ಮೈಸೂರು ದಸರಾ ಯಾವಾಗ ಶರಣ ನವರಾತ್ರಿ ಆಯಿತು; ನಾಡಹಬ್ಬದ ವೆಬ್‌ಸೈಟ್‌ ಮಾತ್ರ ಮಾಹಿತಿ ಅಪೂರ್ಣ, ದೋಷಗಳೂ ನುಸುಳಿವೆ-mysore news mysore dasara 2024 website launched incomplete information tourist un happy over website professionalism kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ದಸರಾ ಯಾವಾಗ ಶರಣ ನವರಾತ್ರಿ ಆಯಿತು; ನಾಡಹಬ್ಬದ ವೆಬ್‌ಸೈಟ್‌ ಮಾತ್ರ ಮಾಹಿತಿ ಅಪೂರ್ಣ, ದೋಷಗಳೂ ನುಸುಳಿವೆ

ಮೈಸೂರು ದಸರಾ ಯಾವಾಗ ಶರಣ ನವರಾತ್ರಿ ಆಯಿತು; ನಾಡಹಬ್ಬದ ವೆಬ್‌ಸೈಟ್‌ ಮಾತ್ರ ಮಾಹಿತಿ ಅಪೂರ್ಣ, ದೋಷಗಳೂ ನುಸುಳಿವೆ

ಮೈಸೂರು ದಸರಾ ವೆಬ್‌ಸೈಟ್‌ ಅಪೂರ್ಣದಿಂದ ಕೂಡಿದೆ. ಇದರಿಂದ ದಸರಾ ಕುರಿತು ಸೂಕ್ತ ಮಾಹಿತಿಯೇ ಸಿಗದೇ ಪ್ರವಾಸಿಗರು ನಿರಾಶೆ ಆಗುವುದಂತೂ ನಿಜ.

ಮೈಸೂರು ದಸರಾ ಅಪೂರ್ಣ ವೆಬ್‌ಸೈಟ್‌ ಉದ್ಘಾಟಿಸಿದ ಸಚಿವ ಡಾ.ಎಚ್‌.ಸಿ.ಮಹದೇವಪ್ಪ.
ಮೈಸೂರು ದಸರಾ ಅಪೂರ್ಣ ವೆಬ್‌ಸೈಟ್‌ ಉದ್ಘಾಟಿಸಿದ ಸಚಿವ ಡಾ.ಎಚ್‌.ಸಿ.ಮಹದೇವಪ್ಪ.

ಮೈಸೂರು: ಮೈಸೂರು ದಸರಾ ಎಷ್ಟೊಂದು ಸುಂದರ. ಚೆಲ್ಲಿದೆ ನಗೆಯ ಪನ್ನೀರ ಎನ್ನುವ ಹಾಡು ಜನಜನಿತ. ಇಂತಹ ಹಾಡಿನ ಜನಪ್ರಿಯತೆಯಂತೆಯೇ ನಾಡಹಬ್ಬದ ವೆಬ್‌ಸೈಟ್‌ ಕೂಡ ಅಷ್ಟೇ ಜನಮುಖಿಯಾಗಬೇಕಿತ್ತು. ದಸರಾ ಆರಂಭಕ್ಕೆ ಇನ್ನು ಇರುವುದು ಹತ್ತೇ ದಿನ. ತರಾತುರಿಯಲ್ಲಿ ವೆಬ್‌ಸೈಟ್‌ ಅನ್ನು ಲೋಕಾರ್ಪಣೆಯೇನೋ ಮಾಡಲಾಯಿತು. ಆದರೆ ದಸರಾ ಆಚರಣೆಯ ಧಾರ್ಮಿಕ ಚಟುವಟಿಕೆ ವೇಳಾ ಪಟ್ಟಿ, ಗಜಪಯಣದ ವಿವರಗಳನ್ನು ಹೊರತುಪಡಿಸಿದರೆ ಹೆಚ್ಚಿನ ಮಾಹಿತಿಯೇ ವೆಬ್‌ಸೈಟ್‌ನಲ್ಲಿ ಇಲ್ಲ. ವಿವಿಧ ಇಲಾಖೆಗಳ ಲಿಂಕ್‌ಗಳನ್ನು ನೀಡಲಾಗಿದ್ದು. ಅಲ್ಲಿ ಹೊಕ್ಕರೆ ಆಯಾ ಇಲಾಖೆ ಕಾರ್ಯಚಟುವಟಿಕೆ ವಿವರ ಸಿಗಬಹುದೇ ಹೊರತು ಈ ಬಾರಿ ದಸರಾದಲ್ಲಿ ಏನಿರಲಿದೆ ಎನ್ನುವ ವಿವರವೇ ಇಲ್ಲ. ಇದರಿಂದ ದಸರಾ ನೋಡಬೇಕು ಎನ್ನುವ ಆಸಕ್ತಿಯಿಂದ ದಸರಾ ವೆಬ್‌ಸೈಟ್(https://www.mysoredasara.gov.in) ಕ್ಲಿಕ್‌ ಮಾಡಿದರೆ ನಿರಾಶೆಯಂತೂ ಕಾಡಲಿದೆ.

