ಭಾರತ ಪಾಕ್‌ 1965ರ ಯುದ್ದದಲ್ಲಿ ಮುಂಚೂಣಿಯಲ್ಲಿದ್ದ ಕೊಡಗಿನ ಸೇನಾನಿ ನಿವೃತ್ತ ಮೇಜರ್‌ ಜನರಲ್‌ ಕರುಂಬಯ್ಯ ನಿಧನ
ಕನ್ನಡ ಸುದ್ದಿ  /  ಕರ್ನಾಟಕ  /  ಭಾರತ ಪಾಕ್‌ 1965ರ ಯುದ್ದದಲ್ಲಿ ಮುಂಚೂಣಿಯಲ್ಲಿದ್ದ ಕೊಡಗಿನ ಸೇನಾನಿ ನಿವೃತ್ತ ಮೇಜರ್‌ ಜನರಲ್‌ ಕರುಂಬಯ್ಯ ನಿಧನ

ಭಾರತ ಪಾಕ್‌ 1965ರ ಯುದ್ದದಲ್ಲಿ ಮುಂಚೂಣಿಯಲ್ಲಿದ್ದ ಕೊಡಗಿನ ಸೇನಾನಿ ನಿವೃತ್ತ ಮೇಜರ್‌ ಜನರಲ್‌ ಕರುಂಬಯ್ಯ ನಿಧನ

mysuru News ಮೂರೂವರೆ ದಶಕಕ್ಕೂ ಅಧಿಕ ಕಾಲ ಭಾರತದ ಸೇನೆಯ ವಿವಿಧ ಹುದ್ದೆಯಲ್ಲಿದ್ದು, ಹಲವು ಯುದ್ದ, ಸೇನಾ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ ನಿವೃತ್ತ ಮೇಜರ್‌ ಜನರಲ್‌ ಸಿ.ಕೆ.ಕರುಂಬಯ್ಯ ಮೈಸೂರಿನಲ್ಲಿ ಗುರುವಾರ ನಿಧನರಾದರು.

ಭಾರತದ ನಿವೃತ್ತ ಮೇಜರ್‌ ಜನರಲ್‌ ಸಿ,ಕೆ.ಕರುಂಬಯ್ಯ ಮೈಸೂರಿನಲ್ಲಿ ನಿಧನರಾದರು.
ಭಾರತದ ನಿವೃತ್ತ ಮೇಜರ್‌ ಜನರಲ್‌ ಸಿ,ಕೆ.ಕರುಂಬಯ್ಯ ಮೈಸೂರಿನಲ್ಲಿ ನಿಧನರಾದರು. (Star of mysore)

ಮೈಸೂರು: ಆರು ದಶಕಗಳ ಹಿಂದೆ ನಡೆದಿದ್ದ ಭಾರತ ಹಾಗೂ ಪಾಕಿಸ್ತಾನದ ನಡುವಿನ ಯುದ್ದದಲ್ಲಿ ಸೇನಾಧಿಕಾರಿಯಾಗಿ ಮುಂಚೂಣಿಯಲ್ಲಿದ್ದು ಹೋರಾಟ ನಡೆಸಿದ್ದೂ ಅಲ್ಲದೇ. ಪಾಕಿಸ್ತಾನ ವಶಪಡಿಸಿಕೊಂಡಿದ್ದ ಹಲವು ಗ್ರಾಮಗಳನ್ನು ಮರು ವಶಪಡಿಸಿಕೊಟ್ಟಿದ್ದ ಕೊಡಗಿನ ಸೇನಾನಿ, ಭಾರತದ ಹೆಚ್ಚುವರಿ ಮಿಲಿಟರಿ ಕಾರ್ಯದರ್ಶಿಯಾಗಿದ್ದ ನಿವೃತ್ತ ಮೇಜರ್‌ ಜನರಲ್‌ ಸಿ.ಕೆ.ಕರುಂಬಯ್ಯ ಅವರು ಮೈಸೂರಿನಲ್ಲಿ ಗುರುವಾರ ನಿಧನವಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಕೊಡಗಿನವರಾದರೂ ಮೈಸೂರಿನಲ್ಲಿ ಕಳೆದ ಮೂರು ದಶಕದಿಂದ ವಾಸವಾಗಿದ್ದ ಕರುಂಬಯ್ಯ ಅವರು ಇಳಿ ವಯಸ್ಸಿನಲ್ಲೂ ಸಕ್ರಿಯವಾಗಿದ್ದು, ಮೈಸೂರಿನ ಹಲವಾರು ಪರಿಸರ, ಸಾಮಾಜಿಕ ಚಳವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಗಮನ ಸೆಳೆದಿದ್ದರು.

