Mysore Dasara 2024: ಮೈಸೂರು ದಸರಾ ಸಂಭ್ರಮ ಆರಂಭ; ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ, ಗಣ್ಯರಿಂದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ದಸರಾದ ಸಡಗರದ ಕ್ಷಣಗಳು ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆಯೊಂದಿಗೆ ಚಾಲನೆ ದೊರಕಿದೆ.
ಮೈಸೂರು: ಮೈಸೂರಿನಲ್ಲಿ ನವರಾತ್ರಿಯ ವೈಭವದ ಕ್ಷಣಗಳು, ಧಾರ್ಮಿಕ ವಿಧಿವಿಧಾನಗಳು, ಪಾರಂಪರಿಕ ಕಟ್ಟಡಗಳ ಬೆಳಕಿನ ಸೊಬಗು, ಪ್ರವಾಸಿಗರ ಖುಷಿಯ ನಡುವೆ ಈ ವರ್ಷದ ಮೈಸೂರು ದಸರಾದ ಸಡಗರ ಶುರುವಾಗಿದೆ.ಪ್ರವಾಸಿಗರನ್ನು ಮಾತ್ರವಲ್ಲದೇ ಧಾರ್ಮಿಕವಾಗಿ ನಂಬಿಕೆ ಇರುವವರನ್ನು ಸೆಳೆಯುವ ಮೈಸೂರು ದಸರಾಕ್ಕೆ ಚಾಲನೆ ದೊರಕಿದೆ. ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ಸಲ್ಲಿಕೆಯಾಗಿ, ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಸಲ್ಲಿಕೆಯೊಂದಿಗೆ ಈ ವರ್ಷದ ಸಡಗರ, ಸಂಭ್ರಮದ ಮೈಸೂರು ದಸರಾ ಮಹೋತ್ಸವ ತೆರೆದುಕೊಂಡಿದೆ. ಇನ್ನು ಹತ್ತು ದಿನಗಳ ಕಾಲ ಬೆಟ್ಟದ ಚಾಮುಂಡಿ ತಾಯಿ ಊರು, ಅರಸರ ನಗರಿ ಮೈಸೂರು ದಸರಾ ಹಬ್ಬದಿಂದ ವಿಶ್ವದಾದ್ಯಂತ ಕಂಗೊಳಿಸಲಿದೆ. ಈ ಬಾರಿ ಕರ್ನಾಟಕದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿರುವ ಸಮೃದ್ದಿಯ ನಡುವೆ ನಾಡಹಬ್ಬಕ್ಕೂ ಅದೇ ಸಂತಸದ ನಡುವೆಯೇ ಚಾಲನೆ ಸಿಕ್ಕಿದೆ.
ಬೆಟ್ಟದಲ್ಲಿ ಚುಮುಚುಮು ಚಳಿಯ ವಾತಾವರಣ, ಗಂಟೆ ಸದ್ದಿನ ನಿನಾದ, ನಾದಸ್ವರಗಳ ಹಿನ್ನೆಲೆ, ನಂದಿಧ್ವಜ ಮೆರವಣಿಗೆ, ಚಾಮುಂಡೇಶ್ವರಿ ದೇವಿಯ ಕುರಿತು ಕಲಾವಿದ ಪುರುಷೋತ್ತಮ್ ಹಾಗೂ ತಂಡದವರಿಂದ ಕೇಳಿ ಬರುತ್ತಿದ್ದ ಭಕ್ತಿಗೀತೆಗಳ ಸ್ವರ ಮಾಧುರ್ಯದ ನಡುವೆ ಗಣ್ಯರ ಉಪಸ್ಥಿತಿಯಲ್ಲಿ ದಸರಾ ಆರಂಭಗೊಂಡಿತು. ಶೈಲಪುತ್ರಿಯ ಅಲಂಕಾರದೊಂದಿಗೆ ಭಕ್ತರನ್ನು ಆಕರ್ಷಿಸಿದ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆಗಳು ಜರುಗಿದವು. ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಗಣ್ಯರ ಉಪಸ್ಥಿತಿಯಲ್ಲಿ ಸಾಂಗವಾಗಿ ನೆರವೇರಿದವು.
