Mysuru Muda Scam: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಕ್ರಮದ ಸದ್ದು, ಸಿಎಂ ಪತ್ನಿಗೂ ನಿವೇಶನ ಮಂಜೂರು ಆರೋಪ,ಅಧಿಕಾರಿಗಳ ಎತ್ತಂಗಡಿ
Cm Siddaramaiah ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ನೀಡುವ ಬದಲಿ ನಿವೇಶನದಲ್ಲಿ ಭಾರೀ ಅಕ್ರಮದ ಸದ್ದು ಕೇಳಿ ಬಂದಿದ್ದು, ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೂ ನಿವೇಶನ ನೀಡಿರುವ ಆರೋಪ ವ್ಯಕ್ತವಾಗಿದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.
ಮೈಸೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ( Mysuru urban Development authority) ನಿವೇಶನ ಹಂಚಿಕೆ( Site Allotment scam) ವಿಚಾರದಲ್ಲಿ ಭಾರೀ ಅಕ್ರಮದ ಆರೋಪಗಳು ಕೇಳಿ ಬಂದಿವೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ( CM Siddaramaiah) ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹೆಸರಿಗೂ ನಿವೇಶನಗಳನ್ನು ಮಾಡಿಕೊಡಲಾಗಿದೆ. ಅಂದಾಜು 5 ಸಾವಿರ ಕೋಟಿ ರೂ.ಗಳಷ್ಟು ಅಕ್ರಮವಾಗಿದೆ ಎನ್ನುವ ಆರೋಪಗಳನ್ನು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿಗೆ ದೌಡಾಯಿಸಿದ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ, ಕಾರ್ಯದರ್ಶಿ ಹಾಗೂ ಇತರೆ ಇಬ್ಬರು ಅಧಿಕಾರಿಗಳ ವರ್ಗಾವಣೆಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಈಗಾಗಲೇ ತನಿಖೆಗೆ ಅಧಿಕಾರಿಗಳ ತಂಡವನ್ನು ರಚಿಸಲಾಗಿದ್ದು, ತನಿಖೆಯೂ ಚುರುಕುಗೊಂಡಿದೆ.
ಮೈಸೂರು ಸೇರಿದಂತೆ ಎಲ್ಲಾ ಪ್ರಾಧಿಕಾರದಲ್ಲೂ ನಿವೇಶನ ರಚನೆಗೆ ಭೂಮಿ ನೀಡುವವರಿಗೆ ಶೇ. 50 ಅನುಪಾತದಲ್ಲಿ ನಿವೇಶನ ನೀಡಲಾಗುತ್ತದೆ. ಅಂದರೆ ಒಂದು ಎಕರೆ ಭೂಮಿ ನೀಡಿದರೆ ಆದರಲ್ಲಿ ರಚನೆಯಾಗುವ ನಿವೇಶನಗಳಲ್ಲಿ ಅರ್ಧದಷ್ಟನ್ನು ಭೂಮಾಲೀಕರಿಗೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ರೀತಿ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಹೆಸರಿನಲ್ಲಿರುವ ಭೂಮಿಯನ್ನು ನಿವೇಶನ ಮಾಡಲು ನೀಡಲಾಗಿದ್ದು, ಇದರಲ್ಲಿ ಭಾರೀ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅಧಿಕಾರಿಗಳು ನಿವೇಶನಗಳನ್ನು ಬೇಕಾಬಿಟ್ಟಿಯಾಗಿ ನೀಡಿದ್ದಾರೆ. ಪ್ರಭಾವಿಗಳಿಗೆ ಹಂಚಿಕೆ ಮಾಡಿದ್ದಾರೆ.ಅದರಲ್ಲೂ ಸಿಎಂ ಪತ್ನಿ ಹೆಸರಿನಲ್ಲಿ ಭೂಸ್ವಾಧೀನ ಮಾಡಿದ್ದ ಜಮೀನು ಕೈಬಿಟ್ಟು ಇತರೆಡೆ ನಿವೇಶನ ನೀಡಲಾಗಿದೆ ಎನ್ನುವುದು ಆರೋಪದ ಮೂಲ.
