ಕನ್ನಡ ಸುದ್ದಿ  /  Karnataka  /  Mysore News Mysore Shankaralaya Centenary Vidhura Shekar Swami Calls To Fallow Santhanam Guru Parampara Kub

Mysore News: ಸನಾತನ ಗುರು ಪರಂಪರೆಗೆ ಗೌರವಿಸುವುದು ನಮ್ಮ ಕರ್ತವ್ಯವಾಗಲಿ, ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಕಿವಿಮಾತು

ಮೈಸೂರಿನ ಶಂಕರಾಲಯದ ಶತಮಾನೋತ್ಸವ ಅಂಗವಾಗಿ ಭಾನುವಾರ ನಾನಾ ಕಾರ್ಯಕ್ರಮಗಳು ಜರುಗಿದವು.

ಮೈಸೂರಿನ ಶಂಕರಾಲಯದ ಶತಮಾನೋತ್ಸವದಲ್ಲಿ ಶ್ರೀ ವಿಧುರಶೇಖರ ಭಾರತಿ ಸ್ವಾಮೀಜಿ ಆಶಿರ್ವಚನ ನೀಡಿದರು,
ಮೈಸೂರಿನ ಶಂಕರಾಲಯದ ಶತಮಾನೋತ್ಸವದಲ್ಲಿ ಶ್ರೀ ವಿಧುರಶೇಖರ ಭಾರತಿ ಸ್ವಾಮೀಜಿ ಆಶಿರ್ವಚನ ನೀಡಿದರು,

ಮೈಸೂರು: ಸನಾತನ ಗುರು ಪರಂಪರೆಗೆ ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಯಾವುದೇ ವಿಷಯವನ್ನು ಸಂಕ್ಷಿಪ್ತವಾಗಿ ಹೇಳುವಾಗ ಮುಖ್ಯಾಂಶಕ್ಕೆ ಆದ್ಯತೆ ನೀಡುತ್ತಾರೆ. ಹಾಗೆಯೇ ಗುರುಮಹಿಮೆಯನ್ನು ಒಂದು ಶ್ಲೋಕದಲ್ಲಿ ಪಠಿಸುತ್ತಾರೆ. ಗುರುಗಳ ಹಿರಿಮೆ, ಸಾಧನೆ, ವಿಶೇಷತೆಗಳನ್ನು ಸಮಗ್ರವಾಗಿ ತಿಳಿಯುವ ಕಾರ್ಯ ನಮ್ಮಿಂದಲೇ ಆಗಬೇಕು. ಇದರಿಂಧ ಬದುಕು ಸಾರ್ಥಕವಾಗುತ್ತದೆ. ಇದು ಶೃಂಗೇರಿಯ ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಅವರು ಭಕ್ತರಿಗೆ ತಿಳಿಸಿದ ಕಿವಿಮಾತು.ಮೈಸೂರಿನ ಅಗ್ರಹಾರದ ‘ಅಭಿನವ ಶಂಕರಾಲಯ’ದ ಶತಮಾನೋತ್ಸವ ಸಂಭ್ರಮಾಚರಣೆಯ ಎರಡನೇ ದಿನವಾದ ಭಾನುವಾರ ಹಮ್ಮಿಕೊಂಡಿದ್ದ ಮಹಾರುದ್ರ ಜಪ ಮತ್ತು ಶತಚಂಡಿ ಪಾರಾಯಣಕ್ಕೆ ಚಾಲನೆ ನೀಡಿ, ಪಾದಪೂಜೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.

ಆದಿಗುರು ಶಂಕರರು ಭರತಖಂಡದಲ್ಲಿ ಚತುರಾಮ್ನಾಯ ಪೀಠ ಮಾಡಿದರು. ಅದರಲ್ಲಿ ಶೃಂಗೇರಿ ಅಗ್ರಪೀಠ. ಇದೇ ಪರಂಪರೆಯ 33ನೇ ಯತಿ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀಯವರು ಮಹಾನ್ ಸಾಧಕರು. ಅವರಿಗೆ ಜನ್ಮ ನೀಡಿದ ಮನೆಯೇ ಈ ಮಂದಿರವಾಯಿತು. (ಅದಕ್ಕೀಗ 100 ವರ್ಷ ಪೂರ್ಣಗೊಂಡ ಸಂಭ್ರಮದಲ್ಲಿ ನಾವಿದ್ದೇವೆ.) ಇವರು ಅದ್ವೈತ ತತ್ವ, ಸಿದ್ಧಾಂತ ಪ್ರಚಾರ ಮಾಡಿದ್ದಲ್ಲದೇ ‘ಶಂಕರ ಜಯಂತಿ’ ಯನ್ನು ಆಚರಣೆಗೆ ತಂದರು. ದೇಶದ ಹಲವೆಡೆ ವಿದ್ಯಾಪೀಠ ಸ್ಥಾಪಿಸಿ, ವೈದಿಕ ವಿದ್ಯೆಯನ್ನು ಹೊಸ ಪೀಳಿಗೆಗೆ ಧಾರೆ ಎರೆದರು.

