Mysuru Dasara 2023: ಮೈಸೂರು ದಸರಾಕ್ಕೆ ಆಕರ್ಷಕ ಲೋಗೋ, ಟ್ಯಾಗ್‌ಲೈನ್‌ ನೀಡಿ ಬಹುಮಾನ ಗೆಲ್ಲಿ: ದಸರಾ ಹೆಚ್ಚುವರಿ ಅನುದಾನ ಬಿಡುಗಡೆಗೆ ಮನವಿ
ಕನ್ನಡ ಸುದ್ದಿ  /  ಕರ್ನಾಟಕ  /  Mysuru Dasara 2023: ಮೈಸೂರು ದಸರಾಕ್ಕೆ ಆಕರ್ಷಕ ಲೋಗೋ, ಟ್ಯಾಗ್‌ಲೈನ್‌ ನೀಡಿ ಬಹುಮಾನ ಗೆಲ್ಲಿ: ದಸರಾ ಹೆಚ್ಚುವರಿ ಅನುದಾನ ಬಿಡುಗಡೆಗೆ ಮನವಿ

Mysuru Dasara 2023: ಮೈಸೂರು ದಸರಾಕ್ಕೆ ಆಕರ್ಷಕ ಲೋಗೋ, ಟ್ಯಾಗ್‌ಲೈನ್‌ ನೀಡಿ ಬಹುಮಾನ ಗೆಲ್ಲಿ: ದಸರಾ ಹೆಚ್ಚುವರಿ ಅನುದಾನ ಬಿಡುಗಡೆಗೆ ಮನವಿ

Mysuru Dasara Branding ವಿಶ್ವವಿಖ್ಯಾತ ಮೈಸೂರು ದಸರಾವನ್ನು ಬ್ರಾಂಡಿಂಗ್‌ ಮಾಡುವ ನಿಟ್ಟಿನಲ್ಲಿ ದಸರಾ ಸಮಿತಿ ಹಲವು ಚಟುವಟಿಕೆ ರೂಪಿಸಿದೆ. ಇದರಡಿ ಸ್ಪರ್ಧೆಗಳೂ ಇರಲಿವೆ. ಈ ಬಾರಿಯ ಮೈಸೂರು ದಸರಾದಲ್ಲಿ ಏನೇನು ಚಟುವಟಿಕೆ ಇರಲಿವೆ. ತಯಾರಿ ಹೇಗೆ ನಡೆದಿದೆ ಎನ್ನುವ ವರದಿ ಇಲ್ಲಿದೆ.

ಮೈಸೂರು ದಸರಾ ಬ್ರಾಂಡಿಂಗ್‌ ಪೋಸ್ಟರ್‌ ಅನ್ನು ಸೋಮವಾರ ಬಿಡುಗಡೆ ಮಾಡಲಾಯಿತು.
ಮೈಸೂರು ದಸರಾ ಬ್ರಾಂಡಿಂಗ್‌ ಪೋಸ್ಟರ್‌ ಅನ್ನು ಸೋಮವಾರ ಬಿಡುಗಡೆ ಮಾಡಲಾಯಿತು.

ಮೈಸೂರು: ಮೈಸೂರು ದಸರಾ ಆಯೋಜನೆಗೆ ನಿಮ್ಮದೂ ಕೊಡುಗೆ ನೀಡುವ ಆಸೆಯಿದೆಯಾ? ಇದಕ್ಕಾಗಿ ಮೈಸೂರು ದಸರಾ ಆಚರಣಾ ಸಮಿತಿಯೂ ವಿಶೇಷ ಸ್ಪರ್ಧೆಯೊಂದನ್ನು ಆಯೋಜಿಸಿದೆ.

ಮೈಸೂರು ದಸರಾ 2023 ಅಂಗವಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬ್ರ್ಯಾಂಡಿಂಗ್ ಮೈಸೂರು ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ.

