Mysore Dasara 2024: ಮೈಸೂರು ದಸರಾ ವಸ್ತು ಪ್ರದರ್ಶನ; ಈ ಬಾರಿಯೂ ವೈವಿಧ್ಯಮಯ ಆಯೋಜನೆ, ನೀವೂ ಹೇಗೆ ಭಾಗಿಯಾಗಬಹುದು
Mysore Dasara 2024 ಮೈಸೂರು ದಸರಾದಲ್ಲಿ ಲಕ್ಷಾಂತರ ಜನರನ್ನು ಆಕರ್ಷಿಸುವ ಮೂರು ತಿಂಗಳ ಕಾಲದ ವಸ್ತು ಪ್ರದರ್ಶನವು ಈ ಬಾರಿಯೂ ವೈವಿಧ್ಯಮಯ ಚಟುವಟಿಕೆಗಳಿಂದ ಕೂಡಿರಲಿದೆ.
ಮೈಸೂರು: ಮೈಸೂರು ದಸರಾ ಎಂದರೆ ಅದು ವೈವಿಧ್ಯಮಯ ಚಟುವಟಿಕೆಗಳ ಸಂಗಮ. ಅದರಲ್ಲೂ ದಸರಾ ವೇಳೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆಯೋಜಿಸುವ ಸುಮಾರು ನೂರು ದಿನಗಳ ಚಟುವಟಿಕೆಯಂತೂ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತದೆ. ಇದು ಬರೀ ಜನ ಭೇಟಿಯ ತಾಣವಲ್ಲ. ಬದಲಿಗೆ ಹಲವರಿಗೆ ವರ್ಷವಿಡೀ ಆದಾಯ ನೀಡಿ ಬದುಕು ಕಟ್ಟಿಕೊಳ್ಳುವ ಆಸರೆಯ ವೇದಿಕೆಯೂ ಹೌದು. ಸಣ್ಣ ಸಣ್ಣ ವ್ಯಾಪಾರಿಗಳಿಂದ ಹಿಡಿದು ಉದ್ಯಮಿದಾರರು ಇಲ್ಲಿ ಮಳಿಗೆಗಳನ್ನು ಹಾಕಿ ತಮ್ಮ ಉತ್ಪನ್ನಗಳನ್ನು ಪರಿಚಯಿಸುತ್ತಾರೆ. ಸರ್ಕಾರದ ಸಾಧನೆಗಳನ್ನು ಸಾರುವ ಇಲಾಖೆ, ನಿಗಮಗಳ ಮಳಿಗೆಗಳೂ ಬರುತ್ತವೆ. ಅಮ್ಯೂಸ್‌ಮೆಂಟ್, ಊಟೋಪಚಾರದ ಜತೆಗೆ ಸಂಗೀತ ಕಾರ್ಯಕ್ರಮಗಳೂ ದಸರಾ ವಸ್ತು ಪ್ರದರ್ಶನಕ್ಕೆ ಮೆರಗು ನೀಡುತ್ತವೆ.
ಸಿದ್ದತೆ ಜೋರು
ಈ ಬಾರಿಯೂ ಇನ್ನೇನು 2024ರ ದಸರಾಗೆ ದಿನಗಣನೆ ಶುರುವಾಗಿದೆ. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರವೂ ಈ ಬಾರಿ ವೈವಿಧ್ಯಮಯವಾಗಿ ಚಟುವಟಿಕೆ ರೂಪಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಮುಖ್ಯವಾಗಿ ಇಡೀ ಚಟುವಟಿಕೆಗಳನ್ನು ರೂಪಿಸಲು ಬೇಕಾದ ಟೆಂಡರ್ ಪ್ರಕ್ರಿಯೆಗಳೂ ನಡೆದಿವೆ. ಎರಡು ವರ್ಷದ ಹಿಂದೆ ಬೆಂಗಳೂರಿನ ವರ್ಲ್ಡ್ ಇಂಡಿಯಾ ರೆಸಾರ್ಟ್ ಪ್ರೈ.ಲಿ. 8.08 ಕೋಟಿ ರೂ. ಗೆ ಟೆಂಡರ್ ಪಡೆದುಕೊಂಡಿತ್ತು. ಕಳೆದ ಬಾರಿ ಫನ್ ವರ್ಲ್ಡ್ 11.52 ಕೋಟಿ ರೂ.ಗೆ ಟೆಂಡರ್ ಪಡೆದುಕೊಂಡಿತ್ತು. ಈ ಬಾರಿ ಟೆಂಡರ್ ಮೊತ್ತ 15 ಕೋಟಿ ರೂ.ಗಳನ್ನು ತಲುಪುವ ಅಂದಾಜಿದ್ದು, ಆದಾಯವೂ ಹೆಚ್ಚು ಬರಲಿದೆ. ಇದು ಪರೋಕ್ಷವಾಗಿ ಗ್ರಾಹರಿಗೆ ಕೊಂಚ ಹೊರೆಯನ್ನೂ ಉಂಟು ಮಾಡಬಹುದು.