ರೇಷ್ಮೆ ಉಡುಗೆಯಲ್ಲಿ ಆಗಮಿಸಿದ ಹಿರಿಯ ಸಾಹಿತಿ ಡಾ.ಹಂಪನಾ ಅವರು ಬೆಟ್ಟದ ದೇಗುಲದಲ್ಲಿ ಪೂಜೆ ಸಲ್ಲಿಸಿ ನಂತರ ವೇದಿಕೆ ಏರಿದರು. ವೃಶ್ಚಿಕ ಲಗ್ನದಲ್ಲಿ ಪುಷ್ಪಾರ್ಚನೆಯೊಂದಿಗೆ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ ಹಾಗು ಗಣ್ಯರ ಸಮ್ಮುಖದಲ್ಲಿ ಪುಷ್ಪಾರ್ಚನೆ ಮಾಡಿದರು. ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಹಿತ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳೂ ಕೂಡ ಪುಷ್ಪಾರ್ಚನೆ ಮಾಡಿ ಸುಸೂತ್ರವಾಗಿ ಮೈಸೂರು ದಸರಾ ನಡೆಯಲಿ, ಜನರ ಕಷ್ಟಗಳು ಕರಗಿ ನೆಮ್ಮದಿ ಬರಲಿ ಎಂದು ಆಶಿಸಿದರು.
ಎರಡು ದಿನದಿಂದ ಚಾಮುಂಡಿಬೆಟ್ಟದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಗುರುವಾರ ಬೆಳಿಗ್ಗೆಯಿಂದಲೇ ಪೂಜಾ ಚಟುವಟಿಕೆಗಳು ಬೆಟ್ಟದಲ್ಲಿ ಆರಂಭವಾಗಿದ್ದವು. ಬೆಟ್ಟದ ದೇಗುಲ ಎದುರಿನಲ್ಲಿಯೇ ಹಾಕಲಾಗಿದ್ದ ವಿಶಾಲ ವೇದಿಕೆಗೆ ಬೆಳ್ಳಿರಥದಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿದ ಅರ್ಚಕರು ದಸರಾ ಉದ್ಘಾಟನೆಗೆ ವ್ಯವಸ್ಥೆ ಮಾಡಿದರು.ಬೆಳಗಿನಜಾವವೇ ಬೆಟ್ಟಕ್ಕೆ ಆಗಮಿಸಿದ್ದ ಭಕ್ತರು ಉದ್ಘಾಟನೆ ಕ್ಷಣ ಕಣ್ತುಂಬಿಕೊಂಡರು.
ಇದಕ್ಕೂ ಮೊದಲ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಾ. ಎಚ್.ಸಿ.ಮಹದೇವಪ್ಪ, ಕೆ ವೆಂಕಟೇಶ್ ಹಾಗೂ ದಸರಾ ಉದ್ಘಾಟಕ ಹಿರಿಯ ಸಾಹಿತಿ ಡಾ.ಹಂಪಾ ನಾಗರಾಜಯ್ಯ ಸಹಿತ ಹಲವರು ಒಂದೇ ಬಸ್‌ನಲ್ಲಿ ಮೈಸೂರಿನಿಂದ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದರು.
