ಕನ್ನಡ ಸುದ್ದಿ  /  ಕರ್ನಾಟಕ  /  Mysuru News: ಮೈಸೂರು ಕಾಂಗ್ರೆಸ್‌ ಮುಖಂಡೆಯ ಭೀಕರ ಹತ್ಯೆ, ಕಾರಣವೇನು?

Mysuru News: ಮೈಸೂರು ಕಾಂಗ್ರೆಸ್‌ ಮುಖಂಡೆಯ ಭೀಕರ ಹತ್ಯೆ, ಕಾರಣವೇನು?

ಕಾಂಗ್ರೆಸ್‌ ಮುಖಂಡೆ ವಿದ್ಯಾನಂದೀಶ್‌ ಎಂಬುವವರನ್ನು ಅವರ ಮನೆಯಲ್ಲಿಯೇ ಭೀಕರವಾಗಿ ಕೊಲೆ ಮಾಡಲಾಗಿದೆ.

ಕೊಲೆಯಾದ ಕಾಂಗ್ರೆಸ್‌ನ ವಿದ್ಯಾ ನಂದೀಶ್‌
ಕೊಲೆಯಾದ ಕಾಂಗ್ರೆಸ್‌ನ ವಿದ್ಯಾ ನಂದೀಶ್‌

ಮೈಸೂರು: ಮೈಸೂರು ಜಿಲ್ಲೆಯ ಕಾಂಗ್ರೆಸ್‌ ಮುಖಂಡರಾಗಿದ್ದ. ಇತ್ತೀಚಿಗೆ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ವಿದ್ಯಾನಂದೀಶ್‌ ಎಂಬುವವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ತಿ.ನರಸೀಪುರ ತಾಲ್ಲೂಕಿನ ಬನ್ನೂರು ಸಮೀಪದ ತುರಗನೂರಿನಲ್ಲಿರುವ ಅವರ ನಿವಾಸದಲ್ಲಿಯೇ ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ. ಮಂಗಳವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾ ಅವರ ಶವವನ್ನು ಗಮನಿಸಿದವರು ಪೊಲೀಸರಿಗೆ ಮಾಹಿತಿ ನೀಡಿದ್ದು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆ ಕುರಿತು ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದು, ಕೊಲೆಗೆ ಕಾರಣ ಏನು ಏನ್ನುವ ಕುರಿತು ಕುಟುಂಬದವರು, ನೆರೆ ಹೊರೆಯವರಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿದ್ಯಾ ನಂದೀಶ್‌ ಕೆಲ ವರ್ಷದಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದರು. ಮೈಸೂರು ನಗರ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿಯೂ ಈ ಹಿಂದೆ ಕೆಲಸ ಮಾಡಿದ್ದರು. ಇದಕ್ಕೂ ಮುನ್ನ ನಟನೆಯಲ್ಲಿ ಆಸಕ್ತಿಯಿದ್ದ ಅವರು ಚಿತ್ರಗಳಲ್ಲಿ ಅಭಿನಯಿಸಿದ್ದರು ಕೂಡ. ಸಮಾಜ ಸೇವಕರಾದ ಬನ್ನೂರು ಸಮೀಪದ ತುರಗನೂರಿನ ನಂದೀಶ್‌ ಅವರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ.

ಮೈಸೂರಿನ ಶ್ರೀರಾಂಪುರದಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದ ಅವರು ಮೈಸೂರಲ್ಲೇ ಹೆಚ್ಚು ಇರುತ್ತಿದ್ದರು. ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಹುದ್ದೆಯನ್ನ ಅವರಿಗೆ ನೀಡುವ ಚಿಂತನೆ ನಡೆದಿತ್ತು. ಸಚಿವರು, ಶಾಸಕರು ಸೇರಿದಂತೆ ಕಾಂಗ್ರೆಸ್‌ ನ ಕೆಲ ನಾಯಕರೊಂದಿಗೆ ವಿದ್ಯಾ ಆತ್ಮೀಯವಾಗಿದ್ದರು.

ಆದರೆ ವಿದ್ಯಾ ಅವರು ಕಾಂಗ್ರೆಸ್‌ನಲ್ಲಿದ್ದರೂ ಕೆಲ ನಾಯಕರೊಂದಿಗೆ ಆಪ್ತರಾಗಿದ್ದುದು ಕುಟುಂಬದಲ್ಲಿ ವಿರಸಕ್ಕೆ ಕಾರಣವಾಗಿತ್ತು. ಈ ವಿಚಾರದಲ್ಲಿ ಪತಿ ಹಾಗೂ ಪತ್ನಿ ನಡುವೆ ಜಗಳಕ್ಕೆ ದಾರಿ ಮಾಡಿಕೊಟ್ಟಿತ್ತು. ರಾಜಕೀಯದಿಂದ ದೂರವೇ ಇರುವಂತೆ ಪತಿ ಹೇಳಿದ್ದರೂ ವಿದ್ಯಾ ಕೇಳಿರಲಿಲ್ಲ. ನನ್ನ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ. ನಿಮಗೆ ಅದರ ಚಿಂತೆ ಬೇಡ ಎಂದು ಪತಿಗೆ ವಿದ್ಯಾ ಹೇಳಿದ್ದರು.

ಸೋಮವಾರ ರಾತ್ರಿ ಮೈಸೂರಿನಿಂದ ತುರಗನೂರಿಗೆ ವಿದ್ಯಾ ಬಂದಿದ್ದರು. ಈ ವೇಳೆ ಪತಿ ಹಾಗೂ ಪತ್ನಿ ನಡುವೆ ಜಗಳ ನಡೆದ ಪತಿಯೇ ತಲೆಗೆ ಆಯುಧದಿಂದ ಬಲವಾಗಿ ಹೊಡೆದು ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನಂದೀಶ್‌ ಕೂಡ ನಾಪತ್ತೆಯಾಗಿರುವುದರಿಂದ ಆತನ ಮೇಲೆಯೇ ಪೊಲೀಸರಿಗೆ ಅನುಮಾನ ಹೆಚ್ಚಿದೆ.
ಮಾಹಿತಿ ತಿಳಿದು ಬನ್ನೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು. ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್‌, ಹೆಚ್ಚುವರಿ ಎಸ್ಪಿ ಡಾ.ನಂದಿನಿ, ನಂಜನಗೂಡು ಡಿವೈಎಸ್ಪಿ ಗೋವಿಂದರಾಜು ಸಹಿತ ಹಲವರು ಆಗಮಿಸಿದ್ದರು.

ಘಟನೆ ಕುರಿತು ಕುಟುಂಬದವರು ನೀಡಿದ ದೂರಿನ ಮೇಲೆ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ಕೌಟುಂಬಿಕ ಕಲಹದಿಂದ ಕೊಲೆಯಾಗಿರುವುದು ಕಂಡು ಬರುತ್ತಿದೆ. ಬೇರೆ ಯಾರದ್ದಾದರೂ ಪಾತ್ರ ಇದೆಯೇ, ಪತಿಯಿಂದಲೇ ಕೊಲೆಯಾಗಿದೆಯೇ ಎನ್ನುವ ಕುರಿತೂ ತನಿಖೆ ನಡೆದಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಟಿ20 ವರ್ಲ್ಡ್‌ಕಪ್ 2024