Mysore Model Teacher: ಏಡ್ಸಮ್ಮನ ಗುಡಿ ಕಟ್ಟಿ ಜಾಗೃತಿ ಮೂಡಿಸಿದರು; ವಿಭಿನ್ನಚಟುವಟಿಕೆ ಮೈಸೂರು ಶಿಕ್ಷಕ ಗಿರೀಶ್‌ಗೆ ರಾಷ್ಟ್ರ ಪ್ರಶಸ್ತಿ ಗರಿ-mysore news teacher from mysore who built aidsamma temple to educate people about health got national award kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mysore Model Teacher: ಏಡ್ಸಮ್ಮನ ಗುಡಿ ಕಟ್ಟಿ ಜಾಗೃತಿ ಮೂಡಿಸಿದರು; ವಿಭಿನ್ನಚಟುವಟಿಕೆ ಮೈಸೂರು ಶಿಕ್ಷಕ ಗಿರೀಶ್‌ಗೆ ರಾಷ್ಟ್ರ ಪ್ರಶಸ್ತಿ ಗರಿ

Mysore Model Teacher: ಏಡ್ಸಮ್ಮನ ಗುಡಿ ಕಟ್ಟಿ ಜಾಗೃತಿ ಮೂಡಿಸಿದರು; ವಿಭಿನ್ನಚಟುವಟಿಕೆ ಮೈಸೂರು ಶಿಕ್ಷಕ ಗಿರೀಶ್‌ಗೆ ರಾಷ್ಟ್ರ ಪ್ರಶಸ್ತಿ ಗರಿ

Award to Teacher ಮೈಸೂರಿನ ಶಿಕ್ಷಕ ಎಚ್‌ಎನ್‌ ಗಿರೀಶ್‌ ಅವರಿಗೆ ಈ ಬಾರಿಯ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಅವರ ವಿಭಿನ್ನ ಪ್ರಯತ್ನದ ನೋಟ ಇಲ್ಲಿದೆ.

ಎರಡೂವರೆ ದಶಕದ ಹಿಂದೆಯೇ ಏಡ್ಸಮ್ಮ ಗುಡಿ ಕಟ್ಟಿದ್ದ ಮೈಸೂರಿನ ಗಿರೀಶ್‌ಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.
ಎರಡೂವರೆ ದಶಕದ ಹಿಂದೆಯೇ ಏಡ್ಸಮ್ಮ ಗುಡಿ ಕಟ್ಟಿದ್ದ ಮೈಸೂರಿನ ಗಿರೀಶ್‌ಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ಮೈಸೂರು: ಯಾವುದೇ ಊರಿಗೆ ಹೋದರೂ ಗುಡಿ ನಿಮಗೆ ಸಿಗಬಹುದು. ಆಯಾ ಊರಿನ ಹಿನ್ನಲೆ, ಅಲ್ಲಿನವರು ಆಚರಿಸಿಕೊಂಡು ಬಂದ ಗ್ರಾಮದೇವತೆಯ ಗುಡಿಯನ್ನು ಕಾಣಬಹುದು. ಆದರೆ ಅದು ಏಡ್ಸಮ್ಮನ ಗುಡಿ. ಒಂದು ಕಾಲಕ್ಕೆ ಭಯಾನಕ ಕಾಯಿಲೆಯಾಗಿ ಮಾರ್ಪಟ್ಟಿದ್ದ ಸಮಯದಲ್ಲಿ ಆರಂಭಗೊಂಡಿದ್ದು ಏಡ್ಸಮ್ಮ ಗುಡಿ. ಧಾರ್ಮಿಕ ಹಿನ್ನೆಲೆಯೊಂದಿಗೆ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಮಾಡಿದ್ದ ಪ್ರಯತ್ನವಿದು. ಅಂತಹ ಪ್ರಯತ್ನದ ಜತೆಗೆ ಶಿಕ್ಷಕರಾಗಿಯೂ ವಿಭಿನ್ನವಾಗಿ ಮಕ್ಕಳನ್ನು ಉತ್ತೇಜಿಸುವ ಕೆಲಸ ಮಾಡುತ್ತಿರುವ ಇವರಿಗೆ ಈ ಬಾರಿ ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಬಂದಿದೆ.

