ಕನ್ನಡ ಸುದ್ದಿ  /  Karnataka  /  Mysore News Ramadan 2024 Festivities Mela In Mysore Meena Bazar From March 23rd To April 12 In Single Roof Rgs

Mysore News: ರಂಜಾನ್‌ ಹಬ್ಬಕ್ಕೆ ತಯಾರಿ ಶುರು, ಮೈಸೂರಿನಲ್ಲಿ ವಿಶೇಷ ಮೇಳಕ್ಕೆ ಸಿದ್ದತೆ, ಏನಿದರ ವಿಶೇಷ

ಮೈಸೂರಿನಲ್ಲಿ ರಂಜಾನ್‌ ಹಬ್ಬ ಜೋರಾಗಿರುತ್ತದೆ. ಇದರೊಟ್ಟಿಗೆ ಖರೀದಿಯೂ ಕೂಡ. ಇದಕ್ಕಾಗಿಯೇ ರಂಜಾನ್‌ ಮೇಳವನ್ನು ನಾಲ್ಕು ದಶಕದಿಂದ ಆಯೋಜಿಸುತ್ತಾ ಬರಲಾಗುತ್ತಿದೆ.ವರದಿ: ಪಿ.ರಂಗಸ್ವಾಮಿ, ಮೈಸೂರು

ಮೈಸೂರಿನಲ್ಲಿ ರಂಜಾನ್‌ ಮೇಳ ಆಯೋಜನೆಗೆ ಸಿದ್ದತೆ ನಡೆದಿವೆ.
ಮೈಸೂರಿನಲ್ಲಿ ರಂಜಾನ್‌ ಮೇಳ ಆಯೋಜನೆಗೆ ಸಿದ್ದತೆ ನಡೆದಿವೆ.

ಮೈಸೂರು: ಎಲ್ಲೆಡೆ ಈಗಾಗಲೇ ರಂಜಾನ್‌ ಹಬ್ಬದ ಉಪವಾಸ ಶುರುವಾಗಿದೆ. ಸಂಜೆ ನಂತರ ವಿಶೇಷ ಪೂಜೆ, ಊಟದ ಚಟುವಟಿಕೆಗಳೂ ನಡೆದಿವೆ. ರಂಜಾನ್‌ ಹಬ್ಬ ಎಂದರೆ ಉಪವಾಸ ಎನ್ನುವುದೇ ಬಲವಾದ ನಂಬಿಕೆ. ಇದರೊಟ್ಟಿಗೆ ಹಬ್ಬಕ್ಕಾಗಿ ಖರೀದಿಯ ಸಡಗರವೂ ಇರುತ್ತದೆ. ಒಂದೊಂದು ಊರಲ್ಲಿ ರಂಜಾನ್‌ ಹಬ್ಬವನ್ನು ಭಿನ್ನವಾಗಿ ಆಚರಿಸಲಾಗುತ್ತದೆ. ಸ್ಥಳೀಯವಾಗಿ ಮಾರುಕಟ್ಟೆಗಳಲ್ಲಿ ಖರೀದಿ ಮಾಡುವುದು ನಡೆದುಕೊಂಡು ಬಂದಿದೆ. ಅದೇ ಮೈಸೂರಿನಲ್ಲಿ ರಂಜಾನ್‌ಗೆ ವಿಶೇಷ ಮೇಳ ಹಲವು ವರ್ಷದಿಂದ ಆಯೋಜನೆಗೊಳ್ಳುತ್ತದೆ. ಈ ಬಾರಿಯೂ ರಂಜಾನ್‌ ಮೇಳ ಮಾರ್ಚ್‌ ಮಾರ್ಚ್ 23ರಿಂದ ಏಪ್ರಿಲ್12ರವರೆಗೆ ನಡೆಯಲಿದೆ.