ವಿವಿಧ ಜನಪದ ಕಲಾತಂಡಗಳ ಜೊತೆಗೆ ಚಾಮುಂಡೇಶ್ವರಿ ದೇವಸ್ಥಾನದತ್ತ ಹೆಜ್ಜೆ ಹಾಕಿದ ಗಣ್ಯರು ಅಲ್ಲಿಂದ ತೆರಳಿ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಹಿರಿಯ ಸಾಹಿತಿ ಹಂಪನಾ, ಸಾಮಾನ್ಯ ಪ್ರಜೆಯೊಬ್ಬರು ಈ ನಾಡ ಹಬ್ಬದ ಸಡಗರದ ಸರಣಿಯನ್ನು ಉದ್ಘಾಟಿಸುತ್ತಿರುವದು ಆ ಪರಿಕಲ್ಪನೆಯ ಮುಂದುವರಿಕೆಯಾಗಿದೆ. ಇದು ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು ಎಂಬ ಸಿದ್ಧಾಂತವನ್ನು ಮಾನ್ಯಮಾಡಿದಂತೆ, ಜನಮುಖಿ ಕಾಳಜಿಯನ್ನು ಎತ್ತಿಹಿಡಿದಂತೆ. ಈ ಪವಿತ್ರ ದಸರಾ ಉತ್ಸವಸರಣಿ ಕಾರ್ಯಕ್ರಮದ ಉದ್ಘಾಟನೆಯನ್ನು, ನಮ್ಮ ನಾಡಿನ ಪ್ರಜೆಗಳ ಪರವಾಗಿ, ವಿನಯ ಮತ್ತು ಧನ್ಯತಾ ಭಾವದಿಂದ ನೆರವೇರಿಸುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಆಸ್ತಿಕತೆ ನಾಸ್ತಿಕತೆ ಕುರಿತ ಚರ್ಚೆ ಇಲ್ಲಿ ಅಪ್ರಸ್ತುತ, ದೇವಾಲಯಕ್ಕೆ ಬಂದವರೆಲ್ಲಾ ಆಸ್ತಿಕರೆಂದಾಗಲಿ, ಒಳಗೆ ಬರದೆ ದೂರ ಉಳಿದವರೆಲ್ಲ ನಾಸ್ತಿಕರೆಂದಾಗಲಿ ಅಲ್ಲ. ಎಲ್ಲ ದೇಶ ಕಾಲಗಳಲ್ಲೂ ಸಮಾಜ ಮಾನ್ಯಮಾಡಿದ ಶಿಷ್ಟಪರಂಪರೆಯ ಪ್ರೋತವೊಂದು ಜೀವಂತವಾಗಿರುತ್ತದೆ. ಕನ್ನಡಿಗರು ಹತ್ತುದಿನಗಳ ಈ ದೊಡ್ಡ ಹಬ್ಬವನ್ನು ಆಚರಿಸುತ್ತ ಬಂದಿದ್ದಾರೆ. ಕೆಲವು ಹಬ್ಬಗಳು ಆಯಾ ಮತಧರ್ಮದವರಿಗಷ್ಟೇ ಸೀಮಿತವಾಗಿರುತ್ತದೆ. ದಸರಾ ಹಬ್ಬ ಮತಧರ್ಮಗಳ ತಾರತಮ್ಯವಿರದೆ ಇಡೀ ನಾಡು ಆಚರಿಸುವ ಸರ್ವಜನಾಂಗದ ಹಬ್ಬ ಎಂದು ನುಡಿದರು.
ಕನ್ನಡ ನಾಡು ನುಡಿಯ ಸಂರಕ್ಷಣೆ ಮಾಡುವ ಕಲಿಗಳನ್ನು ಅಪರಾಧಿಗಳಂತೆ ಕಾಣದೆ ಅವರನ್ನು ಪ್ರೋತ್ಸಾಹಿಸಬೇಕು. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ ಯುವ ಜನತೆಗೆ ಉದ್ಯೋಗ ನೀಡಬೇಕು ಎಂದು ತಿಳಿಸಿದರು.
ಉತ್ತಮ ಬೆಳೆ ನಿರೀಕ್ಷೆ
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮಾತನಾಡಿ ನಾಡಿನ ಜನತೆಗೆ ದಸರಾ ಮಹೋತ್ಸವದ ಶುಭಾಶಯಗಳು. ಈ ವರ್ಷ ಉತ್ತಮವಾಗಿ ಮಳೆ ಆಗಿದೆ. ಎಲ್ಲಾ ಜಲಾಶಯಗಳು ತುಂಬಿವೆ. ಮಳೆ ಬೆಳೆ ಆದರೆ ಮಾತ್ರ ಜನರು ಸಮೃದ್ಧಿಯನ್ನು ಕಂಡು ಸುಖ ಶಾಂತಿ ನೆಮ್ಮದಿ ಯಿಂದ ಬದುಕಲು ಸಾಧ್ಯ. ಈ ವರ್ಷ ಮುಂಗಾರು ಬಿತ್ತನೆ ಶೇ. 99 ಆಗಿದೆ. ಇನ್ನೂ ಹೆಚ್ಚು ಮಳೆ ಬೆಳೆ ಆಗಿ ಉತ್ಪಾದನೆ ಆಗಲಿ ಎಂದು ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಮೈಸೂರು ದಸರಾ ನಾಡಹಬ್ಬ. ಇದು ಜನರ ದಸರಾ. ಹೆಚ್ಚು ಜನ ಇದರಲ್ಲಿ ಭಾಗವಹಿಸಬೇಕು. 9 ದಿನಗಳ ಕಾಲ ನವರಾತ್ರಿ ನಡೆಯುತ್ತದೆ. 18 ನೆಯ ದಿನ ವಿಜಯದಶಮಿ ನಡೆಯುತ್ತದೆ ಎಂದು ತಿಳಿಸಿದರು.
ನಾಡಿನಲ್ಲಿ ಉತ್ತಮ ಮಳೆ
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ ಕಳೆದ ವರ್ಷ ಬರಗಾಲ ಇತ್ತು. ಕಳೆದ ಬಾರಿ ಉದ್ಘಾಟನಾ ಸಮಾರಂಭದಲ್ಲಿ ಮುಂದಿನ ವರ್ಷ ಉತ್ತಮ ಮಳೆ ಆಗಲಿ ಎಂದು ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೋ, ದೇವಿಯ ಆಶೀರ್ವಾದದಿಂದ ಈ ಬಾರಿ ಉತ್ತಮ ಮಳೆಯಾಗಿದೆ. ಆದ್ದರಿಂದ ಅದ್ದೂರಿ ದಸರಾ ಆಚರಣೆ ಮಾಡಲಾಗುತ್ತಿದೆ. ನಾವು ಎಲ್ಲರೂ ನೆಮ್ಮದಿಯಿಂದ ಬದುಕಲು ನಾಡ ದೇವಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ನಮ್ಮ ಸರ್ಕಾರ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದು ನೀಡುತ್ತಿದ್ದೇವೆ. ಒಂಬತ್ತು ದಿನಗಳ ಕಾಲ ವಿವಿಧ ಪೂಜೆಗಳನ್ನು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಹೆಣ್ಣು ಕುಟುಂಬದ ಕಣ್ಣು. ದೇವಿ ಎಲ್ಲರಿಗೂ ಸನ್ಮಾರ್ಗವನ್ನು ಉಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಜನರ ಜೀವನ ಸುಧಾರಣೆ
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಹೆಚ್ ಸಿ ಮಹದೇವಪ್ಪ ಅವರು ಮಾತನಾಡಿ ಇಂದು ಒಂಬತ್ತು ದಿನಗಳ ನವರಾತ್ರಿಯ ಹಬ್ಬ ಪ್ರಾರಂಭವಾಗಿದೆ. ನಮ್ಮ ಆಚಾರ ವಿಚಾರ ಧರ್ಮ ಉಪಾಸನೆ ಮಾಡಲು ಸಂವಿಧಾನ ಮುಕ್ತ ಅವಕಾಶ ನೀಡಿದೆ. ಜನರು ಸಂವಿಧಾನಬದ್ಧವಾಗಿ ಹಕ್ಕುಗಳನ್ನು ಅನುಭವಿಸಲು ಜಾಗೃತಿ ನೀಡಲು ಸಂವಿಧಾನ ಜಾಗೃತಿ ಜಾಥಾ ನಡೆಸಲಾಯಿತು. ಸೆಪ್ಟೆಂಬರ್ 15 ರಂದು ಸಂವಿಧಾನ ರಕ್ಷಣೆ ಬಗ್ಗೆ ತಿಳಿಸಲು ಬೀದರ್ ನಿಂದ ಚಾಮರಾಜನಗರ ವರೆಗೆ ಮಾನವ ಸರಪಳಿ ನಿರ್ಮಿಸಿ ಇದರಲ್ಲಿ 30 ಲಕ್ಷ ಜನರು ಭಾಗವಹಿಸಿದ್ದರು. ನಮ್ಮ ಸರ್ಕಾರ 5 ಗ್ಯಾರೆಂಟಿ ಗಳನ್ನು ನೀಡಿ ಜನರ ಜೀವನ ಸುಧಾರಣೆ ಮಾಡಲು ಸರ್ವ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.
ಜಿಟಿ ದೇವೇಗೌಡ ಸಲಹೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡ ಅವರು ಮಾತನಾಡಿ ಮೊದಲು ಮೈಸೂರು ರಾಜ್ಯ ಆಗಿತ್ತು. ಮೈಸೂರು ಅರಸರು ಮೈಸೂರು ದಸರಾ ಆಚರಣೆಯನ್ನು ಜಾರಿಗೆ ತಂದರು. ದಸರಾ ಮಹೋತ್ಸವದಲ್ಲಿ 9 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ನಡೆಯುತ್ತದೆ. ವಿಶ್ವದ ಮೂಲೆ ಮೂಲೆಯಿಂದ ಜನರು ಆಗಮಿಸುತ್ತಾರೆ. ಮೈಸೂರು ಅಭಿವೃದ್ಧಿಗೆ ಸಮಿತಿಯನ್ನು ರಚಿಸಿ ಯೋಜನೆಯನ್ನು ರೂಪಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಗಣ್ಯರ ಹಾಜರಿ
ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಹಾಗೂ ರೇಷ್ಮೆ ಇಲಾಖೆಯ ಸಚಿವರಾದ ಕೆ ವೆಂಕಟೇಶ್, ಕಾನೂನು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ಪ್ರವಾಸೋಧ್ಯಮ ಇಲಾಖೆಯ ಸಚಿವರಾದ ಹೆಚ್ ಕೆ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವರಾದ ಕೆ ಹೆಚ್ ಮುನಿಯಪ್ಪ ಅರಣ್ಯ ಮತ್ತು ವಸತಿ ವಿಹಾರಧಾಮಗಳ ಅಧ್ಯಕ್ಷರು ಹಾಗೂ ಹೆಚ್ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು, ಚೆಸ್ಕಾಂ ಅಧ್ಯಕ್ಷರು ಹಾಗೂ ಶಾಸಕರಾದ ರಮೇಶ್ ಬಡಿಸಿದ್ದೇಗೌಡ, ನರಸಿಂಹ ರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್, ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್, ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ ರವಿಶಂಕರ್, ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಡಿ ಹರೀಶ್ ಗೌಡ, ನಂಜನಗೂಡು ವಿಧಾನ ಸಭಾ ಕ್ಷೇತ್ರದ ಶಾಸಕ ರದ ದರ್ಶನ್ ಧ್ರುವ ನಾರಾಯಣ್, ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಗೌಡ, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಆರ್ ಕೃಷ್ಣಮೂರ್ತಿ, ವಿಧಾನಪರಿಷತ್ ಶಾಸಕರಾದ ಡಿ ತಿಮ್ಮಯ್ಯ, ಸಿ ಎನ್ ಮಂಜೇಗೌಡ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ಮೂಡಾ ಅಧ್ಯಕ್ಷರಾದ ಕೆ ಮರಿಗೌಡ, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.