Medal to Suspended Police : ತಿಂಗಳ ಹಿಂದೆ ಕಳ್ಳತನ ಪ್ರಕರಣದಲ್ಲಿ ಸಸ್ಪೆಂಡ್‌ ಆದ ಮೈಸೂರು ಮುಖ್ಯ ಪೇದೆಗೆ ಈಗ ಮುಖ್ಯಮಂತ್ರಿಗಳ ಪದಕ !-mysore news mysore city police head constable suspended in theft related case last month now awarded with cm medal kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Medal To Suspended Police : ತಿಂಗಳ ಹಿಂದೆ ಕಳ್ಳತನ ಪ್ರಕರಣದಲ್ಲಿ ಸಸ್ಪೆಂಡ್‌ ಆದ ಮೈಸೂರು ಮುಖ್ಯ ಪೇದೆಗೆ ಈಗ ಮುಖ್ಯಮಂತ್ರಿಗಳ ಪದಕ !

Medal to Suspended Police : ತಿಂಗಳ ಹಿಂದೆ ಕಳ್ಳತನ ಪ್ರಕರಣದಲ್ಲಿ ಸಸ್ಪೆಂಡ್‌ ಆದ ಮೈಸೂರು ಮುಖ್ಯ ಪೇದೆಗೆ ಈಗ ಮುಖ್ಯಮಂತ್ರಿಗಳ ಪದಕ !

Police News ತಿಂಗಳ ಹಿಂದೆಯಷ್ಟೇ ಅಮಾನುತುಗೊಂಡಿದ್ದ ಮೈಸೂರಿನ ಮುಖ್ಯಪೇದೆಗೆ ಈ ತಿಂಗಳು ಸಿಎಂ ಪದಕ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

Mysore Police ಮೈಸೂರಿನ ಮುಖ್ಯ ಪೇದೆ ಸಲೀಂ ಪಾಶಾ ಅಮಾನತುಗೊಂಡಿರುವುದು ಹಾಗೂ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿರುವುದು.
Mysore Police ಮೈಸೂರಿನ ಮುಖ್ಯ ಪೇದೆ ಸಲೀಂ ಪಾಶಾ ಅಮಾನತುಗೊಂಡಿರುವುದು ಹಾಗೂ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿರುವುದು.

ಮೈಸೂರು: ತಿಂಗಳ ಹಿಂದೆಯಷ್ಟೇ ಮೈಸೂರಿನಲ್ಲಿ ನಡೆದ ಕಳ್ಳತನ ಪ್ರಕರಣವೊಂದರಲ್ಲಿ ಆರೋಪಿಗಳಿಗೆ ಸಹಕರಿಸಿದರು ಎನ್ನುವ ಆರೋಪವೂ ಸೇರಿದಂತೆ ನಿರ್ಲಕ್ಷ್ಯತೆ ಕಾರಣಗಳಿಂದ ಅಮಾನತ್ತಾಗಿದ್ದ ಪೊಲೀಸ್‌ ಪೇದೆ ಅವರು. ಇದು ಮೈಸೂರು ವಲಯದಲ್ಲಿ ಭಾರೀ ಸದ್ದು ಕೂಡ ಮಾಡಿತ್ತು. ಬೇಲಿಯೇ ಎದ್ದು ಹೊಲವ ಮೇಯ್ದರೆ ಹೇಗೆ ಎನ್ನುವ ರೀತಿಯಲ್ಲೂ ಚರ್ಚೆಗಳಾಗಿದ್ದವು. ಆದರೆ ಈಗ ಅದೇ ಪೇದೆಗೆ ಗೌರವದ ಸಮಯ. ಅದೂ ಕರ್ನಾಟಕದ ಮುಖ್ಯಮಂತ್ರಿ ಸೇವಾ ಪದಕ ಪಡೆಯುವ ಸನ್ನಿವೇಶ. ಕರ್ನಾಟಕ ಸರ್ಕಾರ ಬುಧವಾರ ಪ್ರಕಟಿಸಿದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸೇವಾ ಪದಕ ವಿಜೇತರ ಪಟ್ಟಿಯಲ್ಲಿ ಈ ಪೇದೆಯ ಹೆಸರೂ ಇದೆ. ಈಗ ಮತ್ತೊಂದು ರೀತಿಯ ಚರ್ಚೆಗೆ ಇದು ದಾರಿ ಮಾಡಿಕೊಟ್ಟಿದೆ.

ಮೈಸೂರಿನಲ್ಲಿ ಎರಡು ದಶಕದಿಂದ ಕೆಲಸ ಮಾಡುತ್ತಿರುವ ಪೇದೆಯ ಹೆಸರು ಸಲೀಂ ಪಾಶಾ. ಮೈಸೂರಿನ ವಿವಿಧ ಠಾಣೆಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಆದರೆ ಕಳೆದ ತಿಂಗಳು ಪ್ರಕರಣವೊಂದರಲ್ಲಿ ಅವರ ಸಹಕಾರವೂ ಇದೆ ಎನ್ನುವ ಕಾರಣಕ್ಕೆ ಅಮಾನತುಪಡಿಸಲಾಗಿತ್ತು. ಅದರಲ್ಲೂ ಕೆಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಜೊತೆ ಸಂಪರ್ಕ,ಸಾರ್ವಜನಿಕರ ಆಸ್ತಿ ಕಳುವಿಗೆ ಪರೋಕ್ಷ ಸಹಕಾರ, ದಾಖಲೆಗಳ ಸೋರಿಕೆ ಮಾಡಿರುವ ಆರೋಪಗಳ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು.

ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕನ್ನಕಳುವು ಹಾಗೂ ಗಾಂಜಾ ಪ್ರಕರಣಗಳ ಆರೋಪಿಗಳ ಸಂಬಂಧಿಕರ ಜೊತೆ ಸಂಪರ್ಕ ಇಟ್ಟುಕೊಂಡಿರುವುದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ .ಸಮಾಜಘಾತುಕ ಶಕ್ತಿಗಳ ಜೊತೆ ಕೈಜೋಡಿಸಿ ಸಾರ್ವಜನಿಕರ ಸ್ವತ್ತು ಕಳುವಾಗಲು ಕಾರಣರಾಗಿರುತ್ತಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಇಲಾಖೆಯ ಆಂತರಿಕ ಮತ್ತು ಗುಪ್ತಮಾಹಿತಿಗಳು ಸೋರಿಕೆಯಾಗಿ ಸಾರ್ವಜನಿಕರ ಸ್ವತ್ತುಗಳು ಹೆಚ್ಚು ಹೆಚ್ಚಾಗಿ ಕಾಣೆಯಾಗುವ ಸಾಧ್ಯತೆಗಳು ಇರುವುದಾಗಿ ಕಾರಣ ನೀಡಿ ಸಲೀಂ ಪಾಷಾ ರವರನ್ನ ಸಸ್ಪೆಂಡ್ ಮಾಡಲಾಗಿದೆ ಎಂದು ಮೈಸೂರು ನಗರ ಪೊಲೀಸ್‌ ಆಯುಕ್ತರು ಆದೇಶದಲ್ಲಿ ತಿಳಿಸಿದ್ದರು. ಈಗಲೂ ಅವರು ಅಮಾನತಿನಲ್ಲಿಯೇ ಇದ್ದು. ಪ್ರಕರಣದ ವಿಚಾರಣೆ ನಡೆದಿದೆ.

ಇದರ ನಡುವೆ ಅವರು ಕಳೆದ ವರ್ಷ ಕೆಲಸ ಮಾಡಿದ್ದ ಮೈಸೂರು ಸಿಸಿಬಿ ಘಟಕದಲ್ಲಿನ ಸೇವೆ ಆಧರಿಸಿ ಈ ವರ್ಷ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಪಾಶಾ ಅಮಾನತುಗೊಳ್ಳುವ ಮುಂಚೆಯೇ ಮೈಸೂರು ನಗರ ಪೊಲೀಸ್‌ ಆಯುಕ್ತರಿಂದ ಶಿಫಾರಸ್ಸು ಆಗಿ ಹೋಗಿದ್ದ ಪಟ್ಟಿಯಲ್ಲಿ ಇವರ ಹೆಸರಿತ್ತು. ಅದನ್ನು ಗೃಹ ಇಲಾಖೆ ಪ್ರಕಟಿಸಿ ಎಡವಟ್ಟು ಮಾಡಿದೆ. ಒಂದು ತಿಂಗಳ ಹಿಂದೆ ಅಮಾನತಾದರೂ ಇದೀಗ ಬಿಡುಗಡೆಯಾದ ಮುಖ್ಯಮಂತ್ರಿಗಳ ಪದಕದ ಪಟ್ಟಿಯಲ್ಲಿ ಮುಖ್ಯಪೇದೆ ಸಲೀಂ ಪಾಷಾ ಹೆಸರು ಪ್ರಕಟವಾಗಿದ್ದು ಅಚ್ಚರಿಗೆ ಕಾರಣವಾಗಿದ್ದೂ ಅಲ್ಲದೇ ಗೃಹ ಇಲಾಖೆ ಇಂತಹ ಅಂಶಗಳನ್ನು ಗಮನಿಸದೇ ಪ್ರಶಸ್ತಿ ಪ್ರಕಟಿಸುತ್ತದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.

ಇದು 2023 ರ ಕರ್ತವ್ಯದ ಆಧಾರದ ಮೇಲೆ ನೀಡಿರುವ ಪ್ರಶಸ್ತಿ. ಈ ವರ್ಷದ್ದು ಅಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ವಿವರಿಸಿದರು. ಹಾಗಾದರೆ ಅಮಾನತುಗೊಂಡ, ಈ ವರ್ಷ ಕರ್ತವ್ಯ ಲೋಪದಲ್ಲಿ ಸಿಲುಕಿದ ಪೊಲೀಸ್‌ ಪ್ರತಿಷ್ಠಿತ ಹಾಗೂ ಗೌರವಯುತ ಪ್ರಶಸ್ತಿ ಸ್ವೀಕರಿಸುವುದು ಸರಿಯೇ ಎನ್ನುವುದಕ್ಕೆ ಅವರ ಬಳಿಯೂ ಉತ್ತರವಿಲ್ಲ. ಇಲಾಖೆ ಹಿರಿಯ ಅಧಿಕಾರಿಗಳ ಹಂತದಲ್ಲಿಯೇ ಈ ಬಗ್ಗೆ ತೀರ್ಮಾನ ವಾಗಬೇಕು ಎನ್ನುತ್ತಾರೆ.