ಮೈಸೂರಿನ ಮೀನಾ ಬಜಾರ್ ಮರ್ಚೆಂಟ್ಸ್ ಅಸೋಸಿಯೇಶನ್ ಅಂಡ್ ಸೋಶಿಯಲ್ ವೆಲ್ಫೇರ್ ಕಮಿಟಿ ವತಿಯಿಂದ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಮಾಸಾಚರಣೆ ಅಂಗವಾಗಿ ರಂಜಾನ್‌ ಮೇಳವನ್ನು ನಡೆಸಲಾಗುತ್ತಿದೆ.

ಮೈಸೂರಿನ ಲಷ್ಕರ್ ಮೊಹಲ್ಲಾದ ಸಾಡೇರಸ್ತೆಯಲ್ಲಿರುವ ಮೀನಾ ಬಜಾರ್ ನಲ್ಲಿ ಕಳೆದ 39 ವರ್ಷಗಳಿಂದ ಇಸ್ಲಾಮಿಕ್ ರಂಜಾನ್ ತಿಂಗಳಿನಲ್ಲಿ ವ್ಯಾಪಾರ ಮೇಳ ನಡೆಸಿಕೊಂಡು ಬರುತ್ತಿದ್ದು, ಈ ವರ್ಷವೂ ರಂಜಾನ್ ಮೇಳ ಆಯೋಜನೆ ಮಾಡಲಾಗಿದೆ. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯರಾತ್ರಿಯವರೆಗೂ ರಂಜಾನ್ ಮೇಳ ನಡೆಯುತ್ತದೆ. ರಂಜಾನ್ ಮೇಳವು ಸಮಿತಿಯ ಕಾರ್ಯದರ್ಶಿ ಅಫ್ರೋಜ್ ಪಾಷಾರವರ ಮಾರ್ಗದರ್ಶನದಲ್ಲಿ ಆಯೋಜನೆಗೊಂಡಿದೆ.

ಒಂದೇ ಕಡೆ ಮಾರಾಟ

ಒಂದೇ ಕಡೆ ವಹಿವಾಟು ನಡೆಯುವುದರಿಂದ ಖರೀದಿಸುವವರಿಗೂ ಸಹಾಯಕವಾಗಲಿದೆ. ಮಾರಾಟ ಮಾಡುವವರಿಗೂ ಉಪಯೋಗವಾಗಲಿದೆ. ಪ್ರತಿ ವರ್ಷ ರಂಜಾನ್‌ ಸಮಯದಲ್ಲಿಯೇ ಕೋಟ್ಯಂತರ ರೂ. ವಹಿವಾಟು ನಡೆಯಲಿದೆ. ಇಲ್ಲಿ ಉತ್ತಮ ದರ್ಜೆಯ ವಸ್ತುಗಳು ಸಿಗುವುದರಿಂದ ಮೈಸೂರು ಮಾತ್ರವಲ್ಲದೇ ಸುತ್ತಮುತ್ತಲ ಪ್ರದೇಶಗಳಿಂದಲೂ ಜನ ಖರೀದಿ ಮಾಡಲು ಆಗಮಿಸುತ್ತಾರೆ. ಹೊರ ದೇಶಗಳಿಂದಲೂ ಉತ್ತಮ ದರ್ಜೆಯ ವಸ್ತುಗಳನ್ನು ಇಲ್ಲಿಗೆ ತಂದು ಮಾರಾಟ ಮಾಡುವುದು ವಿಶೇಷ.

ಈ ಮೇಳದಲ್ಲಿ ಸ್ಥಳೀಯ ವರ್ತಕರು ಮಾತ್ರವಲ್ಲದೇ ಅಂತರರಾಜ್ಯಗಳಿಂದ ಆಗಮಿಸುವ ವರ್ತಕರು ಅಂಗಡಿ ಮಳಿಗೆಗಳನ್ನು ತೆರೆಯಲಿದ್ದಾರೆ. ಪುರುಷರ, ಮಹಿಳೆಯರ, ಮಕ್ಕಳ ಉಡುಪುಗಳು, ಬಳೆಗಳು, ಪಾದರಕ್ಷೆಗಳು, ದಿನಬಳಕೆಯ ವಸ್ತುಗಳು ಸೇರಿದಂತೆ ರಂಜಾನ್ ಹಬ್ಬಕ್ಕೆ ಅಗತ್ಯವಾಗಿರುವ ಎಲ್ಲಾ ಬಗೆಯ ಸಾಮಗ್ರಿಗಳನ್ನು ಇಲ್ಲಿ ಖರೀದಿಸಬಹುದಾಗಿದೆ. ರಂಜಾನ್ ಮೇಳದಲ್ಲಿ ಭಾಗಿಯಾಗುವ ಎಲ್ಲಾ ವರ್ತಕರು, ಪೊಲೀಸ್ ಇಲಾಖೆಯ ಮಾರ್ಗದರ್ಶನಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ಸೂಚಿಸಲಾಗಿದೆ.

