ಕನ್ನಡ ಸುದ್ದಿ  /  Karnataka  /  Mysore News Nanjanagud Nanjudeshwar Teppotsava Held On The Bank Of Kapila River Side With Thousands Of Devotees Rgs

Mysore news: ದಕ್ಷಿಣಕಾಶಿ ನಂಜನಗೂಡಿನಲ್ಲಿ ಶ್ರೀ ನಂಜುಂಡೇಶ್ವರನ ತೆಪ್ಪೋತ್ಸವ ಸಡಗರ

ನಂಜನಗೂಡಿನಲ್ಲಿ ಭಾನುವಾರ ರಾತ್ರಿ ತೆಪ್ಪೋತ್ಸವದ ಸಂಭ್ರಮ, ಕಪಿಲಾ ನದಿಯಲ್ಲಿ ಶ್ರೀಕಂಠೇಶ್ವರ ಸ್ವಾಮಿಯ ಉತ್ಸವಮೂರ್ತಿಯೊಂದಿಗೆ ತೆಪ್ಪೋತ್ಸವ ನಡೆಯಿತು.ವರದಿ:ಪಿ.ರಂಗಸ್ವಾಮಿ, ಮೈಸೂರು

ನಂಜನಗೂಡಿನಲ್ಲಿ ನಡೆದ ತೆಪ್ಪೋತ್ಸವ,
ನಂಜನಗೂಡಿನಲ್ಲಿ ನಡೆದ ತೆಪ್ಪೋತ್ಸವ,

ನಂಜನಗೂಡು: ನಾಡಿನ ಪುರಾಣಪ್ರಸಿದ್ದ ಪುಣ್ಯಕ್ಷೇತ್ರ ದಕ್ಷಿಣಕಾಶಿ ನಂಜನಗೂಡಿನಲ್ಲಿ ಐತಿಹಾಸಿಕ ಗೌತಮ ಪಂಚಮಹಾ ರಥೋತ್ಸವದ ದೊಡ್ಡ ಜಾತ್ರಾ ಮಹೋತ್ಸವದ ಅಂಗವಾಗಿ ಕಪಿಲಾ ನದಿಯಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಯ ತೆಪ್ಪೋತ್ಸವವು ಸಡಗರ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ನೆರವೇರಿತು. ವಜ್ರಾಭರಣ ಹಾಗೂ ಬಣ್ಣ ಬಣ್ಣದ ಹೂಗಳಿಂದ ವಿಶೇಷವಾಗಿ ಅಲಂಕೃತಗೊಂಡ ಶ್ರೀ ಪಾರ್ವತಿ ಸಮೇತವಾದ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯದಿಂದ ತಂದು ಕಪಿಲಾ ನದಿಯ ಸ್ಥಾನಘಟ್ಟದ ಬಳಿ ಇರುವ ಮಂಟಪದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ ಅಲ್ಲಿಂದ ಮಂಗಳ ವಾದ್ಯಗಳೊಂದಿಗೆ ಬಣ್ಣ ಬಣ್ಣದ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದ ತೇಲುವ ದೇವಾಲಯದ ಮಾದರಿಯಲ್ಲಿದ್ದ ಯಾಂತ್ರಿಕ ದೋಣಿಯಲ್ಲಿ ಕೂರಿಸಿ ಅದ್ದೂರಿಯಾಗಿ ತೆಪ್ಪೋತ್ಸವ ನಡೆಸಲಾಯಿತು. ಸಾವಿರಾರು ಭಕ್ತರ ಹರ್ಷೋದ್ಗಾರದೊಂದಿಗೆ ಶ್ರೀ ನಂಜುಂಡೇಶ್ವರನ ತೆಪ್ಪೋತ್ಸವವು ಕಪಿಲಾ ನದಿಯಲ್ಲಿ ಪೂರ್ವ ಪಶ್ಚಿಮಾಭಿಮುಖವಾಗಿ ಮೂರು ಬಾರಿ ಪ್ರದಕ್ಷಿಣೆ ಹಾಕಿತು. ಈ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳುವ ಮೂಲಕ ಭಕ್ತರು ತಮ್ಮ ಭಕ್ತಿ ಭಾವ ಮೆರೆದರು.

ಇದೇ ಸಂದರ್ಭದಲ್ಲಿ ಕಪಿಲಾ ನದಿಯ ಮತ್ತೊಂದು ದಡದಲ್ಲಿ ಹೆಜ್ಜಿಗೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಜಮಾಯಿಸಿ ಚಿತ್ತಾಕರ್ಷಕವಾದ ಬಾಣ ಬಿರುಸು ಪಟಾಕಿಗಳನ್ನು ಸಿಡಿಸುವ ಮೂಲಕ ಸಂಭ್ರಮಿಸಿದರು.

ತೆಪ್ಪೋತ್ಸವ ಮುಗಿದ ಬಳಿಕ ಉತ್ಸವ ಮೂರ್ತಿಗಳನ್ನು ತಂದು ನಂಜನಗೂಡು ಪಟ್ಟಣದ ರಥ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ನೆರೆದಿದ್ದ ಭಕ್ತರು ಪೂಜಾ ಸಾಮಗ್ರಿಗಳೊಂದಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಭಕ್ತಿ ನಮನ ಸಲ್ಲಿಸಿದರು.

ಕಪಿಲಾ ನದಿ ತೀರ ಸೇರಿದಂತೆ ದೇವಾಲಯದ ಸುತ್ತಮುತ್ತ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶ್ರೀ ನಂಜುಂಡೇಶ್ವರನ ತೆಪ್ಪೋತ್ಸವವನ್ನು ಕಣ್ತುಂಬಿಕೊಳ್ಳಲು ನಂಜನಗೂಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರ ಮಹಾಪೂರವೇ ಹರಿದು ಬಂದಿತ್ತು.

ನಂಜನಗೂಡಿನ ಹಲವೆಡೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ತೆಪ್ಪೋತ್ಸವಕ್ಕೆ ಬಂದಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ನಂಜುಂಡೇಶ್ವರ ಸ್ವಾಮಿ ದೇಗುಲದ ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷಿತ್‌ ಅವರ ಮಾರ್ಗದರ್ಶನದಲ್ಲಿ ತೆಪ್ಪೋತ್ಸವದ ಎಲ್ಲಾ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು.

(ವರದಿ: ರಂಗಸ್ವಾಮಿ, ಮೈಸೂರು)

IPL_Entry_Point