನ್ನೆಲ್ಲಾ ಬಳಕೆ ಮಾಡಿಕೊಂಡು ಕೇಂದ್ರದ ಮೇಲೆ ಆರೋಪ ಮಾಡುವುದು. ಕೇಂದ್ರ ಹಣಕಾಸು ಸಚಿವರನ್ನು ಬೈಯುತ್ತಿರುವ ಪರಿ ಸರಿ ಕಾಣಿಸುತ್ತಿಲ್ಲ ಎಂದು ಹೇಳಿದರು.