ಮೈಸೂರು ರಾಜವಂಶಸ್ಥರ ಕುಟುಂಬದಲ್ಲಿ ತೊಟ್ಟಿಲು ಶಾಸ್ತ್ರದ ಸಂಭ್ರಮ, ಚಾಮುಂಡಿಬೆಟ್ಟದಲ್ಲಿ ಕಂಡ ಯದುವೀರ್‌ ಒಡೆಯರ್‌ 2ನೇ ಪುತ್ರ ಹೇಗಿದ್ದಾನೆ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ರಾಜವಂಶಸ್ಥರ ಕುಟುಂಬದಲ್ಲಿ ತೊಟ್ಟಿಲು ಶಾಸ್ತ್ರದ ಸಂಭ್ರಮ, ಚಾಮುಂಡಿಬೆಟ್ಟದಲ್ಲಿ ಕಂಡ ಯದುವೀರ್‌ ಒಡೆಯರ್‌ 2ನೇ ಪುತ್ರ ಹೇಗಿದ್ದಾನೆ

ಮೈಸೂರು ರಾಜವಂಶಸ್ಥರ ಕುಟುಂಬದಲ್ಲಿ ತೊಟ್ಟಿಲು ಶಾಸ್ತ್ರದ ಸಂಭ್ರಮ, ಚಾಮುಂಡಿಬೆಟ್ಟದಲ್ಲಿ ಕಂಡ ಯದುವೀರ್‌ ಒಡೆಯರ್‌ 2ನೇ ಪುತ್ರ ಹೇಗಿದ್ದಾನೆ

ಮೈಸೂರಿನ ರಾಜವಂಶದಲ್ಲಿ ಈ ಬಾರಿ ದಸರಾ ವೇಳೆ ಸಂತಸ ವ್ಯಕ್ತವಾಗಿತ್ತು. ದಸರಾ ನಡೆಯುವ ವೇಳೆಯೇ ಎರಡನೇ ಮಗು ಯದುವೀರ್‌ ಅವರಿಗೆ ಜನಿಸಿತ್ತು.ಈಗ ಮಗುವಿನ ತೊಟ್ಟಿಲು ಶಾಸ್ತ್ರ ಜನಿಸಿದ ಎರಡು ತಿಂಗಳ ಬಳಿಕ ನಡೆಸಲಾಗಿದೆ.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ರಾಜವಂಶಸ್ಥರ ಕುಟುಂಬದ ತೊಟ್ಟಿಲು ಶಾಸ್ತ್ರ ನೆರವೇರಿತು.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ರಾಜವಂಶಸ್ಥರ ಕುಟುಂಬದ ತೊಟ್ಟಿಲು ಶಾಸ್ತ್ರ ನೆರವೇರಿತು.

ಮೈಸೂರು: ಮೈಸೂರಿನ ರಾಜವಂಶಸ್ಥರ ಕುಟುಂಬದಲ್ಲಿ ಬುಧವಾರ ಸಂಭ್ರಮದ ದಿನ. ಎರಡು ತಿಂಗಳ ಹಿಂದೆ ದಸರಾದ ಸಂದರ್ಭದಲ್ಲಿಯೇ ರಾಜವಂಶಸ್ಥ ಹಾಗೂ ಸಂಸದ ಯದುವೀರ್‌ ಒಡೆಯರ್‌ ಅವರಿಗೆ ಎರಡನೇ ಪುತ್ರ ಜನಿಸಿದ್ದ. ಈಗ ಮನೆಯಲ್ಲಿ ತೊಟ್ಟಿಲು ಶಾಸ್ತ್ರದ ಸಡಗರ. ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇಗುಲದ ಆವರಣದಲ್ಲಿ ತೊಟ್ಟಿಲು ಶಾಸ್ತ್ರ ಹಾಗೂ ನಾನಾ ಪೂಜೆಗಳು ನೆರವೇರಿದವು. ಯದುವೀರ್‌ ಒಡೆಯರ್‌, ತ್ರಿಷಿಕಾದೇವಿ ಒಡೆಯರ್‌, ಪ್ರಮೋದಾದೇವಿ ಒಡೆಯರ್‌, ಆದ್ಯವೀರ್‌ ಒಡೆಯರ್‌ ಚಾಮುಂಡಿಬೆಟ್ಟಕ್ಕೆ ಪುಟ್ಟ ಮಗುವಿನೊಂದಿಗೆ ಆಗಮಿಸಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮೈಸೂರು ರಾಜವಂಶಸ್ಥರಿಗೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಮನೆದೇವರು. ಈ ಕಾರಣದಿಂದ ಇಲ್ಲಿಯೇ ಎಲ್ಲಾ ಪೂಜೆಗಳನ್ನು ಅವರು ನೆರವೇರಿಸುವುದು ವಾಡಿಕೆ. ಅದರಂತೆ ಧಾರ್ಮಿಕ ಚಟುವಟಿಕೆ ವಿಧಿ ವಿಧಾನಗಳು ಸಡಗರದಿಂದಲೇ ನಡೆದವು.