ಮೈಸೂರು ದಸರಾ ಎನ್ನುವುದು ಬರೀ ಮೈಸೂರು ಉತ್ಸವ ಅಲ್ಲವೇ ಅಲ್ಲ. ಅದು ಚಾಮರಾಜನಗರ, ಮಂಡ್ಯಕ್ಕೆ ವಿಸ್ತರಣೆಯಾಗಿರುವ ಉತ್ಸವವಂತೂ ಅಲ್ಲ. ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲೀ ತನ್ನದೇ ಆದ ಮಹತ್ವ, ಹಿರಿಮೆಯಿದೆ. ದಸರಾ ಹಬ್ಬ ಎಂದರೆ ವಿದೇಶಿಗರೂ ಕೂಡ ಬರುವ ಯೋಜನೆ ಹಾಕಿಕೊಳ್ಳುತ್ತಾರೆ. ನಾನಾ ರಾಜ್ಯಗಳಿಂದ ಅದರಲ್ಲೂ ಉತ್ತರ ಭಾರತದ ರಾಜ್ಯಗಳಿಂದ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ನವರಾತ್ರಿ ಚಟುವಟಿಕೆಗಳಲ್ಲಿ ಭಾಗವಹಿಸಿ ಹೋಗಲು ಬರುತ್ತಾರೆ. ಕರ್ನಾಟಕದ ಜನ ಕೂಡ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲೆಂದೇ ನಾಲ್ಕೈದು ದಿನವಾದರೂ ಬಂದು ಹೋಗುತ್ತಾರೆ. ಸಂಗೀತ ಪ್ರಿಯರು. ಪ್ರವಾಸಿಗರು, ಧಾರ್ಮಿಕ ಹಿನ್ನೆಲೆಯವರು ಆಗಮಿಸುತ್ತಾರೆ. ವ್ಯಾಪಾರ, ವಹಿವಾಟು ಮಾಡಿಕೊಂಡು ದಸರಾ ಆಸ್ವಾದಿಸಲು ಬರುವವರೂ ಇದ್ದಾರೆ. ಎಲ್ಲರೂ ದಸರಾವನ್ನು ತಮ್ಮದೇ ರೀತಿಯಲ್ಲಿ ಆಸ್ವಾದಿಸಲು ಬಯಸುವುದಂತೂ ನಿಜ. ಹೀಗೆ ಬರುವವರಿಗೆ ಮಾಹಿತಿಯೇ ಇಲ್ಲದೇ ಇದ್ದರೆ ದಸರಾ ಎನ್ನುವುದು ಬರೀ ಸ್ಥಳೀಯ ಉತ್ಸವವಾಗಿ ಸೀಮಿತವಾಗುವ ಹಂತವನ್ನೂ ತಲುಪಬಹುದು.

ದಸರಾಗೆ ಬರುವವರಿಗೆ ಮುಖ್ಯವಾಗಿ ವೆಬ್‌ಸೈಟ್‌ ಪ್ರಮುಖ ಕೊಂಡಿ. ಇದರಿಂದಲೇ ಅದೆಷ್ಟೋ ಜನ ದಸರಾ ಯೋಜನೆ ಹಾಕಿಕೊಳ್ಳುತ್ತಾರೆ. ತಿಂಗಳ ಮುಂಚೆಯೇ ಯೋಜಿಸುವವರೂ ಇದ್ದಾರೆ. ಆದರೆ ಈ ಬಾರಿ ವೆಬ್‌ ಸೈಟ್‌ನಲ್ಲಿ ಮಾಹಿತಿಯೇ ಸಿಗದೇ ನಿರಾಶೆಗೊಂಡಿದ್ದಾರೆ.

