Mysore News: ಠಾಣೆ ಮೇಲೆ ಕಲ್ಲು ತೂರಾಟ ಮಾಡಿದವರಿಂದ ನಷ್ಟ ಭರಿಸುವಿಕೆ, ಉತ್ತರ ಪ್ರದೇಶ ಮಾದರಿ ಕ್ರಮ ಕರ್ನಾಟಕಕ್ಕೆ ಬೇಡ: ಸಚಿವ ಪರಮೇಶ್ವರ್‌
ಕನ್ನಡ ಸುದ್ದಿ  /  ಕರ್ನಾಟಕ  /  Mysore News: ಠಾಣೆ ಮೇಲೆ ಕಲ್ಲು ತೂರಾಟ ಮಾಡಿದವರಿಂದ ನಷ್ಟ ಭರಿಸುವಿಕೆ, ಉತ್ತರ ಪ್ರದೇಶ ಮಾದರಿ ಕ್ರಮ ಕರ್ನಾಟಕಕ್ಕೆ ಬೇಡ: ಸಚಿವ ಪರಮೇಶ್ವರ್‌

Mysore News: ಠಾಣೆ ಮೇಲೆ ಕಲ್ಲು ತೂರಾಟ ಮಾಡಿದವರಿಂದ ನಷ್ಟ ಭರಿಸುವಿಕೆ, ಉತ್ತರ ಪ್ರದೇಶ ಮಾದರಿ ಕ್ರಮ ಕರ್ನಾಟಕಕ್ಕೆ ಬೇಡ: ಸಚಿವ ಪರಮೇಶ್ವರ್‌

Mysore News: ಮೈಸೂರಿನ ಉದಯಗಿರಿ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಪರಮೇಶ್ವರ್‌ ಮೈಸೂರಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಮೈಸೂರಿನ ಉದಯಗಿರಿ ಠಾಣೆಗೆ ಗೃಹ ಸಚಿವ ಡಾ.ಪರಮೇಶ್ವರ್‌ ಭೇಟಿ ನೀಡಿದರು.
ಮೈಸೂರಿನ ಉದಯಗಿರಿ ಠಾಣೆಗೆ ಗೃಹ ಸಚಿವ ಡಾ.ಪರಮೇಶ್ವರ್‌ ಭೇಟಿ ನೀಡಿದರು.

ಮೈಸೂರು: ಪೊಲೀಸ್‌ ಠಾಣೆಗಳ ಮೇಲೆ ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವುದು. ನಷ್ಟ ಉಂಟು ಮಾಡುವವರಿಂದಲೇ ವೆಚ್ಚ ಭರಿಸುವ ವ್ಯವಸ್ಥೆ ಉತ್ತರಪ್ರದೇಶದಲ್ಲಿ ಇರಬಹುದು. ಆದರೆ ಕರ್ನಾಟಕದಲ್ಲಿ ಅಂತಹ ಮಾದರಿ ಕ್ರಮ ಬೇಡ ಎಂದು ಕರ್ನಾಟಕದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಮೈಸೂರಿನಲ್ಲಿ ಉದಯಗಿರಿ ಠಾಣೆಯಲ್ಲಿ ನಡೆದ ಕಲ್ಲುತೂರಾಟ ಪ್ರಕರಣದ ಹಿನ್ನೆಲೆಯಲ್ಲಿ ಶುಕ್ರವಾರ ಠಾಣೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದ ಬಳಿಕ ಸುದ್ದಿಗಾರರು ಕೇಳಿದ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಏಕಿಲ್ಲ,ನಷ್ಟ ಮಾಡಿದವರಿಂದಲೇ ನಷ್ಟ ಭರಿಸುವ ಪ್ರಸ್ತಾವವಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಉತ್ತರಪ್ರದೇಶ ಮಾದರಿಯ ಕ್ರಮ ಕರ್ನಾಟಕಕ್ಕೆ ಸದ್ಯಕ್ಕೆ ಅಗತ್ಯ ಇಲ್ಲವೆಂದು ಸ್ಪಷ್ಟವಾಗಿಯೇ ಹೇಳಿದರು.

ಇದರ ಬಗ್ಗೆ ಅನೇಕ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಉತ್ತರಪ್ರದೇಶದಲ್ಲಿ ಬುಲ್ಡೋಜರ್ ತೆಗೆದುಕೊಂಡು ಹೋಗುವ ಕೆಲಸ ಆಗುತ್ತದೆ. ಈಗ ಅಂತಹ ಪರಿಸ್ಥಿತಿ ನಮ್ಮಲ್ಲಿ ಇಲ್ಲ. ಮುಂದೆ ಬೇಕಿದ್ದರೆ ನೋಡೋಣ. ಜನರು ಪೊಲೀಸರಿಗೆ ಸಹಕಾರ ನೀಡಬೇಕು. ಇದನ್ನು ಹೊರತುಪಡಿಸಿ ನಾವೇ ಕಾನೂನು ಕೈಗೆ ತೆಗೆದುಕೊಳ್ಳುವುದು ಬೇಡ ಎನ್ನುವುದು ಸಚಿವರ ಮನವಿ.

