ಮೈಸೂರಿನ ಪಾರಂಪರಿಕ ಕಟ್ಟಡಗಳ ಜತೆಗೆ ಪ್ರಮುಖ ದ್ವಾರಗಳೂ ಈಗಲೂ ಆಕರ್ಷಣೆ; ಅರಮನೆ ಭಿನ್ನ ಗೇಟ್‌ಗಳ ಇತಿಹಾಸವೂ ಆಸಕ್ತಿದಾಯಕ, ಇವುಗಳ ವಿಶೇಷತೆ ಏನು
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರಿನ ಪಾರಂಪರಿಕ ಕಟ್ಟಡಗಳ ಜತೆಗೆ ಪ್ರಮುಖ ದ್ವಾರಗಳೂ ಈಗಲೂ ಆಕರ್ಷಣೆ; ಅರಮನೆ ಭಿನ್ನ ಗೇಟ್‌ಗಳ ಇತಿಹಾಸವೂ ಆಸಕ್ತಿದಾಯಕ, ಇವುಗಳ ವಿಶೇಷತೆ ಏನು

ಮೈಸೂರಿನ ಪಾರಂಪರಿಕ ಕಟ್ಟಡಗಳ ಜತೆಗೆ ಪ್ರಮುಖ ದ್ವಾರಗಳೂ ಈಗಲೂ ಆಕರ್ಷಣೆ; ಅರಮನೆ ಭಿನ್ನ ಗೇಟ್‌ಗಳ ಇತಿಹಾಸವೂ ಆಸಕ್ತಿದಾಯಕ, ಇವುಗಳ ವಿಶೇಷತೆ ಏನು

ಮೈಸೂರಿನ ಅರಮನೆ, ಪಾರಂಪರಿಕ ಕಟ್ಟಡಗಳಂತೆ ಪ್ರಮುಖ ದ್ವಾರಗಳೂ ಆಕರ್ಷಣೀಯ. ಇವೂ ಕೂಡ ಇತಿಹಾಸವನ್ನು ಸಾರುತ್ತವೆ. ಈಗಲೂ ಉತ್ತಮ ನಿರ್ವಹಣೆಯಿಂದ ಬಳಕೆಯಲ್ಲಿವೆ. ಅವುಗಳ ಕುರಿತ ಮಾಹಿತಿ ಇಲ್ಲಿದೆ.

ಮೈಸೂರಿನ ಅರಮನೆಯ ಪ್ರಮುಖ ದ್ವಾರ.
ಮೈಸೂರಿನ ಅರಮನೆಯ ಪ್ರಮುಖ ದ್ವಾರ.

ಮೈಸೂರು ಎಂದ ತಕ್ಷಣ ನೆನಪಾಗೋದು ಪಾರಂಪರಿಕ ಕಟ್ಟಡಗಳು, ವೃತ್ತಗಳು. ಅದರ ಜತೆಯಲ್ಲಿಯೇ ಹಲವಾರು ಮಹಾದ್ವಾರಗಳು. ಮೈಸೂರು ಅರಮನೆಗೆ ಇರುವ ದ್ವಾರಗಳ ಜತೆಗೆ ಹೊರ ಭಾಗದಲ್ಲೂ ಹಲವಾರು ಪಾರಂಪರಿಕ ದ್ವಾರಗಳು ಮೈಸೂರಿನಲ್ಲಿವೆ. ಅವುಗಳನ್ನು ಈಗಲೂ ಚೆನ್ನಾಗಿಯೇ ನಿರ್ವಹಣೆ ಮಾಡಲಾಗುತ್ತಿದೆ. ಈ ದ್ವಾರಗಳು ಮೈಸೂರಿನ ಹಿರಿಮೆ ಸಾರುವ ಜತೆಯಲ್ಲಿಯೇ ಇಲ್ಲಿಗೆ ಬರುವ ಹೊರ ಭಾಗದ ಪ್ರವಾಸಿಗರಿಗೆ ಭಿನ್ನ ಅನುಭವಗಳನ್ನೂ ನೀಡುತ್ತವೆ. ಆಳೆತ್ತರದ ಹಾಗೂ ಭಿನ್ನ ಶೈಲಿಯ ದ್ವಾರಗಳ ವೀಕ್ಷಣೆಯೇ ಚೆಂದ. ಮೈಸೂರು ದಸರಾ ವೇಳೆಯೂ ಈ ದ್ವಾರಗಳನ್ನು ಅಂದಗಾಣಿಸುವ ಕೆಲಸ ಸ್ಥಳಿಯಾಡಳಿತದಿಂದ ಆಗಿದೆ. ದೀಪಾಲಂಕಾರದ ಸೊಬಗಿನಲ್ಲಿ ದ್ವಾರಗಳೂ ಮಿಂಚುತ್ತಿವೆ. ಮೈಸೂರು ಅರಮನೆಯ ದ್ವಾರಗಳು ಹಾಗೂ ಹೊರ ಭಾಗದಲ್ಲಿರುವ ದ್ವಾರಗಳ ಇತಿಹಾಸವೂ ಆಸಕ್ತಿದಾಯಕವೇ ಆಗಿದೆ.