ಮೈಸೂರು ಹೊರ ವಲಯದ ಕೆ.ಹೆಮ್ಮನಹಳ್ಳಿನಲ್ಲಿರುವ ತಮ್ಮ ತೋಟದ ಮನೆಯಲ್ಲಿ ಕುಟುಂಬದವರಿಗೆ ನೆಲೆಸಿದ್ದ ಅವರು ಅನಾರೋಗ್ಯದ ಕಾರಣದಿಂದ ನಿಧರರಾಗಿದ್ದು. ಶುಕ್ರವಾರದಂದು ಮೈಸೂರಿನ ವಿಜಯುನಗರದಲ್ಲಿರುವ ಚಿರಶಾಂತಿಧಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಕರುಂಬಯ್ಯ ಅವರಿಗೆ ಪತ್ನಿ,. ಪುತ್ರ ಹಾಗೂ ಪುತ್ರಿ ಸಹಿತ ಅಪಾರ ಬಂಧು ಬಳಗದವರಿದ್ದಾರೆ.

ಮಡಿಕೇರಿಯಲ್ಲಿ ಜನನ

ಭಾರತದ ಫೀಲ್ಡ್‌ ಮಾರ್ಷಲ್‌ ಕಾರಿಯಪ್ಪ ಅವರ ಸಂಬಂಧಿಯಾಗಿದ್ದ ಕರುಂಬಯ್ಯ ಅವರು ಜನಿಸಿದ್ದು ಮಡಿಕೇರಿಯಲ್ಲಿಯೇ. 1936ರ ಡಿ.3ರಂದು ಡಾ.ಸಿ.ಬಿ.ಕಾರಿಯಪ್ಪ ಪುತ್ರರಾಗಿ ಜನಿಸಿದ ಕರುಂಬಯ್ಯ ಅವರಿಗೆ ಎಳೆಯ ವಯಸ್ಸಿನಿಂದಲೇ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ಹಂಬಲ. ಸಂಬಂಧಿಕರೇ ಸೇನೆಯಲ್ಲಿದ್ದುದು ಅವರಲ್ಲಿ ಉಮೇದು ಹೆಚ್ಚಿಸಿತ್ತು.

ಸೇನೆಗೆ ಸೇರುವ ಹಂಬಲ

ಮಡಿಕೇರಿಯ ಸೆಂಟ್ರಲ್ ಪ್ರೌಢಶಾಲೆ, ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆದ ನಂತರ ಅವರಿಗೆ ಸೇನೆ ಸೇರಬೇಕು ಎಂಬ ತುಡಿತ ಹೆಚ್ಚಿತು. ಮನೆಯವರೂ ಅದಕ್ಕೆ ಅವಕಾಶ ಮಾಡಿಕೊಟ್ಟರು. ತಮಿಳುನಾಡಿನ ವೆಲ್ಲಿಂಗ್ಟನ್ ನ ರಕ್ಷಣಾ ಸೇವೆಗಳ ಸ್ಟಾಫ್ ಕಾಲೇಜಿನಲ್ಲಿ ಪದವಿ ಪಡೆದರು.

ಕರುಂಬಯ್ಯ ಅವರು 1957ರಲ್ಲಿ ಡೆಹ್ರಾಡೂನ್ ನ ಭಾರತೀಯ ಮಿಲಿಟರಿ ಅಕಾಡೆಮಿಗೆ ಸೇರಿಕೊಂಡರು. ಆದರೆ ಅವರ ವೃತ್ತಿ ಜೀವನ ಆರಂಭಗೊಂಡಿದ್ದು ಸೇನಾಧಿಕಾರಿಯಾಗಿ ಮರಾಠ ಲಘು ಪದಾತಿದಳದ 5ನೇ ಬೆಟಾಲಿಯನ್ ನಲ್ಲಿ. ತ್ರಿಪುರ, ನಾಗಾಲ್ಯಾಂಡ್‌, ಮಿಜೋರಾಂ ಸಹಿತ ಹಲವು ರಾಜ್ಯಗಳಲ್ಲಿ ಮರಾಠ ಲಘು ಪದಾತಿದಳದ ಹಲವಾರು ಕಾರ್ಯಾಚರಣೆಯಲ್ಲಿ ಕರುಂಬಯ್ಯ ಅರವತ್ತರ ದಶಕದಲ್ಲಿಯೇ ಭಾಗಿಯಾಗಿದ್ದರು.

