ಕನ್ನಡ ಸುದ್ದಿ  /  Karnataka  /  Mysore News Retired Doctor Veena At 80 Student Completed Masters In Ancient History With 6th Rank At Mysore Ksou Kub

Womens Day: ವಯಸ್ಸು 80, ಈಗಲೂ ರ‍್ಯಾಂಕ್ ನೊಂದಿಗೆ ಕರಾಮುವಿಯಲ್ಲಿ 2 ಎಂಎ ಮುಗಿಸಿದ ಉತ್ಸಾಹಿ ಮೈಸೂರು ವೈದ್ಯೆ !

ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ಆಸಕ್ತಿ ಬೇಕಷ್ಟೇ. ಅಂತಹದೇ ಮಾದರಿ ಮೈಸೂರಿನ ಡಾ.ವೀಣಾ ತಿರುಮಲಾಚಾರ್.‌ ಮಕ್ಕಳ ವೈದ್ಯೆಯಾಗಿ ಕೆಲಸ ಮಾಡಿಯೂ 80ನೇ ವಯಸ್ಸಿನಲ್ಲೂ ಎರಡು ಸ್ನಾತಕೋತ್ತರ ಪದವಿಯನ್ನು ಮೈಸೂರಿನ ಕರಾಮುವಿಯಲ್ಲಿ ಪಡೆದಿದ್ಧಾರೆ. ಮಹಿಳಾ ದಿನಾಚರಣೆ ಸಮೀಪಿಸುತ್ತಿರುವ ವೇಳೆ ಇಂತವರ ಸಾಧನೆ ಪ್ರೇರಣದಾಯಕ.

ಮೈಸೂರಿನ ಕರಾಮುವಿಯಲ್ಲ ಎಂಎ ಮುಗಿಸಿದ ಹಿರಿಯರಾದ ಡಾ.ವೀಣಾ ತಿರುಮಲಾಚಾರ್‌.
ಮೈಸೂರಿನ ಕರಾಮುವಿಯಲ್ಲ ಎಂಎ ಮುಗಿಸಿದ ಹಿರಿಯರಾದ ಡಾ.ವೀಣಾ ತಿರುಮಲಾಚಾರ್‌.

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಇವರೇ ಎಲ್ಲರ ಗಮನ ಸೆಳಯುತ್ತಿದ್ದರು. ಡಾ.ವೀಣಾ ಅವರ ಹೆಸರನ್ನು ಪ್ರಕಟಿಸುತ್ತಿದ್ದಂತೆ ಉತ್ಸಾಹದಿಂದಲೇ ಎದ್ದು ಬಂದರು. ಯುವಕ, ಯುವತಿಯರೇ ಪದಕಗಳನ್ನು ಪಡೆಯುತ್ತಿದ್ದಾಗ ಹಿರಿಯರೊಬ್ಬರು ಆಗಮಿಸಿದ್ದು ಎಲ್ಲರ ಉತ್ಸಾಹಕ್ಕೂ ಕಾರಣವಾಗಿತ್ತು. ಚಪ್ಪಾಳೆಯೊಂದಿಗೆ ಅವರ ಸಾಧನೆಗೆ ಅಲ್ಲಿ ನೆರೆದಿದ್ದ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಚ್ಚುಗೆ ಸೂಚಿಸಿದರು.

ವೈದ್ಯ ದಂಪತಿ

ಅವರ ಹೆಸರು ಡಾ.ವೀಣಾ ತಿರುಮಲಾಚಾರ್‌. ಬೆಂಗಳೂರಿನಲ್ಲಿಯೇ ಮಕ್ಕಳ ತಜ್ಞೆಯಾಗಿ ಐದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿರುವ ಡಾ.ವೀಣಾ ಅವರು ಈಗ ಮೈಸೂರು ನಿವಾಸಿ. ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಪ್ರಾಧ್ಯಾಪಕಿಯಾಗಿ. ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದವರು. ಆನಂತರ ಕೋಲಾರದ ದೇವರಾಜ ಅರಸ್‌ ವೈದ್ಯಕೀಯ ಕಾಲೇಜಿನಲ್ಲಿ ಸೇವೆ ಮಾಡಿದವರು. ಅವರ ಪತಿ ಡಾ.ತಿರುಮಲಾಚಾರ್‌ ಅವರು ಕಣ್ಣಿನ ತಜ್ಞರು. ಅವರು ಬೆಂಗಳೂರಿನ ಮಿಂಟೋ ಆಸ್ಪತ್ರೆಯ ನಿರ್ದೇಶಕರಾಗಿದ್ದವರು. ಕರ್ನಾಟಕ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದವರು.