ಈ ಕುರಿತು ಪತ್ರಿಕೋದ್ಯಮದ ಸಂಶೋಧನಾ ವಿದ್ಯಾರ್ಥಿಯಾಗಿರುವ ಟಿ. ಮಣಿಕಂಠ ಅವರು ಆಸಕ್ತಿದಾಯಕ ಮಾಹಿತಿಯನ್ನು ಒದಗಿಸಿದ್ದಾರೆ.

ಅರಮನೆಯ ಪ್ರಮುಖ ದ್ವಾರಗಳು

1. ಜಯಮಾರ್ತಾಂಡ ದ್ವಾರ : ಮೈಸೂರು ಅರಮನೆಯ ಪೂರ್ವ ದಿಕ್ಕು ಹಾಗೂದೊಡ್ಡಕೆರೆ ಮೈದಾನದ ಎದುರಿನಲ್ಲಿರುವ ಪ್ರಮುಖ ದ್ವಾರ. ಈ ದ್ವಾರದಲ್ಲಿ ಸಾರ್ವಜನಿಕರಿಗೆ ದಸರಾ ಮಹೋತ್ಸವದ ಸಂದರ್ಭದಲ್ಲಿ ಮಾತ್ರ ಪ್ರವೇಶವಿದೆ.

2. ವರಾಹ ದ್ವಾರ : ಅರಮನೆಯ ದಕ್ಷಿಣ ದಿಕ್ಕಿನಲ್ಲಿ ಈ ದ್ವಾರ. ದ್ವಾರದ ಬಲ ಭಾಗದಲ್ಲಿನ ಶ್ವೇತವರಾಹ ಸ್ವಾಮಿ ದೇಗುಲವಿದೆ. ರಣಧೀರ ಕಂಠೀರವ ನರಸಿಂಹರಾಜ ಒಡೆಯರು ತಿರುಚಿನಾಪಳ್ಳಿಗೆ ತೆರಳಿ ಮಲ್ಲಯುದ್ಧದಲ್ಲಿ ಜಟ್ಟಿಗಳನ್ನು ಸೋಲಿಸಿ ಸಂಹರಿಸಿದ ಕಾರಣಕ್ಕೆ ಅಲ್ಲಿನ ದೊರೆ ಅವಮಾನದಿಂದ, ಅಪಮಾನವನ್ನು ಸಹಿಸಲಾರದೆ ಮೈಸೂರು ಮಹಾರಾಜರನ್ನು ಕೊಲ್ಲಲು ಇಪ್ಪತ್ತೊಂದು ಜನ ಹಾಗೂ ಒಂದು ಹೆಣ್ಣನ್ನು ಕಳುಹಿಸಿದನು. ಅಂಥ ಪುರದಲ್ಲಿ ರಣಧೀರ ಕಂಠೀರವ ನರಸಿಂಹ ರಾಜ ಒಡೆಯರ ಜೊತೆ ತಿರುಚಿನಾಪಳ್ಳಿಯಿಂದ ಬಂದ ಹೆಣ್ಣಿನ ಜೊತೆ ಚರ್ಚೆಯಲ್ಲಿರುವಾಗ, ಉಳಿದವರು ಆಕ್ರಮಿಸಿದರು. ನಂತರ ರಣಧೀರ ಕಂಠೀರವ ತನ್ನ ಉಡಿಯಲ್ಲಿದ್ದ ವರಾಹ ಸಿಂಹ ಎಂಬ ಬಾಕುವಿನಿಂದ ಕತ್ತು ಸೀಳಿ ಸಾಯಿಸಿದ ವಿಷಯ ತಿರುಚಿನಾಪಳ್ಳಿಯ ಅರಸನಿಗೆ ತಿಳಿಯಿತು. ಆಗ ಆತನ ಅಹಂಕಾರವೆಲ್ಲ ಇಳಿದು, ಸೋಲೊಪ್ಪಿಕೊಂಡು ಅದರ ನೆನಪಾರ್ಥವಾಗಿ ಶ್ವೇತವರಾಹ ಸ್ವಾಮಿ ವಿಗ್ರಹವನ್ನು ಅರ್ಪಿಸುತ್ತಾನೆ. ಅಂದು ತಿರುಚನಾಪಳ್ಳಿಯ ಅರಸ ಕೊಟ್ಟ ವಿಗ್ರಹವೇ ಈ ವರಾಹಸ್ವಾಮಿ ದೇಗುಲದ ಆಕರ್ಷಣೆ. ಇದು ದ್ವಾರದ ರೂಪವನ್ನೂ ಪಡೆದಿದೆ.

3. ಅಂಬಾವಿಲಾಸ ದ್ವಾರ : ಮೈಸೂರು ಅರಮನೆ ಕಚೇರಿಯ ಮುಂಭಾಗದಲ್ಲಿ ಈ ದ್ವಾರವಿದೆ.ಈ ದ್ವಾರದಲ್ಲಿ ಯಾವ ಸಾರ್ವಜನಿಕರಿಗೂ ಪ್ರವೇಶವಿರುವುದಿಲ್ಲ. ಈ ದ್ವಾರವು ನೇರವಾಗಿ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯುವ ಜಾಗಕ್ಕೆ ತಲುಪುತ್ತದೆ. ಅಂದಿನ ಕಾಲದಿಂದಲೂ ರಾಜರಿಂದ ಖಾಸಗಿ ದರ್ಬಾರನ್ನು ನೋಡಲು ಅನುಮತಿ ಇರುವವರಿಗೆ ಮಾತ್ರ ಓಡಾಡಲು ನಿರ್ಮಿಸಿರುವ ದ್ವಾರ.

4. ಬ್ರಹ್ಮಪುರಿ ದ್ವಾರ : ಇಂದಿನ ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ಈ ದ್ವಾರವಿದೆ. ಅಂದಿನ ಕಾಲದಲ್ಲಿ ಮಹಾರಾಜರು ರಾಜಗುರು ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠಕ್ಕೆ ಸಂಚರಿಸುತ್ತಿದ್ದ ದಾರಿ. ಮಠದಿಂದ ಗುರುಗಳು ಮಹಾರಾಜರನ್ನು ನೋಡಬೇಕಿದ್ದರೆ ಅಥವಾ ಮಹಾರಾಜರು ಮಠಕ್ಕೆ ಹೋಗಬೇಕಿದ್ದರೆ ಓಡಾಡುತ್ತಿದ್ದ ದ್ವಾರವಾಗಿತ್ತು.

5. ಕರಿಕಲ್ಲು ತೊಟ್ಟಿ ದ್ವಾರ: ಈ ದ್ವಾರವನ್ನು ಮೋತಿಖಾನೆ ದ್ವಾರ ಎಂದು ಕರೆಯುತ್ತಾರೆ. ಈ ದ್ವಾರದ ಹಿಂಭಾಗದಲ್ಲಿ ಅಂದಿನ ಕಾಲದಲ್ಲಿ ಮೋತಿಖಾನೆ ಇತ್ತು. ಅಲ್ಲಿಂದ ಅರಮನೆಗೆ ಬೇಕಾದ ದಿನಸಿ ಸಾಮಗ್ರಿಗಳು ಪೂರೈಕೆಯಾಗುತ್ತಿತ್ತು. ಪ್ರಸ್ತುತ ಈ ದ್ವಾರದ ಹಿಂಭಾಗದಲ್ಲಿ ಜನತಾ ಬಜಾರ್, ಬನುಮಯ್ಯ ಸಂಸ್ಥೆ ಇದೆ.

6. ಜಯರಾಮ ದ್ವಾರ : ಮೈಸೂರು ಅರಮನೆಯ ಉತ್ತರ ದಿಕ್ಕಿನಲ್ಲಿ ಈ ದ್ವಾರವಿದೆ. ಈ ದ್ವಾರದ ಬಳಿ ಕೋಟೆ ಆಂಜನೇಯನ ದೇಗುಲವಿದೆ. ದಸರಾ ಮಹೋತ್ಸವದ ಸಂದರ್ಭದಲ್ಲಿ ಮಾತ್ರ ಈ ದ್ವಾರ ತೆರೆಯುತ್ತದೆ. ಆನೆ ನೆನಪಿಗೆ ನಿರ್ಮಿಸಿದ ದ್ವಾರ.

