Mysore Dasara 2024: ಮೈಸೂರು ದಸರಾಗೆ ಸಿದ್ದತೆ, ಅರ್ಜುನ, ಅಶ್ವತ್ಥಾಮನ ನಂತರ ಹೊಸ ಆನೆಗಳ ಆಯ್ಕೆ, ಈ ಬಾರಿ ಹೇಗಿರಲಿದೆ ಗಜಪಡೆ ತಂಡ
Dasara Elephants ಮೈಸೂರು ದಸರಾದಲ್ಲಿ( Mysore Dasara) ಭಾಗಿಯಾಗಲಿರುವ ಆನೆಗಳ ಆಯ್ಕೆ( Elephants Selection ) ಪ್ರಕ್ರಿಯೆಯನ್ನು ಕರ್ನಾಟಕ ಅರಣ್ಯ ಇಲಾಖೆ( Karnataka Forest Department) ಆರಂಭಿಸಿದೆ.

ಮೈಸೂರು: ಮೈಸೂರು ದಸರಾ ಎಂದರೆ ಥಟ್ಟನೇ ನೆನಪಾಗೋದು ಜಂಬೂಸವಾರಿ. ಆ ಜಂಬೂಸವಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ ಮೂರ್ತಿಯನ್ನು ಹೊತ್ತು ಸಾಗುವ ಸಾಲಂಕೃತ ಆನೆಗಳೂ ಕೂಡ ಅಷ್ಟೇ ಮಹತ್ವ. ಶತಮಾನದಿಂದಲೂ ದಸರಾ ಹಾಗೂ ಜಂಬೂಸವಾರಿಯ ಭಾಗವಾಗಿ ಆನೆಗಳು ಪಾಲ್ಗೊಳ್ಳುತ್ತಿವೆ. ಗಂಡು ಹಾಗೂ ಹೆಣ್ಣು ಆನೆಗಳು ತಂಡವಾಗಿ ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಆನೆ ಶಿಬಿರಗಳಿಂದ ಬರುತ್ತವೆ. ಎರಡು ತಿಂಗಳ ಕಾಲ ಮೈಸೂರು ಅರಮನೆ ಅಂಗಳದಲ್ಲಿಯೇ ನೆಲೆಸಿ ಸಂಭ್ರಮ ಹೆಚ್ಚಿಸುತ್ತವೆ. ಈ ಬಾರಿಯ ದಸರಾವೂ 2024ರ ಅಕ್ಟೋಬರ್‌ನಲ್ಲಿ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಮೊದಲು ಆನೆಗಳನ್ನು ಮೈಸೂರಿಗೆ ಕರೆತರುವ ಚಟುವಟಿಕೆಗಳು ಶುರುವಾಗಿವೆ. ಮೊದಲ ಹಂತವಾಗಿ ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಮೈಸೂರು ವನ್ಯಜೀವಿ ವಿಭಾಗವು ಆರಂಭಿಸಿದೆ.
