ಕನ್ನಡ ಸುದ್ದಿ  /  ಕರ್ನಾಟಕ  /  Mysore News: ವರುಣಾ ಕ್ಷೇತ್ರದಲ್ಲಿ ಸಿಎಂ ಪುತ್ರ ಡಾ ಯತೀಂದ್ರ ವಿರುದ್ದ ರೈತರ ಆಕ್ರೋಶ, ಮತ ಬಹಿಷ್ಕಾರದ ಬೆದರಿಕೆ Video

Mysore News: ವರುಣಾ ಕ್ಷೇತ್ರದಲ್ಲಿ ಸಿಎಂ ಪುತ್ರ ಡಾ ಯತೀಂದ್ರ ವಿರುದ್ದ ರೈತರ ಆಕ್ರೋಶ, ಮತ ಬಹಿಷ್ಕಾರದ ಬೆದರಿಕೆ video

ನಂಜನಗೂಡು ತಾಲ್ಲೂಕು ಅಳಗಂಚಿಪುರ ಗ್ರಾಮದ ಸಕ್ಕರೆ ಕಾರ್ಖಾನೆ ವಿಚಾರವಾಗಿ ರೋಸಿ ಹೋಗಿರುವ ಗ್ರಾಮಸ್ಥರು ಲೋಕಸಭ ಚುನಾವಣೆ ಮತ ಪ್ರಚಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಪುತ್ರ, ಮಾಜಿ ಶಾಸಕ ಡಾ.ಯತೀಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ವರದಿ: ಪಿ.ರಂಗಸ್ವಾಮಿ, ಮೈಸೂರು

ಗ್ರಾಮದಲ್ಲಿಯೇ ತಡೆದು ಡಾ.ಯತೀಂದ್ರ ಅವರನ್ನು ಪ್ರಶ್ನಿಸಿದ ಗ್ರಾಮಸ್ಥರು.
ಗ್ರಾಮದಲ್ಲಿಯೇ ತಡೆದು ಡಾ.ಯತೀಂದ್ರ ಅವರನ್ನು ಪ್ರಶ್ನಿಸಿದ ಗ್ರಾಮಸ್ಥರು.

ಮೈಸೂರು: ತಮ್ಮ ಬೇಡಿಕೆ ಈಡೇರದಿದ್ದರೇ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣ ಕ್ಷೇತ್ರದ ವ್ಯಾಪ್ತಿಯ ಮೂರು ಗ್ರಾಮಗಳ ಜನರು ಎಚ್ಚರಿಕೆ ನೀಡಿದ್ದು, ಚುನಾವಣಾ ಪ್ರಚಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರರನ್ನು ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ರೈತರನ್ನು ಸಮಾಧಾನಪಡಿಸಲು ಯತೀಂದ್ರ ಅವರಲ್ಲದೇ ಜತೆಗಿದ್ದ ಹಲವಾರು ಮುಖಂಡರು ಕೂಡ ಪ್ರಯತ್ನಿಸಿದ್ದಾರೆ. ಚುನಾವಣೆ ಮುಗಿದ ನಂತರ ನಿಮ್ಮ ಸಮಸ್ಯೆಗೆ ಪರಿಹಾರ ಕೊಡಿಸುವ ಭರವಸೆಯನ್ನು ಯತೀಂದ್ರ ನೀಡಿದ್ದಾರೆ. ಆದರೂ ರೈತರು ಅದಕ್ಕೆ ಒಪ್ಪಿಗೆ ನೀಡಿಲ್ಲ. ಈ ಘಟನೆ ನಡೆದಿರುವುದು ವರುಣಾ ಕ್ಷೇತ್ರ ವ್ಯಾಪ್ತಿಯ ಅಳಗಂಚಿ ಗ್ರಾಮದಲ್ಲಿ.

ಟ್ರೆಂಡಿಂಗ್​ ಸುದ್ದಿ

ವರುಣ ವಿಧಾನಸಭಾ ಕ್ಷೇತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದು, ಕಾಂಗ್ರೆಸ್ ನಿಂದ ಸಚಿವ ಡಾ ಹೆಚ್ ಸಿ ಮಹದೇವಪ್ಪನವರ ಪುತ್ರ ಸುನಿಲ್ ಬೋಸ್ ಸ್ಪರ್ಧಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಪರವಾಗಿ ಮತಯಾಚನೆ ಮಾಡಲು ಬಂದಿದ್ದ ಡಾ ಯತೀಂದ್ರ ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಿದರು.

