Mysore Dasara2024: ಈ ಬಾರಿ ಮೈಸೂರು ದಸರಾದಲ್ಲೂ ವಿಭಿನ್ನ ಚಟುವಟಿಕೆ; ಕೃಷಿಕರಿಗೆ ಜಾಗೃತಿ, ಅರಮನೆ ಎದುರು ಜನಪದ ಕಾರ್ಯಕ್ರಮ
Mysore News ಮೈಸೂರು ದಸರಾಗೆ( Mysore Dasara) ಈಗಾಗಲೇ ಸಿದ್ದತೆ ಶುರುವಾಗಿದ್ದು, ಈ ಬಾರಿ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಜಾಗೃತಿ ಮೂಡಿಸುವ ಚಟುವಟಿಕೆಗಳು ಇರಲಿವೆ.
ಮೈಸೂರು: ಮೈಸೂರು ದಸರಾಕ್ಕೆ( Mysore Dasara) ಸಿದ್ದತೆಗಳು ಗರಿಗೆದರಿವೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದಕ್ಕಾಗಿ ತಯಾರಿಗಳು ಶುರುವಾಗಿದ್ದು. ವೈವಿಧ್ಯಮಯವಾಗಿ ದಸರಾ ಆಚರಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ದಸರಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವದ ನಾಡಹಬ್ಬವಾದರೂ ಲಕ್ಷಾಂತರ ಜನ ಇಲ್ಲಿಗೆ ಬರುವುದರಿಂದ ಜನರಲ್ಲಿ ಕೃಷಿ, ಆಹಾರ, ಸಾಮಾಜಿಕ ಜಾಗೃತಿ ಮೂಡಿಸುವ ಪ್ರಯತ್ನಗಳು ಈ ಬಾರಿ ಕೊಂಚ ಹೆಚ್ಚೇ ನಡೆಯಲಿವೆ. ಈ ಬಾರಿ ಅದ್ದೂರಿ ದಸರಾ ಆಚರಣೆಗೆ ಹೈ ಪವರ್ ಕಮಿಟಿಯಲ್ಲಿ ತೀರ್ಮಾನಿಸಿ ಈ ಸಂಬಂಧ 19 ಉಪಸಮಿತಿಗಳನ್ನು ರಚಿಸಿದ್ದು ಸಮಿತಿಯ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ದಸರಾ ಆಚರಣೆಯನ್ನು ಯಶಸ್ವಿಗೊಳಿಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ದಸರಾ ಕುರಿತು ಸಭೆ ನಡೆಸಿ ಹಲವಾರು ಸೂಚನೆಗಳನ್ನು ನೀಡಿದ್ದಾರೆ.
ಸೂಚನೆಗಳು ಏನೇನು
- ಎಲ್ಲಾ ಸಮಿತಿಯ ಅಧಿಕಾರಿಗಳು ಸೂಕ್ತ ತಯಾರಿ ಮಾಡಿಕೊಂಡು ಅಚ್ಚುಕಟ್ಟಾಗಿ ದಸರಾ ಆಚರಣೆ ಮಾಡಬೇಕು. ಸ್ತಬ್ಧ ಚಿತ್ರಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತೆ ಇರಬೇಕು.