ನಾಲ್ಕು ದಿನದ ಹಿಂದೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಘಟನೆ ಏಕಾಯಿತು, ಏನಾಯಿತು ಎಂಬುದರ ಬಗ್ಗೆ ಮಾಹಿತಿ ಪಡೆಯಲು ಠಾಣೆಗೆ ಭೇಟಿ ಮಾಡಿದ್ದೆ. ಪ್ರಾಥಮಿಕ ಹಂತದ ಮಾಹಿತಿ ತಿಳಿದುಕೊಂಡಿದ್ದೇನೆ. ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಹೀಗಾಗಿ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಯಾರೂ ಕೂಡ ಇಂತಹ ಘಟನೆಗಳಲ್ಲಿ ರಾಜಕೀಯ ಮಾಡಬಾರದು.

ಅಂತಹವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ಕೂಡ ನೀಡೋದಿಲ್ಲ. ಸಮಯ ಸಂದರ್ಭದಲ್ಲಿ ಅವರಿಗೆ ಕಿವಿಮಾತು ಹೇಳುತ್ತೇನೆ. ಸಾರ್ವಜನಿಕರು ಇಂತಹ ವೇಳೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡರು.

ಪೊಲೀಸ್ ಹಾಗೂ ವಾಹನಗಳ ಮೇಲೆ ಕಲ್ಲು ಹೊಡೆದವರ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ. ಈಗಾಗಲೇ ಸಿಸಿಟಿವಿ ದೃಶ್ಯ ಆಧರಿಸಿ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಕಾನೂನು ಕೈಗೆ ತೆಗೆದುಕೊಳ್ಳುವವರು ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ ತಗೆದುಕೊಳ್ಳುತ್ತೇವೆ. ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು ಪರಮೇಶ್ವರ್‌.

ಪೊಲೀಸ್ ಇಲಾಖೆಗೆ ಪಕ್ಷ ಮುಖ್ಯ ಅಲ್ಲ. ಸಮಾಜದಲ್ಲಿ ಶಾಂತಿ ಕಾಪಾಡಲಿಕ್ಕೆ ಪೊಲೀಸ್ ನವರು ಇರುವುದು. ಕಾನೂನು ರಕ್ಷಣೆಗೆ ಪೋಲೀಸರ ಮೊದಲ ಆದ್ಯತೆ. ಘಟನೆ ಆದ ಬಳಿಕ ಕೆಲವರು ಹೇಳಿಕೆ ನೀಡುತ್ತಾರೆ. ಅದನ್ನು ಹೇಳಬಾರದು ಎಂದು ಹೇಳಲು ಸಾಧ್ಯವಿಲ್ಲ. ಅಂತಹ ಹೇಳಿಕೆಗಳಿಂದ ಪೊಲೀಸ್ ನವರನ್ನು ಕುಗ್ಗಿಸಲು ಸಾಧ್ಯವಿಲ್ಲ. ಪೊಲೀಸರಿಗೆ ಅಂತಹ ಎಲ್ಲ ತರಬೇತಿ ಆಗಿರುತ್ತದೆ. ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಉದಯಗಿರಿಗೆ ಮತ್ತೊಂದು ಪೊಲೀಸ್ ಠಾಣೆ ನೀಡುವ ವಿಚಾರ ಮುನ್ನಲೆಗೆ ಬಂದಿದೆ. ಮೈಸೂರು ನಗರ ಪೊಲೀಸ್‌ ಕಮಿಷನರ್ ಕೂಡ ಹೊಸ ಪೊಲೀಸ್ ಠಾಣೆಗೆ ಮನವಿ ಮಾಡಿದ್ದಾರೆ. ಅದರ ಬಗ್ಗೆ ನಾವು ಚರ್ಚೆ ಮಾಡುತ್ತೇವೆ.

ಉದಯಗಿರಿ ಗಲೆಭೆ ನಿಯಂತ್ರಣ ವಿಚಾರದಲ್ಲಿ ಪೊಲೀಸ್ ನವರು ತುರ್ತಾಗಿ ಕ್ರಮ ತೆಗೆದುಕೊಂಡಿದ್ದಾರೆ. ಹೆಚ್ಚಿನ ಪೊಲೀಸರು ಬರುವಷ್ಟರಲ್ಲಿ ಘಟನೆ ನಡೆದಿದೆ. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಎಲ್ಲರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡೋದಿಲ್ಲ. ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ.ಇಂತಹ ಘಟನೆಗಳಲ್ಲಿ ಯಾರು ಕೂಡ ರಾಜಕೀಯ ಮಾಡಬಾರದು. ಕಾನೂನು ಸುವ್ಯವಸ್ಥೆ ಬಗ್ಗೆ ಮಾತ್ರ ಗಮನ ನೀಡಬೇಕು ಎಂದಷ್ಟೇ ಹೇಳಬಲ್ಲೆ ಎಂದರು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner