Lok Sabha Elections2024: ಲೋಕಸಭೆ ಚುನಾವಣೆಗೆ ಮೈಸೂರಲ್ಲಿ ಮೋದಿ-ದೇವೇಗೌಡರ ಜೋಡಿ ಪ್ರಚಾರ
Karnataka Politcs ಮೈಸೂರಿನಲ್ಲಿ ಲೋಕಸಭೆ ಚುನಾವಣೆಗ ಬಿಜೆಪಿ ಜೆಡಿಎಸ್ ಭರ್ಜರಿ ಪ್ರಚಾರ ನಡೆಯಿತು.
ಮೈಸೂರು: ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿರುವ ನಡುವೆಯೇ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಜೋರಾಗಿದೆ. ಮೈಸೂರಿನಲ್ಲಿ ಹಳೆ ಮೈಸೂರು ಭಾಗದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಮೋದಿ ಭರ್ಜರಿ ಪ್ರಚಾರ ಮಾಡಿದರು. ಈ ಬಾರಿ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿರುವ ಕಾರಣಕ್ಕೆ ಮೊದಲ ಬಾರಿಗೆ ನರೇಂದ್ರ ಮೋದಿ ಹಾಗೂ ಎಚ್.ಡಿ.ದೇವೇಗೌಡ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಇಬ್ಬರು ಕಾಂಗ್ರೆಸ್ ವಿರುದ್ದವೇ ಹರಿಹಾಯ್ದರು. ದೇಶ ಉಳಿಸಲು ಎನ್‌ಡಿಎ ಬೆಂಬಲಿಸಿ ಎಂದು ಇಬ್ಬರು ನಾಯಕರೂ ತಮ್ಮ ಭಾಷಣದಲ್ಲಿ ಹೇಳಿದರು.
ಜೆಡಿಎಸ್ ಪ್ರಮುಖರ ಭಾಗಿ
ಕರ್ನಾಟಕದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮೈತ್ರಿ ಏರ್ಪಟ್ಟ ನಂತರ ನಡೆದ ಮೊದಲ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಾಣಿಸಿಕೊಂಡರು. ಉಭಯ ಪ್ರಕ್ಷಗಳ ನಾಯಕರೂ ಇದ್ದರು. ನಾಲ್ವರು ಅಭ್ಯರ್ಥಿಗಳಾದ ಎಚ್.ಡಿ.ಕುಮಾರಸ್ವಾಮಿ( ಮಂಡ್ಯ), ಯದುವೀರ್ ಒಡೆಯರ್( ಮೈಸೂರು-ಕೊಡಗು), ಪ್ರಜ್ವಲ್ ರೇವಣ್ಣ( ಹಾಸನ), ಎಸ್.ಬಾಲರಾಜು( ಚಾಮರಾಜನಗರ) ಹಾಜರಿದ್ದರು., ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್ ಇದ್ದರು. ಮೈಸೂರು ಹಾಗೂ ಕೊಡಗು ಕ್ಷೇತ್ರ, ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಕಣಕ್ಕಿಳಿದರೆ, ಹಾಸನ ಹಾಗೂ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಬಿಜೆಪಿ ಬೆಂಬಲಿಸಿದೆ.
ಮೈಸೂರಲ್ಲಿ ಎರಡು ಗಂಟೆ ಕಾರ್ಯಕ್ರಮ
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಎರಡು ಗಂಟೆ ಕಾಲ ಸಮಾವೇಶ ನಡೆಯಿತು. ಮೈಸೂರು-ಕೊಡಗು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ನಾಲ್ಕೈದು ಜಿಲ್ಲೆಗಳಿಂದ ಕಾರ್ಯಕರ್ತರು ಬರಲು ಬಸ್ ವ್ಯವಸ್ಥೆ ಮಾಡಲಾಗಿತ್ತು. ಮಹಾರಾಜ ಕಾಲೇಜು ಮೈದಾನದ ಸುತ್ತಮುತ್ತಲೂ ಭಾರೀ ಭದ್ರತೆಯನ್ನು ಹಾಕಲಾಗಿತ್ತು. ಸಂಚಾರ ದಟ್ಟಣೆಯೂ ಇದ್ದುದರಿಂದ ಮಾರ್ಗವನ್ನು ಬದಲಾಯಿಸಲಾಗಿತ್ತು.
ಸಮಾವೇಶದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ. ಮೈಸೂರು ಅಭ್ಯರ್ಥಿ ಯದುವೀರ್ ಒಡೆಯರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತಿತರರು ಮಾತನಾಡಿದರು. ನಂತರ ಪ್ರಧಾನಿ ಮೋದಿ ಅವರು ಸುಮಾರು 45 ಪ್ರಚಾರ ಭಾಷಣ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷದಲ್ಲಿ ಮೈಸೂರಿನ ಆರನೇ ಸಮಾವೇಶದಲ್ಲಿ ಪಾಲ್ಗೊಂಡಿದ್ದು ವಿಶೇಷ.
ಭಾಷಣಕ್ಕೆ ಭಾರೀ ಪ್ರತಿಕ್ರಿಯೆ
ಮಾಜಿ ಪ್ರಧಾನಿ ದೇವೇಗೌಡ ಹಾಗೂ ಪ್ರಧಾನಿ ಮೋದಿ ಅವರ ಭಾಷಣಕ್ಕೆ ಭಾರೀ ಪ್ರತಿಕ್ರಿಯೆಯೇ ಲಭಿಸಿತು. ದೇವೇಗೌಡರು ಮಾತನಾಡುವಾಗ ಮೈಸೂರಿನವರೇ ಆದ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ವಿರುದ್ದ ಟೀಕಾ ಪ್ರಹಾರವನ್ನೇ ನಡೆಸಿದರು. ಇಬ್ಬರ ವಿರುದ್ದ ದೇವೇಗೌಡರು ಮಾತನಾಡುವಾಗ ಭಾರೀ ಸ್ಪಂದನೆ ದೊರೆಯಿತು. ಅಲ್ಲದೇ ಈ ಬಾರಿ ಎನ್‌ಡಿಎ ಅನ್ನು ಗೆಲ್ಲಿಸಲೇಬೇಕು. ನಿಮ್ಮ ಬೆಂಬಲಬೇಕು ಎಂದು ದೇವೇಗೌಡರ ಕೋರಿಕೆಗೂ ಚಪ್ಪಾಳೆಯ ಸ್ವಾಗತ ದೊರೆಯಿತು. ಇದಲ್ಲದೇ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಷಣ ಮಾಡುವ ಪ್ರತಿಕ್ರಿಯೆ ಉತ್ತಮವಾಗಿತ್ತು. ಕನ್ನಡದಲ್ಲಿಯೇ ಮಾತು ಆರಂಭಿಸಿದ ಮೋದಿ, ಕಾಂಗ್ರೆಸ್ ಆಡಳಿತ, ಗ್ಯಾರಂಟಿ ಯೋಜನೆಗಳ ಜಾರಿ ವಿಚಾರವಾಗಿ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಹಲವಾರು ವಿಷಯವನ್ನು ತಮ್ಮದೇ ಶೈಲಿಯಲ್ಲಿ ಮೋದಿ ಪ್ರಸ್ತಾಪಿಸಿದಾಗಲೂ ಕಾರ್ಯಕರ್ತರು ಜೋರಾಗಿಯೇ ಘೋಷಣೆ ಹಾಕಿದರು.
ಸಿಂಹ ಬೆನ್ನಿಗೆ ಏಟು
ವೇದಿಕೆಗೆ ಬಂದ ಪ್ರಧಾನಿ ಮೋದಿ ಅವರು ಒಬ್ಬೊಬ್ಬರತ್ತಲೇ ನಿಂತು ಮಾತನಾಡಿಸಿದರು. ಮೊದಲ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮಾತನಾಡಿಸಿದರು. ಆನಂತರ ಸಾಲಿನಲ್ಲಿ ನಮಸ್ಕರಿಸುತ್ತಾ ಹೋಗುವಾಗ ಮೈಸೂರು ಸಂಸದ ಪ್ರತಾಪಸಿಂಹ ಅವರತ್ತ ನಗೆ ಬೀರಿ ಬೆನ್ನಿಗೆ ಪ್ರೀತಿಯಿಂದ ಏಟು ನೀಡಿದರು. ಯದುವೀರ್ ಅವರನ್ನು ವಿಶೇಷವಾಗಿ ಮಾತನಾಡಿಸಿ ಶುಭಾಶಯ ಕೋರಿದರು. ಮಾಜಿ ಸಚಿವ ಎಸ್.ಎ.ರಾಮದಾಸ್ ಅವರೊಂದಿಗೆ ಉಭಯ ಕುಶಲೋಪರಿ ವಿಚಾರಿಸಿ ಗಮನ ಸೆಳೆದರು.
ಚೀಟಿ ಕೊಟ್ಟ ಜಿಟಿ
ಇದೇ ವೇಳೆ ಮೈಸೂರು ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದಾಗ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಚೀಟಿಯೊಂದನ್ನು ನೀಡಿದರು. ಇದು ಗಮನ ಸೆಳೆಯಿತು.