ರಂಜಾನ್‌ ಹಬ್ಬವು ಮುಸ್ಲೀಮರ ಪ್ರಮುಖ ಆಚರಣೆ. ಒಂದು ತಿಂಗಳ ಕಾಲ ಉಪವಾಸದ ಬಳಿಕ ಹಬ್ಬ ಇರಲಿದೆ. ಈ ವೇಳೆ ಬಹುತೇಕರು ಬಟ್ಟೆಗಳ, ಆಭರಣ ಖರೀದಿಸುತ್ತಾರೆ. ಏಕೆಂದರೆ ರಂಜಾನ್‌ಗೆ ಎಲ್ಲವನ್ನೂ ಹೊಸದಾಗಿ ಖರೀದಿಸಿಯೇ ಬಳಸಬೇಕು ಎನ್ನುವ ನಂಬಿಕೆ ಇರುವ ಕಾರಣದಿಂದ ವಹಿವಾಟು ಜೋರಾಗಿರಲಿದೆ. ಒಂದೇ ಕಡೆ ಎಲ್ಲವೂ ಸಿಗುವ ಹಾಗೆ ರಂಜಾನ್‌ ಮೇಳ ಆಯೋಜಿಸಲಾಗುತ್ತದೆ ಎನ್ನುವುದು ಸಂಘಟಕರ ನುಡಿ.

ಸಮಿತಿ ಸೂಚನೆ

ಒಂದು ವೇಳೆ ಯಾರಾದರೂ ಅಸೋಸಿಯೇಷನ್ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಲು ಬಂದರೆ ಅಂತಹವರಿಗೆ ಯಾವುದೇ ದೇಣಿಗೆ ನೀಡಬಾರದು. ಯಾರಾದರೂ ದೇಣಿಗೆ ಸಂಗ್ರಹಕ್ಕೆ ಬಂದರೆ ರಂಜಾನ್ ಮೇಳದ ಸಮಿತಿಯ ಕಾರ್ಯದರ್ಶಿ ಅಫ್ರೋಜ್ ಪಾಷಾರವರ ಮೊಬೈಲ್ ಸಂಖ್ಯೆ 9379856537 ಅಥವಾ ಮಂಡಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 0821-2418313 ಇದಕ್ಕೆ ಕರೆ ಮಾಡಿ ದೂರು ನೀಡುವಂತೆ ಕೋರಲಾಗಿದೆ.

ರಂಜಾನ್ ಮೇಳ ನಡೆಯುವ ಸ್ಥಳದಲ್ಲಿ ಶುಚಿತ್ವ ಕಾಪಾಡಲು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲು, ಶೌಚಾಲಯದ ವ್ಯವಸ್ಥೆಗೆ ಹಾಗು ವಾಹನಗಳ ಪಾರ್ಕಿಂಗ್ ಗೆ ಸ್ಥಳಾವಕಾಶ ಕಲ್ಪಿಸಿಕೊಡುವಂತೆ ಮೈಸೂರು ಮಹಾನಗರ ಪಾಲಿಕೆಗೆ ಮನವಿ ಮಾಡಲಾಗಿದೆ ಎಂದು ಸಂಘಟಕರು ಹೇಳುತ್ತಾರೆ.

(ವರದಿ: ಪಿ.ರಂಗಸ್ವಾಮಿ, ಮೈಸೂರು)

IPL_Entry_Point