ಇಬ್ಬರೂ ಬೆಂಗಳೂರಿನ ಸೇವೆಯ ನಂತರ ಮೈಸೂರಿನಲ್ಲಿ ವಾಸಿಸುವ ನಿರ್ಧಾರಕ್ಕೆ ಬಂದರು. ದಶಕದ ಹಿಂದೆಯೇ ಮೈಸೂರಿಗೆ ಬಂದರು. ಮೈಸೂರಿನಲ್ಲಿರುವ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ನ ಪಲೈಟಿವ್‌ ಕೇರ್‌ ಸೆಂಟರ್‌ನಲ್ಲಿ ಈಗಲೂ ದಂಪತಿ ಸೇವೆ ನೀಡುತ್ತಾರೆ. ಅಲ್ಲಿ ನಿತ್ಯ ಪತಿ ಕಣ್ಣಿನ ತಪಾಸಣೆ ಮಾಡಿದರೆ, ಡಾ.ವೀಣಾ ಅವರು ಮಕ್ಕಳಿಗೆ ಆರೈಕೆ ಮಾಡುತ್ತಾರೆ.

ಮೈಸೂರಿಗೆ ಸ್ಥಳಾಂತರ

ಮೈಸೂರಿಗೆ ಬಂದ ಮೂರು ವರ್ಷದ ನಂತರ ಏನಾದರೂ ಶಿಕ್ಷಣ ಪಡೆಯಬೇಕು. ವೈದ್ಯ ವೃತ್ತಿ ಹೊರತಾಗಿ ಜ್ಞಾನ ಸಂಪಾದಿಸಬೇಕು ಎನ್ನುವ ತೀರ್ಮಾನಕ್ಕೆ ಬಂದರು. ಇಬ್ಬರಿಗೂ ಸಂಸ್ಕೃತದಲ್ಲಿ ಆಸಕ್ತಿ. ಅದಲ್ಲದೇ ಪುರಾತತ್ವ, ಪರಂಪರೆ, ದೇಗುಲಗಳ ವಾಸ್ತುಶಿಲ್ಪ, ಪ್ರಾಚೀನ ಇತಿಹಾಸ ಹಾಗೂ ಭಾರತ ಶಾಸ್ತ್ರದ ಬಗ್ಗೆಯೂ ತಿಳಿದುಕೊಳ್ಳುವ ಕುತೂಹಲ. ಇದರೊಟ್ಟಿಗೆ ಸಮಯ ಸಿಕ್ಕಾಗ ಐತಿಹಾಸಿಕ ತಾಣಗಳಿಗೆ ಪ್ರವಾಸ ಮಾಡುವ ಹವ್ಯಾಸವೂ ಇದೆ.

ಎಲ್ಲ ವಯಸ್ಸಿನವರಿಗೆ ದೂರ ಶಿಕ್ಷಣ ನೀಡುವ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಓದಲು ಅವಕಾಶವಿದೆ. ಇಲ್ಲಿ ಇಬ್ಬರೂ ಸಂಸ್ಕೃತ ಎಂಎ ಸೇರಿಕೊಂಡರು. ಉತ್ತಮ ದರ್ಜೆಯಲ್ಲಿಯೇ ತೇರ್ಗಡೆ ಹೊಂದಿದರು.

ಕಲಿಕೆ ನಿರಂತರ

ಆದರೆ ಡಾ.ವೀಣಾ ಅವರಿಗೆ ಮತ್ತೊಂದು ಪದವಿ ಪಡೆಯಬೇಕೆಂಬ ಮನಸ್ಸಾಯಿತು. ತಮಗೆ ಆಸಕ್ತಿಯಿದ್ದ ಪ್ರಾಚೀನ ಇತಿಹಾಸ, ಭಾರತ ಶಾಸ್ತ್ರದ ಎಂಎಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲೇ ಮುಂದುವರೆಸಿದರು. ಈ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್‌ ಅವರು ಹಿರಿಯರ ಆಸೆಗೆ ಪೂರಕವಾಗಿ ಮಾರ್ಗದರ್ಶನ ಮಾಡಿದರು. ಚೆನ್ನಾಗಿಯೇ ಓದಿದ ಡಾ.ವೀಣಾ ಆರನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿಯನ್ನೂ ಪೂರೈಸಿದರು. ಭಾನುವಾರ ಅವರ ಖುಷಿಗೆ ಪಾರವೇ ಇರಲಿಲ್ಲ. ಆಸಕ್ತಿಯಿಂದ ಓದುವುದಕ್ಕೆ, ಕಲಿಯುವುದಕ್ಕೆ ವಯಸ್ಸಿನ ಮಿತಿಯಿಲ್ಲ ಎನ್ನುವುದನ್ನು ಡಾ.ವೀಣಾ ಸಾರಿದರು.