ರೈತರ ಆಕ್ರೋಶ

ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಮತ ಚಲಾಯಿಸುವಂತೆ ಡಾ ಯತೀಂದ್ರ ಮನವಿ ಮಾಡಿದರು. ಈ ವೇಳೆ ರೈತರ ಆಕ್ರೋಶ ಸ್ಪೋಟಗೊಂಡಿತು. ತಮ್ಮ ಬೇಡಿಕೆ ಈಡೇರಿಕೆಗಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸದ ಸಿಎಂ ಸಿದ್ದರಾಮಯ್ಯ ಹಾಗು ಪುತ್ರ ಡಾ ಯತೀಂದ್ರ ವಿರುದ್ಧ ಕಿಡಿಕಾರಿದರು.

ತಮ್ಮ ಬೇಡಿಕೆ ಈಡೇರದಿದ್ದರೆ ಅಳಗಂಚಿ, ಅಳಗಂಚಿಪುರ, ಮಲ್ಲುಪುರ ಸೇರಿದಂತೆ ಮೂರು ಗ್ರಾಮಗಳಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ‌ ನೀಡಿದರು. ಈ ವೇಳೆ ಪ್ರತಿಭಟನಾಕಾರರನ್ನು ಸಮಾಧಾನ ಮಾಡಿ ಓಲೈಸಲು ಮುಂದಾದ ಯತೀಂದ್ರಗೆ, ಲೋಕಸಭೆ ಚುನಾವಣೆಗೋಸ್ಕರ ನೀವು ಇಲ್ಲಿಗೆ ಬಂದಿದ್ದೀರಿ, ಇಲ್ಲದಿದ್ದರೇ ನೀವು ಯಾವುದೇ ಕಾರಣಕ್ಕೂ ಇಲ್ಲಿಗೆ ಬರುತ್ತಿರಲಿಲ್ಲ ಎಂದು ಆಕ್ರೋಶ‌‌ ವ್ಯಕ್ತಪಡಿಸಿದರು.

ಆಗ ಅಳಗಂಚಿಯ ಬಣ್ಣಾರಿಯಮ್ಮನ್‌ ಸಕ್ಕರೆ ಕಾರ್ಖಾನೆಯವರು ನಮ್ಮ ಮಾತನ್ನು ಕೇಳುತ್ತಿಲ್ಲ. ಈ ವಿಷಯವನ್ನು ನಮ್ಮ ತಂದೆಯವರ ಗಮನಕ್ಕೆ ತರುತ್ತೇನೆಂದು ಯತೀಂದ್ರ ಹೇಳುತ್ತಿದ್ದಂತೆ ಮತ್ತಷ್ಟು ಕುಪಿತಗೊಂಡ ಪ್ರತಿಭಟನಾಕಾರರು, ವಿಚಾರವನ್ನು ಇನ್ನೂ ನಿಮ್ಮ ತಂದೆಯವರ ಗಮನಕ್ಕೆ ತಂದಿಲ್ಲವೇ? ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು.

ರೈತರ ಬೇಡಿಕೆಯನ್ನು ಇದೇ ಏಪ್ರಿಲ್ 26 ರೊಳಗೆ ಈಡೇರಿಸಬೇಕು. ಇಲ್ಲದಿದ್ದರೆ ಮೂರು ಗ್ರಾಮಗಳಲ್ಲೂ ಮುಂಬರುವ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು. ತುಂಬಾ ಆಕ್ರೋಶಗೊಂಡಿದ್ದ ಪ್ರತಿಭಟನಾನಿರತ ರೈತರಿಗೆ ಉತ್ತರಿಸಲಾಗದೇ ಅಸಹಾಯಕರಾದ ಡಾ ಯತೀಂದ್ರ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ತೆರಳಿದರು.

