Mysore News: ಕರ್ನಾಟಕದಲ್ಲಿ ಬಿಸಿಲ ಝಳ; ಮೈಸೂರಿನಲ್ಲಿ ಬಡವರ ಫ್ರಿಡ್ಜ್ ಮಣ್ಣಿನ ಮಡಿಕೆಗಳಿಗೆ ಹೆಚ್ಚುತ್ತಿದೆ ಬೇಡಿಕೆ
ಮೈಸೂರಿಗೆ ಗುಜರಾತ್‌ನಿಂದ ಚಿತ್ತಾಕರ್ಷಕ ಮಣ್ಣಿನ ಮಡಿಕೆಗಳನ್ನು ತರಿಸಿಕೊಳ್ಳುವ ರಾಜಸ್ಥಾನ ಮೂಲದವರು ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಮೈಸೂರು: ಈ ಬಾರಿಯ ಬಿರುಬೇಸಿಗೆ (Summer) ಜನಸಾಮಾನ್ಯರನ್ನು ಹೈರಾಣಾಗಿಸಿದ್ದು, ಎಷ್ಟು ನೀರು ಕುಡಿದರೂ ಮತ್ತೆ ಮತ್ತೆ ನೀರು ಕುಡಿಯಬೇಕೆನಿಸುತ್ತಿದೆ. ಬಿಸಿಲ (SunShine) ಬೇಗೆಯಿಂದ ಬಸವಳಿಯುತ್ತಿರುವ ಬಹುತೇಕ ಜನರು ತಣ್ಣನೆಯ ನೀರು ಕುಡಿಯಲು ಹಪಹಪಿಸುತ್ತಿದ್ದಾರೆ. ನೀರಿನ ಬಾಟಲಿಗಳನ್ನು ಕೆಲ ಸಮಯ ಫ್ರಿಡ್ಜ್‌ನಲ್ಲಿಟ್ಟು ತಣ್ಣಗಾದ ನಂತರ ಕುಡಿಯುತ್ತಾರೆ. ಆದರೆ ಬಹುತೇಕ ಜನರೀಗ ಮಣ್ಣಿನ ಮಡಿಕೆಯ ನೀರು ಕುಡಿಯಲು ಇಷ್ಟಪಡುತ್ತಿದ್ದಾರೆ. ಫ್ರಿಡ್ಜ್‌ನಲ್ಲಿರಿಸಿ ಕುಡಿಯುವ ನೀರು ಆರೋಗ್ಯಕ್ಕೆ ಮಾರಕವಾದರೆ, ಮಣ್ಣಿನ ಮಡಿಕೆಯ ನೀರು ಆರೋಗ್ಯಕ್ಕೆ ಸಂಜೀವಿನಿಯಂತಿದೆ. ಪರಿಣಾಮ ಇದೀಗ ಮಣ್ಣಿನ ಮಡಿಕೆಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಮೈಸೂರಿನ ಪ್ರಮುಖ ರಸ್ತೆಗಳು ಕೂಡುವ ವೃತ್ತಗಳ ಆಸುಪಾಸಿನ ರಸ್ತೆ ಬದಿಯಲ್ಲಿ ಮಣ್ಣಿನ ಮಡಿಕೆಗೆಳ ಮಾರಾಟ ಭರಾಟೆಯಿಂದ ನಡೆಯುತ್ತಿದೆ.
ಒಂದು ಕಾಲದಲ್ಲಿ ಮೈಸೂರಿನ ಹೃದಯ ಭಾಗದಲ್ಲಿರುವ ಕುಂಬಾರಗೇರಿಯಲ್ಲಿ ಮಣ್ಣಿನ ಮಡಿಕೆಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಆಧುನೀಕತೆಯ ಭರಾಟೆಗೆ ಸಿಲುಕಿದ ಕುಂಬಾರಿಕೆ ವೃತ್ತಿಯೂ ನಶಿಸಿಹೋಗುವ ಆತಂಕದಲ್ಲಿದೆ. ಕುಂಬಾರಗೇರಿಯಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ತಲೆಎತ್ತಿದ್ದು ವಾಣಿಜ್ಯ ಪ್ರದೇಶವಾಗಿ ಮಾರ್ಪಟ್ಟಿದೆ. ಪರಿಣಾಮ ಇಲ್ಲಿ ವಾಸಿಸುತ್ತಿದ್ದ ಕುಂಬಾರರು ಬೇರೆಡೆಗೆ ವಲಸೆ ಹೋಗಿ ನೆಲೆ ಕಂಡುಕೊಂಡಿದ್ದು, ಬೆರಳೆಣಿಕೆಯಷ್ಟು ಕುಂಬಾರರ ಕುಟುಂಬಗಳು ಮಾತ್ರ ಕಾಣಸಿಗುತ್ತವೆ.
ಸ್ಥಳೀಯವಾಗಿ ಮಡಿಕೆ ತಯಾರಿಕೆ ಸ್ಥಗಿತ, ಗುಜರಾತ್‌ನಿಂದ ಆಮದು
ಆದರೀಗ ಮೈಸೂರಿನ ಆಯಕಟ್ಟಿನ ಸ್ಥಳಗಳಲ್ಲಿ ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡುತ್ತಿರುವವರು ಮೂಲತಃ ಮೈಸೂರಿನವರಲ್ಲ.ಇವರೆಲ್ಲರೂ ಕಳೆದ ಮೂರು ದಶಕಗಳ ಹಿಂದೆ ದೂರದ ರಾಜಸ್ಥಾನದಿಂದ ಉದ್ಯೋಗ ಹುಡುಕಿಕೊಂಡು ಮೈಸೂರಿಗೆ ಬಂದವರು. ಇದೀಗ ಮೈಸೂರಿಗರೇ ಆಗಿಹೋಗಿದ್ದಾರೆ. ದೂರದ ಗುಜರಾತ್ ನಿಂದ ಚಿತ್ತಾಕರ್ಷಕವಾದ ಮಣ್ಣಿನ ಮಡಿಕೆಗಳನ್ನು ಮೈಸೂರಿಗೆ ತರಿಸಿಕೊಳ್ಳುವ ಈ ರಾಜಸ್ಥಾನ ಮೂಲದವರು ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಗುಣಮಟ್ಟಕ್ಕೆ ತಕ್ಕಂತೆ ದರ ನಿಗದಿ ಪಡಿಸಲಾಗಿದ್ದು 500 ರೂಪಾಯಿಂದ 1000 ರೂಪಾಯಿವರೆಗಿನ ಬೆಲೆಯ ಮಡಿಕೆಗಳು ಇಲ್ಲಿ ಕಾಣಸಿಗುತ್ತವೆ. ಮಣ್ಣಿನ ಮಡಿಕೆಗಳಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಕಂಡು ಬಂದಿದ್ದು, ಇವುಗಳನ್ನು ಜನಸ್ನೇಹಿ ವಾಟರ್ ಫಿಲ್ಟರ್ ಎಂದರೆ ಅತಿಶಯೋಕ್ತಿಯಲ್ಲ.ಸದ್ಯಕ್ಕೆ ಹೆಚ್ಚಿನ ಬೇಡಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮಡಿಕೆ ಮಾರಾಟದಲ್ಲಿ ಬ್ಯುಸಿಯಾಗಿರುವ ವ್ಯಾಪಾರಸ್ಥರು, ಮಡಿಕೆಗೆ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಮಣ್ಣಿನ ವಿಗ್ರಹಗಳ ಜೊತೆಗೆ ಅಲಂಕಾರಿಕ ವಸ್ತುಗಳ ಮಾರಾಟ ಮಾಡುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.
ವಿಭಾಗ