Mysore Dasara 2024: ನೀವು ಮೈಸೂರು ದಸರಾದಲ್ಲಿ ಹೇಗೆ ಭಾಗಿಯಾಗಬಹುದು, ಭಾರೀ ಆದಾಯವನ್ನೂ ಗಳಿಸಬಹುದು; ಇಲ್ಲಿದೆ 10 ಅತ್ಯುತ್ತಮ ಅವಕಾಶಗಳು-mysore news mysore dasara is not an event its plenty of opportunities for getting income 10 ways to get in big event kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mysore Dasara 2024: ನೀವು ಮೈಸೂರು ದಸರಾದಲ್ಲಿ ಹೇಗೆ ಭಾಗಿಯಾಗಬಹುದು, ಭಾರೀ ಆದಾಯವನ್ನೂ ಗಳಿಸಬಹುದು; ಇಲ್ಲಿದೆ 10 ಅತ್ಯುತ್ತಮ ಅವಕಾಶಗಳು

Mysore Dasara 2024: ನೀವು ಮೈಸೂರು ದಸರಾದಲ್ಲಿ ಹೇಗೆ ಭಾಗಿಯಾಗಬಹುದು, ಭಾರೀ ಆದಾಯವನ್ನೂ ಗಳಿಸಬಹುದು; ಇಲ್ಲಿದೆ 10 ಅತ್ಯುತ್ತಮ ಅವಕಾಶಗಳು

Mysore Dasara 2024: ಮೈಸೂರು ದಸರಾದಲ್ಲಿ ನಿಮಗೆ ಹಲವು ಬಗೆಯಲ್ಲಿ ಭಾಗಿಯಾಗಲು ಅವಕಾಶಗಳಿವೆ. ವ್ಯಾಪಾರಿಯಾಗಿ, ಕಲಾವಿದರಾಗಿ, ಕ್ರೀಡಾಪಟುವಾಗಿ, ಸ್ಪರ್ಧಿಯಾಗಿ ಭಾಗಿಯಾಗಬಹುದು. ಆದಾಯವನ್ನೂ ಗಳಿಸಬಹುದು.

ಮೈಸೂರು ದಸರಾದಲ್ಲಿ ನೀವು ಭಾಗಿಯಾಗಬಹುದು. ಇದಕ್ಕಿವೆ ಅವಕಾಶಗಳು ಅನೇಕ.
ಮೈಸೂರು ದಸರಾದಲ್ಲಿ ನೀವು ಭಾಗಿಯಾಗಬಹುದು. ಇದಕ್ಕಿವೆ ಅವಕಾಶಗಳು ಅನೇಕ.

ಮೈಸೂರು ದಸರಾ ಎಂದರ ಅದು ಇತಿಹಾಸ, ಸಾಂಸ್ಕೃತಿಕ ಕಲೆಗಳ ಸಂಗಮ ಮಾತ್ರವಲ್ಲ. ಹಲವು ಅವಕಾಶಗಳ ಆಗರ. ಕಲಾವಿದರು, ನಾನಾ ಕ್ಷೇತ್ರಗಳಲ್ಲಿ ಆಸಕ್ತಿ ಇರುವವರು ಭಾಗವಹಿಸಬಹುದಾದ ವಿಶಿಷ್ಟ ಉತ್ಸವ. ಇಲ್ಲಿ ನೀವು ವೀಕ್ಷಕರಾಗಿ ಭಾಗಿಯಾಗಬಹುದು. ಕಲಾವಿದರಾಗಿ ಹಲವು ಅವಕಾಶಗಳನ್ನು ಪಡೆಯಬಹುದು. ರಂಗಭೂಮಿ, ಜನಪದ ಕಲೆಗಳಲ್ಲಿ ಆಸಕ್ತಿ ಇದ್ದರೆ ಅದಕ್ಕೂ ಅವಕಾಶವಿದೆ. ದಸರಾದ ಹಲವಾರು ಚಟುವಟಿಕೆಗಳಲ್ಲಿ ವಿಶೇಷವಾಗಿ ಆಹಾರ ಮೇಳದಲ್ಲಿ ತಮ್ಮ ಅಡುಗೆ ಕೈ ಚಳಕ ತೋರಿಸಬಹುದು. ವಿವಿಧ ಸಮಿತಿಗಳು ಆಯೋಜಿಸುವ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶವಿದೆ. ಕ್ರೀಡೆಗಳಲ್ಲಿ ಆಸಕ್ತಿ ಇದ್ದವರಿಗೂ ಹಲವಾರು ಚಟುವಟಿಕೆಗಳು ಉಂಟು. ನೀವು ವ್ಯಾಪಾರಸ್ಥರು, ಉದ್ಯಮಿದಾರರಾಗಿದ್ದರೆ ಹಲವಾರು ಟೆಂಡರ್‌ಗಳನ್ನೂ ತೆಗೆದುಕೊಂಡು ಆದಾಯ ಗಳಿಸಿಕೊಳ್ಳಲು ಅವಕಾಶವಿದೆ.