ಮಹಾರಾಜರ ಪರಿಕಲ್ಪನೆ
ಮೈಸೂರಿನ ಜನತೆಗೆ ಕೈಗಾರಿಕೆ, ಕೃಷಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ ಮತ್ತು ಸಂಪ್ರದಾಯ ಮುಂತಾದ ವಿವಿಧ ಕ್ಷೇತ್ರಗಳಲ್ಲಿನ ಬೆಳವಣಿಗೆಯನ್ನು ಪರಿಚಯಿಸುವ ಉದ್ದೇಶದಿಂದ ಮೈಸೂರಿನ 23ನೇ ಮಹಾರಾಜರಾಗಿದ್ದ ಹತ್ತನೇ ಚಾಮರಾಜ ಒಡೆಯರ್ ಅವರು 1880 ರಲ್ಲಿ ಮೈಸೂರು ದಸರಾ ಉತ್ಸವವನ್ನು ಪ್ರಾರಂಭಿಸಿದರು. ಆರಂಭದ ದಿನಗಳಲ್ಲಿ, ರೈಲ್ವೆ ನಿಲ್ದಾಣ ಎದುರಿನ ಜೀವಣ್ಣರಾಯನ ಕಟ್ಟೆಯ ಪ್ರದರ್ಶನದ ವೇದಿಕೆಯಾಗಿತ್ತು.
ನಂತರದಲ್ಲಿ ಇದನ್ನು ಮೈಸೂರು ಮೆಡಿಕಲ್ ಕಾಲೇಜು ಆವರಣಕ್ಕೆ ವರ್ಗಾಯಿಸಲಾಯಿತು. ಸಾಂಸ್ಕೃತಿಕ ಮತ್ತು ಕೈಗಾರಿಕೆಗಳ ಪ್ರದರ್ಶನ ಸಮಿತಿಯು ಅದರ ಅಧ್ಯಕ್ಷತೆಯಲ್ಲಿ 1976 ರಿಂದ 1980 ರವರೆಗೆ ಪ್ರದರ್ಶನವನ್ನು ನಡೆಸಿತು. ನಂತರ 1980 ರಿಂದ 1986 ರವರೆಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಇದರ ನೇತೃತ್ವ ವಹಿಸಿತ್ತು.
ಹಲವು ಇಲಾಖೆಗಳ ನೇತೃತ್ವ
1981 ರಲ್ಲಿ ಕರ್ನಾಟಕ ಕಲಾಮಂದಿರ, ವಿಶ್ವ ಕನ್ನಡ ಸಮ್ಮೇಳನ ಅತಿಥಿ ಗೃಹ ಮತ್ತು ಶಾಪಿಂಗ್ ಕಾಂಪ್ಲೆಕ್ಸ್‌ನ ಉದ್ದೇಶಿತ ನಿರ್ಮಾಣವನ್ನು ನೋಡುವುದರ ಜೊತೆಗೆ ಪ್ರದರ್ಶನವನ್ನು ಆಯೋಜಿಸಲು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರವನ್ನು ರಚಿಸಲಾಯಿತು. ಮೇಲಿನ ಕಟ್ಟಡಗಳ ನಿರ್ಮಾಣವು 1985 ರಲ್ಲಿ ಪೂರ್ಣಗೊಂಡಿತು.
1987 ರಿಂದ 1993 ರವರೆಗೆ ಮಾಹಿತಿ, ಪ್ರವಾಸೋದ್ಯಮ ಮತ್ತು ಯುವ ವ್ಯವಹಾರಗಳ ಇಲಾಖೆ ಅಡಿಯಲ್ಲಿ ಮತ್ತು 1994 ರಿಂದ 2003 ರವರೆಗೆ ಕನ್ನಡ ಮತ್ತು ಸಂಸ್ಕೃತಿ, ಮಾಹಿತಿ ಮತ್ತು ಪ್ರವಾಸೋದ್ಯಮ ಇಲಾಖೆಗಳ ಅಡಿಯಲ್ಲಿ ಪ್ರದರ್ಶನವನ್ನು ನಡೆಸಲಾಯಿತು. ರಾಜ್ಯ ಸರ್ಕಾರವು 1996 ರಿಂದ 30 ವರ್ಷಗಳ ಅವಧಿಗೆ 80 ಎಕರೆ ಭೂಮಿಯನ್ನು ಪ್ರಾಧಿಕಾರಕ್ಕೆ ಭೋಗ್ಯಕ್ಕೆ ನೀಡಿದೆ. ಅದರಂತೆ, ಪ್ರದರ್ಶನದಲ್ಲಿ, ವಿಶೇಷವಾಗಿ ದಸರಾ ಅವಧಿಗೆ 90 ದಿನಗಳ ಪ್ರದರ್ಶನಗಳನ್ನು ನಡೆಸಲಿದೆ.