ಯುದ್ದದಲ್ಲಿ ಭಾಗಿ

1965ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ದ ಜೋರಾಗಿಯೇ ಇತ್ತು. ಈ ವೇಳೆ ಸೇನಾಧಿಕಾರಿಯಾಗಿ ಅವರು ರಾಜಸ್ತಾನದ ಗಡಿಯಲ್ಲಿ ನಿಯೋಜನೆಗೊಂಡಿದ್ದರು. ಅಲ್ಲಿ ಹಲವು ದಿನ ಯುದ್ದದ ಮುಂಚೂಣಿಯಲ್ಲಿದ್ದುಕೊಂಡು ಭಾರತವನ್ನು ಪ್ರತಿನಿಧಿಸಿದ್ದರು. ಆಗಲೇ ಪಾಕಿಸ್ತಾನವು ರಾಜಸ್ಥಾನ ಭಾಗದ ಹಲವು ಹಳ್ಳಿಗಳನ್ನು ವಶಪಡಿಸಿಕೊಂಡಿತ್ತು. ಅದನ್ನು ವಾಪಾಸ್‌ ಭಾರತಕ್ಕೆ ಪಡೆಯುವಲ್ಲಿ ಕರುಂಬಯ್ಯ ವಿಶೇಷ ಪಾತ್ರ ವಹಿಸಿದ್ದರು.

ಇದಾದ ನಂತದ ಎಪ್ಪತ್ತರ ದಶಕದಲ್ಲಿ ಬಾಂಗ್ಲಾ ಯುದ್ದ. 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಸಾವಿರಾರು ಪಾಕ್ ಯೋಧರ ಶರಣಾಗತಿ ಆಗುವ ಹಿಂದೆ ಕರುಂಬಯ್ಯ ಅವರ ಪಾತ್ರವೂ ಪ್ರಮುಖವಾಗಿತ್ತು. ಇದರೊಟ್ಟಿಗೆ ಮಗುರಾದಲ್ಲಿ ಶಸ್ತ್ರಾಸ್ತ್ರ ಸಾಗಣೆ ಮಾಡುತ್ತಿದ್ದ ಪಾಕಿಸ್ತಾನದ 300 ಟ್ರಕ್ ಗಳನ್ನು ವಶಕ್ಕೆ ಪಡೆದುಕೊಳ್ಳುವ ಕಾರ್ಯಾಚರಣೆಯಲ್ಲೂ ಕರುಂಬಯ್ಯ ಮುಂಚೂಣಿಯಲ್ಲಿದ್ದರು. ಈ ಹೋರಾಟ ಮುನ್ನೆಡೆಸಿದ್ದಕ್ಕೆ ಕರುಂಬಯ್ಯ ಅವರಿಗೆ ರಾಷ್ಟ್ರಪತಿ ಗೌರವ ದೊರೆತಿತ್ತು ಎಂದು ಕುಟುಂಬಸ್ಥರು ನೆನಪಿಸಿಕೊಂಡರು.

ಉತ್ತರ ಪ್ರದೇಶ ದಂಗೆ

1972ರಲ್ಲಿ ಉತ್ತರ ಪ್ರದೇಶದ ಜಹಾಂಗೀರಾಬಾದ್ ದಂಗೆ ಜೋರಾಗಿತ್ತು. ಆಗ ಸೇನೆ ಮಧ್ಯಪ್ರವೇಶ ಮಾಡಿತ್ತು. ಸೇನಾಧಿಕಾರಿಯಾಗಿದ್ದ ಕರುಂಬಯ್ಯ ಅವರು ಈ ವೇಳೆ ಮುಂಚೂಣಿಯಲ್ಲಿದ್ದುಕೊಂಡು ಉತ್ತರ ಪ್ರದೇಶದ ಆ ದಂಗೆಯನ್ನು ಹತ್ತಿಕ್ಕಿದ್ದರು.

ಸಿಕ್ಕಿಂನ ನಾತೂಲಾದಲ್ಲಿ ಇವರ ಬೆಟಾಲಿಯನ್ ಗೆ ಬ್ಲ್ಯಾಕ್ ಕ್ಯಾಟ್ ಟ್ರೋಫಿ ನೀಡಿದ್ದು ಮಹತ್ವದ ಬೆಳವಣಿಗೆಯಲ್ಲಿ ಒಂದು. ನಂತರ ಬೆಳಗಾವಿ ಹಾಗೂ ಹಿಮಾಚಲ ಪ್ರದೇಶದ ಯೋಲ್ ಸೇನಾ ಶಾಲೆಗಳ ಸ್ಟೇಷನ್ ಕಮಾಂಡರ್ ಹಾಗೂ ಕಂಟೋನ್ಮೆಂಟ್ ಬೋರ್ಡ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು ಕರುಂಬಯ್ಯ ಅವರ ವೃತ್ತಿ ಜೀವನದ ಮಹತ್ವದ ದಿನಗಳು.

ಲಡಾಕ್‌ ಹೋರಾಟ

ಲಡಾಖ್ ನಲ್ಲಿ 121 ಇನ್ ಫ್ಯಾನ್ಟ್ರಿ ಬ್ರಿಗೇಡ್ ಗ್ರೂಪ್ ಮುನ್ನಡೆಸಿದ್ದ ಕರುಂಬಯ್ಯ, ಹೆಚ್ಚುವರಿ ಮಿಲಿಟರಿ ಕಾರ್ಯದರ್ಶಿಯಾಗಿಯೂ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು ಮೂರೂವರೆ ದಶಕಕ್ಕೂ ಅಧಿಕ ವರ್ಷ ಭಾರತೀಯ ಸೇನೆಯ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಕರುಂಬಯ್ಯ ಅವರು 1991ರ ಡಿ.31ರಂದು ಸೇವೆಯಿಂದ ನಿವೃತ್ತರಾದರು.

ಸೇವಾ ಪರತೆಯಲ್ಲಿ ಮುಂದೆ

ನಿವೃತ್ತಿ ನಂತರವೂ ಕರುಂಬಯ್ಯ ಅವರು ಸುಮ್ಮನೆ ಕುಳಿತವರಲ್ಲ. ಕೊಡಗಿನಲ್ಲಿ ತೋಟವಿದ್ದರೂ ಅವರಿಗೆ ಇಷ್ಟವಾಗಿದ್ದು ಮೈಸೂರು. ಇದಕ್ಕಾಗಿಯೇ ಮೈಸೂರಿನ ಹೊರ ವಲಯದ ಕೆ.ಹೆಮ್ಮನಹಳ್ಳಿಯಲ್ಲಿ ತೋಟ ಖರೀದಿಸಿ ಇಲ್ಲಿಯೇ ವಾಸವಾಗಿದ್ದರು. ಮೈಸೂರಿನಲ್ಲಿ ಪರಿಸರ, ವನ್ಯಜೀವಿ, ಅರಣ್ಯ, ಕೆರೆಗೆ ಸಂಬಂಧಿಸಿದ ಯಾವುದೇ ಹೋರಾಟಗಳಿದ್ದರೂ ಅವರು ತೊಡಗಿಸಿಕೊಳ್ಳುತ್ತಿದ್ದರು. ಮೈಸೂರು ಸ್ಪೋರ್ಟ್ಸ್ ಕ್ಲಬ್, ಹಿರಿಯ ನಾಗರಿಕರ ವೇದಿಕೆಯ ಸದಸ್ಯರೂ ಆಗಿದ್ದರು. ಮೈಸೂರು ಗ್ರಾಹಕ ಪರಿಷತ್ತಿನ ಸದಸ್ಯರಾಗಿದ್ದುಕೊಂಡು ನಿರಂತರವಾಗಿ ನಾಗರಿಕ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು. ವಯಸ್ಸು ಎಂಬತ್ತು ದಾಟಿದ್ದರೂ ಇತ್ತೀಚಿಗೆ ಮೈಸೂರಿನಲ್ಲಿ ನಡೆದಿದ್ದ ಕುಕ್ಕರಹಳ್ಳಿ ಕೆರೆ ಉಳಿಸಿ, ಪೂರ್ಣಯ್ಯ ನಾಲೆ ಸಂರಕ್ಷಿಸುವ ಅಭಿಯಾನದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಅವರ ಒಡನಾಡಿಗಳು ನೆನಪಿಸಿಕೊಳ್ಳುತ್ತಾರೆ.

Whats_app_banner