ಆಕರ್ಷಕ ಲೋಗೋ, ಒಂದು ಸಾಲುನುಡಿ( ಟ್ಯಾಗ್‌ಲೈನ್‌), ಶುಭ ಸಂದೇಶ, ಮೈಸೂರಿನ ನೆಚ್ಚಿನ ತಾಣದ ಬಗ್ಗೆ ಬರಹ ಸ್ಪರ್ಧೆಯ ವಿಷಯವಾಗಿದೆ. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬಹುಮಾನ ನೀಡಲಾಗುತ್ತದೆ. ಮೊದಲ ಬಹುಮಾನ 30 ಸಾವಿರ ನಗದು,ದ್ವಿತೀಯ ಬಹುಮಾನ 10 ಸಾವಿರ, ತೃತೀಯ ಬಹುಮಾನ 05 ಸಾವಿರ ರೂ. ನಿಗದಿ ಮಾಡಲಾಗಿದೆ. ನೋಂದಣಿಗೆ ಕೊನೆ ದಿನಾಂಕ 31/08/2023. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04/09/2023.

ಪೋಸ್ಟರ್‌ ಬಿಡುಗಡೆ

ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ಸೋಮವಾರ ನಡೆಯಿತು. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಈ ಪೋಸ್ಟರ್ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪಈ ಬಾರಿ ಬ್ಯ್ರಾಂಡ್ ಮೈಸೂರು ಸ್ಪರ್ಧೆ ಆಯೋಜಿಸಲಾಗುವುದು. ದಸರಾಗೆ ಅಗತ್ಯ ಅನುದಾ‌ನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ. ಕಳೆದ ಸಲಕ್ಕಿಂತ ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಭಾಗಿಯಾಗಿ ಹಲವು ಸಲಹೆಗಳನ್ನು ಕೊಟ್ಟಿದ್ದಾರೆ. ಈ ಬಾರಿಯ ದಸರಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸಲಾಗುವುದು. ಸೆಪ್ಟೆಂಬರ್ 1ಕ್ಕೆ ಗಜಪಯಣ ಸಮಾರಂಭ ನಡೆಯಲಿದೆ. ದಸರಾ ಆನೆಗಳು ಸೆಪ್ಟೆಂಬರ್ 4ಕ್ಕೆ ಅರಮನೆ ಆವರಣ ಪ್ರವೇಶಿಸಲಿವೆ. ದಸರಾ ಆಚರಣೆಗಾಗಿ 16 ಉಪ ಸಮಿತಿ ರಚಿಸಲಾಗಿದೆ. ಅಗತ್ಯ ಬಿದ್ದರೆ ಮತ್ತೆ ಮೂರು ಸಮಿತಿಗಳನ್ನು ರಚಿಸಲಾಗುತ್ತದೆ ಎಂದು ಹೇಳಿದರು.

ಚಾ. ನಗರ ಶ್ರೀರಂಗಪಟ್ಟಣ ದಸರಾ

ಮೈಸೂರು ದಸರಾ ಮಹೋತ್ಸವದ ಆಕರ್ಷಣೆ ಹೆಚ್ಚಿಸಲು ಹಾಗೂ ಹಿಂದಿನ ವೈಭವಗಳೊಂದಿಗೆ ಅದ್ಧೂರಿಯಾಗಿ ಆಚರಿಸಲು 30 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ನಡೆದ ಮೈಸೂರು, ಚಾಮರಾಜನಗರ, ಮಂಡ್ಯ ಜನಪ್ರತಿನಿಧಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಸರೆಗೆ ಮುಖ್ಯಮಂತ್ರಿಯವರು ಹಣ ಕೊಡುವ ವಿಶ್ವಾಸವಿದೆ. ಒಂದೆರಡು ದಿನದಲ್ಲಿ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ. ಮುಂಚಿತವಾಗಿ ಹಣ ಬಿಡುಗಡೆ ಮಾಡಿದರೆ ದಸರಾ ಸಿದ್ಧತೆ ಹಾಗೂ ಕಾಮಗಾರಿಗಳನ್ನು ಶೀಘ್ರವಾಗಿ ಆರಂಭಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಳೆದ ವರ್ಷ ಚಾಮರಾಜನಗರ ಮತ್ತು ಶ್ರೀರಂಗಪಟ್ಟಣ ದಸರಾಗೆ ತಲಾ 1 ಕೋಟಿ ರೂ. ಅನುದಾನ ನೀಡಲಾಗಿತ್ತು. ಅದನ್ನು 2 ಕೋಟಿ ರೂ.ಗೆ ಹೆಚ್ಚಿಸುವಂತೆ ಶಾಸಕರು ಮನವಿ ಮಾಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ತಾಲ್ಲೂಕು ಮಟ್ಟದ ದಸರಾ ಆಚರಣೆಗೆ ಪ್ರತಿ ತಾಲ್ಲೂಕಿಗೆ 10 ಲಕ್ಷ ರೂ. ನೀಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ದೀಪಾಲಂಕಾರಕ್ಕೆ 7 ಕೋಟಿ ರೂ

