Mysore Dasara Elephants:ಮೈಸೂರು ದಸರಾ ಗಜಪಡೆಗೆ ತಾಲೀಮು, ಭಾರ ಹೊತ್ತ ಅಭಿಮನ್ಯು, ಕುಮ್ಕಿ ಆನೆಗಳಾದ ಲಕ್ಷ್ಮಿ, ವರಲಕ್ಷ್ಮಿ ಸಾಥ್‌-mysore news mysore dasara 2024 elephants rehearsal captain abhimanyu went with 520 kg weight in first leg kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mysore Dasara Elephants:ಮೈಸೂರು ದಸರಾ ಗಜಪಡೆಗೆ ತಾಲೀಮು, ಭಾರ ಹೊತ್ತ ಅಭಿಮನ್ಯು, ಕುಮ್ಕಿ ಆನೆಗಳಾದ ಲಕ್ಷ್ಮಿ, ವರಲಕ್ಷ್ಮಿ ಸಾಥ್‌

Mysore Dasara Elephants:ಮೈಸೂರು ದಸರಾ ಗಜಪಡೆಗೆ ತಾಲೀಮು, ಭಾರ ಹೊತ್ತ ಅಭಿಮನ್ಯು, ಕುಮ್ಕಿ ಆನೆಗಳಾದ ಲಕ್ಷ್ಮಿ, ವರಲಕ್ಷ್ಮಿ ಸಾಥ್‌

Mysore Dasara 2024 ದಸರಾ ಗಜಪಡೆಗೆ ಭಾರ ಹೊರಿಸುವ ತಾಲೀಮು ಮುಂದುವರಿದಿದೆ. ಅಭೀಮನ್ಯುಗೆ ಮೊದಲ ದಿನ ಭಾರ ಹೊರಿಸಲಾಯತು.ವರದಿ: ಪಿ.ರಂಗಸ್ವಾಮಿ. ಮೈಸೂರು

ಅಭಿಮನ್ಯು ಆನೆಗೆ ಭಾರ ಹೊರುವ ತಾಲೀಮು ಭಾನುವಾರ ಮೈಸೂರು ಅರಮನೆ ಆವರಣದಲ್ಲಿ ಶುರುವಾಯಿತು.
ಅಭಿಮನ್ಯು ಆನೆಗೆ ಭಾರ ಹೊರುವ ತಾಲೀಮು ಭಾನುವಾರ ಮೈಸೂರು ಅರಮನೆ ಆವರಣದಲ್ಲಿ ಶುರುವಾಯಿತು.

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2024ಕ್ಕಾಗಿ ಕಾಡಿನಿಂದ ನಾಡಿಗೆ ಆಗಮಿಸಿ ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿಗೆ ಇಂದಿನಿಂದ ಭಾರ ಹೊರಿಸಿ ತಾಲೀಮು ಆರಂಭವಾಗಿದೆ. ಆನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ತಾಲೀಮನ್ನು ಭಾನುವಾರ ಮಧ್ಯಾಹ್ನ ಆರಂಭಿಸಲಾಯಿತು. ಮೊದಲ ದಿನ 500 ಕೆಜಿಗೂ ಹೆಚ್ಚಿನ ಭಾರ ಹೊರಿಸಿ ತಾಲೀಮು ನಡೆಸಲಾಯಿತು. ಈಗಾಗಲೇ ನಾಲ್ಕು ವರ್ಷ ಅಂಬಾರಿ ಹೊತ್ತಿರುವ ಅನುಭವಿ ಅಭಿಮನ್ಯು ಯಶಸ್ವಿಯಾಗಿಯೇ ಭಾರ ಹೊತ್ತು ಹೆಜ್ಜೆ ಹಾಕಿದ.

ಅಭಿಮನ್ಯುವಿನ ಹೆಗಲ ಮೇಲೆ ಗಾದಿ, ನಮ್ದ, ಕಬ್ಬಿಣದ ತೊಟ್ಟಿಲು ಕಟ್ಟಿ, ಸುಮಾರು 520 ಕೆಜಿಯಷ್ಟು ಮರಳಿ‌ನ ಮೂಟೆಗಳನ್ನು ಇರಿಸಿ ಭಾರ ಹೊರಿಸುವ ತಾಲೀಮಿಗೆ ಚಾಲನೆ ನೀಡಲಾಯಿತು.

