ಕನ್ನಡ ಸುದ್ದಿ  /  Karnataka  /  Mysore News Mysuru Zoo Arranged Jet Shower Bath Cool Atmosphere Food Arrangements For Animals To Control Hot Rgs

Mysuru News:ಎಲ್ಲೆಡೆ ಬಿಸಿಲ ಝಳ, ಮೈಸೂರು ಮೃಗಾಲಯದಲ್ಲಿ ಪ್ರಾಣಿ, ಪಕ್ಷಿಗಳಿಗೆ ಜೆಟ್‌ ಶವರ್‌ ಸ್ನಾನ !

summer ಬೇಸಿಗೆ ಬವಣೆ ಹೆಚ್ಚುತ್ತಿರುವ ನಡುವೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯವು ಪ್ರಾಣಿಗಳನ್ನು ತಂಪಾಗಿರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.ವರದಿ: ಪಿ.ರಂಗಸ್ವಾಮಿ, ಮೈಸೂರು

ಮೈಸೂರು ಮೃಗಾಲಯ ಆನೆಗಳಿಗೆ ಶವರ್‌ ಮಜ್ಜನ,
ಮೈಸೂರು ಮೃಗಾಲಯ ಆನೆಗಳಿಗೆ ಶವರ್‌ ಮಜ್ಜನ,

ಮೈಸೂರು: ಬೇಸಿಗೆ ಆರಂಭವಾಗಿ ಎಲ್ಲೆಡೆ ಜನ ಈಗ ಸೆಖೆಯ ಅನುಭವಿಸುತ್ತಿದ್ದಾರೆ.ದೇಹ ತಂಪಾದರೆ ಸಾಕು ಎನ್ನುವ ಮನಸ್ಥಿತಿಯಲ್ಲಿ ಅನೇಕರಿದ್ದಾರೆ.ಈ ಬಾರಿ ವನ್ಯಜೀವಿಗಳಿಗೂ ಬಿಸಿಲ ಝಳ ಕೊಂಚ ಹೆಚ್ಚೇ ತಟ್ಟಿದೆ.ನೆರಳು, ನೀರು ಆಶ್ರಯಿಸಿ ಕಾಡಲ್ಲಿ ಪ್ರಾಣಿಗಳು ದೂರ ನಡೆದುಕೊಂಡೇ ಹೋಗಬೇಕು. ಅದೇ ಮೈಸೂರಿನ ಮೃಗಾಲಯದಲ್ಲಿ ಹಸಿರಿದ್ದರೂ ಬಿಸಿಲ ಹೊಡೆತಕ್ಕೆ ಸಿಲುಕುವ ಪ್ರಾಣಿಗಳನ್ನು ತಂಪಾಗಿಡಲು ಆಡಳಿತ ಮಂಡಳಿ ಹಲವಾರು ವ್ಯವಸ್ಥೆಗಳನ್ನು ಮಾಡಿದೆ. ಅದರಲ್ಲೂ ಎಲ್ಲಾ ಪಾಣಿ ಮನೆಗಳಲ್ಲಿ ನೀರಿನ ಲಭ್ಯತೆ ಜತೆಗೆ ಸ್ಪಿಂಕ್ಲರ್‌ಗಳನ್ನು ಬಳಸಿ ತಣ್ಣಗೆ ಇಡಲು ಪ್ರಯತ್ನಿಸಲಾಗುತ್ತಿದೆ.

ಮೈಸೂರಲ್ಲೂ ಬಿಸಿಲು ಜೋರು

ಕಳೆದ ವರ್ಷ ಮುಂಗಾರು ಹಾಗು ಹಿಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ವಾತಾವರಣದಲ್ಲಿ ಸಹಜವಾಗಿಯೇ ತೇವಾಂಶ‌ ಕಡಿಮೆಯಾಗಿದೆ. ಪರಿಣಾಮ ಈ ವರ್ಷ ಬೇಸಿಗೆ ಆರಂಭಕ್ಕೂ‌ ಮೊದಲೇ ಬಿಸಿಲ ಬೇಗೆ ತೀವ್ರಗೊಂಡಿದೆ. ಅರಮನೆ ನಗರಿ, ಪ್ರವಾಸಿಗರ ನೆಚ್ಚಿನ ತಾಣ ಮೈಸೂರಿನಲ್ಲೂ ಬೇಸಿಗೆ ಆರಂಭದಲ್ಲೇ ಬಿಸಿಲಿನ ತಾಪ ವಾಡಿಕೆಗಿಂತ ತುಸು ಹೆಚ್ಚಾಗಿಯೇ ಇದೆ. ಬಿರು ಬೇಸಿಗೆಯಿಂದಾಗಿ ತಾಪಮಾನದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು ಈಗಾಗಲೇ 37 ರಿಂದ 38 ಡಿಗ್ರಿಗಳಷ್ಟು ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ.

