Mysore News: ಮೈಸೂರಲ್ಲೂ ನೀರಿಗೆ ತತ್ವಾರ, ಜಲ ಮೂಲ ಕುಡಿಯಲು ಮಾತ್ರ ಬಳಸಲು ಕಟ್ಟಾಜ್ಞೆ-mysore news mysore also facing water problem meeting held to use water sources to drinking purpose only rsp ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mysore News: ಮೈಸೂರಲ್ಲೂ ನೀರಿಗೆ ತತ್ವಾರ, ಜಲ ಮೂಲ ಕುಡಿಯಲು ಮಾತ್ರ ಬಳಸಲು ಕಟ್ಟಾಜ್ಞೆ

Mysore News: ಮೈಸೂರಲ್ಲೂ ನೀರಿಗೆ ತತ್ವಾರ, ಜಲ ಮೂಲ ಕುಡಿಯಲು ಮಾತ್ರ ಬಳಸಲು ಕಟ್ಟಾಜ್ಞೆ

Water problem ಮೈಸೂರಿನಲ್ಲಿ ನೀರಿನ ಸಮಸ್ಯೆ ನಿಧಾನವಾಗಿ ತಲೆದೋರುತ್ತಿದ್ದು, ಎಚ್ಚರ ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.ವರದಿ: ಪಿ.ರಂಗಸ್ವಾಮಿ, ಮೈಸೂರು

ಮೈಸೂರಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಮೈಸೂರಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಮೈಸೂರು: ಪಕ್ಕದಲ್ಲಿಯೇ ಕೃಷ್ಣರಾಜಸಾಗರ, ಕಬಿನಿ ಜಲಾಶಯ, ಕಾವೇರಿ- ಕಪಿಲಾ ನದಿಯನ್ನು ಹೊಂದಿದ್ದರೂ ಮೈಸೂರು ನಗರಕ್ಕೂ ನೀರಿನ ಬಿಸಿ ಜೋರಾಗಿಯೇ ತಟ್ಟಿದೆ. ಈ ಬಾರಿ ಅಲ್ಲಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಪ್ರಮುಖ ಬಡಾವಣೆಗಳಲ್ಲೂ ನೀರಿನ ಸಮಸ್ಯೆ ಬೇಸಿಗೆಯ ಆರಂಭದಲ್ಲಿಯೇ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಬೇಸಿಗೆಯನ್ನು ಸಮರ್ಪಕವಾಗಿ ಎದುರಿಸಿ ಸಮಸ್ತೆಯಾಗದಂತೆ ನೋಡಿಕೊಳ್ಳಲು ಈಗಿನಿಂದಲೂ ಮೈಸೂರು ಜಿಲ್ಲಾಡಳಿತ ಎಚ್ಚರಿಕೆ ವಹಿಸಿದೆ. ಜಲ ಮೂಲಗಳ ನೀರನ್ನು ಕುಡಿಯಲು ಮಾತ್ರ ಬಳಕೆ ಮಾಡಬೇಕು. ಅನಗತ್ಯವಾಗಿ ನೀರನ್ನು ವ್ಯಯಿಸಬಾರದು ಎಂದು ಸೂಚನೆ ನೀಡಲಾಗಿದೆ.

ಮೈಸೂರು ನಗರಕ್ಕೆ ಕಾವೇರಿ ಹಾಗೂ ಕಬಿನಿಯಿಂದ ನೀರು ಬರುತ್ತದೆ. ಹೆಚ್ಚಿನ ಭಾಗದ ಜನರಿಗೆ ಕಾವೇರಿ ನೀರು ಲಭಿಸಿದರೆ, ದಕ್ಷಿಣ ಭಾಗದಲ್ಲಿ ಕಬಿನಿ ನೀರು ಸರಬರಾಜು ಮಾಡಲಾಗುತ್ತಿದೆ. ಕೆಲವು ಕಡೆ ಎರಡೂ ನೀರು ಇಲ್ಲ. ನಗರದ ಹೊರ ವಲಯದ ಹೊಸ ಬಡಾವಣೆಗಳಲ್ಲಿ ಈ ಸಮಸ್ಯೆಯಿದೆ. ಈ ಕಾರಣದಿಂದ ಎಚ್ಚರಿಕೆ ವಹಿಸಬೇಕು. ನೀರಿನ ಹಾಹಾಕಾರ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಇತ್ತೀಚೆಗೆ ನಡೆದ ಬರ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರು, ಯಾವುದೇ ಜಲಮೂಲಗಳ ನೀರನ್ನು ಕುಡಿಯುವ ನೀರು ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಬಳಸಬಾರದು. ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳ ಪಟ್ಟಿಮಾಡಿ ಪರಿಸ್ಥಿತಿ ನಿಭಾಯಿಸಲು ಜಿಲ್ಲಾ ಹಾಗೂ ತಾಲೂಕು ಆಡಳಿತಗಳು ಸಿದ್ದವಾಗಿರಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದ್ದೃೆ.