7. ಬಲರಾಮ ದ್ವಾರ : 14 ವರ್ಷ ಸತತವಾಗಿ ಚಿನ್ನದ ಅಂಬಾರಿ ಹೊತ್ತ ಬಲರಾಮ ಎಂಬ ಆನೆಯ ನೆನಪಾರ್ಥವಾಗಿ ಇಡಲಾದ ಹೆಸರು. ಈ ದ್ವಾರವು ಹಾಗೂ ಜಯರಾಮ ದ್ವಾರವು ಅಕ್ಕಪಕ್ಕದಲ್ಲಿದೆ. ಈ ದ್ವಾರದಲ್ಲಿ ಕಣ್ಮನ ಸೆಳೆಯುವ ಜಂಬೂಸವಾರಿಯ ದಿನದಂದು ಮುಖ್ಯಮಂತ್ರಿ, ಸಚಿವರು ಹಾಗೂ ಅಧಿಕಾರಿಗಳು ಚಿನ್ನದ ಅಂಬಾರಿ ಹೊತ್ತ ಆನೆಗೆ ಹಾಗೂ ಅಂಬಾರಿಯಲ್ಲಿರುವ ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ದ್ವಾರವಾಗಿದೆ. ಈ ದ್ವಾರದ ಸಮೀಪದಲ್ಲೇ ಕೋಟೆ ಗಣಪತಿ ದೇವಸ್ಥಾನವಿದೆ.

ಮೈಸೂರಿನ ಇತರೆ ಐತಿಹಾಸಿಕ ದ್ವಾರಗಳು

1. ಸಬರ್ಬನ್ ದ್ವಾರ : ಈ ದ್ವಾರವು ಬೆಂಗಳೂರು ನೀಲಗಿರಿ ರಸ್ತೆಯಲ್ಲಿರುವ ಸಬರ್ಬನ್ ಬಸ್ಸು ನಿಲ್ದಾಣದ ಬಳಿ ಇದೆ. 1805ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು, ಲಕ್ಷ್ಮಿ ಅಮ್ಮಣ್ಣಿ, ದಿವಾನ್ ಪೂರ್ಣಯ್ಯ ಅವರ ಕಾಲದಲ್ಲಿ ಬ್ರಿಟಿಷ್ ಅಧಿಕಾರಿಗಳು ನಿರ್ಮಿಸಿದರು, ಮೈಸೂರಿನ ಪ್ರಾಚೀನ ದ್ವಾರ ಎಂದು ಪ್ರಸಿದ್ಧಿಯಾಗಿದೆ. ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಗಳು ಮಹಾರಾಜರನ್ನು ಭೇಟಿ ಮಾಡಲು ಓಡಾಡುತ್ತಿದ್ದ ದ್ವಾರವಿದು.

2. ಜೇಮ್ಸ್ ಗಾರ್ಡನ್ ದ್ವಾರ : ಡಿಸಿ ಕಚೇರಿ ಅಥವಾ ಅಠಾರಾ ಕಚೇರಿ ಹಿಂಭಾಗದಲ್ಲಿರುವ ದ್ವಾರ ಇದಾಗಿದೆ. ಅಂದು ರೆಸಿಡೆಂಟ್ ಆಗಿದ್ದ ಜೇಮ್ಸ್ ಗಾರ್ಡನ್ ಓಡಾಡುತ್ತಿದ್ದ ದ್ವಾರ. ಈಗಿನ ಜನ ಆ ದ್ವಾರವನ್ನು ಡಿಸಿ ಕಚೇರಿ ಆರ್ಚ್ ಎಂದು ಕರೆಯುತ್ತಾರೆ.

3. ವೀರನಗೆರೆ ಬುರ್ಜ್ ದ್ವಾರ : ಪೈಲೆಟ್ ವೃತ್ತ ಮುಂಭಾಗದಲ್ಲಿ ಸಿಗುವ ದ್ವಾರ. 1610ರಲ್ಲಿ ಮೈಸೂರು ಹಾಗೂ ವೀರನಗೆರೆ ನಡುವೆ ಯುದ್ಧ ನಡೆದ ಸಂದರ್ಭದಲ್ಲಿ ನಿರ್ಮಿಸಿದ ದ್ವಾರ.

Whats_app_banner