Mysore Dasara 2024: ಮೈಸೂರು ದಸರಾ ಸಡಗರ, ಆಗಸ್ಟ್ 21ರಂದು ನಾಗರಹೊಳೆ ಗಡಿಯಂಚಿನಲ್ಲಿ ಗಜಪಯಣಕ್ಕೆ ವೈಭವದ ಚಾಲನೆ
Gajapayana 2024 ಮೈಸೂರು ದಸರಾದ ಪ್ರಮುಖ ಭಾಗವಾದ ಗಜಪಡೆಯ ಸ್ವಾಗತದ ಗಜಪಯಣ ಕಾರ್ಯಕ್ರಮವು ಆಗಸ್ಟ್ 21ರಂದು ನಿಗದಿ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಮೈಸೂರು:ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿಯಲ್ಲಿ ಪ್ರಧಾನ ಆಕರ್ಷಣೆಯಾದ ಆನೆಗಳನ್ನು ಸಾಂಪ್ರದಾಯಿಕವಾಗಿ ಕಾಡಿನಿಂದ ನಾಡಿಗೆ ಬೀಳ್ಕೊಡಲು 2024ರ ಆಗಸ್ಟ್ 21ರಂದು ವೀರನಹೊಸಳ್ಳಿಯಲ್ಲಿ ಗಜಪಯಣ ಆಯೋಜಿಸಲಾಗಿದೆ.ಇದರೊಂದಿಗೆ ಮೈಸೂರು ದಸರಾ ಈ ವರ್ಷದ ಚಟುವಟಿಕೆಗಳಿಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಕಳೆದ ಎರಡು ದಶಕಗಳಿಂದ ನಾಗರಹೊಳೆ ಗಡಿಯಂಚಿನಲ್ಲಿ ಆನೆಗಳನ್ನು ಬರ ಮಾಡಿಕೊಳ್ಳುವ ಮೂಲಕ ದಸರಾ ಚಟುವಟಿಕೆಗಳಿಗೆ ಚಾಲನೆ ನೀಡಲಾಗುತ್ತಿದೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ದಸರಾವನ್ನು ವಿಜೃಂಭಣೆಯಿಂದಲೇ ಆಚರಿಸುವ ಸಾಧ್ಯತೆಗಳಿವೆ.
ಮೈಸೂರು ಮೃಗಾಲಯದಲ್ಲಿ ಸಂದರ್ಶಕರ ಅನುಕೂಲಕ್ಕಾಗಿ ಲಗ್ಗೇಜು ಕೊಠಡಿ ಮತ್ತು ಹುಲಿ ಮನೆಯ ವೀಕ್ಷಣಾ ಗ್ಯಾಲರಿ ಉದ್ಘಾಟಿಸಿ ಮಾತನಾಡಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು, 21ರಂದು ಗಜಪಯಣದ ದಿನ 9 ಆನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ವಿಧ್ಯುಕ್ತವಾಗಿ ಗಜಪಯಣಕ್ಕೆ ನಾಂದಿ ಹಾಡಲಾಗುವುದು. ನಂತರ ಎರಡನೇ ಹಂತದಲ್ಲಿ 5 ಆನೆಗಳು ಬರಲಿದ್ದು, 4 ಆನೆಗಳನ್ನು ತುರ್ತು ಮೀಸಲಿಟ್ಟುಕೊಳ್ಳಲಾಗುವುದು ಎಂದು ತಿಳಿಸಿದರು.
12ರಂದು ಉನ್ನತ ಮಟ್ಟದ ಸಭೆ
ಸೋಮವಾರ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ -ಜಿಕೆವಿಕೆ ಆವರಣದಲ್ಲಿ ವಿಶ್ವ ಆನೆ ದಿನದಂದು ಮಾನವ – ಆನೆ ಸಂಘರ್ಷ ನಿರ್ವಹಣೆ ಕುರಿತಂತೆ ಅಂತಾರಾಷ್ಟ್ರೀಯ ಸಮಾವೇಶ ನಡೆಸಲಾಗುತ್ತಿದ್ದು, ಅಂದು ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ದಸರಾ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಆನೆಗಳ ಕುರಿತಂತೆ ಚರ್ಚಿಸಲಾಗುವುದು ಮತ್ತು ಗಜಪಯಣದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಆನೆಗಳ ಆಯ್ಕೆ ಪ್ರಕ್ರಿಯೆ
ಈಗಾಗಲೇ ನಾಗರಹೊಳೆ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿರುವ ಶಿಬಿರಗಳಲ್ಲಿನ ಹದಿನೆಂಟು ಆನೆಗಳ ಪಟ್ಟಿಯನ್ನು ಮಾಡಲಾಗಿದೆ. ಇದರಲ್ಲಿ ಹದಿನಾಲ್ಕು ಆನೆಗಳನ್ನು ಅಂತಿಮಗೊಳಿಸಲಾಗುತ್ತಿದೆ. ಈ ಆನೆಗಳಲ್ಲಿ ಮೊದಲ ಹಂತದಲ್ಲಿ ಒಂಬತ್ತು ಹಾಗೂ ಎರಡನೇ ತಂಡದಲ್ಲಿ ಐದು ಆನೆಗಳು ಬರಲಿವೆ. ಆನೆಗಳೊಂದಿಗೆ ಗಜ ಸೇವಕರು ಹಾಗೂ ಅವರ ಕುಟುಂಬದವರೂ ಕೂಡ ಮೈಸೂರಿಗೆ ಆಗಮಿಸುವರು.
ಗಜಪಯಣಕ್ಕೆ ಸಿದ್ದತೆ
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ವೀರನಹೊಸಹಳ್ಳಿ ಗ್ರಾಮದಲ್ಲಿ ಆನೆಗಳನ್ನು ಬರ ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಅಲ್ಲಿ ಕಮಾನು ಹಾಗೂ ಕಾರ್ಯಕ್ರಮಕ್ಕಾಗಿ ವೇದಿಕೆ ಸಿದ್ದಪಡಿಸುವ ಚಟುವಟಿಕೆಯೂ ಶುರುವಾಗಲಿವೆ. ಅಲ್ಲಿ ಆನೆಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ, ಉಸ್ತುವಾರಿ ಸಚಿವ ಡಾ.ಮಹದೇವಪ್ಪ, ಸ್ಥಳೀಯ ಶಾಸಕ ಹರೀಶ್‌ಗೌಡ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸ್ಥಳೀಯರು ಆನೆಗಳನ್ನು ಬರ ಮಾಡಿಕೊಳ್ಳಲಿದ್ಧಾರೆ. ಈ ವೇಳೆ ಗಿರಿಜನರ ಸಾಂಸ್ಕೃತಿಕ ಕಾರ್ಯಕ್ರಮಗಳೂ ಗಮನ ಸೆಳೆಯಲಿವೆ. ಸಮೀಪವೇ ಇರುವ ಗುರುಪುರದ ಗಿರಿಜನ ತಂಡಗಳೂ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿವೆ.
ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಉಸ್ತುವಾರಿ ಸಚಿವರಾಗಿದ್ದಾಗ ಶುರುವಾಗ ಗಜಪಯಣ ಪರಂಪರೆ ಈಗಲೂ ಮುಂದುವರಿದಿದೆ.
ಅರಮನೆಯಲ್ಲಿ ಸ್ವಾಗತ
ಗಜಪಯಣದ ಮೂಲಕ ಅಂದೇ ಮೈಸೂರಿನ ಅರಮನೆ ಆವರಣಕ್ಕೆ ಆಗಮಿಸುವ ಆನೆಗಳನ್ನು ಎರಡು ದಿನದ ನಂತರ ಮೈಸೂರು ಅರಮನೆಯ ಆವರಣಕ್ಕೆ ಬರ ಮಾಡಿಕೊಳ್ಳಲಾಗುತ್ತದೆ. ಅರಮನೆ ಆವರಣದಲ್ಲೂ ವಿಜೃಂಭಣೆಯ ಕಾರ್ಯಕ್ರಮವನ್ನು ರೂಪಿಸಿ ದಸರಾ ಸಡಗರ ಹೆಚ್ಚಿಸುವುದು ನಡೆದುಕೊಂಡು ಬಂದಿದೆ. ಈ ಬಾರಿ ಈಗಾಗಲೇ ಆನೆಗಳು ತಂಗಲು ವ್ಯವಸ್ಥೆ ಹಾಗೂ ಗಜ ಸೇವಕರ ಕುಟುಂಬಗಳ ವಾಸ್ತವ್ಯಕ್ಕೆ ವ್ಯವಸ್ಥೆಯನ್ನು ಅರಮನೆ ಆವರಣದಲ್ಲಿ ಮಾಡಲಾಗುತ್ತದೆ.ಇದಾದ ನಂತರ ಎರಡು ತಿಂಗಳ ಕಾಲ ಆನೆಗಳು ಅರಮನೆ ಆವರಣದಲ್ಲೇ ಆನೆಗಳು ವಾಸ್ತವ್ಯ ಹೂಡಲಿದ್ದು, ಸಂಭ್ರಮದ ವಾತಾವರಣ ಮನೆ ಮಾಡಿರಲಿದೆ.