2023-24 ಸಾಕಾನೆಗಳ ವಿಚಾರದಲ್ಲಿ ದುರಂತ ವರ್ಷವೇ. ನಾಗರಹೊಳೆ ಆನೆ ಶಿಬಿರದಲ್ಲಿದ್ದ ಹಲವಾರು ಆನೆಗಳು ಜೀವ ಬಿಟ್ಟಿವೆ. ಬಲರಾಮ ಆಣೆ ಗುಂಡೇಟಿನಿಂದ ಗಾಯಗೊಂಡು ಮೃತಪಟ್ಟಿತು. ಅರ್ಜುನ ಆನೆ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಜೀವ ಕಳೆದುಕೊಂಡಿತು. ಅಶ್ವತ್ಥಾಮ ಆನೆ ವಿದ್ಯುತ್ ತಂತಿ ತಗುಲಿ ಜೀವ ಬಿಟ್ಟಿತು. ಇದರೊಟ್ಟಿಗೆ ಇನ್ನೂ ಆನೇಕ ಆನೆಗಳು ಮೃತಪಟ್ಟಿವೆ. ಇದರಿಂದ ದಸರಾಗೆ ತರುವ ಆನೆಗಳ ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಗೊಂದಲಗಳಿದ್ದರೂ ಹೊಸ ಆನೆಗಳಿಗೆ ಹುಡುಕಾಟ ಮಾಡುತ್ತಿದ್ದಾರೆ. ಇದಕ್ಕಾಗಿ ಕೊಡಗಿನ ದುಬಾರೆ, ನಾಗರಹೊಳೆಯ ಮತ್ತಿಗೋಡು, ಬಂಡೀಪುರದ ರಾಂಪುರ ಆನೆ ಶಿಬಿರ ಸೇರಿ ಹಲವೆಡೆ ಹೊಸ ಆನೆಗಳ ತಲಾಷ್ ಚುರುಕುಗೊಂಡಿದೆ. ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಶರಣಬಸಪ್ಪ ಅವರ ತಂಡವು ಈಗಾಗಲೇ ಒಂದು ಸುತ್ತು ಆನೆ ಶಿಬಿರಗಳಿಗೆ ಭೇಟಿ ನೀಡಿ ಮೊದಲ ಹಂತದ ಆನೆಗಳ ಪಟ್ಟಿ ಮಾಡಿಕೊಂಡಿದೆ.
ದಸರಾಗೆ ಮೊದಲ ಹಂತದಲ್ಲಿ ಎಂಟು ಹಾಗೂ ಎರಡನೇ ಹಂತದಲ್ಲಿ ಆರು ಆನೆಗಳು ಬರುತ್ತವೆ. ಮೊದಲ ಹಂತದಲ್ಲಿ ಬರುವ ಆನೆಗಳು ಎರಡು ತಿಂಗಳು ಮೈಸೂರಿನಲ್ಲಿದ್ದು ಪ್ರಮುಖ ಜವಾಬ್ದಾರಿ ನಿಭಾಯಿಸಲಿವೆ. ಎರಡನೇ ತಂಡದ ಆನೆಗಳು ಮುಂದಿನ ತಯಾರಿಗೆ ಎನ್ನುವಂತೆ ಒಂದು ತಿಂಗಳು ಇದ್ಧಾಗ ಬರಲಿವೆ. ಒಟ್ಟು ಹದಿನಾಲ್ಕು ಆನೆಗಳ ಆಯ್ಕೆಗೆ ಈಗಾಗಲೇ ಹದಿನೆಂಟು ಆನೆಗಳ ಪಟ್ಟಿಯನ್ನು ಸಿದ್ದಪಡಿಸಲಾಗಿದೆ.
ಈ ಬಾರಿಯೂ ಅಭಿಮನ್ಯುವೇ ಅಂಬಾರಿ ಹೊರುವುದು ನಿಶ್ಚಿತ. ಅದಕ್ಕೀಗ 58 ವರ್ಷ. ಇದರಿಂದ ಇನ್ನೂ ಎರಡು ವರ್ಷ ಅಂಬಾರಿ ಹೊರಲು ಕಾನೂನಿನ ತೊಡಕಿಲ್ಲ. ಈ ಆನೆಯೇ ಕ್ಯಾಪ್ಟನ್ ಆಗಿರಲಿದೆ. ಉಳಿದಂತೆ ಮುಂದಿನ ಕ್ಯಾಪ್ಟನ್ ಆಗಬಹುದಾದ ಭೀಮ, ಮಹೇಂದ್ರ, ಧನಂಜಯ, ಗೋಪಿ ಜತೆಗೆ ಕಂಜನ್, ಸುಗ್ರೀವ ,ಪ್ರಶಾಂತ, ರೋಹಿತ್ ಆನೆಗಳ ಪಟ್ಟಿ ಮಾಡಿಕೊಳ್ಳಲಾಗಿದೆ. ಇನ್ನು ಕುಮ್ಕಿ ಆನೆಗಳ ಪಟ್ಟಿಯಲ್ಲಿ ಮೂರು ಆನೆಗಳನ್ನು ಗುರುತಿಸಲಾಗಿದೆ. ಹಿರಣ್ಯ ಲಕ್ಷ್ಮಿ, ವರಲಕ್ಷ್ಮಿ, ದೊಡ್ಡ ಹರವೆ ಶಿಬಿರದ ಲಕ್ಷ್ಮಿ ಆನೆ ಹೆಸರುಗಳಿವೆ.
