Mysore News: ಮೈಸೂರಲ್ಲಿ ಶಿವನಿಗೆ ತೊಡಿಸೋದು ಅಪ್ಪಟ ಚಿನ್ನದ ಕೊಳಗ, ಈ ಬಾರಿ 3 ದಿನ ವೀಕ್ಷಣೆಗೆ ಅವಕಾಶ
ಕನ್ನಡ ಸುದ್ದಿ  /  ಕರ್ನಾಟಕ  /  Mysore News: ಮೈಸೂರಲ್ಲಿ ಶಿವನಿಗೆ ತೊಡಿಸೋದು ಅಪ್ಪಟ ಚಿನ್ನದ ಕೊಳಗ, ಈ ಬಾರಿ 3 ದಿನ ವೀಕ್ಷಣೆಗೆ ಅವಕಾಶ

Mysore News: ಮೈಸೂರಲ್ಲಿ ಶಿವನಿಗೆ ತೊಡಿಸೋದು ಅಪ್ಪಟ ಚಿನ್ನದ ಕೊಳಗ, ಈ ಬಾರಿ 3 ದಿನ ವೀಕ್ಷಣೆಗೆ ಅವಕಾಶ

Shivaratri 2024 ಮಹಾಶಿವರಾತ್ರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಕಲ ಸಿದ್ದತೆ, ಜಗತ್ಪ್ರಸಿದ್ಧ ಅರಮನೆ ಆವರಣದಲ್ಲಿರುವ ತ್ರಿಣೇಶ್ವರಸ್ವಾಮಿಯ ಮೂಲ ಶಿವಲಿಂಗಕ್ಕೆ ಧರಿಸುವ ಚಿನ್ನದ ಕೊಳಗ (ಚಿನ್ನದ ಮುಖವಾಡ) ಮುಜರಾಯಿ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.(ವರದಿ: ಪಿ.ರಂಗಸ್ವಾಮಿ, ಮೈಸೂರು)

ಮೈಸೂರಿನ ಅರಮನೆ ತ್ರಿಣೇಶ್ವರ ದೇವಸ್ಥಾನ ಹಾಗೂ ಚಿನ್ನದ ಕೊಳಗ
ಮೈಸೂರಿನ ಅರಮನೆ ತ್ರಿಣೇಶ್ವರ ದೇವಸ್ಥಾನ ಹಾಗೂ ಚಿನ್ನದ ಕೊಳಗ

ಮೈಸೂರು: ಈಗ ಎಲ್ಲೆಡೆ ಶಿವರಾತ್ರಿ ಸಡಗರ, ದೇಗುಲಗಳಲ್ಲಿ ತಯಾರಿ ಕ್ಷಣ, ಶಿವ ಭಕ್ತರಿಗೆ ದರ್ಶನ ಮಾಡುವ ತವಕ. ಕರ್ನಾಟಕದಲ್ಲಿ ಶಿವರಾತ್ರಿ ವಿಚಾರದಲ್ಲಿ ಒಂದೊಂದು ದೇಗುಲದಲ್ಲಿ ಒಂದು ರೀತಿಯ ಐತಿಹ್ಯ, ವಿಶೇಷಗಳಿವೆ. ಮೈಸೂರಿನ ಅರಮನೆ ಆವರಣದಲ್ಲಿರುವ ತ್ರಿಣೇಶ್ವರಸ್ವಾಮಿ ದೇಗುಲ ಮಾತ್ರ ಎಲ್ಲ ಶಿವ ದೇವಾಲಯಗಳಿಗಿಂತ ಭಿನ್ನ. ಏಕೆಂದರೆ ಶಿವರಾತ್ರಿಗೆ ತ್ರಿಣೇಶ್ವರ ಸ್ವಾಮಿಗೆ ತೊಡಿಸುವುದು ಅಪ್ಪಟ ಚಿನ್ನದ ಕೊಳಗ. ಮೈಸೂರು ಮಹಾರಾಜರು ನಿರ್ಮಿಸಿದ ದೇಗುಲಕ್ಕೆ ಅವರೇ ನೀಡಿರುವ ಚಿನ್ನದ ಕೊಳಗವನ್ನು ಪ್ರತಿ ವರ್ಷ ಶಿವರಾತ್ರಿ ವೇಳೆ ತೊಡಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಚಿನ್ನದ ಕೊಳಗೆ ದರ್ಶನಕ್ಕೂ ಭಕ್ತರಿಗೆ ಅವಕಾಶ ಮಾಡಿಕೊಡಲಾಗುತ್ತದೆ.

ಚಿನ್ನದ ಕೊಳಗದ ಮಹತ್ವ, ವಿಶೇಷವೇನು?

ಚಿನ್ನದ ಕೊಳಗ, ಚಿನ್ನದ ಮುಖವಾಡ ಎಂದು ಕರೆಯುವ ಇದನ್ನು ಬರೋಬ್ಬರಿ 11 ಕೆ ಜಿ ಶುದ್ದ ಚಿನ್ನದಿಂದ ಮಾಡಲಾಗಿದೆ. ಮೈಸೂರಿನ ಆಳರಸರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಈ ಚಿನ್ನದ ಕೊಳಗವನ್ನು ತ್ರಿಣೇಶ್ವರಸ್ವಾಮಿ ದೇಗುಲಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಪುತ್ರ ಸಂತಾನವಾದ ಸಂದರ್ಭದಲ್ಲಿ ಅಂದರೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ಸಂದರ್ಭದಲ್ಲಿ ಚಿನ್ನದ ಕೊಳಗವನ್ನು ತ್ರಿಣೇಶ್ವಸ್ವಾಮಿ ದೇಗುಲಕ್ಕೆ ಉಡುಗೊರೆಯಾಗಿ ನೀಡಲಾಗಿದೆ.