ದಸರಾ ವೇಳೆ ಮೈಸೂರು ನಗರದ ದೀಪಾಲಂಕಾರಕ್ಕೆ ಕಳೆದ ವರ್ಷ 6.5 ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ಬಾರಿ 7 ಕೋಟಿ ರೂ. ನೀಡುವಂತೆ ಸೆಸ್ಕ್ ವ್ಯವಸ್ಥಾಪಕರು ಮನವಿ ಮಾಡಿರುವುದಾಗಿ ವಿವರಿಸಿದರು.

ದೀಪಾಲಂಕಾರದಲ್ಲಿ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಪರಿಚಯ ಇರಲಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಖಾಸಗಿ ಸಹಭಾಗಿತ್ವ ಮತು ಸಿಎಸ್‌ಆರ್ ನಿಧಿಯನ್ನು ದಸರಾಗೆ ಬಳಕೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

32 ಕ್ರೀಡೆಗಳ ಆಯೋಜನೆ

ದಸರಾ ಕ್ರೀಡಾಕೂಟದಲ್ಲಿ 32 ಕ್ರೀಡೆಗಳು ಇರಲಿದ್ದು, 8 ಕೋಟಿ ರೂ. ಅನುದಾನ ಕೇಳಿದ್ದಾರೆ. ಕ್ರೀಡಾಪಟುಗಳಿಗೆ ಯಾವುದೇ ಅನಾನುಕೂಲವಾಗದಂತೆ ಎಚ್ಚರಿಕೆ ವಹಿಸುತ್ತೇವೆ. ಹಿಂದಿನ ವರ್ಷದ ಲೋಪಗಳು ಮರುಕಳಿಸುವುದಿಲ್ಲ.ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು. ದಸರಾ ಮಹೋತ್ಸವವನ್ನು ಆಹಾರ ಮೇಳ, ಯುವ ದಸರಾ ಕಾರ್ಯಕ್ರಮಗಳಿಗೆ ಸೀಮಿತ ಮಾಡದೇ ಸಾಂಸ್ಕೃತಿಕ, ಸಾಹಿತ್ಯ, ಕ್ರೀಡೆಗೆ ಒತ್ತು ಕೊಡಲಾಗುವುದು ಎಂದು ಹೇಳಿದರು.

ಪ್ರವಾಸೋದ್ಯಮಕ್ಕೆ ಉತ್ತೇಜನದ ದೃಷ್ಟಿಯಿಂದ ಹೋಟೆಲ್ ಮಾಲೀಕರ ಸಭೆ ನಡೆಸಲಾಗುವುದು. ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು ಸೇರಿ ಟೂರಿಸ್ಟ್ ಸರ್ಕೀಟ್ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಶಕ್ತಿ ಯೋಜನೆಯಿಂದ ಹೆಚ್ಚು ಮಹಿಳೆಯರು ದಸರಾದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದು ವಿವರಿಸಿದರು.

