Chamundi Hill: ಚಾಮುಂಡಿಬೆಟ್ಟ ಆಸ್ತಿ ಯಾರದ್ದು; ರಾಜವಂಸ್ಥರು, ಸರ್ಕಾರದ ನಡುವೆ ಜಟಾಪಟಿ, ಸಿದ್ದರಾಮಯ್ಯ, ಪ್ರಮೋದಾದೇವಿ ಪ್ರತಿಕ್ರಿಯೆ ಏನು
Mysore News ಮೈಸೂರಿನ ಚಾಮುಂಡಿಬೆಟ್ಟದ ವಿಚಾರವಾಗಿ ಮೈಸೂರು ರಾಜವಂಶಸ್ಥರು ಹಾಗೂ ಕರ್ನಾಟಕ ಸರ್ಕಾರದ ನಡುವೆ ಜಟಾಪಟಿ ಜೋರಾಗುತ್ತಲೇ ಇದೆ. ಈ ಕುರಿತ ವಿವರಣೆ ಇಲ್ಲಿದೆ
ಮೈಸೂರು: ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯ ಮೈಸೂರಿನ ಚಾಮುಂಡಿಬೆಟ್ಟದ ವಿಚಾರದಲ್ಲಿ ಈಗ ಮೈಸೂರು ರಾಜವಂಶಸ್ಥರು ಹಾಗೂ ಕರ್ನಾಟಕದ ಸರ್ಕಾರದ ನಡುವೆ ಜಟಾಪಟಿ ಜೋರಾಗಿದೆ. ಚಾಮುಂಡಿಬೆಟ್ಟ ನಮ್ಮದೇ ಆಸ್ತಿ ಎಂದು ರಾಜವಂಶಸ್ಥರಾದ ಪ್ರಮೋದದೇವಿ ಒಡೆಯರ್( Pramoda Devi Wadiyar) ಅವರು ಹೇಳಿಕೊಂಡಿದ್ದಾರೆ. ಕರ್ನಾಟಕ ಸರ್ಕಾರ ಚಾಮುಂಡಿಬೆಟ್ಟದ ಸರ್ವತೋಮುಖ ಅಭಿವೃದ್ಧಿ ನಿಟ್ಟಿನಲ್ಲಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರವನ್ನು ರಚಿಸಿದೆ. ಎರಡೂವರೆ ದಶಕದಿಂದಲೂ ಮೈಸೂರು ಅರಮನೆ ವಿಚಾರವಾಗಿ ನಡೆದಿರುವ ಕಾನೂನು ಹೋರಾಟದ ನಂತರ ಚಾಮುಂಡಿಬೆಟ್ಟ ವಿಚಾರವಾಗಿ ಮೈಸೂರು ರಾಜವಂಸ್ಥರು ಹಾಗೂ ಸಂಘರ್ಷ ಕಂಡು ಬಂದಿದೆ.
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರರಚನೆಗೆ ವಿರೋಧ ವ್ಯಕ್ತಪಡಿಸಿರುವ ಪ್ರಮೋದಾ ದೇವಿ ಒಡೆಯರ್ ಅವರು ನ್ಯಾಯಾಲಯ ಮೊರೆ ಹೋಗಿದ್ದಾರೆ. ನ್ಯಾಯಾಲಯದಿಂದ ತಡೆಯಾಜ್ಞೆ ಇತ್ತಾದರೂ ಸೋಮವಾರ ಇದು ತೆರವಾಗಿದೆ ಎನ್ನುವ ಅಂಶ ಉಲ್ಲೇಖಿಸಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಸಿಎಂ ಸಿದ್ದರಾಮಯ್ಯ( CM Siddaramaiah) ಚಾಮುಂಡಿಬೆಟ್ಟದಲ್ಲಿ ಸಭೆ ನಡೆಸಿದ್ದಾರೆ.
