ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರವೇಶ ದುಬಾರಿ, ಅಕ್ಟೋಬರ್ 3 ರಂದೇ ಆರಂಭ; ಈ ಬಾರಿ ಪ್ಲಾಸ್ಟಿಕ್ ಮುಕ್ತ ವಸ್ತು ಪ್ರದರ್ಶನ
ಮೈಸೂರು ದಸರಾ ವಸ್ತು ಪ್ರದರ್ಶನ 2024ಕ್ಕೆ ಸಿದ್ದತೆಗಳು ನಡೆದಿದ್ದು, ಬಾರಿ ಪ್ರವೇಶ ದರವನ್ನು ಏರಿಕೆ ಮಾಡಲಾಗಿದೆ. ಉಳಿದಂತೆ ವೈವಿಧ್ಯಮಯ ಚಟುವಟಿಕೆಗಳು ಮೂರು ತಿಂಗಳ ಕಾಲ ಇರಲಿವೆ.
ಮೈಸೂರು: ಮೈಸೂರಿನ ಪ್ರಮುಖ ಆಕರ್ಷಣೆಯೊಂದಾದ ದಸರಾ ವಸ್ತು ಪ್ರದರ್ಶನ ಈ ಬಾರಿ ಪ್ರವೇಶ ಕೊಂಚ ದುಬಾರಿ. ಪ್ರವೇಶದರವನ್ನು 35 ರೂ.ಗೆ ಏರಿಕೆ ಮಾಡಲಾಗಿದೆ. ಮಕ್ಕಳ ಪ್ರವೇಶಕ್ಕೆ 20 ರೂ.ಗಳನ್ನು ಪಾವತಿ ಮಾಡಬೇಕು. ಕೆಲವು ವರ್ಷಗಳ ನಂತರ ವಸ್ತು ಪ್ರದರ್ಶನದ ದರದಲ್ಲಿ ಏರಿಕೆ ಮಾಡಲಾಗಿದೆ. ಹಲವಾರು ವರ್ಷಗಳಿಂದ 30 ರೂ.ಗಳಿತ್ತು.ಈ ಬಾರಿಯ ದಸರಾದ ಮೊದಲ ದಿನವೇ ವಸ್ತು ಪ್ರದರ್ಶನವೂ ಆರಂಭವಾಗಲಿದೆ. ಇದಕ್ಕಾಗಿ ಬಹುತೇಕ ಸಿದ್ದತೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಪ್ಲಾಸ್ಟಿಕ್ ಮುಕ್ತ ವಸ್ತು ಪ್ರದರ್ಶನ ರೂಪಿಸುವ ನಿಟ್ಟಿನಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರವು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ.
. ಪ್ರತಿಬಾರಿಯಂತೆ ಈ ಬಾರಿಯೂ ಮಕ್ಕಳಿಗೆ ಪ್ರವೇಶ ದರ 20 ರೂ. ಗಳಿದ್ದು, ವಯಸ್ಕರು ಹಾಗೂ ಇನ್ನಿತರರಿಗೆ 5 ರೂ. ಗಳನ್ನು ಹೆಚ್ಚಿಸಿ 35 ರೂ. ಟಿಕೆಟ್ ದರವನ್ನು ನಿಗಧಿ ಮಾಡಲಾಗಿದೆ. 2024ರ ಅಕ್ಟೋಬರ್ 03 ರಂದು ಸಂಜೆ 8 ಗಂಟೆಗೆ ದಸರಾ ವಸ್ತು ಪ್ರದರ್ಶನ ಕಾರ್ಯಕ್ರಮವು ಉದ್ಘಾನೆಗೊಳ್ಳಲಿದ್ದು, ಅಂದೇ ಸರ್ಕಾರದ ವಿವಿಧ ಇಲಾಖೆಗಳ 30 ಸ್ಟಾಲ್ ಹಾಗೂ 153 ಖಾಸಗಿ ಸ್ಟಾಲ್ ಗಳು ಉದ್ಘಾಟನೆಯಾಗಲಿವೆ ಎನ್ನುವುದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ವಿವರಣೆ.
ಕಳೆದ ವರ್ಷಗಳಿಗಿಂತ ಈ ಬಾರಿಯ ದಸರಾ ವಸ್ತು ಪ್ರದರ್ಶನ ವಿಶೇಷವಾಗಿರಲಿದ್ದು, 90 ದಿನ ನಡೆಯುವ ಕಾರ್ಯಕ್ರಮದಲ್ಲಿ ಉತ್ಪನ್ನಗಳ ವೀಕ್ಷಣೆ ಮತ್ತು ಮಾರಾಟದ ಜೊತೆಗೆ ಅವುಗಳ ತಯಾರಿಕೆಯ ಪ್ರಕ್ರಿಯೆಯನ್ನು ಸಾರ್ವಜನಿಕರು ಕಾಣಬಹುದಾಗಿದೆ. ವಸ್ತು ಪ್ರದರ್ಶನಕ್ಕೆ ಬಂದಂತಹ ಮಕ್ಕಳಿಗೆ ಮನರಂಜನೆಯನ್ನು ನೀಡಲು ಇಂಟರಕ್ಟಿವ್ ಪಾರ್ಕ್ ಹಾಗೂ 3ಡಿ ತಂತ್ರಜ್ಞಾನವನ್ನು ಒಳಗೊಂಡಿರುವ ವರ್ಚುವಲ್ ಪಾರ್ಕ್ ಗಳನ್ನು ನಿರ್ಮಿಸಲಾಗಿದೆ.
ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸುಮಾರು 10 ರಿಂದ 15 ಸ್ಥಳಗಳಲ್ಲಿ ಏರ್ಪೋರ್ಟ್ ಮಾದರಿಯ ವಾಟರ್ ಕೌಂಟಿಂಗ್ ಪ್ಲಾಂಟ್ ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೆ ವಸ್ತು ಪ್ರದರ್ಶನವು 90 ದಿನಗಳ ಕಾಲ ನಡೆಯಲಿದ್ದು, ಪ್ರತಿ ಭಾನುವಾರ ಚಲನಚಿತ್ರ ಕಲಾವಿದರಿಂದ ಮನರಂಜನಾತ್ಮಕ ಕಾರ್ಯಕ್ರಮಗಳು ಹಾಗೂ ಪ್ರತಿ ಶನಿವಾರ ಯುವ ಸಂಭ್ರಮದಲ್ಲಿ ಪ್ರದರ್ಶನ ನೀಡಿದ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಅತಿ ಹೆಚ್ಚು ಸ್ಥಳೀಯ ಪ್ರವಾಸಿಗರು, ಹೊರ ರಾಜ್ಯದ ಪ್ರವಾಸಿಗರು ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು, ಈ ಬಾರಿ ವಸ್ತು ಪ್ರದರ್ಶನದಲ್ಲಿ ದೀಪಾಲಂಕಾರವನ್ನು ಹೆಚ್ಚಿಸಲಾಗಿದ್ದು, ಪ್ರತೀಕಾರದ ಮುಖ್ಯದ್ವಾರ ಮುಂಬಾಗ ಹಾಗೂ ಪ್ರಾಧಿಕಾರದ ಪ್ರಮುಖ ರಸ್ತೆಗಳಲ್ಲಿ ಮತ್ತು ಪ್ರಾಧಿಕಾರದ ವೃತ್ತಗಳಿಗೆ ವಿಶೇಷ ಮಾದರಿಯ ವಿದ್ಯುತ್ ದೀಪ ಬಣ್ಣದ ದೀಪಾಲಂಕಾರಗಳನ್ನು ಮಾಡಲಾಗಿದೆ.
80 ಎಕ್ಕರೆ ವಿಸ್ತೀರ್ಣದಲ್ಲಿ ನಡೆಯುವ ವಸ್ತು ಪ್ರದರ್ಶನ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಆವರಣದೊಳಗೆ ವಿವಿಧ ಸ್ಥಳಗಳಿಗೆ ಸಂಚರಿಸಲು ಅನುಕೂಲವಾಗಲು ರಿಯಾಯಿತಿ ದರದಲ್ಲಿ 03 ಎಲೆಕ್ಟ್ರಾನಿಕ್ ಏಕೋ ವಾಹನಗಳ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಸಾ
ದಸರಾ ವಸ್ತು ಪ್ರದರ್ಶನದಲ್ಲಿ ಸಾರ್ವಜನಿಕರನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಗುಲಾಬಿ ಹೂಗಳಿಂದ ಸೆಲ್ಫಿ ಪಾಯಿಂಟನ್ನು ನಿರ್ಮಿಸಲಾಗಿದೆ. ಅಲ್ಲದೆ ವಸ್ತು ಪ್ರದರ್ಶನದ ಪಾರ್ಕ್ ಗಳಲ್ಲಿ ಹೂಗಳಿಂದ ವಿವಿಧ ಆಕಾರದ ಹೂಗುಚ್ಛಗಳನ್ನು ಸ್ಥಾಪನೆ ಮಾಡಲಾಗಿದ್ದು, ಇದು ಬಂದಂತಹ ಪ್ರವಾಸಿಗರು ಮತ್ತು ಮಕ್ಕಳಿಗೆ ವಿಶೇಷ ಅನುಭವವನ್ನು ನೀಡಲಿದೆ.
ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಬಾರಿಯ ವಸ್ತು ಪ್ರದರ್ಶನವನ್ನು ಪ್ಲಾಸ್ಟಿಕ್ ಮುಕ್ತವಾಗಿ ಆಯೋಜಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು, ಇದಕ್ಕೆ ಸಾರ್ವಜನಿಕರು ಸ್ಪಂದಿಸಬೇಕು.ವಸ್ತು ಪ್ರದರ್ಶನವನ್ನು ವೀಕ್ಷಿಸಲು ಹಾಗೂ ಉತ್ಪನ್ನಗಳನ್ನು ಕೊಂದುಕೊಳ್ಳಲು ಬರುವ ಸಾರ್ವಜನಿಕರು ಪ್ಲಾಸ್ಟಿಕ್ ಬ್ಯಾಗ್ ಗಳ ಬದಲಾಗಿ ಬಟ್ಟೆ ಚೀಲಗಳನ್ನು ತಂದು ಪ್ಲಾಸ್ಟಿಕ್ ಮುಕ್ತ ವಸ್ತು ಪ್ರದರ್ಶನಕ್ಕೆ ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ವಸ್ತು ಪ್ರದರ್ಶನದ ಪ್ರಾಧಿಕಾರದ ಮುಂಭಾಗದಲ್ಲಿಯೇ ಸಾರ್ವಜನಿಕರಿಗೆ ಉಚಿತ ಬಟ್ಟೆ ಚೀಲಗಳನ್ನು ವಿತರಿಸಲಾಗುತ್ತದೆ. ಅವಶ್ಯಕತೆ ಇರುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ವಸ್ತು ಪ್ರದರ್ಶನದಲ್ಲಿ ಸ್ಥಾಪಿಸಲಾಗುವ ಸ್ಟಾಲ್ ಗಳು ಮತ್ತು ಹೋಟೆಲ್ ಗಳ ಮಾಲೀಕರಿಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ ಎನ್ನುತ್ತಾರೆ ಅಯೂಬ್ ಖಾನ್.