ಚಿನ್ನವನ್ನಾದರೂ ಖರೀದಿಸಬಹುದು, ಆದರೆ ಮೈಸೂರಲ್ಲಿ ಬಾಡಿಗೆ ಪಾವತಿಸುವುದೇ ಕಷ್ಟ; ಅರಮನೆ ನಗರಿಯಲ್ಲಿ ‘ರೆಂಟ್’ ಮಾಫಿಯಾ
Mysuru News: ಸಾಂಸ್ಕೃತಿಕ ನಗರಿ ಹಾಗೂ ಅರಮನೆ ನಗರಿಯಲ್ಲಿ ಬಾಡಿಗೆ ದರ ದುಪ್ಪಟ್ಟಾಗಿದೆ. ಚಿನ್ನವನ್ನಾದರೂ ಖರೀದಿಸಬಹುದು, ಆದರೆ ಅರಮನೆ ನಗರಿಯಲ್ಲಿ ಬಾಡಿಗೆ ಪಡೆಯುವುದೇ ಕಷ್ಟವಾಗಿದೆ.
ಮೈಸೂರು: ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ಪಡೆದು ಜೀವನ ನಡೆಸುವುದೇ ಕನಸಿನ ಮಾತಾಗಿದೆ. ದಿನೇ ದಿನೇ ನಗರ ಅಭಿವೃದ್ಧಿ ಹೆಚ್ಚಾಗುತ್ತಿರುವ ಕಾರಣ ಬಾಡಿಗೆ ಪಡೆದು ನೆಮ್ಮದಿಯ ಬದುಕು ಸಾಗಿಸುವುದು ತುಂಬಾ ಕಷ್ಟದ ಕೆಲಸವಾಗಿದೆ. ಬಾಡಿಗೆ ತೆಗದುಕೊಳ್ಳುವ ವಿಚಾರದಲ್ಲಿ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದ ಬೆಂಗಳೂರನ್ನೇ ಮೀರಿಸುತ್ತಿದೆ ಮೈಸೂರು. ಹೌದು, ಚಿನ್ನವನ್ನಾದರೂ ಖರೀದಿಸಬಹುದು, ಆದರೆ, ಅರಮನೆ ನಗರಿಯಲ್ಲಿ ಬಾಡಿಗೆ ಪಡೆಯುವುದು ನಿಜವಾಗಲೂ ಕಷ್ಟವಾಗಿದೆ.
ಹಳ್ಳಿಗಳಿಂದ ನಗರದ ಕಡೆಗೆ ಹೆಜ್ಜೆ ಹಾಕುವವರ ಕಷ್ಟ ಯಾರಿಗೂ ಬೇಡ. ಸ್ವಂತ ಮನೆ, ಜಮೀನು ಬಿಟ್ಟು ಕೆಲಸಕ್ಕೆಂದು ಸಿಟಿಗೆ ಬರುತ್ತಾರೆ. ಬೆಂಕಿ ಪೊಟ್ಟಣದಲ್ಲಿ ಒತ್ತೊತ್ತಾಗಿ ಜೋಡಿಸಿರುವಂತೆ ಕಾಣುವ ಇಕ್ಕಟ್ಟಿನ ಮನೆಗಳಲ್ಲಿ ನೋವಿನಿಂದ ಬಾಳುವಂತಾಗಿದೆ. ಏಕೆಂದರೆ ಮನೆಗಳ ಬಾಡಿಗೆ ದರ ಡಬಲ್ ಆಗಿರೋದಕ್ಕೆ. ಅರಮನೆ ನಗರಿಯನ್ನು ಸುಂದರ ನಗರ ಎಂದೇ ಪ್ರಸಿದ್ಧಿ ಪಡೆದಿದೆ. ಇದೀಗ ಅದು ಹಣವಂತರಿಗೆ ಮಾತ್ರ ಸುಂದರ ಎನ್ನುವಂತಾಗಿದೆ. ಇಲ್ಲಿ ಡಬಲ್ ಬಿಎಚ್ಕೆ ಮನೆ ಎಷ್ಟು ಇರಬಹುದು, ನೀವೊಮ್ಮೆ ಊಹಿಸಿ. ಅಂದಾಜು ಎಷ್ಟಿರಬಹುದು?