11 ಕೆ ಜಿ ತೂಕವಿರುವ ಚಿನ್ನದ ಮುಖವಾಡದಲ್ಲಿ ಈಶ್ವರನ ಮುಖ ನಗುಮೊಗದಿಂದ ಕೂಡಿದ್ದರೇ, ಜಟಾಧಾರಿ ಶಿವನ ತಲೆಯ ಮೇಲ್ಬಾಗದಲ್ಲಿ ಗಂಗೆ ಹಾಗು ಅರ್ಧ ಚಂದ್ರಾಕೃತಿ ಇರುವುದು ವಿಶೇಷ ಎನಿಸಿದೆ.

ವರ್ಷ ಪೂರ್ತಿ ಸರ್ಕಾರದ ಭದ್ರತಾ ಖಜಾನೆಯಲ್ಲಿರುವ ಈ ಅಪರೂಪದ ಚಿನ್ನದ ಕೊಳಗವನ್ನು ಪ್ರತಿವರ್ಷದ ಮಹಾಶಿವರಾತ್ರಿಯ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ಸುಪರ್ದಿಗೆ ನೀಡಲಾಗುತ್ತದೆ. ಶಿವರಾತ್ರಿ ಮುಗಿಯುತ್ತಿದ್ದಂತೆ ಮತ್ತೆ ಭದ್ರತಾ ಖಜಾನೆಯಲ್ಲಿರಿಸಲಾಗುತ್ತದೆ. ವರ್ಷಕ್ಕೊಮ್ಮೆ ಮೂಲ ಶಿವಲಿಂಗಕ್ಕೆ ಧಾರಣೆ ಮಾಡುವ ಚಿನ್ನದ ಕೊಳಗವನ್ನು ಈ ಬಾರಿ ಮೂರು ದಿನಗಳ ಕಾಲ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಈ ಬಾರಿಯೂ ಸಿದ್ದತೆ

ನಾಡಿನೆಲ್ಲೆಡೆ ಮಹಾಶಿವರಾತ್ರಿ ಆಚರಣೆಗೆ ಸಕಲ ಸಿದ್ದತೆಗಳು ನಡೆದಿವೆ. ಸಾಂಸ್ಕೃತಿಕ ನಗರಿ ಮೈಸೂರಿನ ವಿವಿಧೆಡೆಗಳಲ್ಲಿರುವ ಶಿವನ ದೇಗುಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.

ಅದರಲ್ಲೂ ಪ್ರಮುಖವಾಗಿ ಮೈಸೂರು ಅರಮನೆ ಆವರಣದಲ್ಲಿ ಇರುವ ಅತಿ ಪುರಾತನ ಶ್ರೀ ತ್ರಿಣೇಶ್ವರಸ್ವಾಮಿ ದೇಗಲದಲ್ಲಿ ಮಹಾಶಿವರಾತ್ರಿ ಅಂಗವಾಗಿ ನಡೆಯುವ ಧಾರ್ಮಿಕ ಕೈಂಕರ್ಯಗಳಿಗೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ.

ತ್ರಿಣೇಶ್ವರಸ್ವಾಮಿ ದೇಗುಲದಲ್ಲಿರುವ ಮೂಲ ಶಿವಲಿಂಗಕ್ಕೆ ಶಿವರಾತ್ರಿಯ ದಿನ ಚಿನ್ನದ ಕೊಳಗವನ್ನು ಧರಿಸಿ ವಿಶೇಷ ಪೂಜೆ ನೆರವೇರಿಸುವುದು ಇಲ್ಲಿನ ವಿಶೇಷ ಆಗಿದೆ. ವರ್ಷಕ್ಕೆ ಒಂದು ದಿನ ಶಿವರಾತ್ರಿಯ ದಿನದಂದು ಮಾತ್ರ ಅಪರೂಪದ ಈ ಚಿನ್ನದ ಕೊಳಗವನ್ನು ಧರಿಸಲಾಗುತ್ತದೆ. ಚಿನ್ನದ ಕೊಳಗವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಮಹಾಶಿವರಾತ್ರಿಯ ದಿನ ಬೆಳಗಿನ ಜಾವ 4:30ರಿಂದ 5:30ರ ವರೆಗೂ ಮಹಾನ್ಯಾಸಪೂರ್ವಕ ರುದ್ರಾಭಿಷೇಕ ಸೇರಿದಂತೆ ವಿವಿಧ ಬಗೆಯ ಧಾರ್ಮಿಕ ವಿಧಿಗಳನ್ನು ನೆರವೇರಿಸಿದ ಬಳಿಕ ಬೆಳಿಗ್ಗೆ ಆರು ಗಂಟೆಯಿಂದ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಈ ಬಾರಿ ಮೂರು ದಿನಗಳ ಕಾಲ ಚಿನ್ನದ ಕೊಳಗವನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶುಕ್ರವಾರ ಬೆಳಿಗ್ಗೆಯಿಂದ ಭಾನುವಾರ ರಾತ್ರಿಯವರೆಗೂ ಚಿನ್ನದ ಕೊಳಗ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ. ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮೈಸೂರಿಗೆ ಬರುವುದರಿಂದ ಈ ಬಾರಿ ಮೂರು ದಿನಗಳ ಕಾಲ ಚಿನ್ನದ ಕೊಳಗ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

(ವರದಿ: ಪಿ.ರಂಗಸ್ವಾಮಿ, ಮೈಸೂರು)

Whats_app_banner