ಸಂಜೆಗೆ ಉತ್ತಮ ತಾಣ
ದೂರದಿಂದ ಆಗಮಿಸಿದ ಪ್ರವಾಸಿಗರು ಎಲ್ಲೆಡೆ ಸುತ್ತಾಡಿ ಸಂಜೆ ಹೊತ್ತಿಗೆ ವಸ್ತು ಪ್ರದರ್ಶನಕ್ಕೆ ತೆರಳಿ ಭರಪೂರ ಮನರಂಜನೆ ಪಡೆದು ಭರ್ಜರಿ ಶಾಪಿಂಗ್ ನಡೆಸುವುದರೊಂದಿಗೆ ವೈವಿಧ್ಯಮಯ ಆಹಾರ ತಿನಿಸುಗಳ ಸವಿ ಸವಿಯಲು ಅನುಕೂಲ ಮಾಡಿಕೊಡಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮದ ವೈವಿಧ್ಯವೂ ಇರಲಿದೆ.
ಸಂಜೆ ವೇಳೆಗೆ ನಗರದ ಜನ ಮಕ್ಕಳೊಂದಿಗೆ ವಸ್ತು ಪ್ರದರ್ಶನಕ್ಕೆ ತೆರಳಿ ಖುಷಿಯಾಗಿ ಕಾಲ ಕಳೆಯುತ್ತಾರೆ. ಮಾಹಿತಿ ನೀಡುವ ಮಳಿಗೆಗಳಿಗೆ ತೆರಳುತ್ತಾರೆ. ತಮಗೆ ಬೇಕಾದ್ದನ್ನು ಖರೀದಿಸುತ್ತಾರೆ. ಆಟವಾಡಿ ಊಟ ಮಾಡಿ ನಲಿಯುತ್ತಾರೆ. ಕನಿಷ್ಟ ಮೂರ್ನಾಲ್ಕು ಗಂಟೆ ಕಳೆಬಯಬಲ್ಲ ಇಡೀ ಮೈದಾನವು ದೊಡ್ಡ ವಹಿವಾಟು ಕೇಂದ್ರವೂ ಆಗಿ ರೂಪುಗೊಂಡಿದೆ.
ವೈವಿಧ್ಯಮಯ ಚಟುವಟಿಕೆ
ಈ ಬಾರಿಯೂ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಮಾಹಿತಿ ನೀಡುವ ಮಳಿಗೆಗಳು, ಪ್ರವಾಸೋದ್ಯಮ, ನೀರಾವರಿ, ಹಾಲು ಮಹಾಮಂಡಳ ಸಹಿತ ಹಲವು ಇಲಾಖೆಗಳ ಮಳಿಗೆಗಳೂ ಬರಲಿವೆ. ಜಿಲ್ಲಾ ಪಂಚಾಯಿತಿಗಳ ಮಳಿಗೆಗಳೂ ಇರಲಿವೆ. ಈ ಬಾರಿ ಮಳಿಗೆಗಳನ್ನು ವೈವಿಧ್ಯಮಯ ಹಾಗೂ ಮಾಹಿತಿ ಪೂರ್ಣವಾಗಿ ರೂಪಿಸಲು ಸೂಚಿಸಲಾಗಿದೆ.
ಕೋಟ್ಯಂತರ ರೂ. ವಹಿವಾಟು ನಡೆಯುವ ವಸ್ತು ಪ್ರದರ್ಶನದಲ್ಲಿ ಕಲಾವಿದರು, ಆಹಾರ ತಯಾರಕರು, ಉತ್ಪನ್ನ ಮಾರಾಟಗಾರಿಗೆ ಸಾಕಷ್ಟು ಅವಕಾಶಗಳಿವೆ. ಮೊದಲೇ ಮಳಿಗೆಗಳನ್ನು ಪಡೆದವರಿಗೆ ಮಾರಾಟಕ್ಕೆ ಅವಕಾಶವಿದೆ. ಇನ್ನು ವಾರಾಂತ್ಯದಲ್ಲಿ ಸಂಗೀತ ಕಾರ್ಯಕ್ರಮಗಳು ಇರಲಿದ್ದು, ಅಲ್ಲಿಯೂ ಭಾಗಿಯಾಗಬಹುದು. ಸರ್ಕಾರಿ ಮಳಿಗೆಗಳನ್ನು ಸ್ಥಾಪಿಸಲು ಕೂಡ ಅವಕಾಶವನ್ನು ಪಡೆದುಕೊಳ್ಳಬಹುದು.
ವಸ್ತು ಪ್ರದರ್ಶನದ ಚಟುವಟಿಕೆಗಳು ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಲೇ ಇದೆ. ಈ ಬಾರಿಯೂ ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ಚಟುವಟಿಕೆಗಳೂ ಉತ್ತಮವಾಗಿರಲಿದ್ದು, ಪಾಲ್ಗೊಳ್ಳುವವರಿಗೂ ನಿಜಕ್ಕೂ ಖುಷಿಯಾಗಲಿದೆ. ವ್ಯಾಪಾರ, ವಹಿವಾಟು ಮಾಡಲು ಉತ್ತಮ ವೇದಿಕೆಯೂ ದಸರಾ ವಸ್ತು ಪ್ರದರ್ಶನ ಆಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.