ರೈತರ ಬೇಡಿಕೆ ಏನು

ಸಿದ್ದರಾಮಯ್ಯನವರ ತವರು ಕ್ಷೇತ್ರದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಪ್ರತಿಭಟನೆ ಎರಡು ತಿಂಗಳು ಪೂರೈಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಣ್ಣಾರಿಯಮ್ಮನ್ ಸಕ್ಕರೆ ಕಾರ್ಖಾನೆ ಮುಂಭಾಗ ಕಳೆದೆರಡು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಣ್ಣಾರಿಯಮ್ಮನ್‌ ಸಕ್ಜರೆ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡ ರೈತರು ಹಾಗೂ ಸಿಎಂ ಸಿದ್ದರಾಮಯ್ಯನವರಿಗೆ ಮತ ನೀಡಿದ ಮತದಾರರು ಈ ರೀತಿ ಅಹೋರಾತ್ರಿ ಧರಣಿ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಕಾರ್ಖಾನೆ ನಿರ್ಮಾಣಕ್ಕಾಗಿ ಅಂದು ಮಲ್ಲುಪುರ, ಅಳಗಂಚಿ, ಅಳಗಂಚಿ ಪುರ ರೈತರಿಂದ ಪ್ರತಿ ಎಕರೆಗೆ ಕೇವಲ 26 ಸಾವಿರ ರೂಪಾಯಿಗೆ ಭೂಮಿ ಪಡೆದ ಕೆಐಎಡಿಬಿ ಯು ಪ್ರತಿ ಕುಟುಂಬಕ್ಕೆ ಕಾಯಂ ಉದ್ಯೋಗ ನೀಡುವುದಾಗಿ ಭರವಸೆ ನೀಡಿ, ರೈತರಿಂದ ಪಡೆದ ಜಮೀನನ್ನು ಬಣ್ಣಾರಿಯಮ್ಮನ್ ಸಕ್ಕರೆ ಕಾರ್ಖಾನೆಗೆ ನೀಡಿತ್ತು.

ಆದರೆ ಕೆಲಸದ ಆಸೆಯಿಂದ ಭೂಮಿ ನೀಡಿದ್ದ ಯಾವೊಬ್ಬ ರೈತನ ಕುಟುಂಬಕ್ಕೂ‌ ಇದುವರೆಗೂ ಖಾಯಂ ಉದ್ಯೋಗ ನೀಡಿಲ್ಲ. ಬದಲಾಗಿ ಸಣ್ಣಪುಟ್ಟ ಗುತ್ತಿಗೆ ಆಧಾರದ ಕೆಲಸಗಳನ್ನು ನೀಡುತ್ತಾ ಬರಲಾಗಿದೆ. ಇದರಿಂದ ರೈತರು ಕುಪಿತಗೊಂಡಿದ್ದು, ಅಹೋರಾತ್ರಿ ಧರಣಿ ಪ್ರತಿಭಟನೆ ನಡೆಸುತ್ತಿದ್ದಾರೆ. ಭೂಮಿ ಕಳೆದುಕೊಂಡ ಸುಮಾರು 120 ರೈತ ಕುಟುಂಬಗಳು ಹಾಗೂ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಮತ್ತು ರಾಜ್ಯ ರೈತ ಸಂಘಟನೆಗಳ ವತಿಯಿಂದ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನಾ ಧರಣಿ ಈಗಾಗಲೇ ಎರಡು ತಿಂಗಳು ಪೂರೈಸಿದೆ. ಆದರೂ ಇದುವರೆಗೂ ವರುಣ ಕ್ಷೇತ್ರದ ಶಾಸಕರಾದ ಸಿ ಎಂ ಸಿದ್ದರಾಮಯ್ಯ ಆಗಲಿ ಅಥವಾ ಕ್ಷೇತ್ರದ ಉಸ್ತುವಾರಿ ಹೊತ್ತಿರುವ ಸಿಎಂ ಸಿದ್ದರಾಮಯ್ಯನವರ ಪುತ್ರ ಹಾಗು ಮಾಜಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಆಗಲಿ ಅಥವಾ ಉನ್ನತ ಮಟ್ಟದ ಅಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರುತ್ತಾ ಬಂದಿದ್ದರು.

(ವರದಿ: ಪಿ.ರಂಗಸ್ವಾಮಿ, ಮೈಸೂರು)

IPL_Entry_Point