ಪರಿಣಾಮ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಪಕ್ಷಿಗಳಿಗೂ ಬಿಸಿಲಿನ ತಾಪ ತಟ್ಟಿದೆ. ನೆತ್ತಿ ಸುಡುತ್ತಿರುವ ಬಿಸಿಲ ಬೇಗೆಯನ್ನು ತಾಳಲಾರದೇ ಪರಿತಪಿಸುತ್ತಿರುವ ಪ್ರಾಣಿ ಪಕ್ಷಿಗಳು ಹಗಲಿನ ವೇಳೆ ಮರಗಳ ನೆರಳಿನಲ್ಲಿ ಆಶ್ರಯ ಪಡೆಯುತ್ತಿವೆ.

ಈ‌ ನಡುವೆ ಬಿಸಿಲಿನ ತಾಪ ಹೆಚ್ಚಾಗಿರುವ ಸಮಯದಲ್ಲಿ ಪ್ರವಾಸಿಗರು ಸಹ ಅಷ್ಟಾಗಿ ಬರದ ಕಾರಣ ಮಧ್ಯಾಹ್ನದ ಸಮಯದಲ್ಲಿ ಮೃಗಾಲಯದ ಆವರಣ ಬಿಕೋ‌ ಎನ್ನುತ್ತಿರುತ್ತದೆ. ಬಿರು ಬೇಸಿಗೆಯ ಜೊತೆಗೆ ಇದೀಗ ಶಾಲಾ ಮಕ್ಕಳಿಗೆ ಪರೀಕ್ಷೆಯ ಸಮಯವೂ ಆಗಿರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾದಂತಿದೆ. ಪ್ರವಾಸಿಗರ ಕಣ್ಣಿಗೆ ಗೋಚರಿಸದೇ ನೆರಳಿನಲ್ಲಿ ಆಶ್ರಯ ಪಡೆಯುತ್ತಿರುವ ಪ್ರಾಣಿ ಪಕ್ಷಿ ಸಂಕುಲವನ್ನು ರಕ್ಷಿಸಲು ಮೃಗಾಲಯದ ಆಡಳಿತ ವರ್ಗ ಇದೀಗ ಪರ್ಯಾಯ ವ್ಯವಸ್ಥೆಗಳನ್ನು ಮಾಡಿದೆ.

ಮೃಗಾಲಯಲ್ಲಿ ಪ್ರಾಣಿಗಳನ್ನು ತಣ್ಣಗೆ ಇರಿಸಲು ಹಲವಾರು ಕ್ರಮ ಆಗಿದೆ. ಒಂದು ಕಡೆ ನೀರಿನ ಬಳಕೆ, ಮತ್ತೊಂದು ಕಡೆ ಆಹಾರದಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ. ಇದರಿಂದ ಪ್ರಾಣಿಗಳು ಆತಂಕಕ್ಕೆ ಒಳಗಾಗುವುದು ತಪ್ಪಲಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ತಂಪಾದ ವಾತಾವರಣ ನಿರ್ಮಾಣ

ಬೇಸಿಗೆಯ ಆರಂಭದಲ್ಲೇ ಅರಮನೆ ನಗರಿ ಮೈಸೂರಿನಲ್ಲಿ ತಾಪಮಾನ ಗಣನೀಯ ಏರಿಕೆ ಕಂಡಿರುವುದರಿಂದ, ರಣಬಿಸಿಲಿನ ಬೇಗೆಗೆ ಚಾಮರಾಜೇಂದ್ರ ಮೃಗಾಲಯದ ಪ್ರಾಣಿ ಪಕ್ಷಿಗಳು ಬಸವಳಿಯುತ್ತಿವೆ. ಬಿಸಿಲ ತಾಪದಿಂದ ಚೈತನ್ಯ ಕಳೆದುಕೊಂಡಿದ್ದ ಪ್ರಾಣಿ ಪಕ್ಷಿಗಳನ್ನು ಕೂಲಾಗಿಸಲು ಮೃಗಾಲಯದ ಸಿಬ್ಬಂದಿಗಳು‌ ಅವಿರತ ಶ್ರಮಿಸುತ್ತಿದ್ದಾರೆ.