ಸಂಪಿಗೆ ಮರದಡಿ ಪೂಜೆ

ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ದಂಪತಿಗೆ ಎರಡನೇ ಮಗು ಜನನ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಯದುವಂಶಸ್ಥರಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಚಾಮುಂಡೇಶ್ವರಿ ದೇಗುಲದ ಆವರಣದಲ್ಲಿರುವ ಸಂಪಿಗೆ ಮರಕ್ಕೆ ತೊಟ್ಟಿಲು ಕಟ್ಟಿ ಪೂಜೆ ಸಲ್ಲಿಸಲಾಯಿತು.

ಯದುವಂಶಸ್ಥರ ಕುಲದೇವತೆಯಾಗಿರುವ ಚಾಮುಂಡೇಶ್ವರಿಯ ಸನ್ನಿಧಾನದಲ್ಲಿ ನಡೆದ ಸಾಂಪ್ರದಾಯಿಕ ಪೂಜೆ‌ಗಳು ನೆರವೇರಿದವು. ಮೈಸೂರು ಅರಸರ ಕುಲದೇವತೆಯಾಗಿರುವ ಚಾಮುಂಡೇಶ್ವರಿಗೆ ಮೊದಲ ಪೂಜೆ ಸಲ್ಲಿಸಿಯೇ ನಂತರದ ಚಟುವಟಿಕೆಗಳನ್ನು ಅವರು ನೆರವೇರಿಸುತ್ತಾರೆ.

ನವರಾತ್ರಿ ವೇಳೆ ಜನನ

ನವರಾತ್ರಿ ಸಂದರ್ಭದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದ ತ್ರಿಷಿಕಾ ಕುಮಾರಿ ಅವರೊಂದಿಗೆ ಯದುವೀರ್‌ ಹಾಗೂ ಕುಟುಂಬಸ್ಥರು ಆಗಮಿಸಿ ಚಾಮುಂಡಿ ಬೆಟ್ಟದ ದೇಗುಲದ ಆವರಣದಲ್ಲಿ ಸಂಪ್ರದಾಯಬದ್ದವಾಗಿ ಪೂಜೆ ನೆರವೇರಿಸಿದರು.

ಈ ವೇಳೆ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಯದುವೀರ್ ಮತ್ತು ಪುತ್ರ ಆದ್ಯವೀರ್ ಅವರು ಪೂಜೆಗಳಲ್ಲಿ ಭಾಗಿಯಾದರು. ಚಾಮುಂಡಿಬೆಟ್ಟದ ಪ್ರಧಾನ ಆಗಮಿಕರಾದ ಶಶಿಶೇಖರ್ ದೀಕ್ಷಿತ್ ಅವರಿಂದ ಪೂಜಾ ವಿಧಿಗಳು ನೆರವೇರಿದವು. ತಮ್ಮನನ್ನು ಪ್ರೀತಿಯಿಂದಲೇ ಎವೆಯಿಕ್ಕದೇ ಆದ್ಯವೀರ್‌ ಗಮನಿಸುತ್ತಿದ್ದುದು ವಿಶೇಷವಾಗಿತ್ತು.

ಮೊದಲ ಮಗನಿಗೂ

ಆರು ವರ್ಷದ ಹಿಂದೆ ಮೊದಲ ಮಗ ಜನಿಸಿದಾಗಲೂ ತೊಟ್ಟಿಲು ಶಾಸ್ತ್ರವನ್ನು ಮೈಸೂರು ಯದುವಂಶಸ್ಥರು ನೆರವೇರಿಸಿದ್ದರು. ಅಲ್ಲಿಯೇ ಯದುವಂಶಸ್ಥರು ತೊಟ್ಟಿಲು ಶಾಸ್ತ್ರವನ್ನು ನಡೆಸಿಕೊಂಡು ಬರುವುದು ವಾಡಿಕೆ.

ಸದ್ಯದಲ್ಲೇ ಎರಡನೇ ಪುತ್ರನ ನಾಮಕರಣ ಶಾಸ್ತ್ರವನ್ನು ಯದುವೀರ್‌ ದಂಪತಿ ನಡೆಸಲು ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ಯದುವೀರ್‌ ದತ್ತು, ವಿವಾಹ

ಯದುವೀರ್‌ ಒಡೆಯರ್‌ ಪತ್ನಿ ತ್ರಿಷಿಕಾ ಕುಮಾರಿ ಅವರು ರಾಜಸ್ಥಾನದ ಡುಂಗರಪುರ ರಾಜ ಕುಟುಂಬದವರು. 2016 ಜೂನ್ 27ರಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಸ್ಥಾನದ ತ್ರಿಷಿಕಾ ಕುಮಾರಿ ದೇವಿ ಅವರನ್ನು ವಿವಾಹವಾಗಿದ್ದರು. ಆದ್ಯವೀರ್ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹಿರಿಯ ಪುತ್ರ. ರಾಜವಂಶಸ್ಥ ಹಾಗೂ ಸಂಸದ ಯದುವೀರ್‌ ಮನೆಗೆ ಎರಡನೇ ಪುತ್ರನ ಆಗಮನವಾಗಿತ್ತು.

ಯದುವೀರ್‌ ಕೂಡ ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಅವರ ಮಗಳ ಮೊಮ್ಮಗ. ಅವರನ್ನು ದಶಕದ ಹಿಂದೆ ದತ್ತು ಪಡೆಯಲಾಗಿತ್ತು.

Whats_app_banner