- ಜನರಿಗೆ ಸಾಮಾಜಿಕ ಸಂದೇಶ ಸಾರುವಂತೆ ಇರಬೇಕು. ಸಂವಿಧಾನದ ಸಂದೇಶ, ಪೂರ್ವ ಪೀಠಿಕೆಯ ಮಹತ್ವವನ್ನು ತಿಳಿಸುವ ಸ್ಥಬ್ದ ಚಿತ್ರ ತಯಾರಿಕೆಗೆ ಮಾಡಬೇಕು
ಇದನ್ನೂ ಓದಿರಿ: Mysore Dasara 2024: ಮೈಸೂರು ದಸರಾ ಗಜಪಯಣಕ್ಕೆ ಇಂದು ಚಾಲನೆ, ಕಾಡಿನಿಂದ ನಾಡಿಗೆ ಹೆಜ್ಜೆ ಹಾಕಲಿವೆ ಜಂಬೂ ಸವಾರಿ ತಂಡದ ಆನೆಗಳು
- ದಸರಾ ಚಲನಚಿತ್ರೋತ್ಸವದಲ್ಲಿ ಸಾಮಾಜಿಕ ಕಳಕಳಿಯುಳ್ಳ ಕಲಾತ್ಮಕ ಚಿತ್ರಗಳ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು
- ರೈತರು ದೇಶದ ಬೆನ್ನೆಲುಬು. ರೈತ ದಸರಾದಲ್ಲಿ ರೈತರಿಗೆ ಅನುಕೂಲವಾಗುವ ಕೃಷಿ ಸಾಧನ ಸಲಕರಣೆಗಳ ಪ್ರದರ್ಶನ ಏರ್ಪಡಿಸಬೇಕು. ಸಬ್ಸಿಡಿ ದರದಲ್ಲಿ ದೊರೆಯುವ ಆದುನಿಕ ಕೃಷಿ ಸಲಕರಣೆಗಳ ಬಗ್ಗೆ ಮಾಹಿತಿ ಒದಗಿಸಬೇಕು. ಶುಂಠಿ ಬೆಳೆಯನ್ನು ಬೆಳೆಯಲು ರೈತರು ಭೂಮಿಯನ್ನು ಗುತ್ತಿಗೆಗೆ ನೀಡುತ್ತಿದ್ದು, ಶುಂಠಿ ಬೆಳೆಯನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕಡಿಮೆ ಆಗಿ ಮುಂದಿನ ಒಂದೆರಡು ವರ್ಷ ಉತ್ತಮ ಬೆಳೆ ಬರುವುದಿಲ್ಲ. ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು
- ದಸರಾ ಕ್ರೀಡಾಕೂಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸುತ್ತಾರೆ. ಇವರಿಗೆ ಉತ್ತಮ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಬೇಕು.
- ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಬೇಕು. ಜನಪದ ಕಲೆಗಳನ್ನು ಪ್ರದರ್ಶನ ಮಾಡಬೇಕು.
ಇದನ್ನೂ ಓದಿರಿ: ಮೈಸೂರು ದಸರಾಕ್ಕೆ 40 ಕೋಟಿ ರೂ ತನಕ ಅನುದಾನ, ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ 10 ಮುಖ್ಯ ನಿರ್ಧಾರಗಳು
- ಕಲಾವಿದರಿಗೆ ಪಾರದರ್ಶಕವಾಗಿ ಅವಕಾಶ ಕಲ್ಪಿಸಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು
- ಮಕ್ಕಳಿಗೆ ಚಿತ್ರ ಕಲಾ ಸ್ಪರ್ಧೆಗಳನ್ನು ಆಯೋಜನೆ ಮಾಡಬೇಕು. ಕರಕುಶಲ ವಸ್ತುಗಳ ಸ್ಪರ್ಧೆಯನ್ನು ಏರ್ಪಡಿಸಬೇಕು.
- ಕವಿಗೋಷ್ಠಿಯನ್ನು ವಿಶಿಷ್ಟ ರೀತಿಯಲ್ಲಿ ಆಯೋಜನೆ ಮಾಡಿ ಯುವ ಕವಿಗಳಿಗೆ ಆದ್ಯತೆ ನೀಡಬೇಕು.
- ಯೋಗ ದಸರಾದಲ್ಲಿ ಆರೋಗ್ಯಯುತ ಜೀವನಕ್ಕಾಗಿ ಯೋಗ ಎಂಬ ಅರಿವನ್ನು ಮೂಡಿಸುವ ಹಾಗೆ ಇರಬೇಕು.
- ಆಹಾರ ಮೇಳದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಆರೋಗ್ಯಕರ ಗುಣಮಟ್ಟದ ತಿಂಡಿ ತಿನಿಸುಗಳ ಮಾರಾಟವಾಗಬೇಕು.
- ಮೈಸೂರು ನಗರದ ರಸ್ತೆಗಳ ಗುಂಡಿಗಳ ಮುಚ್ಚುವ ಕಾರ್ಯವನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕು.
ಇದನ್ನೂ ಓದಿರಿ: Mysore Dasara 2024: ಈ ಬಾರಿ ವಿಜೃಂಭಣೆಯ ಮೈಸೂರು ದಸರಾಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ; ದಸರಾ ಉದ್ಘಾಟಕರು ಯಾರು? 21 ದಿನ ದೀಪಾಲಂಕಾರ
ಈ ಸಂದರ್ಭದಲ್ಲಿ ವಿವಿಧ ಉಪಸಮಿತಿಗಳ ಉಪ ವಿಶೇಷಾಧಿಕಾರಿಗಳು ತಾವು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಎಂ ಗಾಯತ್ರಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು, ಉಪಸಮಿತಿಗಳ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.