ನೀವು ಹೀಗೆ ಭಾಗಿಯಾಗಿ

  1. ಬ್ಯುಸಿನೆಸ್‌

ದಸರಾ ಎಂದರೆ ಈಗ ಮೊದಲಿನಂತೆ ಇಲ್ಲ. ಈಗ ಕೋಟಿ ಕೋಟಿಗಟ್ಟಲೇ ಹಣ ದಸರಾಕ್ಕಾಗಿ ಹರಿದು ಬರುತ್ತದೆ. ಸರ್ಕಾರವೇ 40 ಕೋಟಿ ರೂ.ವರೆಗೂ ವೆಚ್ಚ ಮಾಡಲಿದೆ. ಇನ್ನು ಖಾಸಗಿ ಪ್ರಾಯೋಜಕತ್ವ, ಒಟ್ಟಾರೆ ದಸರಾದ ವಹಿವಾಟು ಹೀಗೆ ಹತ್ತು ಹಲವು ರೂಪದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬಹುದು. ರಸ್ತೆ ಗುಂಡಿ ಮುಚ್ಚುವ ಟೆಂಡರ್‌ ನಿಂದ ಹಿಡಿದು ಹತ್ತಾರು ಕಡೆಗಳಲ್ಲಿ ವೇದಿಕೆ ಒದಗಿಸುವ ಟೆಂಡರ್‌ಗಳು ಸಿಗಲಿವೆ. ಮಳಿಗೆಗಳನ್ನು ಹಾಕಿಕೊಡುವ, ಹಲವಾರು ಕಡೆಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಿ ನಿಮ್ಮ ಉತ್ಪನ್ನ ಮಾರಾಟ ಮಾಡುವ ಅವಕಾಶವಂತೂ ಹತ್ತಾರು ಕಡೆ ಇದೆ. ಕ್ರಿಯಾತ್ಮಕ ಯೋಜನೆಗಳೊಂದಿಗೆ ಮೈಸೂರು ಜಿಲ್ಲಾಡಳಿತವನ್ನು ಸಂಪರ್ಕಿಸಿದರೆ ಹೊಸ ಅವಕಾಶಗಳೂ ಸಿಗಬಹುದು. ಅದರಲ್ಲೂ ಯುವ ಸಮುದಾಯಕ್ಕೆ ದಸರಾದಲ್ಲಿ ತಮ್ಮ ಪ್ರತಿಭೆ ತೋರಲು ವಿಪುಲ ಅವಕಾಶಗಳುಂಟು.

2. ಈವೆಂಟ್‌ ಮ್ಯಾನೆಜ್‌ ಮೆಂಟ್‌

ದಸರಾ ಎನ್ನುವುದು ಹತ್ತಾರು ಚಟುವಟಿಕೆಗಳ ಸಂಗಮ. ಇಲ್ಲಿ ವಿವಿಧ ಈವೆಂಟ್‌ಗಳ ನಿರ್ವಹಣೆಗೂ ಅವಕಾಶವಿದೆ. ಯುವ ಸಂಭ್ರಮ. ಯುವ ದಸರಾ, ವಿವಿಧ ಸಮಿತಿಗಳು ಆಯೋಜಿಸುವ ಚಟುವಟಿಕೆಗಳನ್ನು ನಡೆಸಿಕೊಡಲು ಅವಕಾಶವಿದೆ. ಇದಕ್ಕಾಗಿ ಸಮಿತಿಗಳು ಈವೆಂಟ್‌ ಮ್ಯಾನೆಜ್‌ಮೆಂಟ್‌ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸುವುದೂ ಇದೆ. ಅದೇ ರೀತಿ ಜಂಬೂ ಸವಾರಿಯ ಕೆಲವು ಈವೆಂಟ್‌ಗಳಲ್ಲೂ ನಿಮಗೆ ಅವಕಾಶ ಸಿಗಬಹುದು. ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮವು ಆಯೋಜಿಸುವ ದೀಪಾಲಂಕಾರದಲ್ಲೂ ಕ್ರಿಯಾಶೀಲವಾಗಿ ಭಾಗಿಯಾಗುವ ಅವಕಾಶಗಳು ಇರಬಹುದು. ಮೈಸೂರು ದಸರಾ ವಸ್ತು ಪ್ರದರ್ಶನದಲ್ಲೂ ಸಾಕಷ್ಟು ಅವಕಾಶಗಳಿವೆ. ಇದು ಕೂಡ ಉತ್ತಮ ಆದಾಯವನ್ನೂ ತರಬಲ್ಲದು

3. ಕಲಾವಿದ

ನೀವು ಮುಖ್ಯವಾಗಿ ಕಲಾವಿದರಾಗಿದ್ದರೆ, ಕಲೆಗಳಲ್ಲಿ ಆಸಕ್ತಿ ಇದ್ದರೆ ಭಾಗಿಯಾಗಲು ಅವಕಾಶವಿದೆ. ಅರಮನೆಯೂ ಸೇರಿದಂತೆ ಎಂಟಕ್ಕೂ ಹೆಚ್ಚು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಬಹುದು. ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ನೃತ್ಯ ಪ್ರದರ್ಶನ, ರಂಗಭೂಮಿ ಚಟುವಟಿಕೆ, ಚಿತ್ರಕಲಾ ಪ್ರದರ್ಶನದಲ್ಲಿ ಪಾಲ್ಗೊಳ್ಳಬಹುದು. ಜನಪದ ಕಲಾವಿದರಾಗಿದ್ದರೆ ಅವರಿಗೂ ವೇದಿಕೆ ಕಾರ್ಯಕ್ರಮ, ದಸರಾ ಜಂಬೂ ಸವಾರಿ ಮೆರವಣಿಗೆ, ನಾನಾ ಚಟುವಟಿಕೆಗಳು ನಡೆಯುವ ವೇದಿಕೆಯಲ್ಲಿ ಅವಕಾಶವಿದೆ. ಕಾಲೇಜು ವಿದ್ಯಾರ್ಥಿಗಳೂ ಕೂಡ ಯುವಸಂಭ್ರಮದಲ್ಲಿ ಭಾಗಿ ನಿಮ್ಮ ಕಲಾಪ್ರದರ್ಶನ ನೀಡಬಹುದು. ದಸರಾದಲ್ಲಿ ಭಾಗಿಯಾಗುವ ಕಲಾವಿದರಿಗೆ ಉತ್ತಮ ಸಂಭಾವನೆಯೂ ಇದೆ.

4.ಕ್ರೀಡಾಪಟು

ದಸರಾ ಕ್ರೀಡಾ ಕೂಟವೂ ಪ್ರಮುಖವಾದದ್ದು. ಇಲ್ಲಿ ನಾನಾ ಹಂತದಲ್ಲಿ ಕ್ರೀಡೆಗಳು ನಡೆಯಲಿವೆ. ದಸರಾ ಕ್ರೀಡಾಕೂಟ ಎಂದೇ ಇದನ್ನು ಕರೆಯಲಾಗುತ್ತದೆ. ಆಟ, ಓಟ ಎಲ್ಲದಕ್ಕೂ ಅವಕಾಶವುಂಟು. ಅದೇ ರೀತಿ ವಿವಿಧ ವೇದಿಕೆಗಳು ಕೂಡ ಓಟದ, ದೋಣಿ ಹಾಯಿಸುವ ಸ್ಪರ್ಧೆಗಳನ್ನು ಆಯೋಜಿಸಲಿದೆ. ಅಲ್ಲಿಯೂ ಭಾಗಿಯಾಗಬಹುದು. ದಸರಾ ಕ್ರೀಡೆಯೆಂದರೆ ಕುಸ್ತಿ. ಇಲ್ಲಿ ಸ್ಥಳೀಯ ಹಾಗೂ ಟೈಟಲ್‌ ಕುಸ್ತಿಗಳು ನಡೆಯಲಿವೆ. ನೀವು ಕುಸ್ತಿಪಟುವಾಗಿದ್ದರೆ ಚನ್ನಯ್ಯ ಅಖಾಡದಲ್ಲಿ ನಡೆಯವ ಕುಸ್ತಿಗಳಲ್ಲಿ ಪಾಲ್ಗೊಳ್ಳಬಹುದು.

5.ಮಹಿಳಾ ಸ್ಪರ್ಧೆಗಳು

ದಸರಾದಲ್ಲಿ ಮಹಿಳೆಯರಿಗೆ ಹಲವಾರು ಚಟುವಟಿಕೆಗಳು ಇರಲಿವೆ. ವಿವಿಧ ಸಮಿತಿಗಳು ರಂಗೋಲಿ ಸ್ಪರ್ಧೆ, ಗಾಯನ ಸ್ಪರ್ಧೆಯನ್ನು ಆಯೋಜಿಸಲಿವೆ. ಮಹಿಳಾ ವೇದಿಕೆಯಲ್ಲಿ ಕಲಾವಂತಿಕೆ ಪ್ರದರ್ಶಿಸುವ ಅವಕಾಶವೂ ಇದೆ. ನೀವು ತರಕಾರಿ, ಹಣ್ಣುಗಳನ್ನು ಕಲಾ ರೂಪಕ್ಕೆ ತರುವ ಚಾಕಚಕ್ಯತೆ ಹೊಂದಿದ್ದರೆ ದಸರಾ ಫಲಪುಷ್ಪ ಪ್ರದರ್ಶನದಲ್ಲೂ ಭಾಗಿಯಾಗಬಹುದು. ಮಹಿಳಾ ಸಮಿತಿಯಿಂದ ಆಟೋಟಗಳೂ ಇರಲಿವೆ.

6.ಮಕ್ಕಳ ಸ್ಪರ್ಧೆಗಳು

ಮಕ್ಕಳೂ ದಸರಾದಲ್ಲಿ ಭಾಗಿಯಾಗಲು ಅವಕಾಶವಿದೆ. ದಸರಾ ಮಕ್ಕಳ ಸಮಿತಿಯವರು ಮೂರು ದಿನಗಳ ಕಲಾ ಮಕ್ಕಳಿಗೆ ನಾನಾ ವೇದಿಕೆ ಕಲ್ಪಿಸಲಿದ್ದಾರೆ. ಇಲ್ಲಿ ಮಕ್ಕಳು ಹಾಡುವ, ನೃತ್ಯ ಮಾಡುವ ಅವಕಾಶವಿದೆ. ಚಿತ್ರ ಬಿಡಿಸುವ ಸ್ಪರ್ಧೆಗಳಲ್ಲೂ ಪಾಲ್ಗೊಳ್ಳಬಹುದು. ವೇಷಭೂಷಣ ಸ್ಪರ್ಧೆಗಳಿಗೂ ಮಕ್ಕಳನ್ನು ಕರೆ ತರಬಹುದು.

7.ಆನೆಗಳಿಗೆ ಕಲೆ

ನೀವು ಕಲಾವಿದರಾಗಿದ್ದರೆ ಇನ್ನೊಂದು ವಿಶೇಷ ಅವಕಾಶವಿದೆ. ದಸರಾದ ಕೇಂದ್ರಬಿಂದುಗಳಾದ ಆನೆಗಳನ್ನು ಅಲಂಕರಿಸುವುದು. ಆನೆಗಳಿಗೆ ಜಂಬೂ ಸವಾರಿ ದಿನ ವಿಶೇಷ ಅಲಂಕಾರ ಮಾಡಲಾಗುತ್ತದೆ. ಅವುಗಳನ್ನು ಅಣಿಗೊಳಿಸುವ ಚಟುವಟಿಕೆಯಲ್ಲಿ ಭಾಗಿಯಾಗಬಹುದು. ಅರಣ್ಯ ಇಲಾಖೆಯಿಂದ ಮೊದಲೇ ಅನುಮತಿ ಪಡೆದಿರಬೇಕು. ಸೂಕ್ತ ಗೌರವಧನವೂ ಇದಕ್ಕಾಗಿ ಸಿಗಲಿದೆ.

8.ದಸರಾ ಬೊಂಬೆ

ಮೈಸೂರು ಎಂದರೆ ದಸರಾ ಬೊಂಬೆಯೂ ಇಲ್ಲಿನ ವಿಶೇಷ. ಮೈಸೂರಿನ ಬಹುತೇಕ ಮನೆಗಳಲ್ಲಿ ಹಾಗೂ ಇತರೆಡೆಯೂ ದಸರಾ ವೇಳೆ ನವರಾತ್ರಿ ಪಟ್ಟದ ಬೊಂಬೆಗಳು ಹಾಗೂ ಇತರೆ ಅಲಂಕಾರ ಮಾಡಲಾಗುತ್ತದೆ. ದಸರಾ ಹಿನ್ನೆಲೆಯಲ್ಲಿ ಹಲವಾರು ಸಂಘಟನೆಗಳು, ಸಂಸ್ಥೆಗಳು ಬೊಂಬೆ ಸ್ಪರ್ಧೆ ಆಯೋಜಿಸುತ್ತಾರೆ. ನಿಮ್ಮ ಮನೆಯಲ್ಲಿ ಸಿದ್ದಪಡಿಸಿದ ಬೊಂಬೆಗಳ ವೀಡಿಯೋ ಹಾಗೂ ಫೋಟೋಗಳನ್ನು ಸ್ಪರ್ಧೆಗೆ ಕಳುಹಿಸಬಹುದು. ಸೆಲೆಬ್ರಿಟಿಗಳೇ ನಿಮ್ಮ ಮನೆಗೆ ಬಂದು ಬೊಂಬೆ ವೀಕ್ಷಿಸಿ ಬಹುಮಾನವನ್ನೂ ನೀಡುತ್ತಾರೆ.

9. ಅಡುಗೆ ತಯಾರಿ

ಮಹಿಳೆಯರ ಆಸಕ್ತಿಗೆ ಅನುಗುಣವಾಗಿ ಆಹಾರ ತಯಾರಿಕೆಯ ಹಾಗೂ ಆಹಾರ ಸೇವಿಸುವ ನಾನಾ ಸ್ಪರ್ಧೆಗಳು ನಡೆಯಲಿವೆ. ಆಹಾರ ಮೇಳದಲ್ಲಿ ನಿತ್ಯ ಸ್ಪರ್ಧೆಗಳು ನಡೆಯಲಿವೆ. ಇಲ್ಲಿ ಭಾಗಿಯಾಗಿ ನೀವು ಸಸ್ಯಹಾರ ಹಾಗೂ ಮಾಂಸಾಹಾರದ ಅಡುಗೆಗಳನ್ನು ತಯಾರಿಸಿ ಬಹುಮಾನ ಗೆಲ್ಲಬಹುದು. ಅದೇ ರೀತಿ ಮಹಿಳಾ ದಸರಾ ಸಮಿತಿಯೂ ಒಂದು ದಿನ ಅಡುಗೆ ಸ್ಪರ್ಧೆಗಳನ್ನು ಆಯೋಜಿಸಲಿದೆ. ದಸರಾ ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನದಲ್ಲೂ ಸ್ಪರ್ಧೆಗಳು ಇರಲಿವೆ. ಇಲ್ಲಿಯೂ ಭಾಗಿಯಾಗಬಹುದು

10.ಸಾಮಾನ್ಯ ವೀಕ್ಷಕ

ಇನ್ನು ದಸರಾದಲ್ಲಿ ನೀವು ಸಾಮಾನ್ಯ ವೀಕ್ಷಕಕರಾಗಿ ಭಾಗಿಯಾಗಬಹುದು. ದಸರಾ ನಡೆಯುವ ಹತ್ತು ದಿನಗಳ ಕಾಲ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಬರೋಬ್ಬರಿ ಹದಿನಾರು ತಾಸು ದಸರಾದ ಚಟುವಟಿಕೆಗಳು ನಿತ್ಯ ಇರಲಿವೆ. ನಿಮ್ಮ ಆಸಕ್ತಿಗೆ ಅನುಗುಣವಾಗಿ ಕಾರ್ಯಕ್ರಮ ಆಯ್ದುಕೊಂಡು ವೀಕ್ಷಿಸಬಹುದು. ಅಷ್ಟೇ ಅಲ್ಲದೇ ಬಗೆಬಗೆಯ ಆಹಾರಗಳನ್ನು ಸವಿಯಬಹುದು, ಮೈಸೂರಿನ ಕಲಾವಂತಿಕೆ ವೀಕ್ಷಿಸಿ ವಸ್ತುಗಳನ್ನೂ ಖರೀದಿಸಬಹುದು. ಹತ್ತಾರು ರೀತಿಯಲ್ಲಿ ದಸರಾದ ಸೊಬಗನ್ನು ನೀವು ಸವಿಯಬಹುದು.

mysore-dasara_Entry_Point