ಹನ್ನೆರಡು ವರ್ಷದ ಹಿಂದೆಯೇ ಮೈಸೂರಿಗೆ ಬಂದೆವು. ಏನನ್ನಾದರೂ ಕಲಿಯಬೇಕು ಎನ್ನುವ ಆಸಕ್ತಿಯಿತ್ತು. ಎಂಎ ಸಂಸ್ಕೃತ ಮುಗಿಸಿದ್ದೆ. ಈಗ ಪ್ರಾಚೀನ ಇತಿಹಾಸ, ಭಾರತಶಾಸ್ತ್ರದ ಕುರಿತು ಅಧ್ಯಯನ ಮಾಡಿದ್ದೇನೆ. ಡಾ.ಶೆಲ್ವಪಿಳ್ಳೈ ಅಯ್ಯಂಗಾರ್‌ ಅವರ ಮಾರ್ಗದರ್ಶನದಲ್ಲಿ ಎಂಎ ಸೇರಿಕೊಂಡೆ. ದೇಗುಲಗಳ ವಾಸ್ತುಶಿಲ್ಪ ನನ್ನ ಆಸಕ್ತಿಯ ವಿಷಯ. ನನ್ನ ಆಸಕ್ತಿಗೆ ಪೂರಕವಾಗಿ ಈ ಪದವಿ ಸಹಾಯವಾಗಲಿದೆ ಎನ್ನುವ ಕಾರಣದಿಂದ ಪದವಿ ಪಡೆದಿದ್ದೇನೆ. ಮುಂದಿನ ಪೀಳಿಗೆಯವರಲ್ಲಿ ಪ್ರಾಚೀನ ಇತಿಹಾಸ, ಭಾರತಶಾಸ್ತ್ರ, ವಾಸ್ತು ಶಿಲ್ಪಗಳ ಕುರಿತು ಅರಿವು ಮೂಡಿಸುವುದು ನನ್ನ ಉದ್ದೇಶ. ಇದಕ್ಕಾಗಿಯೇ ಪುಸ್ತಕಗಳನ್ನು ಬರೆದಿದ್ದೇನೆ ಎನ್ನುವುದು ಡಾ.ವೀಣಾ ಅವರ ಮನದಾಳದ ಮಾತು.

ಅವರ ಉತ್ಸಾಹಕ್ಕೆ ನಮನ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಎಲ್ಲ ವಯೋಮಾನದವರೂ ಕಲಿಯಲು ಬರುತ್ತಾರೆ. ಡಾ.ವೀಣಾ ಅವರು ಹಿರಿಯರು. ಈಗಲೂ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿದ್ಧಾರೆ. ಪಾರಂಪರಿಕ ಕೂಟಗಳ ಪ್ರವಾಸಗಳನ್ನು ತಪ್ಪಿಸಿಕೊಳ್ಳಲಿಲ್ಲ. ಅವರ ಆಸಕ್ತಿ ನಿಜಕ್ಕೂ ಮೆಚ್ಚುವಂತದ್ದು. ರ‍್ಯಾಂಕ್ ನೊಂದಿಗೆ ಎಂಎ ಮುಗಿಸಿದ್ದಾರೆ. ಕಲಿಯುತ್ತಲೇ ನಮ್ಮ ವಿಭಾಗದಲ್ಲಿ ದತ್ತಿಗಳನ್ನೂ ಸ್ಥಾಪಿಸಿದ್ದಾರೆ. ಉನ್ನತ ಹುದ್ದೆಯಲ್ಲಿ ಬಂದರೂ ಅವರು ವಿದ್ಯಾರ್ಥಿಯಂತೆಯೇ ನಡೆದುಕೊಂಡರು. ನಿಜಕ್ಕೂ ಇಂತಹವರಿಗೆ ಹೇಳಿಕೊಟ್ಟಿದ್ದು ಹೆಮ್ಮೆ ಎನಿಸುತ್ತದೆ ಎನ್ನುವುದು ಕರಾಮುವಿ ಪ್ರಾಚೀನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್‌ ಅವರ ನುಡಿ.

ಮುಂದಿನ ನಾಲ್ಕು ದಿನಗಳಲ್ಲಿ ವಿಶ್ವ ಮಹಿಳಾ ದಿನ. ಮಹಿಳೆಯರಿಗೆ ಮಾತ್ರವಲ್ಲ. ಕಲಿಯಬೇಕು ಎಂಬ ಹಂಬಲ ಇರುವ ಎಲ್ಲರಿಗೂ ಡಾ.ವೀಣಾ ತಿರುಮಲಾಚಾರ್‌ ಅವರದ್ದು ಪ್ರೇರಣದಾಯಕ ವ್ಯಕ್ತಿತ್ವ.

IPL_Entry_Point

ವಿಭಾಗ