Mysore News: ಮೈಸೂರಿನಲ್ಲಿ ಇಬ್ಬರು ಮಕ್ಕಳೊಂದಿಗೆ ದಂಪತಿ ಅನುಮಾನಾಸ್ಪದ ಸಾವು
ಕನ್ನಡ ಸುದ್ದಿ  /  ಕರ್ನಾಟಕ  /  Mysore News: ಮೈಸೂರಿನಲ್ಲಿ ಇಬ್ಬರು ಮಕ್ಕಳೊಂದಿಗೆ ದಂಪತಿ ಅನುಮಾನಾಸ್ಪದ ಸಾವು

Mysore News: ಮೈಸೂರಿನಲ್ಲಿ ಇಬ್ಬರು ಮಕ್ಕಳೊಂದಿಗೆ ದಂಪತಿ ಅನುಮಾನಾಸ್ಪದ ಸಾವು

ಮೈಸೂರಿನಲ್ಲಿ ದಂಪತಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ನಡೆದಿದೆ. ಅನಿಲ ಸೋರಿಕೆಯಿಂದ ಮೃತಪಟ್ಟಿರುವ ಕುರಿತು ತನಿಖೆ ನಡೆದಿದೆ.

ಮೈಸೂರಿನಲ್ಲಿ ನಾಲ್ವರು ಮೃತಪಟ್ಟ ಸ್ಥಳಕ್ಕೆ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಭೇಟಿ ನೀಡಿದ್ದರು.
ಮೈಸೂರಿನಲ್ಲಿ ನಾಲ್ವರು ಮೃತಪಟ್ಟ ಸ್ಥಳಕ್ಕೆ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಭೇಟಿ ನೀಡಿದ್ದರು.

ಮೈಸೂರು: ರಾತ್ರಿ ಊಟ ಮಾಡಿದ ಮನೆಯ ನಾಲ್ವರೂ ಬೆಳಿಗ್ಗೆಯಾದರೂ ಏಳಲೇ ಇಲ್ಲ. ಅದರಲ್ಲಿ ಇಬ್ಬರು ಮಕ್ಕಳೂ ಸೇರಿದ್ದರು. ದಂಪತಿಯೂ ಇದ್ದರು. ಮನೆಯ ಅಕ್ಕಪಕ್ಕದವರಿಗೂ ಅನುಮಾನ. ಎಷ್ಟು ಹೊತ್ತಾದರೂ ಯಾರೂ ಹೊರಗೆ ಬಾರದೇ ಇದ್ದಾಗ ಕುತೂಹಲದಿಂದ ನೋಡಿದರೆ ನಾಲ್ವರು ಮಲಗಿದ್ದು ಕಂಡು ಬಂದಿತು. ಬಾಗಿಲು ಬಡಿದರೂ ತೆಗೆಯದೇ ಇದ್ದಾಗ ಪೊಲೀಸರಿಗೆ ಮಾಹಿತಿ ತಿಳಿಸಿದರು. ಪೊಲೀಸರು ಬಂದು ಬಾಗಿಲು ಒಡೆದು ಒಳ ಪ್ರವೇಶಿಸಿದರೆ ನಾಲ್ವರು ಮಲಗಿದ ಹಾಗೆಯೇ ಇದ್ದರು. ಆದರೆ ಜೀವ ಕಳೆದುಕೊಂಡಿದ್ದರು. ಈ ಬಗ್ಗೆ ನೆರೆ ಹೊರೆಯವರಿಗೆ ಮಾತ್ರವಲ್ಲದೇ ಪೊಲೀಸರಿಗೂ ಹಲವಾರು ಅನುಮಾನಗಳು ಕಾಡಗೊಡಗಿವೆ. ಈ ಘಟನೆ ನಡೆದಿರುವುದು ಮೈಸೂರಿನ ಚಾಮುಂಡಿಬೆಟ್ಟ ತಪ್ಪಲಿನಲ್ಲಿರುವ ಯರಗನಹಳ್ಳಿ ಬಡಾವಣೆಯಲ್ಲಿ. ಮೃತರನ್ನು ಯರಗನಹಳ್ಳಿ ನಿವಾಸಿಗಳಾದ ಕುಮಾರಸ್ವಾಮಿ (45) ಮತ್ತು ಮಂಜುಳಾ (39) ದಂಪತಿ ಹಾಗೂ ಅವರ ಮಕ್ಕಳಾದ ಅರ್ಚನಾ (19) ಹಾಗೂ ಸ್ವಾತಿ (17) ಎಂದು ಗುರುತಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸಖರಾಯಪಟ್ಟಣದವರಾದ ಕುಮಾರಸ್ವಾಮಿ ಅವರು ಕೆಲ ವರ್ಷಗಳ ಹಿಂದೆಯೇ ಮೈಸೂರಿನಲ್ಲಿ ನೆಲೆಸಿದ್ದರು. ಯರಗನಹಳ್ಳಿ ಬಡಾವಣೆಯಲ್ಲಿರುವ ಸ್ವಂತ ನಿವಾಸದಲ್ಲಿ ಇಡೀ ಕುಟುಂಬ ಇತ್ತು. ಇಸ್ತ್ರಿ ಮಾಡಿಕೊಂಡು ಕುಮಾರಸ್ವಾಮಿ ಜೀವನ ಸಾಗಿಸುತ್ತಿದ್ದರು. ಮಕ್ಕಳು ಒಬ್ಬಾಕೆ ಪದವಿ, ಇನ್ನೊಬ್ಬಳು ದ್ವಿತೀಯ ಪಿಯುಸಿ ಓದುತ್ತಿದ್ದರು.