ಪತ್ರ ಬರೆದ ಕಾರ್ಯದರ್ಶಿ
ಮೊದಲು ಸೋಮವಾರ ಪ್ರಾಧಿಕಾರದ ಸಭೆ ನಿಗದಿಯಾಗಿತ್ತಾದರೂ ಮಂಗಳವಾರಕ್ಕೆ ಮುಂದೆ ಹೋಗಿತ್ತು. ಈ ಸಭೆಗೆ ಬರುವಂತೆ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಅವರು ಇ ಮೇಲ್ ಮೂಲಕ ರಾಜವಂಶಸ್ಥರಿಗೂ ಆಹ್ವಾನ ನೀಡಿದ್ದರು. ಆದರೆ ಅವರ್ಯಾರು ಸಭೆಗೆ ಬರಲಿಲ್ಲ.
ಬೆಟ್ಟ ನಮ್ಮದೇ ಆಸ್ತಿ. ಅಲ್ಲಿ ಶತಮಾನಗಳಿಂದ ಪೂಜೆ ನಡೆದುಕೊಂಡು ಬರುತ್ತಿದೆ. ಆದರೆ ಪೂಜೆಗೆ ನಮ್ಮ ಅಡ್ಡಿಯಿಲ್ಲ. ಪ್ರಾಧಿಕಾರ ರಚನೆ ಸರಿಯಲ್ಲ ಎಂದು ಕಳೆದ ತಿಂಗಳೇ ಹೇಳಿಕೆ ನೀಡಿದ್ದ ಪ್ರಮೋದಾದೇವಿ ಒಡೆಯರ್ ಅವರು ಇ ಮೇಲ್ ಮೂಲಕವೂ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ.
ಯದುವೀರ್ ಆಕ್ಷೇಪ
ಇದೇ ವಿಚಾರವಾಗಿ ರಾಜವಂಶಸ್ಥರೂ ಆಗಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್( Yaduveer Wadiyar) ಹೇಳಿಕೆ ಬಿಡುಗಡೆ ಮಾಡಿ, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರವಾಗಿ ಸೆಪ್ಟೆಂಬರ್ 5 ರಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಕಾನೂನು ಪ್ರಕ್ರಿಯೆ ಕಾಪಾಡಿಕೊಳ್ಳಲು ಯಥಾಸ್ಥಿತಿ ಕಾಪಾಡಿಕೊಳ್ಳಲು ಸೂಚನೆ ಇದೆ. ನಮ್ಮ ಕಾನೂನನ್ನು ಎತ್ತಿಹಿಡಿಯಲು ಸರಿಯಾದ ಪ್ರಕ್ರಿಯೆ ಅನುಸರಿಸಿ. ಅದನ್ನು ಖಚಿತಪಡಿಸಿಕೊಂಡು ಮುಂದುವರಿದರೆ ನಾವೂ ದೃಢವಾಗಿ ನಿಲ್ಲುತ್ತೇವೆ.ಕಾನೂನು ಉಲ್ಲಂಘಿಸಿ ಪ್ರಾಧಿಕಾರದ ಸಭೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಸಮರ್ಥಿಸಿಕೊಂಡ ಸಿಎಂ
ಇದರ ನಡುವೆಯೂ ಮೊದಲ ಸಭೆಯನ್ನು ಎರಡು ಗಂಟೆಗೂ ಹೆಚ್ಚು ಕಾಲ ನಡೆಸಿದ ಸಿಎಂ ಸಿದ್ದರಾಮಯ್ಯ, ಸರ್ಕಾರ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದ್ದು, ಇದಕ್ಕೆ ರಾಜಮಾತೆ ಪ್ರಮೋದಾದೇವಿಯವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆಗಸ್ಟ್ 22 ರಂದು ತಡೆಯಾಜ್ಞೆ ತೆರವುಗೊಂಡಿದೆ. ನ್ಯಾಯಾಲಯದ ತೀರ್ಮಾನವಾದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ರಾಜವಂಶಸ್ಥೆ ಪ್ರಮೋದಾದೇವಿಯವರು ಹಾಗೂ ಸಂಸದ ಯದುವೀರ್ ಅವರು ಸಭೆ ನಡೆಸುವುದು ಕಾನೂನುಬಾಹಿರ ಎಂದು ಆಡಳಿತ ಮಂಡಳಿ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದು ಗಮನಕ್ಕೆ ಬಂದಿದೆ.ಹಿಂದೆಯೂ ಆಡಳಿತ ಮಂಡಳಿ ಇತ್ತು. ಹಿಂದೆ ಸದಸ್ಯರನ್ನು, ಅಧ್ಯಕ್ಷರನ್ನು ಸರ್ಕಾರ ನೇಮಿಸುತ್ತಿತ್ತು. ಸರ್ಕಾರದ ಅಧೀನದಲ್ಲಿಯೇ ಇತ್ತು ಎನ್ನುವುದನ್ನು ತಿಳಿಯಬೇಕು ಎಂದು ಹೇಳಿದರು.