ಪ್ರಮುಖ ತೀರ್ಮಾನ

ದಸರಾ ಮಹೋತ್ಸವವನ್ನು ಸಾಂಪ್ರದಾಯಿಕ ಆಚರಣೆ, ಕಲೆ,ಸಾಹಿತ್ಯ,ಕ್ರೀಡೆ,ಮನರಂಜನೆಗೆ ಒತ್ತು ನೀಡುವಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಜತೆಗೆ,ಆಯಾಯ ಉಪ ಸಮಿತಿಗಳು ಅಂದಾಜು ಪಟ್ಟಿ ಸಲ್ಲಿಸಿ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.

ವಿಜಯನಗರ ಸಾಮಾಜ್ರ್ಯವನ್ನು ವಿಸ್ತರಿಸಿದ ನೆನಪು,ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದ ನೆನಪಿಸುವುದು ಮತ್ತು ಸ್ಥಳೀಯ ಪರಂಪರೆ,ಸಾಂಪ್ರದಾಯಿಕ ವಿಚಾರಗಳಿಗೆ ಹೆಚ್ಚು ಒತ್ತು ನೀಡುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲು ಸೂಚಿಸಲಾಯಿತು.

ಗೋಲ್ಡ್ ಕಾರ್ಡ್‌ಗಳನ್ನು ಬಿಡುಗಡೆ ಮಾಡುವ ಮುನ್ನ ಎನ್‌ಆರ್‌ಐಗಳು, ಹೊರರಾಜ್ಯ ಮತ್ತು ಸ್ಥಳೀಯರೆಂದು ಬೇರ್ಪಡಿಸಿ ಮಾರಾಟಕ್ಕೆ ಬಿಡುವ ಜತೆಗೆ, ಅರಮನೆ ಜಂಬೂಸವಾರಿ ಮೆರವಣಿಗೆ ಮತ್ತು ಪಂಜಿನ ಕವಾಯತು ವೀಕ್ಷಣೆಗೆ ಆಸನಗಳ ಸಂಖ್ಯೆಯನ್ನು ಹಾಕುವುದರ ಬಗ್ಗೆ ತೀರ್ಮಾನಿಸಲಾಯಿತು. ಸ್ವಾಗತ,ಆಮಂತ್ರಣ ಮತ್ತು ಸ್ಥಳಾವಕಾಶ, ಮೆರವಣಿಗೆ ಮತ್ತು ಪಂಜಿನ ಕವಾಯತು, ಸ್ತಬ್ದಚಿತ್ರ, ರೈತ ದಸರಾ(ಗ್ರಾಮೀಣ ದಸರಾ),ಕ್ರೀಡೆ, ಸಾಂಸ್ಕೃತಿಕ ದಸರಾ, ಲಲಿತಕಲೆ, ದೀಪಾಲಂಕಾರ, ಕವಿಗೋಷ್ಠಿ, ಯೋಗದಸರಾ, ಯುವಸಂಭ್ರಮ,ಯುವದಸರಾ, ಮಹಿಳಾ,ಮಕ್ಕಳ ದಸರಾ, ಆಹಾರ ಮೇಳ,ಸ್ವಚ್ಛತೆ ಮತ್ತು ವ್ಯವಸ್ಥೆ, ಚಲನಚಿತ್ರ,ಕುಸ್ತಿ ಉಪ ಸಮಿತಿಗಳ ರಚನೆಗೆ ಒಪ್ಪಿಗೆ ನೀಡಲಾಯಿತು.

