Elephant Death: ಕಾಣೆಯಾಗಿದ್ದ ನಾಗರಹೊಳೆ ಸಾಕಾನೆ ಕುಮಾರಸ್ವಾಮಿ ದೇಹ ಪತ್ತೆ, ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಜೀವ ತೆತ್ತ ಗಜರಾಜ
ನಾಗರಹೊಳೆ ಬಳ್ಳೆ ಶಿಬಿರದಲ್ಲಿದ್ದ ಸಾಕಾನೆ ಕುಮಾರಸ್ವಾಮಿ ಸೂಕ್ತ ಉಸ್ತುವಾರಿಯಿಲ್ಲದೇ ಕಾಣೆಯಾಗಿದ್ದು. ಈಗ ಅದರ ಕೊಳೆತ ಶವ ಪತ್ತೆಯಾಗಿದೆ.
ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಎಚ್.ಡಿ.ಕೋಟೆ ತಾಲ್ಲೂಕು ಬಳ್ಳೆ ಶಿಬಿರದಲ್ಲಿ ನೆಲೆಸಿದ್ದ ಸಾಕಾನೆ ಕುಮಾರಸ್ವಾಮಿ ಕಾಣೆಯಾಗಿದ್ದ ಕೆಲವು ದಿನಗಳೇ ಕಳೆದಿತ್ತು. ಸಿಬ್ಬಂದಿಗಳು ಕಾಡಿನಲ್ಲಿ ಹುಡುಕಿದರೂ ಆನೆ ಪತ್ತೆಯಾಗಿರಲಿಲ್ಲ. ನಿರಂತರವಾಗಿ ಸಿಬ್ಬಂದಿಗಳು ಹುಡುಕಾಟ ನಡೆಸಿ ಸುಮ್ಮನಾಗಿದ್ದರು. ಆದರೆ ಇದಾದ ಕೆಲವು ದಿನಗಳಲ್ಲಿ ಕುಮಾರಸ್ವಾಮಿ ಆನೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದೂ ಕೇರಳ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕಬಿನಿ ಹಿನ್ನೀರು ಪ್ರದೇಶದಲ್ಲಿ. ಸೋಮವಾರ ಕೊಳೆತ ವಾಸನೆ ಆಧರಿಸಿ ಸಿಬ್ಬಂದಿ ಹೋದಾಗ ಆನೆ ದೇಹ ಕೊಳೆತು ಹೋಗಿರುವುದು ಕಂಡು ಬಂದಿದೆ.
ಸುಮಾರು 50 ವರ್ಷದ ಕುಮಾರಸ್ವಾಮಿ ಆನೆಯನ್ನು ಮೂರು ದಶಕದ ಹಿಂದೆಯೇ ಹಾಸನದಲ್ಲಿ ಸೆರೆ ಹಿಡಿಯಲಾಗಿತ್ತು. ಪುಂಡಾನೆಯಾಗಿದ್ದ ಈ ಆನೆಯನ್ನು ಆಗ ವಲಯ ಅರಣ್ಯಾಧಿಕಾರಿಯಾಗಿದ್ದ ಕುಮಾರಸ್ವಾಮಿ ಎಂಬುವವರು ಸೆರೆ ಹಿಡಿಯಲು ಶ್ರಮಿಸಿದ್ದರು. ಈ ಕಾರಣದಿಂದ ಅವರ ಹೆಸರನ್ನೇ ಈ ಆನೆಗೆ ಇಡಲಾಗಿತ್ತು.
ಇದಾದ ಬಳಿಕ ಆನೆಯನ್ನು ಪಳಗಿಸಿ ನಾಗರಹೊಳೆಯಲ್ಲಿಯೇ ಇರಿಸಿಕೊಳ್ಳಲಾಗಿತ್ತು. ಮರ ಸಾಗಣೆ, ಇಲಾಖೆಯ ಸಣ್ಣಪುಟ್ಟ ಕೆಲಸಗಳಲ್ಲಿ ಕುಮಾರಸ್ವಾಮಿ ಪಾಲ್ಗೊಳ್ಳುವುದು ಬಿಟ್ಟರೆ ಕಾಡಿನಲ್ಲಿ ಮೇಯ್ದುಕೊಂಡು ಇರುತ್ತಿತ್ತು. ಹಸಿವಾದಾ ಆನೆ ಶಿಬಿರಕ್ಕೆ ಬರುತ್ತಿತ್ತು. ಆಗ ಸಿಬ್ಬಂದಿ ಆಹಾರ ನೀಡುತ್ತಿದ್ದರು. ಮತ್ತೆ ಕಾಡಿನ ಕಡೆಗೆ ಅದು ಹೋಗುತ್ತಿತ್ತು.
ಕುಮಾರಸ್ವಾಮಿ ಆನೆ ದಷ್ಟಪುಷ್ಟವಾಗದ್ದಿರೂ ಅದಕ್ಕೆ ಸೂಕ್ತ ಮಾವುತ, ಕವಾಡಿ ಇರಲಿಲ್ಲ. ಹಂಗಾಮಿ ನೌಕರನೊಬ್ಬನನ್ನು ಇದಕ್ಕೆ ಮಾವುತನ್ನಾಗಿ ನೇಮಿಸಲಾಗಿತ್ತು. ಆತ ನಿವೃತ್ತಿಯಾದ ನಂತರ ಯಾರೂ ನೋಡಿಕೊಳ್ಳುತ್ತಿರಲಿಲ್ಲ.