ಮಹದೇಶ್ವರ ಬೆಟ್ಟ ಪ್ರಾಧಿಕಾರ, ಸವದತ್ತಿ ಎಲ್ಲಮ್ಮ ಪ್ರಾಧಿಕಾರ, ಕುಕ್ಕೆ ಸುಬ್ರಹ್ಮಣ್ಯ ಪ್ರಾಧಿಕಾರ ಸೇರಿದಂತೆ ಇತರ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾಧಿಕಾರಗಳನ್ನು ರಚನೆ ಮಾಡಲಾಗಿದೆ. ಅದೇ ರೀತಿ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರವನ್ನು ಸರ್ಕಾರ ಮಾಡಿದೆ. ಭಕ್ತಾಧಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಾಧಿಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಭಕ್ತಾದಿಗಳಿಗೆ ಸೌಲಭ್ಯ
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಾನುವಾರ, ಮಂಗಳವಾರ, ಶುಕ್ರವಾರ ಅತಿ ಹೆಚ್ಚು ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ಚಾಮುಂಡಿಬೆಟ್ಟಕ್ಕೆ ಚಾಮುಂಡೇಶ್ವರಿ ದೇಗುಲ ಸೇರಿದಂತೆ ಸುಮಾರು 23 ದೇಗುಲಗಳ ಅಭಿವೃದ್ಧಿ ಆಗಬೇಕು. ಇಡೀ ಚಾಮುಂಡಿ ಬೆಟ್ಟದ ಅಭಿವೃದ್ಧಿ ನಮ್ಮ ಆದ್ಯತೆ. ಬರುವ ಭಕ್ತಾಧಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಅದಕ್ಕಾಗಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇದರ ಜೊತೆಗೆ ನೆನೆಗುದಿಗೆ ಬಿದ್ದಿರುವ ಕುಡಿಯುವ ನೀರು ಪೂರೈಕೆ ಯೋಜನೆ, ಕಸ ವಿಲೇವಾರಿ, ನಿರ್ಮಲ ಶೌಚಾಲಯದ ವ್ಯವಸ್ಥೆ ಆಗಬೇಕು. ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಅಳವಡಿಸಬೇಕು. ಅಪರಾಧ ಕೃತ್ಯ ತಡೆಗೆ ಟಾಸ್ಕ್ ಫೋರ್ಸ್ ರಚಿಸಬೇಕು. ಮದ್ಯ, ಸಿಗರೇಟ್, ಪ್ಲಾಸ್ಟಿಕ್ ಮುಕ್ತವಾಗಬೇಕು ಎನ್ನುವ ಸೂಚನೆಗಳನ್ನು ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗೆ ಅಗತ್ಯವಿರುವ ಅನುದಾನವನ್ನು ಚಾಮುಂಡೇಶ್ವರಿ ಪ್ರಾಧಿಕಾರದ ಮುಖಾಂತರ ಭರಿಸಲಾಗುತ್ತದೆ. ಪ್ರಸನ್ನಕೃಷ್ಣಸ್ವಾಮಿ ದೇಗುಲ, ಕೋಟೆ ಆಂಜನೇಯಸ್ವಾಮಿ ದೇಗುಲ, ಭುವನೇಶ್ವರಿ ಅಮ್ಮನವರ ದೇಗುಲ, ಶ್ವೇತವರಾಹ ಸ್ವಾಮಿ ದೇಗುಲ, ಗಾಯತ್ರಿ ಅಮ್ಮನವರ ದೇಗುಲ ಸೇರಿದಂತೆ ಒಟ್ಟು ಐದು ದೇಗುಲಗಳ ಜೀರ್ಣೋದ್ಧಾರ ಮಾಡಲಾಗುತ್ತದೆ. ಚಾಮುಂಡೇಶ್ವರಿ ದೇಗುಲದ ಆವರಣದಲ್ಲಿ ಫೋಟೋಗ್ರಫಿಗೆ ಸಂಪೂರ್ಣ ನಿಷೇಧ ಮಾಡುವ ಉದ್ದೇಶವಿದೆ. ನಿರಂತರ ವಿದ್ಯುತ್ ದೀಪಗಳ ಅಳವಡಿಕೆ ಮಾಡಿ ಚಾಮುಂಡಿ ಬೆಟ್ಟವನ್ನು ಮತ್ತಷ್ಟು ಆಕರ್ಷಣೀಯಗೊಳಿಸಲಾಗುವುದು. ದಾಸೋಹ ಭವನದ ಸುಧಾರಣೆ ಮಾಡಿ, ರುಚಿಕರ ಊಟ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎನ್ನುವುದು ಅವರ ಸಲಹೆ.
ಚಾಮುಂಡೇಶ್ವರಿ ದೇಗುಲದ ಆದಾಯ ಪ್ರತಿ ವರ್ಷವೂ ಹೆಚ್ಚುತ್ತಿದ್ದು, ಬೆಟ್ಟದಲ್ಲಿ 169 ಕೋಟಿ ಫಿಕ್ಸೆಡ್ ಡೆಪಾಸಿಟ್ ಇದೆ. ಪ್ರತಿವರ್ಷವೂ ಖರ್ಚು ಕಳೆದು ಹೆಚ್ಚಿನ ಆದಾಯ ಉಳಿಯುತ್ತಿದೆ. ಇದರಲ್ಲಿ ನಿಶ್ಚಿತ ಠೇವಣಿಯೇ 162 ಕೋಟಿಯಿದೆ. 2023-24 ರಲ್ಲಿ 49.64 ಕೋಟಿ ಆದಾಯ ಬಂದಿದೆ. 21 ಕೋಟಿ ಖರ್ಚು ಕಳೆದು 28.18 ಕೋಟಿ ಆದಾಯ ಬಂದಿದೆ. ದೇವಿಕೆರೆ ಸ್ವಚ್ಚತೆ, ನಂದಿ ಮಾರ್ಗದ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಮುಂದಿನ ಐದು ವರ್ಷಗಳನ್ನು ಗುರಿಯಾಗಿಟ್ಟುಕೊಂಡು ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಮಾಡಲಾಗುತ್ತದೆ ಎಂದು ವಿವರಿಸಿದರು.
ಡ್ರೆಸ್ ಕೋಡ್ ಇಲ್ಲ
ರೋಪ್ ವೇ ನಿರ್ಮಾಣ ಹಳೆಯ ಯೋಜನೆ. ಆದರೆ ಪರಿಸರ ವಾದಿಗಳ ವಿರೋಧದಿಂದಾಗಿ ಅದು ಹಾಗೆಯೇ ನಿಂತು ಹೋಯಿತು. ಈ ಬಗ್ಗೆ ಇಂದು ಚರ್ಚೆಯಾಗಿಲ್ಲ. ಬೆಟ್ಟದ ಮೇಲಿನ ಅಕ್ರಮ ಕಟ್ಟಡಗಳ ತೆರವಿಗೆ ಸೂಚನೆ ನೀಡಲಾಗುವುದು. ಒತ್ತುವರಿಯಾಗಿರುವ ದೇಗುಲದ ಆಸ್ತಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು.ಯಾವುದೇ ಡ್ರೆಸ್ ಕೋಡ್ ಜಾರಿಗೊಳಿಸುವ ಪ್ರಸ್ತಾವವಿಲ್ಲ ಎಂದು ಚಾಮುಂಡಿ ಬೆಟ್ಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ವಿವರಿಸಿದರು.
ವಿಭಾಗ