ವಿಶ್ವನಾಥ್‌ ಆಕ್ಷೇಪ

ಈ ವೇಳೆ ದಸರಾ ಗಜಪಡೆಯನ್ನುಲಾರಿಗಳ ಮೂಲಕ ಮೈಸೂರಿಗೆ ಕರೆ ತರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಂಎಲ್ ಸಿ ಅಡಗೂರು ಹೆಚ್.ವಿಶ್ವನಾಥ್, ಆನೆಗಳನ್ನು ಲಾರಿಯಲ್ಲಿ ಕರೆ ತರುವುದು ಸಂಪ್ರದಾಯವಲ್ಲ. ಈ ಹಿಂದೆ ಮೈಸೂರು ಮಹಾರಾಜರು ಆನೆಗಳಿಗೆ ಫಲ ತಾಂಬೂಲ ನೀಡಿ ಕಾಲ್ನಡಿಗೆಯಲ್ಲಿ ಕರೆ ತರುತ್ತಿದ್ದರು. ಆನೆಗಳನ್ನು ಕಾಲ್ನಡಿಗೆಯಲ್ಲಿಯೇ ಕರೆ ತಂದರೆ ಒಳ್ಳೆಯದು ಎಂದು ಸಲಹೆ ನೀಡಿದರು.

ಇದಕ್ಕೆ ಒಪ್ಪದ ಅರಣ್ಯಾಧಿಕಾರಿ ಮಾಲತಿಪ್ರಿಯಾ. ಗೈಡ್ ಲೈನ್ಸ್ ಪ್ರಕಾರ ಆನೆಗಳನ್ನು ಕಾಲ್ನಡಿಗೆಯಲ್ಲಿ ಕರೆ ತರಲು ಸಾಧ್ಯವಿಲ್ಲ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಜಿಲ್ಲಾಧಿಕಾರಿ ಡಾ ಕೆ. ವಿ ರಾಜೇಂದ್ರ ಕೂಡ ಸಹಮತ ವ್ಯಕ್ತಪಡಿಸಿದರು. ಅವಕಾಶ ಸಿಕ್ಕರೆ ಆನೆಗಳನ್ನು ಕಾಲ್ನಡಿಗೆ ಮೂಲಕ ಕರೆ ತರಲು ಪ್ರಯತ್ನಿಸೋಣ ಎಂದು ಸಚಿವ ಮಹದೇವಪ್ಪ ಹೇಳಿ ಚರ್ಚೆಗೆ ತೆರೆ ಎಳೆದರು.

ಸಚಿವ ಕೆ.ವೆಂಕಟೇಶ್, ಮಹಾಪೌರ ಶಿವಕುಮಾರ್, ಸಂಸದ ಪ್ರತಾಪಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ಜಿ.ಡಿ.ಹರೀಶ್ ಗೌಡ, ಡಿ.ರವಿಶಂಕರ್, ದರ್ಶನ್ ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯರಾದ ಎ.ಎಚ್.ವಿಶ್ವನಾಥ್, ಮರಿತಿಬ್ಬೇಗೌಡ, ಸಿ.ಎನ್.ಮಂಜೇಗೌಡ, ಉಸ್ತುವಾರಿ ಕಾರ್ಯದರ್ಶಿ ಎಸ್‌.ಸೆಲ್ವಕುಮಾರ್‌, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ,ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಯುಕ್ತ ಶಶಿಕುಮಾರ್, ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯಾ, ಮುಡಾ ಆಯುಕ್ತ ಜಿ.ಟಿ.ದಿನೇಶ್ ಕುಮಾರ್, ನಗರಪಾಲಿಕೆ ಆಯುಕ್ತ ಆಶಾದ್‌ರೆಹಮಾನ್ ಷರೀಫ್, ಎಸ್ಪಿ ಸೀಮಾ ಲಾಟ್ಕರ್, ಜಿಪಂ ಉಪ ಕಾರ್ಯದರ್ಶಿ ಕೃಷ್ಣಂರಾಜು,ಸೆಸ್ಕ್ ಎಂಡಿ ಸಿ.ಎನ್.ಶ್ರೀಧರ್ ಮತ್ತಿತರರು ಹಾಜರಿದ್ದರು.

(ವರದಿ: ಧಾತ್ರಿ ಭಾರದ್ವಾಜ್‌)

Whats_app_banner