ಅರಮನೆಯ ಆವರಣದಲ್ಲಿ ಸಂಪ್ರದಾಯಬದ್ಧವಾಗಿ ವನ್ಯಜೀವಿ ಡಿಸಿಎಫ್‌ ಪ್ರಭುಗೌಡ ಬಿರಾದಾರ್‌ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಂಬಾರಿ ಹೊತ್ತು ಸಾಗಲಿರುವ ಅಭಿಮನ್ಯುವಿಗೆ ಭಾರ ಹೊತ್ತು ಸಾಗುವ ತಾಲೀಮಿಗೆ ಚಾಲನೆ ಕೊಟ್ಟರು

ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಸ್ಥಾನದ ಮುಂಭಾಗ ಅಭಿಮನ್ಯುವಿನ ಜೊತೆಗೆ ಎಡಬಲದಲ್ಲಿ ಕುಮ್ಕಿ ಆನೆಗಳಾದ ಲಕ್ಷ್ಮಿ ಮತ್ತು ವರಲಕ್ಷ್ಮಿಯನ್ನು ನಿಲ್ಲಿಸಿ ಸಂಪ್ರದಾಯಬದ್ಧವಾಗಿ ವಿಶೇಷ ಪೂಜೆ ನೆರವೇರಿಸಿದರು.

ಬಳಿಕ ಅಭಿಮನ್ಯುವಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಅಕ್ರಂ, ವೆಂಕಟೇಶ್‌ ಮತ್ತಿತರರು ಗಾದಿ, ನಮ್ದ ಕಟ್ಟಿ, ಕಬ್ಬಿಣದ ತೊಟ್ಟಿಲಿನಲ್ಲಿ ಮರಳಿ‌ನ ಮೂಟೆಗಳನ್ನು ಇರಿಸಿ ಭಾರ ಹೊತ್ತು ಸಾಗುವ ತಾಲಿಮು ಆರಂಭಿಸಿದರು. ಸುಮಾರು ಒಂದುವರೆ ಗಂಟೆ ಕಾಲ ಅಭಿಮನ್ಯುವಿಗೆ ಗಾದಿ ಕಟ್ಟಿದ ಮಾವುತರು ಮತ್ತು ಕಾವಾಡಿಗಳು ಕೂಡ ನೆರವಾದರು.

ಮೊದಲ ದಿನ ಸುಮಾರು 520 ಕೆಜಿಯಷ್ಟು ಭಾರ ಹೊತ್ತು ಸಾಗಿದ ಅಭಿಮನ್ಯು ಯಾವುದೇ ಅಡೆತಡೆ ಇಲ್ಲದೇ ಜಂಬೂ ಸವಾರಿ ಮಾರ್ಗದಲ್ಲಿ ಹೆಜ್ಜೆ ಹಾಕಿತು.ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಭಾರವನ್ನು ಹೆಚ್ಚಿಸಲಾಗುತ್ತದೆ ಎಂದು ಮೈಸೂರು ವನ್ಯಜೀವಿ ಡಿಸಿಎಫ್ ಡಾ ಐ ಬಿ ಪ್ರಭುಗೌಡ ವಿವರಣೆ ನೀಡಿದರು.

ಮುಂದಿನ ದಿನಗಳಲ್ಲಿ ಅಭಿಮನ್ಯುವಿನ ಜೊತೆಗೆ ಇತರ ಆನೆಗಳಿಗೂ ಭಾರ ಹೊರಿಸಿ ತಾಲೀಮು ನಡೆಸಲಾಗುತ್ತದೆ. ಜಂಬೂಸವಾರಿ ಮೆರವಣಿಗೆ ವೇಳೆಗೆ 750 ಕೆ ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸುಲಲಿತವಾಗಿ ಸಾಗಲು ಅಭಿಮನ್ಯುವನ್ನು ಅಣಿಗೊಳಿಸಲಾಗುತ್ತದೆ ಎನ್ನುತ್ತಾರೆ ಅವರು.