ಬಿಸಿಲ ತಾಪದಿಂದ ಬಳಲುತ್ತಿದ್ದ ಪ್ರಾಣಿ ಪಕ್ಷಿಗಳನ್ನು ರಕ್ಷಿಸಲು ಇದೀಗ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ. ನೀರು ಸಿಂಪಡಿಸಲು ಸ್ಪ್ರಿಂಕ್ಲರ್, ಜೆಟ್, ಫಾಗರ್, ಶವರ್ ಬಳಕೆ ಮಾಡಲಾಗುತ್ತಿದೆ. ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ಮೈ ತಂಪಾಗಿಸಲು ಕೃತಕ ನೀರಿನ ಹೊಂಡ, ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ. ಕೃತಕವಾಗಿ ಮಳೆ ಹನಿ ಸುರಿಸಿ ಪ್ರಾಣಿಗಳಿಗೆ ಕೂಲ್ ಕೂಲ್ ವಾತಾವರಣ ನಿರ್ಮಿಸುವಲ್ಲಿ ಮೃಗಾಲಯದ ಆಡಳಿತ ವರ್ಗ ನಿರಂತರ ಶ್ರಮಿಸುತ್ತಿದೆ.

ಪರಿಣಾಮ ಉರಿ ಬಿಸಿಲಿನ ನಡುವೆಯೂ ಸುರಿಯುವ ಕೃತಕ ಮಳೆಗೆ ಮೈಯೊಡ್ಡಿ ನಿಲ್ಲುವ ದೈತ್ಯಕಾರದ ಆನೆಗಳು ಪ್ರವಾಸಿಗರ ಮನಸೂರೆಗೊಳ್ಳುತ್ತಿವೆ. ಜೆಟ್ ನಲ್ಲಿ ಚಿಮ್ಮುವ ನೀರಿಗೆ ಮೈಯೊಡ್ಡುವ ಜಿಂಪಾಜಿಗಳು, ಆನೆ, ಜಿಂಕೆ, ಜಿರಾಫೆ, ಕಾಡೆಮ್ಮೆ ಸೇರಿದಂತೆ ಹಲವು ಪ್ರಾಣಿಗಳನ್ನು ಕಣ್ತುಂಬಿಕೊಂಡು ಸಂತಸಪಡುತ್ತಿರುವ ಪ್ರವಾಸಿಗರು ಚಾಮರಾಜೇಂದ್ರ ಮೃಗಾಲಯದ ಸಿಬ್ಬಂದಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ 132 ವರ್ಷಗಳ ಸುದೀರ್ಘ ಇತಿಹಾಸವಿದೆ. ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಸ್ತುತ 143 ಬಗೆಯ ಪ್ರಾಣಿ ಪಕ್ಷಿಗಳ ಪ್ರಬೇಧಗಳು ಇವೆ. ಬಲು ಅಪರೂಪದ ವನ್ಯಜೀವಿಗಳು ಇಲ್ಲಿ ಆಶ್ರಯ ಪಡೆದಿವೆ. ಈ ಎಲ್ಲಾ ಪ್ರಾಣಿಪಕ್ಷಿ ಪ್ರಬೇಧಗಳನ್ನು ಬಿಸಿಲ ತಾಪದಿಂದ ರಕ್ಷಿಸಲು ಇಲ್ಲಿನ ಸಿಬ್ಬಂದಿಗಳು ಟೊಂಕಕಟ್ಟಿ ನಿಂತಿರುವುದು ಜನಮನ್ನಣೆಗೆ ಪಾತ್ರವಾಗಿದೆ.

(ವರದಿ: ಪಿ.ರಂಗಸ್ವಾಮಿ. ಮೈಸೂರು)