ಆದಷ್ಟು ಹೊಸ ಕೊಳವೆ ಬಾವಿ ತೋಡಿಸುವುದಕ್ಕಿಂತ ಇರುವ ಕೊಳವೆ ಬಾವಿಗಳನ್ನು ದುರಸ್ತಿಪಡಿಸಿ ಮೋಟಾರ್, ಪಂಪ್ ಅಳವಡಿಸಿ ಹಾಗೂ ಈ ಸಂದರ್ಭದಲ್ಲಿ ಒಂದು ಹನಿ ನೀರು ಪೋಲಾಗದಂತೆ ನೋಡಿಕೊಳ್ಳಬೇಕು. ಅವಶ್ಯಕತೆ ಬಿದ್ದರೆ ಖಾಸಗಿ ಬೋರ್ ವೆಲ್ ಗಳನ್ನು ಉಪಯೋಗಿಸಿಕೆೊಳ್ಳಿ ಎಂದು ಸೂಚಿಸಿದ್ದಾರೆ.

ಡಿಸಿ ಹೇಳೋದು ಏನು?

ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಅವರು ಹೇಳುವಂತೆ, ನದಿಪಾತ್ರದಲ್ಲಿ ಪಂಪ್ ಸೆಟ್ ಗಳನ್ನು ತೆರವುಗೊಳಿಸಲಾಗಿದೆ, ಕುಡಿಯುವ ನೀರನ್ನು ಕೃಷಿಗೆ ಬಳಸದಂತೆ ಜಾಗೃತಿ ಮೂಡಿಸಲಾಗಿದೆ. ಅಗತ್ಯಬಿದ್ದರೆ ಹಾರಂಗಿ ಮತ್ತು ಹೇಮಾವತಿ ಜಲಾಶಯಗಳ ನೀರನ್ನು ಬಳಸಿ ಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಂಜಿತ್ ಮಾಹಿತಿ ನೀಡಿ ಪ್ರಸ್ತುತ 2 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಖಾಸಗಿ ಬೋರ್ವೆಲ್ ಮೂಲಕ ನೀರು ಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 134 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗುವ ಸಂಭವವಿದೆ. ಈ ಪೈಕಿ 36 ಗ್ರಾಮಗಳಿಗೆ ಪ್ರತಿನಿತ್ಯ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮೇವು ಸಂಗ್ರಹ

ಪಶು ಸಂಗೋಪನಾ ಇಲಾಖೆ ಅಧಿಕಾರಿ ಮಾಹಿತಿ ನೀಡಿ, 34 ವಾರಗಳಿಗಾಗುವಷ್ಟು ಮೇವು ಲಭ್ಯವಿದ್ದು ರೈತರಿಗೆ ಮೇವಿನ ಪೊಟ್ಟಣಗಳನ್ನೂ ಕೊಡಲಾಗುವುದು. ಈಗಾಗಲೇ 68 ಸಾವಿರ ಮೇವಿನ ಕಿಟ್ ಗಳನ್ನು ನೀಡಲಾಗಿದೆ, ಸದ್ಯ ಗೋಶಾಲೆ ತೆರೆಯುವ ಅವಶ್ಯಕತೆ ಇಲ್ಲ. ಈಗಾಗಲೇ ಅಂತರರಾಜ್ಯ ಮೇವು ಸಾಗಣೆ ನಿರ್ಬಂಧ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾಹಿತಿ ನೀಡಿ ಪೂರ್ವ ಮುಂಗಾರಿನಲ್ಲಿ ಹತ್ತಿ ಬೀಜಗಳ ಕೊರತೆ ಉಂಟಾಗಿದ್ದು, ಗುಣಮಟ್ಟ ಕಡಿಮೆ ಇದೆ. ಸದ್ಯಕ್ಕೆ ರೈತ ಸಂಪರ್ಕ ಕೇಂದ್ರಗಳಲ್ಲಿ 1.20 ಲಕ್ಷ ಪಾಕೆಟ್ ಹತ್ತಿ ಬೀಜ ದೊರೆಯಲಿವೆ ಎಂದು ತಿಳಿಸಿದ್ದಾರೆ.

ಈಗಾಗಲೇ ಬರ ಪರಿಹಾರದಡಿ ತಲಾ 2 ಸಾವಿರ ರೂಪಾಯಿಯಂತೆ ಮೈಸೂರು ಜಿಲ್ಲೆಯ ಜಿಲ್ಲೆಯ 88,620 ರೈತರಿಗೆ 15 ಕೋಟಿ 83 ಲಕ್ಷ ಹಣ ಪರಿಹಾರ ಖಾತೆಗಳಿಗೆ ಜಮೆಯಾಗಿದೆ ಎಂದು ಮಾಹಿತಿ‌ ನೀಡಿದ್ದಾರೆ.

(ವರದಿ: ಪಿ.ರಂಗಸ್ವಾಮಿ, ಮೈಸೂರು)

mysore-dasara_Entry_Point