ಕೆಲ ದಿನಗಳ ಹಿಂದೆ ಕವಾಡಿ ಕುಮಾರಸ್ವಾಮಿ ಆನೆಯನ್ನು ನೋಡಿಕೊಳ್ಳುತ್ತಿದ್ದ. ಆನೆ ಕಾಣೆಯಾದ ಬಗ್ಗೆ ಮಾಹಿತಿ ಇತ್ತು. ಹುಡುಕಾಟವೂ ನಡೆದಿತ್ತು. ಆನೆಯ ಗಂಟೆಯೂ ಬಿದ್ದು ಹೋಗಿದ್ದರಿಂದ ಹುಡುಕಾಟ ಕಷ್ಟವಾಗಿತ್ತು. ಸೋಮವಾರ ಆನೆ ಶವ ದೊರೆತಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ್ದೇವೆ. ಆಹಾರವಿಲ್ಲದೇ ಹಸಿವಿನಿಂದ ಆನೆ ಮೃತಪಟ್ಟಿರುವುದು ಕಂಡು ಬಂದಿದೆ ಎಂದು ಮೇಟಿಕುಪ್ಪೆ ವನ್ಯಜೀವಿ ಉಪವಿಭಾಗದ ಎಸಿಎಫ್ ರಂಗಸ್ವಾಮಿ ಖಚಿತಪಡಿಸಿದ್ದಾರೆ.
ಕೇರಳದ ಮಾನಂದವಾಡಿಗೆ ಹೋಗುವ ರಸ್ತೆಯಲ್ಲಿರುವ ಬಳ್ಳೆ ಶಿಬಿರದಲ್ಲಿ ಕಬಿನಿ ಹಿನ್ನೀರು ಇರುವುದರಿಂದ ಇಲ್ಲಿ ಮೊದಲು 20 ಅಧಿಕ ಸಾಕಾನೆಗಳಿದ್ದವು. ಆದರೆ ಪ್ರವಾಸಕ್ಕೆಂದು ನಾಗರಹೊಳೆಗೆ ಬರುವವರು, ಹೆದ್ದಾರಿಯಲ್ಲಿಯೇ ಶಿಬಿರ ಇದ್ದುದರಿಂದ ದಾರಿಯಲ್ಲಿ ಹೋಗವವರು ಆನೆ ಶಿಬಿರದತ್ತ ಬರುತ್ತಿದ್ದರು. ಈ ಕಾರಣದಿಂದ ಇಲ್ಲಿದ್ದ ಬಹುತೇಕ ಆನೆಗಳನ್ನು ಸ್ಥಳಾಂತರಿಸಲಾಗಿತ್ತು. ಇದರಲ್ಲಿ ನಾಲ್ಕು ಆನೆಗಳು ಮಾತ್ರ ಇಲ್ಲಿ ಉಳಿದಿದ್ದವು. ಎರಡು ಆನೆಗಳು ಹಿಂದೆಯೇ ಮೃತಪಟ್ಟು, ಅಂಬಾರಿ ಹೊತ್ತ ಅರ್ಜುನ, ಕುಮಾರಸ್ವಾಮಿ ಮಾತ್ರ ಉಳಿದಿದ್ದವರು. ನಾಲ್ಕು ತಿಂಗಳ ಹಿಂದೆ ಹಾಸನದ ಯಸಳೂರು ಬಳಿ ಆನೆ ಸೆರೆಗೆ ಹೋದಾಗ ತಿವಿತದಿಂದ ಅರ್ಜುನ ಆನೆ ಮೃತಪಟ್ಟಿತ್ತು. ಇದಾದ ನಂತರ ಬಳ್ಳೆ ಆನೆ ಶಿಬಿರದಲ್ಲಿ ಉಳಿದಿದ್ದು ಇದೊಂದೆ ಆನೆ ಆಗಿತ್ತು.
ಕುಮಾರಸ್ವಾಮಿ ಆನೆ ನೋಡಿಕೊಳ್ಳಲು ಅಧಿಕಾರಿಗಳು ಯಾವುದೇ ಸಿಬ್ಬಂದಿಯನ್ನೂ ನೇಮಿಸಿರಲಿಲ್ಲ. ಈ ಆನೆಯೂ ದಸರಾ ಸಹಿತ ಯಾವುದೇ ಉತ್ಸವದಲ್ಲೂ ಪಾಲ್ಗೊಂಡಿರಲಿಲ್ಲ. ಮಾವುತ, ಕವಾಡಿ ಇಲ್ಲದೇ ಆನೆಯ ನಿರ್ವಹಣೆಯೂ ಇರದೇ ದಯನೀಯ ಸ್ಥಿತಿಯಲ್ಲಿ ಮೃತಪಟ್ಟಿದೆ.
ಬಳ್ಳೆ ಆನೆ ಶಿಬಿರ ಹಿಂದೆ ಖೆಡ್ಡಾ ನಡೆಯುತ್ತಿದ್ದ ಕಾಕನಕೋಟೆ ಸಮೀಪವೇ ಇದೆ. ಒಂದು ಕಾಲಕ್ಕೆ ಅತಿ ದೊಡ್ಡ ಆನೆ ಶಿಬಿರವಿದು. ದಶಕದ ಹಿಂದೆ ಗೋಕುಲ್ ಅವರು ನಾಗರಹೊಳೆ ನಿರ್ದೇಶಕರಾಗಿದ್ದಾಗ ಸ್ಥಳಾಂತರಿಸಿ ಕೆಲವೇ ಆನೆ ಉಳಿಸಲು ಆದೇಶಿಸಿದರು. ಇದಾದ ನಂತರ ಆನೆಗಳೇ ಇಲ್ಲದ ಶಿಬಿರದ ಸ್ಥಿತಿಗೆ ಇದು ಬಂದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.