ಆನೆಗಳ ಆಯ್ಕೆ ಸುಲಭವಲ್ಲ. ಕೊಂಚ ವ್ಯತ್ಯಾಸವಾದರೂ ದೊಡ್ಡ ಮಟ್ಟದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಹಿಂದೆಲ್ಲಾ ಗರ್ಭ ಧರಿಸಿದ ಆನೆಗಳು ಹಾಗೂ ಮದಕ್ಕೆ ಬಂದ ಆನೆ ತಂದು ತೊಂದರೆ ಅನುಭವಿಸಿರುವ ಉದಾಹರಣೆ ಇದೆ. ಇಲ್ಲಿಯೇ ಆನೆಗಳು ಮರಿ ಹಾಕಿವೆ. ಅರ್ಜುನ ಮದವೇರಿ ಮಾವುತನನ್ನೇ ಕೊಂದದ್ದೂ ಕಣ್ಣ ಮುಂದೆ ಇದೆ. ಈ ಕಾರಣದಿಂದಲೇ ಆನೆಗಳನ್ನು ಎಚ್ಚರಿಕೆಯಿಂದ ವನ್ಯಜೀವಿ ವೈದ್ಯರು ಹಾಗೂ ಆನೆ ಮಾವುತ, ಕವಾಡಿಗರ ಮಾಹಿತಿಯೊಂದಿಗೆ ಪಟ್ಟಿ ಮಾಡಿಕೊಳ್ಳಲಾಗಿದೆ ಎನ್ನುವುದು ಅಧಿಕಾರಿಗಳ ವಿವರಣೆ.
2024ನೇ ಸಾಲಿನ ನಾಡಹಬ್ಬ ದಸರಾವು ಅಕ್ಟೋಬರ್5ರಂದು ಆರಂಭಗೊಳ್ಳಲಿದೆ. ಅಕ್ಟೋಬರ್ 12ರ ವಿಜಯದಶಮಿಯಂದು ಜಂಬೂ ಸವಾರಿ ನಡೆಯಲಿದೆ. ಇನ್ನು ಆನೆಗಳನ್ನು ಕಾಡಿನಿಂದ ಸ್ವಾಗತಿಸುವ ಗಜಪಯಣ ಕಾರ್ಯಕ್ರಮವು ಆಗಸ್ಟ್ 9 ಅಥವಾ 11ಕ್ಕೆ ನಡೆಯಲಿದೆ. ಆನಂತರ ಮೈಸೂರು ಅರಮನೆ ಆವರಣದಲ್ಲಿ ಆನೆಗಳನ್ನು ಸ್ವಾಗತಿಸಲಾಗುತ್ತದೆ. ಮಾಸಾಂತ್ಯಕ್ಕೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದ್ದು. ಅಲ್ಲಿ ಈ ಎಲ್ಲಾ ದಿನಾಂಗಳು ಅಂತಿಮವಾಗಲಿವೆ.
ಈ ಬಾರಿ ದಸರಾಗೆ ಮೈಸೂರು ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೊಸಬರು. ಸರ್ಕಾರ ಡಿಸಿ, ಎಸ್ಪಿ ಹಾಗೂ ಪೊಲೀಸ್ ಆಯುಕ್ತರನ್ನು ಈಗಾಗಲೇ ವರ್ಗ ಮಾಡಿದೆ.