ಶಂಕರರ ಜನ್ಮಸ್ಥಳ ಕಾಲಟಿಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಿದ ಕೀರ್ತಿ ನೃಸಿಂಹ ಭಾರತೀ ಅವರಿಗೆ ಸಲ್ಲುತ್ತದೆ.ಬ್ರಿಟಿಷ್ ಆಡಳಿತವಿದ್ದ ಸಂದಿಗ್ಧ ಕಾಲದಲ್ಲೂ ಅವರು ಧರ್ಮ, ಸಂಸ್ಕೃತಿ ಉಳಿಸಿ ಬೆಳೆಸಲು ಶ್ರಮಿಸಿದ್ದು ದೊಡ್ಡ ಸಾಧನೆ. ಹಾಗಾಗಿ ಇವರು ಅಭಿನವ ಶಂಕರರೆಂದೇ ಖ್ಯಾತರಾಗಿದ್ದಾರೆ ಎಂದರು.

ಒಟ್ಟಾರೆ ಗುರುಸ್ಮರಣೆಯೇ ನಮಗೆ ಶಕ್ತಿ. ಅವರು ನಡೆದಾಡಿದ ಮನೆಯಲ್ಲಿ, ತೋರಿಸಿಕೊಟ್ಟ ಮಾರ್ಗದಲ್ಲಿ ಸಾಗುವುದು ಎಲ್ಲರ ಧ್ಯೇಯವಾಗಲೆಂದು ವಿಧುಶೇಖರ ಭಾರತೀ ತೀರ್ಥರು ಸಂದೇಶವಿತ್ತರು.

ಶತಚಂಡಿ ಪಾರಾಯಣ

ಮಠದ ಆವರಣದಲ್ಲಿ ಭಾನುವಾರ ಬೆಳಗ್ಗೆ 9 ರಿಂದ ಮಹಾರುದ್ರ ಜಪ ಮತ್ತು ಶತಚಂಡಿ ಪಾರಾಯಣ ಚಾಲನೆಗೊಂಡಿತು. ಶೃಂಗೇರಿಯ ನೂರಾರು ಋತ್ವಿಜರು, ಪಂಡಿತರು, ಅದ್ವೈತ ವಿದ್ವಾಂಸರು, ಮಠದ ಪ್ರಮುಖರು ಭಾಗವಹಿಸಿದ್ದರು. ಎಲ್ಲರಿಗೂ ತೀರ್ಥ ಪ್ರಸಾದ ಮತ್ತು ಅನ್ನ ಸಂತರ್ಪಣೆ ನಡೆಯಿತು. ನೂರಾರು ಭಕ್ತರು ಗುರುಗಳಿಗೆ ಪಾದಪೂಜೆ ನೆರವೇರಿಸಿ ಧನ್ಯತೆ ಮೆರೆದರು. ಸಂಜೆ ನಗರದ ವಿವಿಧ ದೇವಾಲಯ ಹಾಗೂ ಸಂಘ-ಸಂಸ್ಥೆಗಳಿಗೆ ಗುರುಗಳು ಭೇಟಿ ನೀಡಿದರು. ನಂತರ ಮಠದಲ್ಲಿ ಶ್ರೀ ಚಂದ್ರಮೌಳೇಶ್ವರ ಪೂಜೆ ನೆರವೇರಿಸಿದರು. ಸಂಜೆ ಖ್ಯಾತ ಕಲಾವಿದ ವಿದ್ವಾನ್ ಶಿವಶಂಕರ ಸ್ವಾಮಿ ತಂಡದಿಂದ ‘ಲಯ ಶಂಕರ- ವಾದ್ಯ ವೈಭವ’ ನೆರವೇರಿತು.

ಸೋಮವಾರದ ಕಾರ್ಯಕ್ರಮ

* ನಂಜನಗೂಡಿಗೆ ಭೇಟಿ

ಏ. 1ರ ಸೋಮವಾರ ಬೆಳಗ್ಗೆ 8ಕ್ಕೆ ವಿಧುರ ಶೇಖರ ಭಾರತಿ ಸ್ವಾಮೀಜಿ ಅವರು ನಂಜನಗೂಡಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅಂದು ರಾತ್ರಿ 8.30ಕ್ಕೆ ಮೈಸೂರಿನ ಶಂಕರಮಠದಲ್ಲಿ ಶ್ರೀ ಚಂದ್ರಮೌಳೇಶ್ವರ ಪೂಜೆ ನಡೆಸಲಿದ್ದಾರೆ.

ಸಂಜೆ ಪಿಟೀಲು ವಾದನ

ಏ. 1ರಂದು ಸಂಜೆ 6ಕ್ಕೆ ಯುವ ಕಲಾವಿದರಾದ ಸುಮುಖ ಮತ್ತು ರೂಪನಗುಡಿ ರತ್ನತೇಜ (ದ್ವಂದ್ವ ಪಿಟೀಲು) ಕಛೇರಿಗೆ ವಿಕ್ರಂ ಭಾರದ್ವಾಜ (ಮೃದಂಗ) ಮತ್ತು ಟಿ.ಎನ್. ಅಜಯ್ (ಘಟ) ಸಹಕಾರ ನೀಡಲಿದ್ದಾರೆ . ನಂತರ ಖ್ಯಾತ ಕಲಾವಿದರಾದ ಮೈಸೂರು ಮಂಜುನಾಥ್- ನಾಗರಾಜ್ (ದ್ವಂದ್ವ ಪಿಟೀಲು) ಕಛೇರಿ ರಂಜಿಸಲಿದೆ.

IPL_Entry_Point