ಈ ರೀತಿ ಯಾವುದೋ ಜಮೀನುಗಳನ್ನು ತೋರಿಸಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಮುಡಾದಲ್ಲಿ 5 ಸಾವಿರ ಕೋಟಿ ರೂ.ವರೆಗೂ ಭ್ರಷ್ಟಾಚಾರ ಆಗಿರಬಹುದು. ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರೇ ನಿಂತು ತಮ್ಮ ತಾಯಿ ಹೆಸರಿನಲ್ಲಿ ನಿವೇಶನಗಳ ವರ್ಗಾವಣೆ ಮಾಡಿಸಿದ್ದಾರೆ.ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ಸೂಚನೆಯಂತೆಯೇ ಇವೆಲ್ಲವೂ ನಡೆದಿದೆ ಎಂಬ ಆರೋಪಗಳನ್ನು ಮಾಡಲಾಗಿದೆ.
ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ನಿವೇಶನ ಹಂಚಿಕೆ ವಿಚಾರದಲ್ಲಿ ಆಗಿರುವ ಲೋಪಗಳನ್ನಾಧರಿಸಿ ಮಾಹಿತಿ ನೀಡಿದ್ದಾರೆ. ಅಲ್ಲದೇ ನಿವೇಶನ ಹಂಚಿರುವ ಸಂಪೂರ್ಣ ವಿವರ ನೀಡುವಂತೆಯೂ ಆದೇಶಿಸಿದ್ದಾರೆ.
ಯಾವುದೇ ನಿಯಮ ಬಾಹಿರ ಚಟುವಟಿಕೆ ಆಗಿಲ್ಲ. ಯಾರು ಭೂಮಿ ನೀಡಿದ್ದರೋ ಅವರಿಗೆಲ್ಲಾ ನಿವೇಶನ ನೀಡಲಾಗಿದೆ ಎಂದು ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ. ಮೈಸೂರಿಗೆ ದೌಡಾಯಿಸಿ ಸಭೆ ನಡೆಸಿದ ಸುರೇಶ್, ಆಯುಕ್ತ ದಿನೇಶ್ ಕುಮಾರ್, ಕಾರ್ಯದರ್ಶಿ ಶೇಖರ್ ಸಹಿತ ನಾಲ್ವರನ್ನು ವರ್ಗ ಮಾಡಲಾಗಿದೆ. ಒಂದು ತಿಂಗಳು ಯಾವುದೇ ಸಭೆ ನಡೆಸದಂತೆ ಮುಡಾ ಮುಖ್ಯಸ್ಥರಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಈ ನಡುವೆ ನಿವೇಶನ ಹಂಚಿಕೆ ವಿಚಾರವಾಗಿ ತನಿಖೆ ನಡೆಸಲು ಐಎಎಸ್ ಅಧಿಕಾರಿಗಳಿಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು. ಅವರು ಕೂಡ ಮೈಸೂರಿಗೆ ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸರ್ಕಾರಕ್ಕೆ ಒಂದೆರಡು ದಿನದಲ್ಲಿ ವರದಿ ನೀಡುವ ಸಾಧ್ಯತೆಯಿದೆ.
ಇಡೀ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಆದೇಶವನ್ನೂ ನೀಡಿದೇ ಬರೀ ಮೌಖಿಕವಾಗಿ ಸಚಿವರು ಹೇಳಿ ಹೋಗಿದ್ದಾರೆ. ನಿವೃತ್ತ ನ್ಯಾಯಮೂರ್ತಿಗಳೊಬ್ಬರ ಮೂಲಕ ಇಡೀ ಹಗರಣದ ತನಿಖೆ ನಡೆಸಬೇಕು.ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯವೂ ಕೇಳಿ ಬಂದಿದೆ.
ವಿಭಾಗ