ಸೋಮವಾರ ಊರಲ್ಲಿ ಮದುವೆ ಇದ್ದ ಕಾರಣಕ್ಕೆ ಇಡೀ ಕುಟುಂಬ ತೆರಳಿ ಮಂಗಳವಾರ ವಾಪಾಸಾಗಿದ್ದರು. ರಾತ್ರಿ ಮಲಗಿದವರು ಬುಧವಾರ ಬೆಳಿಗ್ಗೆ ಮೃತಪಟ್ಟಿರುವುದು ಕಂಡು ಬಂದಿದೆ.

ಸ್ಥಳೀಯರ ಮಾಹಿತಿ ಆಧರಿಸಿ ಪೊಲೀಸರು ಹಾಗೂ ಅಗ್ನಿ ಶಾಮಕ ದಳದವರು ಆಗಮಿಸಿ ಬಾಗಿಲು ತೆರೆದಾಗ ಅನಿಲದ ವಾಸನೆ ಬರುತ್ತಿತ್ತು. ಅಲ್ಲಿ ಅನಿಲ ಸೋರಿಕೆಯಾಗಿಯೇ ನಾಲ್ವರು ಮೃತಪಟ್ಟಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ್ದ ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಅವರ ಪ್ರಕಾರ, ಅದು ಪುಟ್ಟ ಮನೆ. ಅಲ್ಲಿಯೇ ಇಸ್ತ್ರಿ ಮಾಡಿಕೊಂಡು ಕುಟುಂಬ ಜೀವನ ನಡೆಸಿತ್ತು. ಇಸ್ತ್ರಿ ಪೆಟ್ಟಿಗೆಗೆ ಗ್ಯಾಸ್‌ ಬಳಕೆ ಮಾಡುತ್ತಿದ್ದರು. ಮಲಗಿದಾಗ ಅನಿಲ ಸೋರಿಕೆಯಾಗಿದೆ. ಒಳಗೆ ಹೋಗಿ ನೋಡಿದಾಗ ನಾಲ್ವರ ಕಿವಿ, ಮೂಗಿನಲ್ಲಿ ರಕ್ತ ಸೋರಿಕೆಯಾಗುವುದು ಕಂಡು ಬಂದಿದೆ. ಅನಿಲ ಸೋರಿಕೆ ವಾಸನೆಯೂ ಇದೆ. ಅನಿಲದಿಂದಲೇ ಉಸಿರುಗಟ್ಟಿ ಮೃತಪಟ್ಟಿರುವ ಸಾಧ್ಯತೆಯಿದೆ. ಘಟನೆ ಕುರಿತು ದೂರು ದಾಖಲಿಸಿಕೊಂಡು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಅಕ್ಕಪಕ್ಕದ ನಿವಾಸಿಗಳು ಅಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ಆನಂತರ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಹಸ್ತಾಂತರಿಸಲಾಗಿದೆ.

ಅವರ ಪಾಡಿಗೆ ಬದುಕು ನಡೆಸಿಕೊಂಡು ಕುಮಾರಸ್ವಾಮಿ ಅವರ ಕುಟುಂಬ ಹೋಗುತ್ತಿತ್ತು. ಮಕ್ಕಳೂ ಕೂಡ ಒಳ್ಳೆಯವರಿದ್ದರು. ಈ ರೀತಿ ಘಟನೆಯಾಗಿರುವುದು ನಿಜಕ್ಕೂ ಬೇಸರ ತಂದಿದೆ ಎಂದು ನೆರೆ ಹೊರೆಯವರು ಹೇಳಿದರು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner