Mysore Dasara 2024: ಮೈಸೂರು ದಸರಾ ಗಜಪಯಣಕ್ಕೆ ಇಂದು ಚಾಲನೆ, ಕಾಡಿನಿಂದ ನಾಡಿಗೆ ಹೆಜ್ಜೆ ಹಾಕಲಿವೆ ಜಂಬೂ ಸವಾರಿ ತಂಡದ ಆನೆಗಳು
Welcoming Jumbos for Mysuru Dasara ಮೈಸೂರು ದಸರಾಗೆ ಆನೆಗಳನ್ನು ಸ್ವಾಗತಿಸುವ ಗಜಪಯಣ ನಾಗರಹೊಳೆಯಲ್ಲಿ( Nagarahole) ನಡೆಯಲಿದೆ.
ಮೈಸೂರು: ಮೈಸೂರು ದಸರಾ( Mysore Dasara) ಎಷ್ಟೊಂದು ಸುಂದರ ಎನ್ನುವ ಹಾಡು ನೆನಪಿಸಿಕೊಳ್ಳುವ ಸಮಯ ಮತ್ತೆ ಬಂದೇ ಬಿಟ್ಟಿತು. ವೈಭವದ ಮೈಸೂರು ದಸರಾ ಚಟುವಟಿಕೆಗಳಿಗೆ ಚಾಲನೆ ಸಿಗುವ ಬಂದಿದೆ. ಅಂದರೆ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಆನೆಗಳನ್ನು ಬರ ಮಾಡಿಕೊಳ್ಳುವ ಸಮಯ. ಕಾಡಿನಲ್ಲಿ ಬೀಡು ಬಿಟ್ಟಿರುವ ಗಜಪಡೆಯನ್ನು ವೈಭವದೊಂದಿಗೆ ಸ್ವಾಗತಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮೈಸೂರು ಹಾಗೂ ಕೊಡಗು ಜಿಲ್ಲೆಯ ಗಡಿ ಭಾಗವಾಗಿರುವ ನಾಗರಹೊಳೆ ವೀರನಹೊಸಹಳ್ಳಿಯಲ್ಲಿ ಒಂಬತ್ತು ಆನೆಗಳನ್ನು ಬರ ಮಾಡಿಕೊಳ್ಳಲಾಗುತ್ತಿದೆ. ಅಂಬಾರಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಸಾಲಂಕೃತ ಆನೆಗಳಿಗೆ ಬುಧವಾರ ಪೂಜೆ ಸಲ್ಲಿಸಿದ ನಂತರ ಒಂಬತ್ತು ಆನೆಗಳು ಮೊದಲ ತಂಡದಲ್ಲಿ ಮೈಸೂರಿನತ್ತ ಹೆಜ್ಜೆ ಹಾಕಲಿವೆ.
ಎರಡು ದಶಕದಿಂದ ಚಾಲ್ತಿಯಲ್ಲಿರುವ ಆನೆಗಳು ಹಾಗೂ ಗಜ ಸೇವಕರನ್ನು ಬರ ಮಾಡಿಕೊಳ್ಳುವ ಗಜ ಪಯಣ ಕಾರ್ಯಕ್ರಮಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬುಧವಾರ ಬೆಳಿಗ್ಗೆ 10ಕ್ಕೆ ಬರ ಮಾಡಿಕೊಳ್ಳುವರು. ಗಜಗಾಂಭಿರ್ಯದೊಂದಿಗೆ ಹೆಜ್ಜೆ ಹಾಕುತ್ತ ಬರುವ ಆನೆಗಳು, ಹಸಿರು ಪರಿಸರದ ಸುಂದರ ನೋಟ ಹಾಗೂ ಧಾರ್ಮಿಕ ಚಟುವಟಿಕೆಗಳು ಇಡೀ ಕಾರ್ಯಕ್ರಮಕ್ಕೆ ಮೆರಗು ನೀಡಲಿವೆ. ಅಲ್ಲಿಂದ ಹೊರಟ ಆನೆಗಳು ಸಂಜೆ ಹೊತ್ತಿಗೆ ಮೈಸೂರು ತಲುಪಲಿದ್ದು, ಆಗಸ್ಟ್ 23ರಂದು ಮೈಸೂರು ಅರಮನೆ ಆವರಣಕ್ಕೆ ಬರ ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಅರಣ್ಯ ಇಲಾಖೆ ಸಿದ್ದತೆಗಳನ್ನು ಮಾಡಿಕೊಂಡಿದೆ.
ಗಜಪಯಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಾದ ಕುಮಾರಪುಷ್ಕರ್, ಡಾ.ಮಾಲತಿಪ್ರಿಯಾ, ಡಾ.ರಮೇಶ್‌ಕುಮಾರ್, ಪಿ.ಎ.ಸೀಮಾ, ಪ್ರಭುಗೌಡ ಅವರು ಸಿದ್ದತೆಗಳನ್ನು ನಾಗರಹೊಳೆಯಲ್ಲಿ ಪರಿಶೀಲಿಸಿದರು.
ಗಜ ಪಯಣದ ವಿಶೇಷ ಏನು?
ದಸರಾ/ ಜಂಬುಸವಾರಿ ಆರಂಭಗೊಳ್ಳುವ ಎರಡು ತಿಂಗಳು ಮುಂಚಿತವಾಗಿಯೇ ಮೈಸೂರಿಗೆ ಬರುವ ಆನೆಗಳಿಗೆ ಒಂದು ತಿಂಗಳು, ಜಂಬೂ ಸವಾರಿ ಸಾಗುವ ಮೈಸೂರಿನ ಅರಮನೆಯಿಂದ ಬನ್ನಿಮಂಟಪದ ವರೆಗೆ ಪ್ರತಿದಿನ ಅಭ್ಯಾಸ ಮಾಡಿಸಲಾಗುತ್ತದೆ. ಇದಕ್ಕಾಗಿ ಕರ್ನಾಟಕ ಅರಣ್ಯ ಇಲಾಖೆಯ ವಿವಿಧ ಆನೆ ಶಿಬಿರಗಳಿಂದ ನಾಡಿಗೆ (ಮೈಸೂರಿಗೆ) ತೆರಳುವ ಆನೆಗಳನ್ನು ಕಾಡಿನಿಂದ ಬೀಳ್ಕೊಡುವ, ನಾಡಿಗೆ ಸ್ವಾಗತಿಸುವ ಒಂದು ಕಾರ್ಯಕ್ರಮವೇ ಈ ಗಜಪಯಣ.. ಹುಣಸೂರಿನಿಂದ ನಾಗರಹೊಳೆಗೆ ಹೊರಡುವ ಮಾರ್ಗದಲ್ಲಿ, ವೀರಹೊಸಹಳ್ಳಿ ಅರಣ್ಯ ಚೆಕ್ ಪೋಸ್ಟ್ ಹತ್ತಿರ ಈ ಕಾರ್ಯಕ್ರಮ ಪ್ರತಿವರ್ಷ ದಸರಾ ಸಮಯದಲ್ಲಿ ನಡೆಯುತ್ತದೆ. ಎಚ್.ವಿಶ್ವನಾಥ್ ಅವರು ಉಸ್ತುವಾರಿ ಸಚಿವರಾಗಿದ್ದಾಗ ಈ ಹೊಸ ಪರಂಪರೆ ಆರಂಭಿಸಿದ್ದರು.
ನಾಡಿನ ವಿವಿಧ ಭಾಗಗಳಲ್ಲಿ ಸಾಕಾನೆ ಶಿಬಿರಗಳಿದ್ದರೂ, ದಸರಾಗೆ ಚಾಮರಾಜನಗರದ ಬಂಡೀಪುರ, ಬಿ.ಆರ್.ಟಿ, ಕೊಡಗಿನ ದುಬಾರೆ ಆನೆ ಶಿಬಿರಗಳಿಂದ ಆಯ್ದ ಆನೆಗಳನ್ನು ಕರೆ ತರಲಾಗುತ್ತದೆ. ನಾಗರಹೊಳೆ ಅರಣ್ಯದ ಹತ್ತಿರದ ವೀರನಹೊಸಹಳ್ಳಿಯಲ್ಲಿ ನಡೆಯಲು ಕಾರಣ, ದಸರಾದಲ್ಲಿ ಪಾಲ್ಗೊಳ್ಳುವ ಹೆಚ್ಚಿನ ಆನೆಗಳು ನಾಗರಹೊಳೆಯ ವಿವಿಧ ಸಾಕಾನೆ ಶಿಬಿರಗಳಿಂದ ಬಂದವಾಗಿವೆ. ಹಿಂದೆ ಬಹಳಷ್ಟು ಸಹ ಅಂಬಾರಿ ಹೊತ್ತ, ಕಳೆದ ವರ್ಷ ಮೃತವಾದ ಬಲರಾಮ, ಅರ್ಜುನ ಈಗಿನ ಅಂಬಾರಿ ಆನೆ ಅಭಿಮನ್ಯು ಇವೆಲ್ಲಾ ನಾಗರಹೊಳೆಯ ವಿವಿಧ ಶಿಬಿರದ ಆನೆಗಳೆ. ಸದ್ಯ ನಾಗರಹೊಳೆಯಲ್ಲಿ ಮತ್ತಿಗೋಡು ಪ್ರಮುಖ ಸಾಕಾನೆ ಶಿಬಿರ. ಹಿಂದೆ ವೀರನಹೊಸಳ್ಳಿಗೆ ಹತ್ತಿರದಲ್ಲೆ ದಟ್ಟ ಕಾಡಮಧ್ಯೆ ಮೂರ್ಕಲ್ ಎಂಬ ಆನೆ ಶಿಬಿರವಿತ್ತು. ಅದು ಈಗ ಮತ್ತಿಗೋಡು ಶಿಬಿರದೊಂದಿಗೆ ಸೇರಿಕೊಂಡಿದೆ.
ಗಜಪಯಣದಿಂದ ಮೈಸೂರು ತಲುಪುವ ಆನೆಗಳು ಮೊದಲಿಗೆ ಮೈಸೂರಿನ ಅರಣ್ಯ ಭವನದಲ್ಲಿ ಒಂದೆರಡು ದಿನ ತಂಗಿ ನಂತರ ಅರಮನೆ ತಲುಪುತ್ತವೆ. ಅರಮನೆಯಲ್ಲಿ ಆನೆಗಳಿಗೆ, ಅವುಗಳ ಮಾಹುತ ಮತ್ತು ಕಾವಾಡಿಗಳಿಗೆ, ಅವರ ಕುಟುಂಬ ಸದಸ್ಯರುಗಳಿಗೆ ತಿಂಗಳುಗಳ ಕಾಲ ಊಟವಸತಿ ವ್ಯವಸ್ಥೆ ಮಾಡಲಾಗಿರುತ್ತದೆ. ಇವರು ಆನೆಗಳ ಆಹಾರ, ಶುಚಿತ್ವ ವ್ಯವಸ್ಥೆ ನೋಡಿಕೊಳ್ಳುತ್ತಾ,ಅವುಗಳಿಗೆ ಪ್ರತಿದಿನ ನಗರದ ವಾತಾವರಣದಲ್ಲಿ ಜಂಬೂ ಸವಾರಿಯಲ್ಲಿ ಗಾಬರಿಯಿಲ್ಲದೆ ಹೆಜ್ಜೆ ಹಾಕುವ ಅಭ್ಯಾಸವನ್ನು ಮಾಡಿಸುತ್ತಾರೆ. ಇವೆಲ್ಲವನ್ನು ಅರಣ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿಯೇ ನಡೆಸಲಾಗುತ್ತದೆ. ಎರಡು ತಿಂಗಳ ಕಾಲ ಮೈಸೂರು ನಗರದ ಸಾಂಸ್ಕೃತಿಕ, ಪಾರಂಪರಿಕ ಹಾಗು ಪ್ರವಾಸಿ ಮಹತ್ವಕ್ಕೆ ಆನೆಗಳು ಮೆರಗು ನೀಡಲಿವೆ.