ಮನಸ್ಸಿನಲ್ಲಿ ಒಂದು ಲೆಕ್ಕ ಹಾಕಿದ್ದೀರಿ ಅಲ್ವಾ? ಆದರೆ ನಿಮ್ಮ ಊಹೆಗೆ ನಿಲುಕದ್ದು ಮೈಸೂರಿನಲ್ಲಿ ಬಾಡಿಗೆ ದರ. ಒಂದು ಡಬಲ್ ಬಿಎಚ್ಕೆ ಮನೆಗೆ (2 ಬೆಡ್ರೂಮ್, 1 ಕಿಚನ್, 1 ಹಾಲ್) ದರ 13 ರಿಂದ 18 ಸಾವಿರ. ಇದು ನಗರದ ಹೊರವಲಯದ ಭಾಗದಲ್ಲಿ. ಆದರೆ, ಕೆಲವೆಡೆ 20 ರಿಂದ 25 ಸಾವಿರವೂ ಇದೆ. ಇನ್ನೂ ಅಚ್ಚರಿ ಅಂದರೆ ಪ್ರಸಿದ್ಧ ತಾಣಗಳಿರುವ ಪ್ರದೇಶಗಳಲ್ಲಿ 25 ಸಾವಿರಕ್ಕೂ ಅಧಿಕ ಬಾಡಿಗೆ ದರ ಇದೆ. ಇನ್ನು ಸಿಂಗಲ್ ಬಿಎಚ್ಕೆ (1 ಬೆಡ್ರೂಮ್, 1 ಕಿಚನ್, 1 ಹಾಲ್) ಮನೆಗೂ ಏನು ಕಡಿಮೆ ಬಾಡಿಗೆ ದರ ಇಲ್ಲ. ಸರಾಸರಿ 10 ಸಾವಿರದವರೆಗೂ ಇದೆ.
ಮುಂಗಡ ಹಣ ಪಾವತಿ ಲಕ್ಷಗಳಲ್ಲಿ!
ಬಾಡಿಗೆ ದರವೇ ದುಪ್ಪಟ್ಟಾಗಿದ್ದರೆ, ಅದಕ್ಕೆ ಅಡ್ವಾನ್ಸ್ ಕೊಡುವುದು 10 ಪಟ್ಟು. ಅಂದರೆ, ನೀವು ತಿಂಗಳಿಗೆ ಪಾವತಿಸುವ ಬಾಡಿಗೆ ದರದ 10 ಪಟ್ಟು ಪಾವತಿಸಬೇಕಿದೆ. ಉದಾಹರಣೆ- ಬಾಡಿಗೆ ದರ 20,000 ಸಾವಿರ ಆದರೆ, ಅಡ್ವಾನ್ಸ್ 2 ಲಕ್ಷ ಎಂದರ್ಥ. ಮಾಲೀಕರು ಏನು ಹೇಳುತ್ತಾರೋ ಅದೇ ಫೈನಲ್. ಮುಂದಕ್ಕೆ ಮಾತನಾಡುವಂತಿಲ್ಲ. ಪ್ರಮುಖ ಲೇಔಟ್ಗಳಲ್ಲಿ ಬಾಡಿಗೆ ಪಡೆಯುವುದು ಮಧ್ಯಮ ವರ್ಗದ ಜನರಿಗೆ ಆಗದ ಪರಿಸ್ಥಿತಿಯಾಗಿದೆ. ದುಡಿದಿದ್ದೆಲ್ಲವನ್ನೂ ಮನೆ ಬಾಡಿಗೆಗೆ ಖರ್ಚಾಗುತ್ತದೆ. ಕೆಲವೆಡೆ ರಸ್ತೆ, ಚರಂಡಿ, ಸೌಲಭ್ಯ ಇಲ್ಲದಿದ್ದರೂ ಮನಬಂದಂತೆ ಬಾಡಿಗೆ ಕೇಳುತ್ತಿದ್ದಾರೆ.
ಐದಾರು ವರ್ಷಗಳ ಹಿಂದೆ ಇಷ್ಟಿರಲಿಲ್ಲ
ಹೌದು, ಮೈಸೂರು ನಗರದಲ್ಲಿ ಐದಾರು ವರ್ಷಗಳ ಹಿಂದೆ ಇಷ್ಟು ಮೊತ್ತದ ಬಾಡಿಗೆ ಇರಲಿಲ್ಲ. ಅಡ್ವಾನ್ಸ್ ಕೂಡ ಬೃಹತ್ ಮೊತ್ತ ಇರಲಿಲ್ಲ. ಅಂದು 5 ರಿಂದ 6 ಸಾವಿರ ಅಥವಾ 7 ಸಾವಿರ ಇತ್ತು. ಮುಂಗಡ ಮೊತ್ತವೂ 50 ಸಾವಿರದಿಂದ 60 ಸಾವಿರ ಇತ್ತು. ಆದರೀಗ ಬಾಡಿಗೆ ಕೇಳಿದರೆ, ಆಘಾತವಾಗುತ್ತದೆ. ಇಷ್ಟೆಲ್ಲಾ ಪಾವತಿಸಿ ನಾವು ಬದುಕುವುದಾದರೂ ಹೇಗಪ್ಪ ಎಂದು ಬಾಡಿಗೆದಾರರು ಅಳಲು ತೋಡಿಕೊಳ್ಳುತ್ತಾರೆ. ಇವತ್ತು ಕೇಳಿರುವ ಮನೆಯ ಬಾಡಿಗೆ, ನಾಳೆ ಬಂದು ಕೇಳಿದರೆ ಶೇ 2, 3ರಷ್ಟು ಏರಿಕೆಯಾಗಿರುತ್ತದೆ ಎನ್ನುತ್ತಾರೆ.
ಇದರ ನಡುವೆ ಮಾಂಸಾಹಾರಿ ಮತ್ತು ಶಾಖಾಹಾರಿ ಬಾಡಿಗೆ ಮನೆಗಳ ಫಲಕಗಳನ್ನೂ ಕಾಣಬಹುಯದು. ಪರೋಕ್ಷವಾಗಿ ಬಾಡಿಗೆ ಕೇಳುವ ಮನಸ್ಥಿತಿಯೂ ಇದೆ. ಕೇವಲ ಸಸ್ಯಹಾರಿಗಳಿಗೆ ಮಾತ್ರ ಬಾಡಿಗೆ ನೀಡಲಾಗುತ್ತದೆ ಎಂಬ ಫಲಕಗಳನ್ನು ಮನೆಯ ಮುಂಭಾಗ ಕಾಣಬಹುದು. ಮಾಂಸ ತಿನ್ನುವವರಿಗೆ ಬಾಡಿಗೆ ಕೊಡಲು ಬಹುತೇಕ ಮಂದಿ ಹಿಂಜರಿಯುತ್ತಿದ್ದಾರೆ ಎಂಬುದನ್ನು ನಾವು ತಿಳಿಯಬೇಕಿದೆ. ಪ್ರಸ್ತುತ ನಗರಗಳಲ್ಲಿ ಬಾಡಿಗೆ ದರ ಕೇಳುತ್ತಿದ್ದರೆ, ನಮ್ಮೂರುಗಳಿಗೆ ಹೋಗುವುದೇ ಉತ್ತಮ ಎನಿಸುತ್ತಿದೆ. ಸರ್ಕಾರಗಳು ಸಹ ಈ ಬಗ್ಗೆ ಗಮನ ಹರಿಸುವುದು ಉತ್ತಮ.