Vijaya Dabbe Award: ಸಾಹಿತಿ ಡಾ.ಉಷಾಗೆ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ, ಮೈಸೂರಿನಲ್ಲಿ ಜುಲೈ 21ಕ್ಕೆ ಪ್ರಶಸ್ತಿ ಪ್ರದಾನ
ಕನ್ನಡ ಸುದ್ದಿ  /  ಕರ್ನಾಟಕ  /  Vijaya Dabbe Award: ಸಾಹಿತಿ ಡಾ.ಉಷಾಗೆ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ, ಮೈಸೂರಿನಲ್ಲಿ ಜುಲೈ 21ಕ್ಕೆ ಪ್ರಶಸ್ತಿ ಪ್ರದಾನ

Vijaya Dabbe Award: ಸಾಹಿತಿ ಡಾ.ಉಷಾಗೆ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ, ಮೈಸೂರಿನಲ್ಲಿ ಜುಲೈ 21ಕ್ಕೆ ಪ್ರಶಸ್ತಿ ಪ್ರದಾನ

Literary Award ಮೈಸೂರಿನ ಸಮತಾ ಅಧ್ಯಯನ ಕೇಂದ್ರವು ದಿವಂಗತ ವಿಜಯಾ ದಬ್ಬೆ ಅವರ ನೆನಪಿನಲ್ಲಿ ನೀಡುವ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತಿ ಡಾ.ಎಂ.ಉಷಾ ಅವರಿಗೆ ಪ್ರದಾನ ಮಾಡಲಿದೆ.

ಡಾ.ವಿಜಯಾದಬ್ಬೆ ಅವರ ಪ್ರಶಸ್ತಿ ಸ್ವೀಕರಿಸಲಿರುವ ಡಾ.ಎಂ.ಉಷಾ( ಬಲ)
ಡಾ.ವಿಜಯಾದಬ್ಬೆ ಅವರ ಪ್ರಶಸ್ತಿ ಸ್ವೀಕರಿಸಲಿರುವ ಡಾ.ಎಂ.ಉಷಾ( ಬಲ)

ಮೈಸೂರು: ಸಮತಾ ಅಧ್ಯಯನ ಕೇಂದ್ರ (ರಿ)ವು ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜುಲೈ 21ರ ಭಾನುವಾರ ಬೆಳಗ್ಗೆ 10.30ಕ್ಕೆ ಸರಸ್ವತಿ ಪುರಂ ಕಾಮಾಕ್ಷಿ ಆಸ್ಪತ್ರೆ ‌ಸಮೀಪದ ರೋಟರಿ‌ ಪಶ್ಚಿಮ ಸಭಾಂಗಣದಲ್ಲಿ ಆಯೋಜಿಸಿದೆ. ಹಂಪಿ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕಿ ಡಾ. ಎಂ.ಉಷಾ ಅವರಿಗೆ 2024ನೇ ಸಾಲಿನ ಪ್ರಶಸ್ತಿಯನ್ನು ಪುಣೆಯ ಸಿಂಬಯಾಸಿಸ್ ಕಾನೂನು ಕಾಲೇಜು ಡೀನ್ ಡಾ.ಶಶಿಕಲಾ ಗುರುಪುರ ಅವರು ಪ್ರದಾನ ಮಾಡುವರು. ಶಿವಮೊಗ್ಗದ 'ಅಹರ್ನಿಶಿ' ಪ್ರಕಾಶನ ಪ್ರಕಟಿಸಿರುವ ಉಷಾ ಅವರ 'ಬಾಳ‌ ಬಟ್ಟೆ' ಕಾದಂಬರಿಯನ್ನು 25 ಸಾವಿರ ರೂ. ನಗದು ಬಹುಮಾನ, ಫಲಕವನ್ನು ಒಳಗೊಂಡ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷರೂ ಆಗಿರುವ ವಿಶ್ರಾಂತ ಕುಲಪತಿ ಪ್ರೊ.ಸಬೀಹಾಭೂಮಿಗೌಡ ತಿಳಿಸಿದ್ದಾರೆ.

ವಿಜಯಾದಬ್ಬೆ ಅವರ ಒಡನಾಡಿಯಾಗಿದ್ದ ನಿವೃತ್ತ ಪ್ರಾಂಶುಪಾಲ ಡಾ.ಟಿ. ಸುಬ್ರಹ್ಮಣ್ಯಂ ಅವರು ತಮ್ಮ ಮತ್ತು‌ ವಿಜಯಾ ಅವರ ಒಡನಾಟದ ಕುರಿತು ಮಾತನಾಡುವರು. ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಅವರು ಅಧ್ಯಕ್ಷತೆ ವಹಿಸುತ್ತಾರೆ.ವಿಜಯಾ ದಬ್ಬೆ ಅವರ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯ‌ ಮಟ್ಟದ ಕಾವ್ಯ ಮತ್ತು ಲಲಿತ ಪ್ರಬಂಧ‌ ಸ್ಪರ್ಧೆಗಳಲ್ಲಿ ಬಹುಮಾನ ಪಡೆದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಗುತ್ತದೆ.

ಕವನ ವಿಭಾಗದಲ್ಲಿ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವೈ.ಎಸ್‌.ಅಭಿಷೇಕ್‌ ಪ್ರಥಮ, ದಾವಣಗೆರೆ ವಿವಿಯ ಕೆ.ರುಜುವಾನ್‌ ದ್ವಿತೀಯ, ದಾವಣಗೆರೆ ವಿವಿಯ ಅಮಿತ ಎಂ.ಕುಡುಚೆ ಅವರು ತೃತೀಯ ಸ್ಥಾನ ಪಡೆದಿದ್ದಾರೆ ಇದೇ ವಿಭಾಗದಲ್ಲಿ ಬೆಳಗಾವಿನ ತಾನಾಜಿ ಗಲ್ಲಿಯ ಸಂಜನಾ ಯಂಭತ್ನಾಳ್‌, ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ರಶ್ಮಿ ಎಸ್.ನಾಯಕ್‌, ಕಾಸರಗೋಡು ಕೇರಳ ಕೇಂದ್ರೀಯ ವಿವಿಯ ಪಿ. ರಂಜಿತಾ, ಬಂಟ್ವಾಳದ ಕೊಳ್ನಾಡುವಿನ ಮಹಮ್ಮದ್‌ ಷರೀಫ್‌ ಕಾಡುಮಠ, ಶಿವಮೊಗ್ಗದ ಹರತಾಳುವಿನ ಕೆ.ಜಿ.ಸಹನ , ಮೈಸೂರು ವಿನಾಯಕ ನಗರದ ಪಿ.ಆರ್.ರಂಜಿತಾ, ಹಿರಿಯೂರು ತಾಲ್ಲೂಕು ಮ್ಯಾದನಾಳುವಿನ ಎಂ.ಪಿ.ಸಂದೀಪ್‌, ಮೈಸೂರು ತಾಲ್ಲೂಕು ಬೊಮ್ಮೇನಹಳ್ಳಿಯ ಎನ್‌.ಶೃತಿ, ಮಂಗಳೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಎಸ್.ಹರ್ಷಿತಾ, ದಕ್ಷಿಣ ಕನ್ನಡ ನೂಜಿ ಬಾಳಿಲದ ಎಚ್‌.ಸಮ್ಯಕ್ತ ಅವರಿಗೆ ಸಮಾಧಾನಕರ ಬಹುಮಾನ ಲಭಿಸಿದೆ.

ಲಲಿತ ಪ್ರಬಂಧ ವಿಭಾಗದಲ್ಲಿ ಕಾಸರಗೋಡು ಕೇರಳ ಕೇಂದ್ರೀಯ ವಿವಿ ಕನ್ನಡ ವಿಭಾಗದ ಆರ್‌. ನವ್ಯಾ ಪ್ರಥಮ, ಕೊಡಗಿನ ಡಾ.ಕೆ.ಎಸ್‌.ಮುಸ್ತ್ ಫಾ ದ್ವಿತೀಯ ಹಾಗೂ ಮಂಗಳೂರು ವಿವಿಯ ಎಸ್‌.ಸಂಧ್ಯಾ ತೃತೀಯ ಸ್ಥಾನ ಪಡೆದಿದ್ದಾರೆ. ಇದೇ ವಿಭಾಗದಲ್ಲಿ ಕಾಸರಗೋಡಿನ ಕೇರಳ ಕೇಂದ್ರೀಯ ವಿವಿಯ ಎಂ.ತೇಜಶ್ರೀ, ಮೈಸೂರು ಜೆಎಸ್‌ಎಸ್‌ ಕಾಲೇಜಿನ ಆರ್.‌ಕುಸುಮಬಾಯಿ, ಕಾಸರಗೋಡು ಕೇರಳ ಕೇಂದ್ರೀಯ ವಿವಿಯ ಕೆ.ಸ್ವಾತಿ. ಕುಂದಾಪುರ ತಾಲೂಕು ಮೊಳಹಳ್ಳಿಯ ರಶ್ಮಿ ಉಡುಪ. ದಾವಣಗೆರೆಯ ಎಚ್‌.ನಾಗರತ್ನ ಅವರಿಗೆ ಸಮಾಧಾನಕರ ಬಹುಮಾನ ನೀಡಲಾಗುತ್ತಿದೆ.

20ಕ್ಕೆ ಸಾಹಿತ್ಯ ಕಮ್ಮಟ

ಕಾವ್ಯ ಮತ್ತು ಲಲಿತ ಪ್ರಬಂಧ‌ ಸ್ಪರ್ಧೆಗಳಲ್ಲಿ ಬಹುಮಾನ ಪಡೆದವರು ಮತ್ತು ಆಸಕ್ತರಿಗಾಗಿ ಜುಲೈ 20ರ ಶನಿವಾರ ಗಂಗೋತ್ರಿ ಬಡಾವಣೆಯ ಯೂತ್ ಹಾಸ್ಟೆಲ್ ನಲ್ಲಿ ಕಾವ್ಯ ಮತ್ತು ಪ್ರಬಂಧ ಕಮ್ಮಟವನ್ನು ಆಯೋಜಿಸಲಾಗಿದೆ.

ಅಂದು‌ ಬೆಳಗ್ಗೆ 10 ಕ್ಕೆ ಆರಂಭವಾಗುವ ಮೊದಲ ಗೋಷ್ಠಿಯಲ್ಲಿ ಕವಯತ್ರಿಯರಾದ ಎಚ್.ಆರ್.ಸುಜಾತ ಮತ್ತು ಮೌಲ್ಯ ಸ್ವಾಮಿ ಕಾವ್ಯಾನುಸಂಧಾನ ನಡೆಸುವರು. ನಂತರ ನಡೆಯುವ ಪ್ರಬಂಧ ಕಮ್ಮಟದಲ್ಲಿ ಲೇಖಕ ಡಾ.ರಾಜಪ್ಪ ದಳವಾಯಿ ಅವರು ಸಂಪನ್ಮೂಲ ವ್ಯಕ್ತಿಯಾಗಿರುವರು. ಮಧ್ಯಾಹ್ನ 2 ಕ್ಕೆ ಆರಂಭವಾಗುವ 3 ನೇ ಗೋಷ್ಠಿಯಲ್ಲಿ ಡಾ. ಶಶಿಕಲಾ ಗುರುಪುರ ಅವರು 'ಸಂವೇದನಾಶೀಲ ಬರಹ-ಕೆಲವು ಆಯಾಮಗಳು' ವಿಷಯವಾಗಿ ಶಿಬಿರಾರ್ಥಿಗಳೊಂದಿಗೆ ಸಂವಾದಿಸುವರು ಎಂದು ಕೇಂದ್ರದ ಸಹ ಕಾರ್ಯದರ್ಶಿ ಪಿ. ಓಂಕಾರ್‌ ತಿಳಿಸಿದ್ದಾರೆ.

Whats_app_banner