ಹಿಂದೆಲ್ಲಾ ದಸರಾ ವೆಬ್‌ಸೈಟ್‌ ಅನ್ನು ಮೂರು ತಿಂಗಳ ಮುಂಚೆ ಅಣಿಗೊಳಿಸುವ ಕೆಲಸ ಶುರುವಾಗುತ್ತಿತ್ತು. ಮೈಸೂರಿನ ಮಹತ್ವ, ಆಚರಣೆ, ವಿವಿಧ ಕಾರ್ಯಕ್ರಮಗಳ ವಿವರಗಳನ್ನು ನೀಡಲಾಗುತ್ತಿತ್ತು. ಒಂದು ತಿಂಗಳಿದ್ದಾಗ ಇನ್ನಷ್ಟು ಮಾಹಿತಿ ದೊರೆಯುತ್ತಿತ್ತು. ಈ ಬಾರಿ ವೆಬ್‌ಸೈಟ್‌ ಪ್ರಕಟಿಸಿರುವುದೇ ದಸರಾ ಅರಂಭದ ಹನ್ನೆರಡು ದಿನಗಳ ಮುಂಚೆ. ಅದಕ್ಕೂ ಮೊದಲು ವೆಬ್‌ಸೈಟ್‌ ಬರೀ ಕೌಂಟ್‌ಡೌನ್‌ಗೆ ಸೀಮಿತವಾಗಿತ್ತು.

ಶರಣ ದಸರಾ !

ದಸರವನ್ನು ನವರಾತ್ರಿ, ಶರನ್ನವರಾತ್ರಿ ಎಂದೂ ಕರೆಯಲಾಗುತ್ತದೆ. ಆದರೆ ದಸರಾ ವೆಬ್‌ಸೈಟ್‌ನಲ್ಲಿ ಶರನ್ನವರಾತ್ರಿ ಬದಲು ಶರಣ ನವರಾತ್ರಿ ಎಂದು ಬದಲಾಯಿಸಲಾಗಿದೆ. ಒಮ್ಮೆಲೆ ನೋಡಿದರೆ ದಸರಾ ಯಾವಾಗ ಶರಣ ದಸರಾ ಆಯಿತು ಎಂದೆನಿಸದೇ ಇರದು.

ತರಾತುರಿ ತಯಾರಿ

ಜಾಲತಾಣವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ದಸರಾ ಹಾಗೂ ಮೈಸೂರು ಸುತ್ತಮುತ್ಲಿನ ಪ್ರವಾಸಿ ತಾಣಗಳ ಕುರಿತು ಕಿರುಪರಿಚಯ ಹಾಕಲಾಗಿದೆ. ಗಜಪಡೆಯ ಪರಿಚಯವನ್ನು ಫೋಟೊ ಸಹಿತ ಇದ್ದು ಗಜ ಪಯಣದ ವಿವರಗಳು ಇವೆ. ಇನ್ನು ದಸರಾ ಉಪ ಸಮಿತಿಗಳಲ್ಲಿ ಅಧಿಕಾರಿಗಳ ಮಾಹಿತಿಯಿದೆ. ಯಾವೆಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ ಎಂಬುದರ ಮಾಹಿತಿಯು ಮುಖ್ಯವಾಗಿ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ. ಕಾರ್ಯಕ್ರಮಗಳು ನಡೆಯುವ ಸ್ಥಳಗಳ ಪಟ್ಟಿಯಿದ್ದರೂ, ಫಲಪುಷ್ಪ ಪ್ರದರ್ಶನ ಎಲ್ಲಿದೆ ಎಂಬುದೂ ಸೇರಿದಂತೆ ಹಲವು ವಿವರ ಅಪೂರ್ಣ. ಇಡೀ ವೆಬ್‌ಸೈಟ್‌ ನೋಡಿದರೆ ತರಾತುರಿಯಲ್ಲಿ ರೂಪಿಸಿದಂತೆ ಕಾಣುತ್ತಿದೆ.

ದಸರಾ ಹೇಗಿರಲಿದೆ ಎನ್ನುವುದರ ಪ್ರತಿಬಿಂಬವೇ ವೆಬ್‌ಸೈಟ್‌. ಇಷ್ಟು ಹೊತ್ತಿಗೆ ಪ್ರಮುಖ ಕಲಾವಿದರ ಹೆಸರು ಅಂತಿಮಗೊಳಿಸಿ ಪ್ರಚಾರ ನೀಡಬೇಕಿತ್ತು. ಪ್ರಮುಖ ಊರು, ಸ್ಥಳಗಳಲ್ಲಿ ಪ್ರಚಾರ ಆಗಬೇಕಿತ್ತು. ಅಧಿಕಾರಿಗಳೇ ಉಸ್ತುವಾರಿ ನೋಡಿಕೊಳ್ಳುತ್ತಿದ್ದರೂ ನಿಧಾನ ಏಕೆ ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ ಎಂದು ಮೈಸೂರಿನ ಹೊಟೇಲ್‌ ಉದ್ಯಮ ವಲಯದವರು ಬೇಸರಿಂದಲೇ ಹೇಳಿಕೊಳ್ಳುತ್ತಾರೆ.

mysore-dasara_Entry_Point