ವಿಭಿನ್ನ ಚಟುವಟಿಕೆ ಮೂಲಕ ಗುರುತಿಸಿಕೊಂಡ ಆ ಶಿಕ್ಷಕರ ಹೆಸರು ಗಿರೀಶ್‌. ಊರು ಹುಣಸೂರು ತಾಲ್ಲೂಕಿನ ಹಿಂಡಗೂಡ್ಲು. ಸಣ್ಣ ಹಳ್ಳಿಯ ರೈತ ಕುಟುಂಬದಿಂದ ಬಂದ ಗಿರೀಶ್‌ ವಿಜ್ಞಾನ ಪದವೀಧರರರಾದರು. ಅವರ ಆಶಯದಂತೆ ಶಿಕ್ಷಕ ಹುದ್ದೆಯೂ ದೊರೆಯಿತು. ಮೂರು ದಶಕದಿಂದಲೂ ಶಾಲಾ ಶಿಕ್ಷಕ, ಕಾಲೇಜು ಉಪನ್ಯಾಸಕರಾಗಿ ಮೇಷ್ಟ್ರ ವೃತ್ತಿಯನ್ನು ಪ್ರೀತಿಯಿಂದ ಮಾಡುವ ಗಿರೀಶ್‌ ಅವರಿಗೆ ಏನಾದರೂ ಪ್ರೇರಣೆಯ ಕೆಲಸ ಮಾಡಬೇಕು ಎಂದು ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡವರು.

ಆಗಷ್ಟೇ ಇಲಾಖೆಗೆ ಸೇರಿ ಮೂರು ವರ್ಷ ಆಗಿತ್ತು. 1998ರ ಅವಧಿಯಲ್ಲಿ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನಲ್ಲಿ ಏಡ್ಸ್‌ ನಿಧಾನ ಹಬ್ಬ ತೊಡಗಿತ್ತು. ಜನರಿಗೆ ಜಾಗೃತಿ ಇಲ್ಲ. ಉದ್ಯೋಗ ಅರಸಿ ಹೋದವರು ಏಡ್ಸ್ ಗೆ ಸಿಲುಕಿ ಎಚ್‌ಐವಿ ಪೀಡಿತರಾಗಿದ್ದರು. ಪೋಷಕರಿಂದ ಮಕ್ಕಳ ಬದುಕಿಗೂ ತೊಂದರೆ. ಈ ಹಳ್ಳಿಯಲ್ಲೊಬ್ಬರು ತನಗೆ ಏಡ್ಸ್ ಕಾಯಿಲೆ ಬಂದಿದೆ ಅಂತ ಅಂದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಗ್ರಾಮಸ್ಥರು ಆ ವ್ಯಕ್ತಿಯ ಅಂತ್ಯಕ್ತಿಯೆಯನ್ನೂ ಮಾಡಲಿಲ್ಲ. ಇದೇ ವೇಳೆ ಮಕ್ಕಳಿಗೆ ದಡಾರ, ಸೀತಾಳ ಬಂದಾಗ ಮಾಪಮ್ಮನ ಗುಡಿಗೆ ಬಂದು ಪೂಜೆ ಮಾಡುತ್ತಿದ್ದರು.

ಆಗ ಮೈಸೂರು ಹಾಗೂ ಮಂಡ್ಯ ಗಡಿ ಭಾಗವಾದ ಮೆಣಸಿಕ್ಯಾತನಹಳ್ಳಿಯಲ್ಲಿ ಊರವರ ಸಹಕಾರದಿಂದ ಗುಡಿಯೊಂದನ್ನು ಆರಂಭಿಸಿದರು ಗಿರೀಶ್‌. ಅದು ಏಡ್ಸಮ್ಮನ ಗುಡಿ. ಅಲ್ಲಿ ನಿತ್ಯ ಪೂಜೆಯ ಜತೆಗೆ ಏಡ್ಸ್‌ ಕುರಿತು ಮಾಹಿತಿ ನೀಡಲಾಗುತ್ತಿತ್ತು. ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಲಾಯಿತು.

ಮೈಸೂರು ಮಾತ್ರವಲ್ಲದೇ ಹೊರ ಜಿಲ್ಲೆ, ರಾಜ್ಯದಿಂದಲೂ ಈ ದೇಗುಲಕ್ಕೆ ಬಂದರು. ತಜ್ಞರೂ ಈ ಕೂಡ ಇಂತಹದೊಂದಿಗೆ ಮಾದರಿಗೆ ಮೆಚ್ಚುಗೆ ಸೂಚಿಸಿದರು. ಬಹಳ ವರ್ಷಗಳ ಕಾಲ ಈ ದೇಗುಲ ಜನ ಬಳಕೆಯಲ್ಲಿತ್ತು. ಈಗ ಏಡ್ಸ್‌ ಪ್ರಮಾಣ ಕಡಿಮೆಯಾಗಿರುವ ಕಾರಣದಿಂದ ಏಡ್ಸಮ್ಮನ ದೇಗುಲ ಇಲ್ಲ.

ಮೈಸೂರಿನ ಮಹಾರಾಣಿ ಕಾಲೇಜಿನಿಂದ ಗಿರೀಶ್‌ ಹುಣಸೂರಿನ ಕಾಲೇಜಿಗೆ ವರ್ಗವಾಗಿ ಬಂದವರು ಮಕ್ಕಳ ಜ್ಞಾನವನ್ನು ಉನ್ನತೀಕರಿಸುವ ವಿಭಿನ್ನ ಚಟುವಟಿಕೆ ಆರಂಭಿಸಿದರು. ಮಕ್ಕಳಿಗೂ ಪ್ರೀತಿ ಪಾತ್ರ ಶಿಕ್ಷಕರಾದರು. ಅವರು ಅನುಸರಿಸುತ್ತಿದ್ದ ಪಾಠದ ಮಾದರಿಗಳು ಜನಜನಿತವೂ ಆಗಿವೆ. ಇದಲ್ಲದೇ ಕೆಆರ್‌ ನಗರ ತಾಲ್ಲೂಕು ಹೊಸೂರು ಶಾಲೆಯಲ್ಲೂ ಸೇವೆ ಮಾಡಿದ್ದಾರೆ ಗಿರೀಶ್‌.

ಶಾಲೆ ಮುಗಿದ ನಂತರ ಗಿರೀಶ್‌ ಅವರಿಗೆ ಸಂಜೆ ಬಿಡುವಿನ ಸಮಯವಿತ್ತು. ಜ್ಞಾನಬುತ್ತಿ ಎನ್ನುವ ಮೈಸೂರಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುವ ಸಂಸ್ಥೆಯಲ್ಲಿ ಸಂಘಟಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದರು. ಆನಂತರ ಜ್ಞಾನದೀಪ್ತಿ ಸಂಸ್ಥೆಯನ್ನು ಹುಟ್ಟು ಹಾಕಿ ಅಲ್ಲಿಯೂ ಸಹಸ್ರಾರು ಪರೀಕ್ಷಾರ್ಥಿಗಳಿಗೆ ತರಬೇತಿಯನ್ನು ನೀಡಿದರು ಗಿರೀಶ್‌. ಈಗಲೂ ಇಂತಹ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಾರೆ.

ಮೂರು ದಶಕದಿಂದ ಅವರ ವಿಭಿನ್ನ ಚಟುವಟಿಕೆ ಗುರುತಿಸಿ ನಾನಾ ಸಂಘಟನೆಗಳು ಗೌರವಿಸಿವೆ. ಈ ಬಾರಿ ರಾಷ್ಟ್ರ ಪ್ರಶಸ್ತಿಯೇ ಅವರಿಗೆ ಅರಸಿ ಬಂದಿದೆ. ಕೇಂದ್ರ ಶಿಕ್ಷಣ ಇಲಾಖೆಯು ಭಾರತಾದ್ಯಂತ ಶಿಕ್ಷಕರನ್ನು ಆಯ್ಕೆ ಮಾಡಿದೆ. ಕರ್ನಾಟಕದಿಂದ ಇಬ್ಬರನ್ನು ಆಯ್ಕೆ ಮಾಡಿದ್ದು ಅದರಲ್ಲಿ ಗಿರೀಶ್‌ ಕೂಡ ಒಬ್ಬರು.

ಶಿಕ್ಷಕ ಎಂದರೆ ಸಮಾಜದಲ್ಲಿ ಇರುವ ಗೌರವ ಅಪಾರ. ಸಮಾಜವನ್ನು ಸರಿ ದಾರಿಗೆ ತೆಗೆದುಕೊಂಡು ಹೋಗುವ ಶಕ್ತಿ ಇರುವುದು ಪೋಷಕರು ಬಿಟ್ಟರೆ ಶಿಕ್ಷಕರಿಗೆ. ಅಂತಹ ಶಿಕ್ಷಕರ ಮಾದರಿಗಳು ಸಾಕಷ್ಟಿವೆ. ಮೈಸೂರಿನಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್‌ ಶಿಕ್ಷಕರಾಗಿದ್ದರು. ಕುವೆಂಪು ರಂತವರು ಮೇಷ್ಟ್ರಾಗಿ ತಮ್ಮ ಕಾಯಕಕ್ಕೆ ಉನ್ನತ ಗೌರವ ತಂದ ಊರು ಮೈಸೂರು. ಈ ಕಾರಣದಿಂದಲೇ ಹಲವಾರು ಸಮಾಜಪರ, ವಿದ್ಯಾರ್ಥಿ ಸ್ನೇಹಿ ಚಟುವಟಿಕೆಗಳ ಮೂಲಕ ಕೆಲಸ ಮಾಡಿರುವೆ. ಇದಕ್ಕೆ ಪ್ರಶಸ್ತಿಯ ಗೌರವ ಬಂದಿರುವುದು ಇನ್ನಷ್ಟು ಕೆಲಸ ಮಾಡಲು ಉತ್ತೇಜನ ನೀಡಲಿದೆ ಎಂದು 54 ವರ್ಷದ ಗಿರೀಶ್‌ ಹೇಳುತ್ತಾರೆ.